ಅಲೆದಾಟ ತಪ್ಪಿಸಿ ಪರಿಹಾರ ನೀಡಿ

7
ರೈಲ್ವೆ ಯೋಜನೆಗೆ ಭೂಸ್ವಾಧೀನ; ಡಿ.ಸಿ ಕಚೇರಿ ಎದುರು ರೈತರ ಪ್ರತಿಭಟನೆ

ಅಲೆದಾಟ ತಪ್ಪಿಸಿ ಪರಿಹಾರ ನೀಡಿ

Published:
Updated:
ಅಲೆದಾಟ ತಪ್ಪಿಸಿ ಪರಿಹಾರ ನೀಡಿ

ತುಮಕೂರು: ಪರಿಹಾರಕ್ಕೆ ವಿಧಿಸಿರುವ ದಾಖಲಾತಿಗಳನ್ನು ಪಡೆಯಲು ರೈತರ ಅಲೆದಾಟ ತಪ್ಪಿಸಬೇಕು ಮತ್ತು ತ್ವರಿತವಾಗಿ ಭೂಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿ ತುಮಕೂರು-ರಾಯದುರ್ಗ-ದಾವಣಗೆರೆ ರೈಲ್ವೆ ಯೋಜನೆ ಭೂಸ್ವಾಧೀನ ರೈತರ ಹೋರಾಟ ಸಮಿತಿಯ ಸದಸ್ಯರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಹೋರಾಟ ಸಮಿತಿಯ ಸಂಚಾಲಕ ಬಿ.ಉಮೇಶ್‌ ಮಾತನಾಡಿ, ‘ ಭೂಸ್ವಾಧೀನದಲ್ಲಿ ಪಾರದರ್ಶಕತೆ ಮತ್ತು ರೈತರ ಒಪ್ಪಂದದ ತೀರ್ಪಿನಂತೆ ಪರಿಹಾರ ಪಡೆಯಲು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹೋರಾಟವನ್ನು ‌ರೂಪಿಸಲಾಗಿದೆ’ ಎಂದರು.

ಇತ್ತೀಚೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟ ರೈತರಿಗೆ ಅವಾರ್ಡ್ ನೋಟಿಸ್ ನೀಡಿದ ನಂತರ ಕಂದಾಯ ಇಲಾಖೆಯಲ್ಲಿ 79 ಎ ಮತ್ತು 79 ಬಿ, ಪಿಟಿಸಿಎಲ್ ಹಾಗೂ ವಿವಾದಾತ್ಮಕ ಪ್ರಕರಣಗಳು ಇಲ್ಲವೆನ್ನುವ ದೃಢೀಕರಣ ಪತ್ರ ಪಡೆಯುವಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಅರಣ್ಯ, ತೋಟಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆಯವರು ನೀಡುವ ಮಾದರಿಯಲ್ಲೇ ಕಂದಾಯ ಇಲಾಖೆಯವರು ಸಹ ಭೂಮಿಯ ದಾಖಲಾತಿಗಳನ್ನು ನೇರವಾಗಿ ವಿಶೇಷ ಭೂಸ್ವಾಧೀನಾಧಿಕಾರಿಗೆ ತಲುಪಿಸಿ ರೈತರ ಅಲೆದಾಟವನ್ನು ತಪ್ಪಿಸಬೇಕು. ಜೊತೆಗೆ ಭೂಪರಿಹಾರವನ್ನು ತ್ವರಿತವಾಗಿ ನೀಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.

ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ಮೃತ್ಯುಂಜಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಸಮಿತಿಯ ಸಹ ಸಂಚಾಲಕ ನೌಷಾದ್ ಸೆಹಗನ್, ಮುಖಂಡರಾದ ದಯಾನಂದ ಸಾಗರ್, ಟಿ.ಆರ್.ಯಲ್ಲಪ್ಪ, ಎಂ.ಆರ್.ಜಗದೀಶ್, ಹನುಮಂತರಾಯಪ್ಪ, ದೊಡ್ಡೇಗೌಡ, ಗುರುಪ್ರಸಾದ್, ರುದ್ರೇಶ್, ಅನಿಲ್‌ಕುಮಾರ್, ಚಿಕ್ಕತಿಮ್ಮಯ್ಯ, ಆರ್.ಎನ್. ರಾಜಣ್ಣ, ಸಿ.ಸಿದ್ದಗಂಗಯ್ಯ, ಗಂಗರಾಜು, ಎಚ್.ಎಲ್.ರಾಮಚಂದ್ರಯ್ಯ, ಎಚ್.ಎನ್.ಗೋವಿಂದಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry