ಹಾಸ್ಟೆಲ್‌ ಅವ್ಯವಸ್ಥೆಗೆ ಅಸಮಾಧಾನ: ತರಾಟೆ

7
ಕ್ರೀಡಾ ವಿದ್ಯಾರ್ಥಿನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ, ಪರಿಶೀಲನೆ

ಹಾಸ್ಟೆಲ್‌ ಅವ್ಯವಸ್ಥೆಗೆ ಅಸಮಾಧಾನ: ತರಾಟೆ

Published:
Updated:
ಹಾಸ್ಟೆಲ್‌ ಅವ್ಯವಸ್ಥೆಗೆ ಅಸಮಾಧಾನ: ತರಾಟೆ

ಕೋಲಾರ: ನಗರದ ಕ್ರೀಡಾ ವಿದ್ಯಾರ್ಥಿನಿಲಯಕ್ಕೆ ಶುಕ್ರವಾರ ದಿಢೀರ್‌ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಹಾಸ್ಟೆಲ್‌ನ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಪವನ್‌ಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ ಹಾಸ್ಟೆಲ್‌ಗ ಬಂದ ಅಧಿಕಾರಿಗಳು ಮೂಲಸೌಕರ್ಯ ಸಮಸ್ಯೆ ಸಂಬಂಧ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸಿದರು.

ಪವನ್‌ಕುಮಾರ್ ದೈನಂದಿನ ಆಹಾರ ಪಟ್ಟಿ ಪರಿಶೀಲಿಸಿದಾಗ ವಿದ್ಯಾರ್ಥಿಗಳಿಗೆ ಸರ್ಕಾರದ ನಿಯಮದಂತೆ ಆಹಾರ ವಿತರಿಸದಿರುವ ಸಂಗತಿ ಗೊತ್ತಾಯಿತು. ‘ಹಾಸ್ಟೆಲ್‌ ವಾರ್ಡನ್‌ ಹಾಗೂ ಅಡುಗೆ ಸಿಬ್ಬಂದಿಯು ಸರ್ಕಾರ ನಿಗದಿಪಡಿಸಿದ ಪಟ್ಟಿಯಂತೆ ಆಹಾರ ಕೊಡುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

‘ಹಾಸಿಗೆ ಮತ್ತು ಹೊದಿಕೆ ಕೊಟ್ಟಿಲ್ಲ. ಹಳೆ ಹಾಸಿಗೆ ಹರಿದು ಹೋಗಿದ್ದು, ಅನಿವಾರ್ಯವಾಗಿ ಅದನ್ನೇ ಬಳಸುತ್ತಿದ್ದೇವೆ. ಮೂಲಸೌಕರ್ಯ ಸಮಸ್ಯೆ ಬಗ್ಗೆ ವಾರ್ಡನ್‌ಗೆ ಸಾಕಷ್ಟು ಬಾರಿ ದೂರು ಕೊಟ್ಟಿದ್ದೇವೆ. ಆದರೆ, ಅವರು ದೂರಿಗೆ ಸ್ಪಂದಿಸುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಹೇಳಿದರು.

ಶೌಚಾಲಯಗಳನ್ನು ಸ್ವಚ್ಛಗೊಳಿಸದ ಸಂಬಂಧ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು, ‘ನಿಮ್ಮ ಮನೆಯನ್ನೂ ಇದೇ ರೀತಿ ಕೊಳಕಾಗಿ ಇಟ್ಟುಕೊಳ್ಳುತ್ತೀರಾ. ಸ್ವಲ್ಪವು ಜವಾಬ್ದಾರಿ ಇಲ್ಲವಾ’ ಎಂದು ಪ್ರಶ್ನಿಸಿದರು.

ಮೋಸ ಮಾಡುತ್ತಿದ್ದೀರಿ: ಮಧ್ಯಾಹ್ನದ ಊಟಕ್ಕೆ ಸಾಂಬರು ಸಿದ್ಧಪಡಿಸಲು ಕತ್ತರಿಸಿಟ್ಟಿದ್ದ ತರಕಾರಿ ಪ್ರಮಾಣ ಕಡಿಮೆ ಇರುವುದನ್ನು ಗಮನಿಸಿದ ಅಧಿಕಾರಿಗಳು, ‘ಸರ್ಕಾರವು ಬಡ ಮಕ್ಕಳಿಗಾಗಿ ಸಾಕಷ್ಟು ಅನುದಾನ ಕೊಡುತ್ತಿದೆ. ಆದರೆ, ನೀವು ಮಕ್ಕಳಿಗೆ ಮೋಸ ಮಾಡುತ್ತಿದ್ದೀರಿ. ನಿಮಗೆ ಮಾನವೀಯತೆ ಇಲ್ಲವೆ’ ಎಂದು ಸಿಬ್ಬಂದಿ ವಿರುದ್ಧ ಕೆಂಡಾಮಂಡಲರಾದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಅಡುಗೆ ಸಿಬ್ಬಂದಿ ರತ್ನಮ್ಮ, ‘ಹಾಸ್ಟೆಲ್‌ನ 45 ವಿದ್ಯಾರ್ಥಿಗಳ ಪೈಕಿ 10 ಮಂದಿ ಮಧ್ಯಾಹ್ನ ಊಟಕ್ಕೆ ಬರುವುದಿಲ್ಲ. ಅವರು ಮಧ್ಯಾಹ್ನಕ್ಕೂ ತಿಂಡಿ ತೆಗೆದುಕೊಂಡು ಹೋಗುತ್ತಾರೆ. ಸರಸ್ವತಿ ಪೂಜೆ ಹಿನ್ನೆಲೆಯಲ್ಲಿ 35 ಮಂದಿಗಷ್ಟೇ ಆಹಾರ ಸಿದ್ಧಪಡಿಸುತ್ತಿದ್ದೇವೆ’ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಅಧಿಕಾರಿಗಳು, ‘ಸ್ಪಷ್ಟನೆ ಕೊಡುವುದನ್ನು ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿ’ ಎಂದು ಸೂಚಿಸಿದರು.

ಕೊಳೆತ ಬೀಟ್ರೂಟ್‌: ‘ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಆಯಾ ದಿನಕ್ಕೆ ಅಗತ್ಯ ಇರುವಷ್ಟು ತರಕಾರಿಗಳನ್ನು ತಂದು ಅಡುಗೆ ಮಾಡುತ್ತೇವೆ’ ಎಂದು ರತ್ನಮ್ಮ ಹೇಳಿದರು. ಈ ಬಗ್ಗೆ ಅನುಮಾನಗೊಂಡ ಪವನ್‌ಕುಮಾರ್‌ ಅವರು ಫ್ರಿಡ್ಜ್‌ ತೆರೆದು ನೋಡಿದಾಗ ನಾಲ್ಕೈದು ಕೆ.ಜಿಯಷ್ಟು ಬೀಟ್ರೂಟ್‌ ಕೊಳೆತಿರುವುದು ಕಂಡುಬಂದಿತು. ಮೆಣಸಿನಕಾಯಿಯ ಗುಣಮಟ್ಟ ಕಳಪೆಯಾಗಿತ್ತು.

ಸ್ವಚ್ಛತೆ ಇಲ್ಲ: ಶೌಚಾಲಯದ ಗುಂಡಿಯಲ್ಲಿ ಮಲ ಮೂತ್ರದ ಜತೆ ಕೊಳಚೆ ನೀರು ಕಟ್ಟಿಕೊಂಡಿರುವುದನ್ನು ಗಮನಿಸಿದ ಅಧಿಕಾರಿಗಳು, ‘ಹಾಸ್ಟೆಲ್‌ನಲ್ಲಿ ಸ್ವಲ್ಪವೂ ಸ್ವಚ್ಛತೆ ಇಲ್ಲ. ಶೌಚಾಲಯ ಗುಂಡಿ ಸ್ವಚ್ಛಗೊಳಿಸಿ ವರ್ಷವೇ ಕಳೆದಿದೆ. ಸೊಳ್ಳೆ ಸಂತಾನೋತ್ಪತ್ತಿ ಇಲ್ಲೇ ಆಗುತ್ತದೆ. ಮಕ್ಕಳ ಆರೋಗ್ಯ ಕೆಡಲು ಇನ್ನೇನು ಬೇಕು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆರ್‌.ಗೀತಾ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಶೌಚಾಲಯ ಗುಂಡಿ ಸ್ವಚ್ಛಗೊಳಿಸುವಂತೆ ನಗರ ಸಭೆಗೆ ನಾಲ್ಕೈದು ಬಾರಿ ಪತ್ರ ಬರೆದಿದ್ದೇವೆ. ಅಧಿಕಾರಿಗಳು ಯುಜಿಡಿ ಸ್ವಚ್ಛತಾ ವಾಹನ ಕಳುಹಿಸಲು ಮೀನಾಮೇಷ ಎಣಿಸುತ್ತಿದ್ದಾರೆ’ ಎಂದು ಗೀತಾ ಹೇಳಿದರು. ಹಾಸ್ಟೆಲ್‌ ಅವ್ಯವಸ್ಥೆ ಹಾಗೂ ಸಿಬ್ಬಂದಿ ಹೇಳಿಕೆಯನ್ನು ಅಧಿಕಾರಿಗಳು ವಿಡಿಯೋ ಚಿತ್ರೀಕರಿಸಿಕೊಂಡರು.

*

ಹಾಸ್ಟೆಲ್‌ ವ್ಯವಸ್ಥೆ ಹಿಂದಿನಂತಿಲ್ಲ. ಮಕ್ಕಳು ಅನಾರೋಗ್ಯ ಪೀಡಿತರಾದರೆ ಎಸ್‌ಎನ್‌ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಮಗನ ಕೈ ಮೂಳೆ ಮುರಿದಿದ್ದರೂ ಚಿಕಿತ್ಸೆ ಕೊಡಿಸಿಲ್ಲ.

–ಮುನಿಲಕ್ಷ್ಮಿ, ಪೋಷಕರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry