ಕನಕಪುರ: ನಕಲಿ ವೈದ್ಯರ 2 ಕ್ಲಿನಿಕ್‌ಗಳಿಗೆ ಬೀಗಮುದ್ರೆ

7

ಕನಕಪುರ: ನಕಲಿ ವೈದ್ಯರ 2 ಕ್ಲಿನಿಕ್‌ಗಳಿಗೆ ಬೀಗಮುದ್ರೆ

Published:
Updated:

ಸಾತನೂರು (ಕನಕಪುರ): ನಕಲಿ ವೈದ್ಯಕೀಯ ಸೇವೆ ನೀಡುತ್ತಿದ್ದ ಕ್ಲಿನಿಕ್‌ಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ತಂಡ ದಾಳಿ ನಡೆಸಿ ಬೀಗಮುದ್ರೆ ಹಾಕಿರುವುದು ತಾಲ್ಲೂಕಿನ ಸಾತನೂರಿನಲ್ಲಿ ನಡೆದಿದೆ.

ಸಾತನೂರು ಗ್ರಾಮದ ಮೈಸೂರು ರಸ್ತೆಯಲ್ಲಿರುವ ಚಿನ್ಮಯಿ ಕ್ಲಿನಿಕ್‌ ಹಾಗೂ ದೊಡ್ಡ ಆಲಹಳ್ಳಿ ರಸ್ತೆಯಲ್ಲಿರುವ ನವೋದಯ ಕ್ಲಿನಿಕ್‌ಗೆ ಬೀಗಮುದ್ರೆ ಹಾಕಲಾಗಿದೆ.

ವೈದ್ಯಕೀಯ ವ್ಯಾಸಂಗ ಮಾಡದೆ ಸರ್ಕಾರದಿಂದ ಪರವಾನಗಿ ಪಡೆಯದೆ ಎರಡೂ ಕ್ಲಿನಿಕ್‌ಗಳಲ್ಲಿ ಅನಧಿಕೃತವಾಗಿ ವ್ಯದ್ಯಕೀಯ ಸೇವೆ ನೀಡುತ್ತಿದ್ದರೆಂದು ತಿಳಿದು ಬಂದಿದೆ.

ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಡಾ.ಶಿವರಾಜ್‌ ಹೆಡೆ ಅವರು ದಾಳಿ ಮಾಡಿ ನಕಲಿ ವ್ಯದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದ ಬಗ್ಗೆ ಸಾತನೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲದೆ ಕ್ಲಿನಿಕ್‌ಗಳಿಗೆ ಬೀಗಹಾಕಿದ್ದರು.

ನಂತರದಲ್ಲೂ ಅದೇ ಕ್ಲಿನಿಕ್‌ಗಳಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಜಿಲ್ಲಾ ಅರೋಗ್ಯಾಧಿಕಾರಿ ಡಾ.ಅಮರ್‌ನಾಥ್‌ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕುಮಾರ್‌ ತಂಡ ದಾಳಿ ನಡೆಸಿದೆ.

ದಾಳಿ ವೇಳೆ ಇಬ್ಬರು ನಕಲಿ ವೈದ್ಯರು ಕ್ಲಿನಿಕ್‌ ಬಿಟ್ಟು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಸಾತನೂರು ಗ್ರಾಮದಲ್ಲಿ 24X7 ಸಾರ್ವಜನಿಕ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಇಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರ‌ತೆ ಇರುವುದರಿಂದ ನಾಗರಿಕರು ಖಾಸಗಿ ಕ್ಲಿನಿಕ್‌ಗೆ ಹೋಗುತ್ತಿರುವುದಾಗಿ ಸಾತನೂರಿನ ಜನರು ತಿಳಿಸಿದ್ದಾರೆ.

ನಕಲಿ ವೈದ್ಯಕೀಯ ಸೇವೆ ನೀಡಿ ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ದಾಳಿ ವೇಳೆಯಲ್ಲಿ ಸಿಕ್ಕಿಬಿದ್ದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದರೂ ಶಿಕ್ಷೆಗೆ ಒಳಗಾಗದೆ ಹೊರಗಡೆ ಬಂದು ವೈದ್ಯಕೀಯ ಸೇವೆ ನಡೆಸುತ್ತಿದ್ದಾರೆ.

ನಿಜವಾಗಿಯೂ ಅವರು ತಪ್ಪೇ ಮಾಡಿದ್ದರೆ ಕಾನೂನಿನಡಿಯಲ್ಲಿ ಅವರಿಗೆ ಯಾಕೆ  ಶಿಕ್ಷೆಯಾಗಿಲ್ಲ. ನಕಲಿ ವೈದ್ಯರೆಂದು ಆರೋಗ್ಯ ಇಲಾಖೆ ಅಧಿಕಾರಿಗಳೇ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರೇಕೆ ಬಿಟ್ಟುಕಳಿಸಿದ್ದಾರೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry