ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಕ್ಕೂ ಕಣ್ಣುಂಟು

ಕಾದಂಬಿನಿ
Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಇಷ್ಟು ಕಾಲವೂ ಸುಂದರಾತಿ ಸುಂದರ ಮುಖಗಳನೇ

ನಿರುಕಿಸಿ ಮೋಹಿಸುತ್ತ ಕೂತಲ್ಲಿ

ಮುಖವಿರುವೆಡೆ ಮುಖವಾಡಗಳೇ ದೃಗ್ಗೋಚರಿಸಿ

Face is the index of mind ಎನ್ನುವುದ

ತಣಿತಣಿಸಿ ಮನನ ಮಾಡಿಕೊಳುವ ಹೊತ್ತು

ಅವನು ನನ್ನೊಳಗೆ ಪಾದವೂರಿ,

ಮುಖಗಳನಲ್ಲ; ಪಾದಗಳನು ನೋಡುವುದ ಕಲಿಸಿದ್ದ!

ಸುರ ಸುಂದರಿಯರ ಸುಕೋಮಲ ಪಾದಗಳ ಕನಸುವ,

ಪುರುಸೊತ್ತಲ್ಲಿ ಮೇಕಪ್ಪು ಬಳಿದುಕೊಂಡವಳ ಸೀರೆಯಂಚಲಿ

ಇಣುಕಿಬಿಡುವ ಕೊಳಕು ಹಿಮ್ಮಡಿಗಳ ಕಂಡು ಕಿಸಿಕಿಸಿ ನಗುವ,

ಬಾವೊಡೆದು ಕೀವೊಸರುವ ಪಾದಗಳಿಗೆ ಮುಖ ಕಿವುಚುವ,

ಮುಖವನ್ನಷ್ಟೇ ಕಂಡು

ಮನುಷ್ಯನೊಬ್ಬನನು ಅಳೆಯಲೆತ್ನಿಸುವ ನನಗೆ

ಈಗ ಪಾದಗಳ ಇಣುಕಿಣುಕಿ ನೋಡುವ ಕಾತರ!

ಸಂಜೆ ಮೆಟ್ರೋದಲ್ಲಿ ಕೂತವರ ದಣಿದ ಪಾದ,

ಫುಟ್ಪಾತಿನಲಿ ಅಡ್ಡಾದವರ ದೊರಗು ಪಾದ,

ನಗರದಾಚೆ ಕಸದ ರಾಶಿಯಲಿ ನೆಟ್ಟ ಪುಟ್ಟ ಪುಟ್ಟ ಪಾದ

ಬೆಂಕಿ ಬಿಸಿಲ ಬಂಜರು ಹೊಲದೊಳಗೆ ಸುಟ್ಟಪಾದ

ನಿತ್ಯ ಸರಕಾರಿ ಆಸ್ಪತ್ರೆಗೆ ಎಡತಾಕುವ ಮುದಿಪಾದ

ಶಾಲೆಗೋಡುವ ಬೂಟುಗಳೊಳಗೆ ಬಂಧಿಯಾಗಿ ಬೆಂದ ಪಾದ

ನಡೆನಡೆದು ಜಡ್ಡಾಗಿ, ಸೀಳೊಡೆದ ಹೊರೆ ಹೊತ್ತವನ ಪಾದ

ಅತ್ಯಾಚಾರಕ್ಕೆ ಮೈಯೊಡ್ಡದೆ ದಿಕ್ಕೆಟ್ಟು ಓಡಿ ಓಡಿ ಸೋತು

ಜೀವಂತ ದಹನವಾದವಳ ಕರಕು ಪಾದ

ಬಾಂಬ್ ದಾಳಿಗೆ ಸಿಡಿದ ಹೂ ಕಂದಮ್ಮರ ರಕ್ತಸಿಕ್ತ ಪಾದ

ಆ ಸುದೀರ್ಘ ನಡಿಗೆಯುದ್ದಕೂ

ಸುಡುವ ಟಾರು ರಸ್ತೆಯ ಕಾವಿಗೆ ಬೊಕ್ಕೆಯೆದ್ದ

ಅನ್ನದಾತರ ರೂಕ್ಷಪಾದ

ಕೊಳೆತ ಪಾದ, ದೂಳಿದೂಸರಿತ ಪಾದ,

ಎಡವು ಪಾದ, ಮುಳ್ಳು ಹೊಕ್ಕ ಪಾದ,

ತಿರುಗಣಿ ಮಡುವಿನೊಳಗೆ ತಿರುತಿರುಗಿ ಸೋತ ಪಾದ

ನಾಯಿಗಳು ಕಚ್ಚಿ ಎಳೆದೊಯ್ಯುವ ಭ್ರೂಣದ ರುಧಿರಪಾದ -

ಗಳೆಲ್ಲವ ತುಳಿತುಳಿದು ಮಣ್ಣಾಗಿಸುವ ದುರುದುಂಬಿ ಪಾದ

ಹೀಗೆಯೇ ನೋಡು ನೋಡುತ್ತ…

ಪಾದಗಳೆಲ್ಲ ದಣಿವು - ದಾವರ,

ನೋವು - ನಲುಗುಗಳೆಲ್ಲದರ ಕೂಡ

ನಡೆಯುತ್ತಾ ನಡೆಯುತ್ತಾ

ಆ ಒಂದೊಂದು ಪಾದಕೂ ಬಾಯಿ ಮೂಡಿ

ತನ್ನ ಕಥೆ ಹೇಳುತ್ತಾ ಹೇಳುತ್ತಾ…

ನಾನೂ ಕೇಳುತ್ತಾ ಕೇಳುತ್ತಾ ಕಲ್ಲಾದ ಹೊತ್ತು

ಅಲ್ಲೇ ಸುಳಿದ, ದುಬಾರಿ ಶೂಗಳಲಿ ಸುಶೋಭಿತ ಪಾದದವನ

ಕಣ್ಣು ಮಿಂಚಾಗಿ, ಮೆದುಳು ಮೊನಚು ಶರವಾಗಿ, ಮೊಗ ಬಿರಿದು

‘ಪಾದಗಳದೇ ಒಂದು ಸಿನೆಮಾ!

ಪಾದಗಳೇ ನಾಯಕ ನಾಯಕಿಯರು

ಪಾದಗಳೇ ಪೋಷಕ, ವಿದೂಷಕ, ಪಾದಗಳೇ ವಿಲನ್ನು-

ಗಳಾಗಿ, ಪಾದಗಳ ಚಿತ್ರವ ನೋಡಲು

ಕಾಲ್ತುಳಿತಗಳಾಗಿ ಚಿತ್ರದ ಕೈಯಷ್ಟು ಹಣ ದೋಚಿ

ಕಡೆಗದರ ಮುಡಿಗೊಂದು ಆಸ್ಕರು ಬಂದು…’

ಎಂದವನ ಹವಣಿಕೆಯು ಉದ್ವೇಗದಿಂದುದ್ಗರಿಸಿ

ಕಥೆಯುಲಿಯುತ್ತಿದ್ದ ಪಾದಗಳ ನಾಲಗೆ ಮುಗ್ಗರಿಸಿಬಿತ್ತು!

ಕಣ್ಣು ಕಂಡ ಕಂಡದ್ದನ್ನು ಕನಸುತ್ತ,

ಹೃದಯ ಎತ್ತೆತ್ತಲೋ ಹೊಯ್ದಾಡುತ್ತ

ಬೆನ್ನು ಸತತ ಹೊರೆಗಳ ಹೊರುತ್ತ

ಇಂದ್ರಿಯಗಳು ಹಸಿಯುತ್ತ,

ಕರುಳು ಚುರುಗುಡುತ್ತ ಮರುಗುತ್ತ

ಕೈಗಳು ಸಿಕ್ಕಿದ್ದಷ್ಟನ್ನು ಬಾಚಿಕೊಳ್ಳಲು ಹವಣಿಸುತ್ತ

ಸುಂಟರಗಾಳಿಗೆ ಸಿಕ್ಕ ತರಗೆಲೆಯಂಥ ಹಾಳು ತಲೆ

ಎಲ್ಲೆಲ್ಲಿಗೋ ಎಳೆದೊಯ್ದರೂ

ಇಡೀ ಬದುಕನು ಹೊತ್ತು

ದುರ್ಗಮದಲೂ ದಿಕ್ಕುತಪ್ಪದಂತೆ

ನಡೆಸಿಬಿಡುವ ಪಾದಗಳಿಗೆ

ಕಣ್ಣಿವೆಯೆಂದು

ನನಗೆ ತಿಳಿದದ್ದೇ ಆಗ!

ನಾನೀಗ ಮುಚ್ಚಿದ ಬಾಗಿಲೆದುರು ನಿಂತಲ್ಲೇ ನಿಂತುಬಿಟ್ಟ

ನನ್ನದೇ ಪಾದಗಳೆಡೆ ನೋಡುತ್ತೇನೆ

ಅವನ ಕೊರಳ ಕೊಳಲು,

‘ಪಾದಗಳೆಂದರೆ ನಿಲ್ಲುವುದಲ್ಲ; ನಡೆಯುವುದು’ ಎಂದಂತಾಗಿ,

ತಡಕಾಡಿದರೆ ಅವನ ಪಾದಗಳು ಹೆಜ್ಜೆ ಗುರುತಷ್ಟೇ ಉಳಿಸಿ

ಎತ್ತಲೋ ನಡೆದುಬಿಟ್ಟಿವೆ!

ನಾನೀಗ ತುರ್ತಾಗಿ ಹೊರಡಬೇಕು

ಪಾದಗಳ ನೋಡೆಂದವನ ಹುಡುಕಬೇಕು

ಅವನ ಪಾದಗಳಿಗೊಮ್ಮೆ ತುಟಿಯೂರಿ ಮುತ್ತಿಕ್ಕಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT