7
ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಬೆಳ್ಳಿಹಬ್ಬ ಮಹೋತ್ಸವ, ಸರ್ವಧರ್ಮ ಸಮ್ಮೇಳನ

‘ಧರ್ಮ ಬಾಂಧವ್ಯದ ಸೇತುವೆಯಾಗಲಿ’

Published:
Updated:
‘ಧರ್ಮ ಬಾಂಧವ್ಯದ ಸೇತುವೆಯಾಗಲಿ’

ಭಾರತೀನಗರ: ‘ಧರ್ಮ ಮನುಷ್ಯರ ನಡುವೆ ಸೇತುವೆಯಾಗಬೇಕೇ ಹೊರತು ತಡೆಗೋಡೆಯಾಗಬಾರದು’ ಎಂದು ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಆದಿಜಾಂಬವ ಮಠದ ಪೀಠಾಧ್ಯಕ್ಷ ಷಡಕ್ಷರಮುನಿ ಸ್ವಾಮೀಜಿ ಹೇಳಿದರು.

ಸಮೀಪದ ಹನುಮಂತನಗರದ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ದೇವಾಲಯದ ಬೆಳ್ಳಿಹಬ್ಬ ಮಹೋತ್ಸವ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಧರ್ಮದ ಸಾರವು ಒಂದೇ. ಸಮನ್ವಯ, ಭಾವೈಕ್ಯ, ಪ್ರೀತಿ ಸಾಧಿಸುವುದೇ ಆಗಿದೆ. ಜಾತಿ ಮೀರಿದ ಪ್ರೀತಿ ಎಲ್ಲಿರುವುದೋ ಅಲ್ಲಿ ದೇವರು ಇರುತ್ತಾನೆ ಎಂದರು.

ಮೈಸೂರಿನ ಕ್ರೈಸ್ತ ಶ್ರೇಷ್ಠ ಧರ್ಮಗುರು ಸಿ. ರಾಯಪ್ಪ ಮಾತನಾಡಿ, ಮನುಷ್ಯರ ನಡುವೆ ಬಾಂಧವ್ಯದ ಬೆಸುಗೆಯಾಗಬೇಕು. ಪ್ರೀತಿಯಿಂದ ಮಾತ್ರ ಎಲ್ಲವನ್ನು ಜಯಿಸಬಹುದು. ಮನುಷ್ಯತ್ವವೇ ಧರ್ಮ, ಮನುಷ್ಯತ್ವ ದೈವತ್ವಕ್ಕೆ ಬುನಾದಿ,ಮಾನವೀಯತೆಯ ಉಳಿವಿಗಾಗಿ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಮಂಗಳೂರು ಶಾಂತಿಪ್ರಕಾಶನ ವ್ಯವಸ್ಥಾಪಕ ಮಹಮ್ಮದ್‌ ಕುಂಞಿ ಮಾತನಾಡಿ, ಮನುಷ್ಯನ ಅಂಧಕಾರವನ್ನು ತೊಲಗಿಸುವುದೇ ಧರ್ಮ. ಧರ್ಮವನ್ನು ಹೈಜಾಕ್‌ ಮಾಡುವ ಮಂದಿ ಹೆಚ್ಚುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿ ಯಾರು ಅನ್ಯರಲ್ಲ. ಇಡೀ ಜಗತ್ತಿಗೆ ಇರುವ ದೇವರು ಒಬ್ಬನೇ. ವೈವಿಧ್ಯ ಜಗತ್ತಿನ ನಿಯಮ. ಜಗತ್ತು ಸಹಕಾರದಿಂದ ಹೊಂದಾಣಿಕೆಯಿಂದ ನಡೆಯುತ್ತಿದೆ ಎಂಬುದನ್ನು ಯಾರೂ ಮರೆಯಬಾರದು ಎಂದರು.

ಬೆಂಗಳೂರು ಮಹಾಬೋಧಿ ಸೊಸೈಟಿಯ ಧಮ್ಮತಿಸ್ಸಾ ಆಚಾರ್ಯ ಮಾತನಾಡಿ, ಚಿತ್ತಶುದ್ಧಿಯೇ ನಿಜವಾದ ಧರ್ಮ. ನಮ್ಮ ಮನಸ್ಸು ಹೇಗಿರುತ್ತದೋ, ಹಾಗೆಯೇ ನಮ್ಮ ಬದುಕು ಇರುತ್ತದೆ. ಪ್ರತಿಯೋರ್ವರು ತಮ್ಮ ಮನಸ್ಸನ್ನು ಶುದ್ಧ ಮಾಡಿಕೊಳ್ಳುವತ್ತ ಗಮನ ಹರಿಸಿದರೆ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಪರಸ್ಪರ ಪ್ರೀತಿ ಸಹಬಾಳ್ವೆ ಎಲ್ಲರಲ್ಲೂ ಮುಖ್ಯ. ವ್ಯಕ್ತಿಯ ಅಪರಾಧವನ್ನು ದ್ವೇಷಿಸೋಣವೇ ಹೊರತು ಆತನ ಪೂರ್ವಾಪರಗಳನ್ನು ದ್ವೇಷಿಸುವುದರಲ್ಲಿ ಅರ್ಥವಿಲ್ಲ ಎಂದರು.

ಮೈಸೂರು ಉರಿಲಿಂಗ ಪೆದ್ದಿ ಮಹಾಸಂಸ್ಥಾನಮಠದ ಜ್ಞಾನಪ್ರಕಾಶ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಶಾಖಾಮಠದ ಮೃತ್ಯುಂಜಯ ಸ್ವಾಮೀಜಿ, ಯಾದಗಿರಿ ಜಿಲ್ಲೆಯ ವಿಶ್ವಕರ್ಮ ಏಕದಂಡಿಗಮಠದ ಕಾಳಹಸ್ತೇಂದ್ರ ಸ್ವಾಮೀಜಿ, ಚಿತ್ರದುರ್ಗ ಮಾಚಿದೇವ ಸಂಸ್ಥಾನಮಠದ ಬಸವಮಾಚಿದೇವ ಸ್ವಾಮೀಜಿ, ವಿಜಯಪುರ ಜಿಲ್ಲೆ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ, ಬಾಗಲಕೋಟೆ ರಾಮಾರೂಢಸ್ವಾಮಿ ಬ್ರಹ್ಮವಿದ್ಯಾಶ್ರಮದ ಪರಮರಾಮಾ ರೂಢ ಸ್ವಾಮೀಜಿ, ಬೆಳಗಾವಿ ಜಿಲ್ಲೆಯ ಕುಂಬಾರ ಗುರುಪೀಠದ ಬಸವಕುಂಬಾರಗುಂಡಯ್ಯ ಸ್ವಾಮೀಜಿ, ಚಿತ್ರದುರ್ಗ ಜಿಲ್ಲೆ ಗಾಣಿಗ ಗುರುಪೀಠದ ಜಯಬಸವ ಸ್ವಾಮೀಜಿ, ಮೈಸೂರು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ. ಲಕ್ಷ್ಮೀಜಿ ಮಾತನಾಡಿದರು.

ದೇವಾಲಯದ ಸಂಸ್ಥಾಪಕ ಜಿ. ಮಾದೇಗೌಡ ಮಾತನಾಡಿದರು. ಬಿ.ಎಂ. ನಂಜೇಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಜಿ ವಿಧಾನ ಪರಿಷತ್‌ ಸದಸ್ಯ ಮಧು ಜಿ. ಮಾದೇಗೌಡ, ಪ್ರೊ.ಎಚ್. ಬಿಳೀಗೌಡ, ಪ್ರೊ.ಬಿ.ಎಸ್‌. ಬೋರೇಗೌಡ ಪಾಲ್ಗೊಂಡಿದ್ದರು.

ಸಾವಿರಾರು ಜನರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು.ಭಾರತೀ ಕಲಾ ವೃಂದದವರು ‘ಭೂ ಕೈಲಾಸ’ ಎಂಬ ಪೌರಾಣಿಕ ನಾಟಕವನ್ನು ಅಭಿನಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry