ವಿದ್ಯುತ್‌ ಕಣ್ಣಾಮುಚ್ಚಾಲೆ: ಗ್ರಾಹಕರ ಆಕ್ರೋಶ

7
ಶೃಂಗೇರಿ: ಮೆಸ್ಕಾಂ ಕಚೇರಿಯಲ್ಲಿ ಜನಸಂಪರ್ಕ ಸಭೆ– ಶೀಘ್ರ ಹೊಸ ತಂತಿ ಅಳವಡಿಕೆ

ವಿದ್ಯುತ್‌ ಕಣ್ಣಾಮುಚ್ಚಾಲೆ: ಗ್ರಾಹಕರ ಆಕ್ರೋಶ

Published:
Updated:

ಶೃಂಗೇರಿ: ಶೃಂಗೇರಿ ಭಾರತದ ಪ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರ. ವರ್ಷಕ್ಕೆ 40 ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಬಂದು ಹೋಗುವ ಸ್ಥಳ ಇದಾಗಿದೆ. ಇಲ್ಲಿ ಪ್ರತಿದಿನ ವಿದ್ಯುತ್ ಕಣ್ಣುಮುಚ್ಚಾಲೆ ನಡೆಯುತ್ತಿದ್ದು, ಮೆಸ್ಕಾಂನವರು ದಿನವಿಡಿ ವಿದ್ಯುತ್‌ ನೀಡುವ ಬಗ್ಗೆ ಹೆಚ್ಚಿನ ಮುತವರ್ಜಿ ವಹಿಸಬೇಕು ಎಂದು ಉದ್ಯಮಿ ಲಕ್ಷಣ ಹೆಗಡೆ ಅವರು ಮೆಸ್ಕಾಂ ಅಧಿಕಾರಿಗಳನ್ನು ಆಗ್ರಹಿಸಿದರು.

ಶೃಂಗೇರಿಯ ಮೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಶೃಂಗೇರಿಗೆ ಚಿಕ್ಕಮಗಳೂರು, ಆಲ್ದೂರು, ಬಾಳೆಹೊನ್ನೂರು, ಜಯಪುರ ಮಾರ್ಗವಾಗಿ ಬರುವ ವಿದ್ಯುತ್‌ ಲೈನ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನೇರವಾಗಿ ಚಿಕ್ಕಮಗಳೂರಿನಿಂದ ಶೃಂಗೇರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಮೆಸ್ಕಾಂ ಯೋಜನೆ ರೂಪಿಸಬೇಕಿದೆ. ಅದರ ಬದಲಾಗಿ ಕಮ್ಮರಡಿಯಿಂದ ಶೃಂಗೇರಿಗೆ ವಿದ್ಯುತ್ ಸಂಪರ್ಕ ನೀಡುವ ಜತೆಗೆ ಹೆಚ್ಚುವರಿ ವಿದ್ಯುತ್‌ ಪರಿವರ್ತಕ ಹಾಕುವ ಬಗ್ಗೆಯೂ ಮೆಸ್ಕಾಂ ಚಿಂತನೆ ಮಾಡಬೇಕಿದೆ ಎಂದರು.

ಕೊಪ್ಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಯೋಗಿಶ್ ಮಾತನಾಡಿ, ‘ತಾಲ್ಲೂಕಿನಲ್ಲಿ ಲೋ ವೋಲ್ಟೇಜ್ ಇದ್ದ ಕಾರಣ ಜನರು ಇದರ ಕುರಿತು ಕಚೇರಿಗೆ ಸಾಕಷ್ಟು ಬಾರಿ ದೂರು ನೀಡಿದ್ದಾರೆ. ಹಾಗಾಗಿ ಹದಿನಾರು ವಿದ್ಯುತ್‌ ಪರಿವರ್ತಕಗಳ ಅವಶ್ಯಕತೆಯಿದ್ದು 15 ಟಿ.ಸಿಗಳ ಅಳವಡಿಕೆಗೆ ಆದೇಶ ಬಂದಿದ್ದು, ಇದರ ಕುರಿತು ಕೂಡಲೇ ಕಾರ್ಯನಿರ್ವಹಿಸಲಾಗುವುದು. ಕೆರೆಕಟ್ಟೆಯ ವಿದ್ಯುತ್ ತಂತಿಗಳು ಹಳೆಯದಾಗಿದ್ದು, ಹೊಸತಂತಿಗಳನ್ನು ಮಳೆಗಾಲದ ಮೊದಲು ಜೋಡಿಸಲಾಗುವುದು’ ಎಂದರು.

ಸಹಾಯಕ ಎಂಜಿನಿಯರ್‌ ಮಂಜುನಾಥ್ ಮಾತನಾಡಿ, ‘ಪಟ್ಟಣದ ಹಳೆಯ ಲೈನ್‌ಗಳನ್ನು ಬದಲಿಸಿ ಹೊಸಲೈನ್‌ಗಳನ್ನು ಹಾಕಬೇಕಾಗಿದ್ದು ಗುತ್ತಿಗೆದಾರರು ಅದಷ್ಟು ಬೇಗನೆ ಕೆಲಸ ಮಾಡಬೇಕಿದೆ. 2008ರಿಂದ ಬಾಳೆಹೊನ್ನೂರಿನ ವಿದ್ಯುತ್‌ ಲೈನ್‌ನಲ್ಲಿ ಸಮಸ್ಯೆಯಿದ್ದು, ಇದರ ಕುರಿತು ಹೆಚ್ಚಿನ ಮುತವರ್ಜಿಯಿಂದ ಕೆಲಸ ನಿರ್ವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ವಿದ್ಯುತ್ ಗುತ್ತಿಗೆದಾರರೊಬ್ಬರು ಮಾಡುವ ಕೆಲಸಗಳು ಅತ್ಯಂತ ಕಳಪೆಯಿಂದ ಕೂಡಿದ್ದು, ಅವರ ಕಾರ್ಯನಿರ್ವಹಣೆಯ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಜನಸಂಪರ್ಕ ಸಭೆಯಿದ್ದರೂ ಹಾಜರಾಗದ ಮೆಸ್ಕಾಂ ನಾಮನಿರ್ದೇಶನ ಸದಸ್ಯ ಕಾನುವಳ್ಳಿ ಕೃಷ್ಣಪ್ಪ ಗೌಡರ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಶೃಂಗೇರಿ ಮೆಸ್ಕಾಂ ಎಇಇ ಪ್ರಶಾಂತ್‌ಕುಮಾರ್, ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry