ಟೈರ‍್ಸಾಮಿ ಎನ್ನುವ ತ್ರಿಶಂಕು ಕಥನ

7

ಟೈರ‍್ಸಾಮಿ ಎನ್ನುವ ತ್ರಿಶಂಕು ಕಥನ

Published:
Updated:
ಟೈರ‍್ಸಾಮಿ ಎನ್ನುವ ತ್ರಿಶಂಕು ಕಥನ

ಹೆಣ ಮುಂದಿಟ್ಟುಕೊಂಡು ಬದುಕಿನ ಔನ್ನತ್ಯ ಹಾಗೂ ಸಣ್ಣತನಗಳನ್ನು ಶೋಧಿಸುವ ಕಥೆ-ಕಾದಂಬರಿಗಳು ಕನ್ನಡದಲ್ಲಿ ಸಾಕಷ್ಟಿವೆ. ರಮೇಶಬಾಬು ಅವರ ‘ಟೈರ‍್ಸಾಮಿ’ ಕಾದಂಬರಿ ಕೂಡ ಸಾವಿನ ಸಮ್ಮುಖದಲ್ಲಿ ಲೌಕಿಕದ ಹಲವು ಸಂಗತಿಗಳನ್ನು ಚರ್ಚಿಸುತ್ತದೆ. ಆದರೆ, ಇದೆಲ್ಲ ಚರ್ಚೆ ನಡೆಯುವುದು ಹೆಣದ ಮುಂದಲ್ಲ; ಯಾವುದೇ ಕ್ಷಣದಲ್ಲಿ ಹೆಣವಾಗಬಹುದಾದ ವ್ಯಕ್ತಿಯ ಸಮ್ಮುಖದಲ್ಲಿ.

ಚಿಕ್ಕಬಳ್ಳಾಪುರ ಜಿಲ್ಲೆಯ ಅಮ್ಮನಕರೆ ಎನ್ನುವ ಊರಿನ ಹೊರಭಾಗದಲ್ಲಿರುವ ಹುಣಸೆಮರದ ನೆರಳಿನಲ್ಲಿ ಮಡಚಿಡಬಹುದಾದ ಮಂಚದ ಮೇಲೆ ಮಲಗಿರುವ ಸಾವಿನಂಚಿನಲ್ಲಿರುವ ಟೈರ‍್ಸಾಮಿ ಎನ್ನುವ ವ್ಯಕ್ತಿ ಈ ಕಾದಂಬರಿಯ ಕಥಾನಾಯಕ. ಸ್ವಾಮೀಜಿಯ ಪೋಷಾಕಾಗಲೀ ನಡೆನುಡಿಯಾಗಲೀ ಇಲ್ಲದಿದ್ದರೂ ಮಠ ಹೊಂದಿಲ್ಲದಿದ್ದರೂ ಜನರಿಂದ ಸ್ವಾಮೀಜಿ ಎಂದು ಕರೆಸಿಕೊಳ್ಳುವ ವ್ಯಕ್ತಿಯ ನಿಗೂಢ ಬದುಕು ಕಾದಂಬರಿಯಲ್ಲಿದೆ.

ರಮೇಶಬಾಬು ಅವರ ಕಾದಂಬರಿ ಮೂರು ಕಾರಣಗಳಿಂದಾಗಿ ಗಮನಸೆಳೆಯುತ್ತದೆ. ಇಲ್ಲಿನ ಕಥಾನಾಯಕ ಸ್ವಾಮೀಜಿಯಾಗಿರುವುದೇ ಕಾದಂಬರಿಯ ಬಗ್ಗೆ ಕುತೂಹಲ ತಳೆಯುವಂತೆ ಮಾಡುತ್ತದೆ. ವಿವಿಧ ಕಾರಣಗಳಿಂದಾಗಿ ಸ್ವಾಮೀಜಿಗಳು ಸದಾ ಸುದ್ದಿಯಲ್ಲಿರುವ ಸಂದರ್ಭದಲ್ಲಿ, ಸೃಜನಶೀಲ ಕಲಾಪ್ರಕಾರದಲ್ಲಿ ಮೂಡುವ ಸ್ವಾಮೀಜಿಗಳ ಚಿತ್ರಣಗಳು ಯಾವಾಗಲೂ ಕುತೂಹಲ ಹುಟ್ಟಿಸುತ್ತವೆ. ಕನ್ನಡದ ಕಾದಂಬರಿಕಾರರಿಗಂತೂ ಮಠ ಹಾಗೂ ಸ್ವಾಮೀಜಿಗಳು ಅತ್ಯಂತ ಪ್ರಿಯವಾದವರು. ಕನ್ನಡದ ಮೊದಲ ಕಾದಂಬರಿಗಳಲ್ಲೊಂದಾದ ಬೋಳಾರ ಬಾಬುರಾಯರ ‘ವಾಗ್ದೇವಿ’ ಕಾದಂಬರಿಯ ಕಥಾವಸ್ತು ಸ್ವಾಮೀಜಿಗಳ ಬದುಕಿನ ಟೊಳ್ಳುತನಕ್ಕೆ ಸಂಬಂಧಿಸಿದ್ದು. ಬಸವರಾಜ ಕಟ್ಟೀಮನಿಯವರ ಜನಪ್ರಿಯ ಕಾದಂಬರಿ ‘ಜರತಾರಿ ಜಗದ್ಗುರು’ ಶೀರ್ಷಿಕೆಯೇ ಕಥೆಯನ್ನು ಸೂಚಿಸುವಂತಿದೆ. ಈ ಕೃತಿಗಳೂ ಸೇರಿದಂತೆ ಸ್ವಾಮೀಜಿಗಳ ಕುರಿತ ಕನ್ನಡದ ಬಹುತೇಕ ಕೃತಿಗಳು ಸ್ವಾಮೀಜಿಗಳ ಪೊಳ್ಳುತನವನ್ನು ಬಯಲು ಮಾಡುವ ಕಥನಗಳು. ಆದರೆ, ರಮೇಶಬಾಬು ಅವರ ಕಾದಂಬರಿಯ ಟೈರ‍್ಸಾಮಿಯದು ಬೇರೆಯದೇ ಕಥೆ. ಈತ ಲೌಕಿಕದ ಬಗ್ಗೆ ವಿರಾಗ ಹೊಂದಿದ್ದರೂ ಅದರಾಚೆಗಿನ ತಿಳಿವಳಿಕೆ ಅವನಲ್ಲಿದೆ ಎಂದು ಹೇಳುವುದು ಕಷ್ಟ. ಮೇಲ್ನೋಟಕ್ಕೆ ಹುಚ್ಚನಂತೆ, ಹುಂಬನಂತೆ ಕಾಣಿಸುವ ಟೈರ‍್ಸಾಮಿಯ ನೆಪದಲ್ಲಿ ಊರಿನ-ಸಮಾಜದ ಪೊಳ್ಳುತನಗಳನ್ನು ಚಿತ್ರಿಸಲು ರಮೇಶಬಾಬು ಪ್ರಯತ್ನಿಸಿರುವುದು ಕುತೂಹಲಕರವಾಗಿದೆ.

ಟೈರ‍್ಸಾಮಿ ಬದುಕಿನ ಬಗ್ಗೆ ಆಕರ್ಷಣೆಯನ್ನು ಕಳೆದುಕೊಂಡಿದ್ದರೂ ಅವನನ್ನು ಬಂಡವಾಳದ ರೂಪದಲ್ಲಿ ನೋಡುವ ವ್ಯಕ್ತಿಗಳು ಲೌಕಿಕದ ಎಲ್ಲ ಆಕರ್ಷಣೆಗಳಿಗೆ ತೆರೆದುಕೊಂಡವರೇ ಆಗಿದ್ದಾರೆ. ಟೈರ‍್ಸಾಮಿಯನ್ನು ನೋಡಿಕೊಳ್ಳುವ ವೆಂಕಟ್ರೆಡ್ಡಿ, ಕೊಂಚ ಬಿಡುವು ಮಾಡಿಕೊಂಡು ಅಲೆಮಾರಿ ಸಮುದಾಯದ ಹುಡುಗಿಯೊಬ್ಬಳನ್ನು ಕೂಡುತ್ತಾನೆ. ಊರಿನ ಹಲವು ಚಾಚುಗಳನ್ನು ಸೂಚಿಸುವಂತೆ, ಅಮಾಯಕರ ಜೊತೆಗೆ ರಾಜಕೀಯ ಪುಢಾರಿಗಳು ಕೂಡ ಹುಣಸೇಮರದ ನೆರಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಊರೊಂದರ ವೃತ್ತಾಂತ ತೆರೆದುಕೊಳ್ಳುವುದು ಅರಳೀಮರದ ಅಡಿಯಲ್ಲಿ. ಆದರೆ, ‘ಟೈರ‍್ಸಾಮಿ’ ಕೃತಿ ತೆರೆದುಕೊಳ್ಳುವುದು ಹುಣಸೇಮರದ ಬುಡದಲ್ಲಿ. ಹುಣಸೆಯ ಹುಳಿ ಮನುಷ್ಯರ ಭಾವಜಗತ್ತಿನ ರಸಕಸಿಗಳನ್ನು ಸೂಚಿಸುವಂತಿದೆ. ಟೈರ‍್ಸಾಮಿ ಓಡಿಸುವ ಸೈಕಲ್ಲಿನ ಟೈರು ಬದುಕಿನ ಗತಿ ಮತ್ತು ಅವನತಿಯನ್ನು ಸೂಚಿಸುವಂತಿದೆ. ಕೈಯ ನಿರ್ದೇಶನಕ್ಕೆ ತಕ್ಕಂತೆ ಚಲಿಸುವ ಟೈರು, ಕೈ ದಣಿದೊಡನೆ ನಿಶ್ಚಲವಾಗುತ್ತದೆ. ಓಟದ ಪುಲಕ ಹಾಗೂ ಇದ್ದಕ್ಕಿದ್ದಂತೆ ಒದಗುವ ನಿಶ್ಚಲತೆ ಬದುಕಿನ ಎರಡು ತುದಿಗಳೇ ಆಗಿವೆ.

ಕಾದಂಬರಿಯ ಎರಡನೇ ಗಮನಾರ್ಹ ಅಂಶ ನಿರೂಪಣಾತಂತ್ರಕ್ಕೆ ಸಂಬಂಧಿಸಿದ್ದು. ನಟರಾಜ ಎನ್ನುವ ಪತ್ರಕರ್ತ ಹಾಗೂ ಸತೀಶ ಎನ್ನುವ ಕಾದಂಬರಿಕಾರನ ಕಣ್ಣಲ್ಲಿ ಟೈರ‍್ಸಾಮಿಯ ಬದುಕು ತೆರೆದುಕೊಳ್ಳುತ್ತದೆ. ಪತ್ರಕರ್ತನ ಕಣ್ಣು ವಸ್ತುಸ್ಥಿತಿಯದಾದರೆ, ಕಾದಂಬರಿಕಾರನದು ವಾಸ್ತವದ ಜೊತೆಗೆ ಕಲ್ಪನೆಯನ್ನು ಕಸಿ ಮಾಡುವಂತಹದ್ದು. ಹೀಗೆ, ಕಾದಂಬರಿಕಾರನ ಸ್ವಾತಂತ್ರ್ಯದ ಜೊತೆಗೆ ವಸ್ತುಸ್ಥಿತಿಯ ಹಂಬಲಕ್ಕೂ ಕೃತಿಯಲ್ಲಿ ಅವಕಾಶವಿದೆ. ಇದರಿಂದಾಗಿ ನಿರ್ದಿಷ್ಟ ಅಂತರದಲ್ಲಿ ನಿಂತು, ಸಂಯಮದಿಂದ ಕಥೆಯನ್ನು ನಿರೂಪಿಸುವುದು ಸಾಧ್ಯವಾಗಿದೆ. ಮೆಲೊಡ್ರಾಮಕ್ಕೆ ಅವಕಾಶವಿರುವ ಸಂದರ್ಭಗಳನ್ನು ಕೂಡ ರಮೇಶಬಾಬು ಸಂಯಮದಿಂದ ನಿಭಾಯಿಸಿರುವುದು ಕುತೂಹಲಕಾರಿಯಾಗಿದೆ. ಕೋಲಾರ-ಚಿಕ್ಕಬಳ್ಳಾಪುರ ಪರಿಸರ ಹಾಗೂ ಅಲ್ಲಿನ ಭಾಷೆ ಕಾದಂಬರಿಯಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗಿದೆ. ಜೀವನೋತ್ಸಾಹ ಹಿಂಡುವಂತಹ ಬಿಸಿಲು, ಬಿಸಿಲಿನಲ್ಲೂ ಬಸವಳಿಯದ ಕಾಮನೆಗಳು, ಮೈಮನಗಳಿಗೆ ಮಂಕು ಕವಿಸುವ ದೂಳು, ಊರುಕೇರಿಯನ್ನು ಆವರಿಸಿಕೊಂಡಿರುವ ರಾಜಕಾರಣ - ಇವೆಲ್ಲ ಟೈರ‍್ಸಾಮಿಗೆ ಗಾಢವಾದ ಪ್ರಾದೇಶಿಕ ಆವರಣವನ್ನು ಕಲ್ಪಿಸಿವೆ.

ಕಾದಂಬರಿಯಲ್ಲಿನ ಕೆಲವು ವಿಶಿಷ್ಟ ಪಾತ್ರಗಳು ಹಾಗೂ ಪ್ರಸಂಗಗಳು ಟೈರ‍್ಸಾಮಿಯನ್ನು ಓದುಗರಿಗೆ ಆಪ್ತಗೊಳಿಸಿರುವ ಮತ್ತೊಂದು ಅಂಶ. ಟೈರ‍್ಸಾಮಿಯ ಪೂರ್ವಾಶ್ರಮದ ಪತ್ನಿ ಕ್ಯಾಥರಿನ್‍ ಅಂಥದೊಂದು ವಿಶೇಷ ಪಾತ್ರ. ನವೀನ ಎನ್ನುವ ತನ್ನ ಸಮುದಾಯಕ್ಕೆ ಸೇರದ ಯುವಕನನ್ನು ಪ್ರೇಮಿಸಿ ಮದುವೆಯಾಗುವ ಕ್ಯಾಥರಿನ್‍, ಬದುಕಿನುದ್ದಕ್ಕೂ ಕಾಣುವುದು ನೋವನ್ನೇ. ಬಾಡಿಗೆ ತಾಯಿಯಾಗುವ ಮೂಲಕ ಬದುಕಿಗೆ ಆರ್ಥಿಕ ಸಾಂತ್ವನ ಕಂಡುಕೊಳ್ಳುವ ಅವಳ ಪ್ರಯತ್ನವೂ ಯಶಸ್ವಿಯಾಗುವುದಿಲ್ಲ. ಬೇರೆಯವರ ಕೂಸನ್ನು ಒಡಲಿನಲ್ಲಿಟ್ಟುಕೊಂಡು ಜತನ ಮಾಡುವ ಸಮಯದಲ್ಲೇ, ತನ್ನ ಕೂಸನ್ನು ಗಂಡನ ನಿರ್ಲಕ್ಷ್ಯದಿಂದಾಗಿ ಕಳೆದುಕೊಳ್ಳುತ್ತಾಳೆ.

ಟೈರ‍್ಸಾಮಿ ಉರುಫ್‍ ನವೀನ ಕಾದಂಬರಿಯ ಕೇಂದ್ರಪಾತ್ರವಾದರೂ ಹೆಚ್ಚು ಸಂಕೀರ್ಣವಾಗಿರುವುದು ನತದೃಷ್ಟ ತಾಯಿ ಕ್ಯಾಥರಿನ್‍ಳ ಪಾತ್ರ. ತಾನಂದುಕೊಂಡ ಬದುಕನ್ನು ಪಡೆಯಲಾರದ ಆ ಹೆಣ್ಣುಮಗಳ ಪಾತ್ರ ಕಾದಂಬರಿಯಲ್ಲಿಯೂ ಅಪೂರ್ಣವಾಗಿ ಉಳಿದಿದೆ ಎನ್ನುವಷ್ಟರ ಮಟ್ಟಿಗೆ ಓದುರನ್ನು ಕಾಡುತ್ತದೆ. ಬದುಕು ಉಳಿಸಿಕೊಳ್ಳಲು ಸೆಣಸುವ ಕ್ಯಾಥರಿನ್‍ಳ ದಿಟ್ಟತನದ ಎದುರು, ಬದುಕಿಗೆ ಬೆನ್ನುಹಾಕುವ ನವೀನ ಪಲಾಯನವಾದಿಯಾಗಿ ಕಾಣುತ್ತಾನೆ.

ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕ್ಯಾಥರಿನ್‍ ಗಾರ್ಮೆಂಟ್ಸ್ ಉದ್ಯಮದಲ್ಲಿ ದುಡಿಯುತ್ತಾಳೆ. ಬಾಡಿಗೆ ತಾಯಿಯಾಗಲು ಪ್ರಯತ್ನಿಸುತ್ತಾಳೆ. ಈ ಮೂಲಕ ಗಾರ್ಮೆಂಟ್ಸ್ ವ್ಯವಸ್ಥೆಯ ತವಕ ತಲ್ಲಣಗಳು ಹಾಗೂ ಬಾಡಿಗೆ ತಾಯ್ತನ ಒಂದು ಉದ್ಯಮದ ಸ್ವರೂಪ ಪಡೆದಿರುವ ಚಿತ್ರಣ ಕಾದಂಬರಿಯಲ್ಲಿದೆ. ಬೆಂಗಳೂರಿನಂಥ ನಗರಗಳಲ್ಲಿನ ಕೆಳಮಧ್ಯಮ ವರ್ಗಗಳ ಬದುಕನ್ನು ಬಲ್ಲವರಿಗೆ ಗಾರ್ಮೆಂಟ್ಸ್ ಉದ್ಯಮ ಹಾಗೂ ಬಾಡಿಗೆ ತಾಯ್ತನದ ಲೋಕಕ್ಕೆ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳಬಲ್ಲರು. ಆದರೆ, ವಿಶಾಲ ಭಿತ್ತಿಯ ಈ ವಸ್ತುಗಳು ಟೈರ‍್ಸಾಮಿಗೆ ಸಂದಿರುವ ಸಹಾನುಭೂತಿಯಲ್ಲಿ ಮಹತ್ವ ಪಡೆದುಕೊಳ್ಳದೆ ಹೋಗಿವೆ. ಟೈರ‍್ಸಾಮಿಯಾಗಿ ನವೀನ ಬದಲಾಗುವ ಹಿನ್ನೆಲೆಯಲ್ಲಿನ ವಿವರಗಳು ಇನ್ನಷ್ಟು ಖಚಿತವಾಗಿರಬೇಕಿತ್ತು ಎನ್ನುವ ಅತೃಪ್ತಿಯನ್ನೂ ಕಾದಂಬರಿ ಉಳಿಸುತ್ತದೆ.

ಕಾದಂಬರಿ ಪ್ರಕಾರದ ಆಕರ್ಷಣೆಗೆ ಬರಹಗಾರರು ಮತ್ತೆ ಒಳಗಾಗುತ್ತಿರುವುದಕ್ಕೆ ಉದಾಹರಣೆ ರೂಪದಲ್ಲಿ ಟೈರ‍್ಸಾಮಿಯನ್ನು ನೋಡಬಹುದು. ಈಗಾಗಲೇ ಬಲಿಹಾರ, ಹದ ಎನ್ನುವ ಕಾದಂಬರಿಗಳನ್ನು ಬರೆದಿರುವ ರಮೇಶಬಾಬು ಅವರ ಮೂರನೇ ಕಾದಂಬರಿಯಿದು ಎನ್ನುವುದು ಗಮನಾರ್ಹ. ಕಾದಂಬರಿಯ ರುಚಿ ಮತ್ತು ಹದ ಎರಡಕ್ಕೂ ಮೋಹಿತರಾದವರಂತೆ ಕಾಣಿಸುವ ರಮೇಶಬಾಬು ಅವರ ಮುಂದಿನ ಬರವಣಿಗೆಗೆ ಕಾಯುವಂತೆ ಮಾಡುವುದರಲ್ಲಿ ಟೈರ‍್ಸಾಮಿ ಯಶಸ್ಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry