6

ಭಾಷೆಯ ದೋಣಿಗೆ ಪದ್ಯದ ಹುಟ್ಟು

Published:
Updated:
ಭಾಷೆಯ ದೋಣಿಗೆ ಪದ್ಯದ ಹುಟ್ಟು

ಈ ಪುಸ್ತಕದ ಲೇಖಕನ ಮಾತಿನಲ್ಲಿ ಮಾಧವ ಚಿಪ್ಪಳಿ ‘ತತ್ವಶಾಸ್ತ್ರ ಅಥವಾ ದರ್ಶನ ಎಂದರೆ ನಾವು ಯಾವುದನ್ನು ಸುಲಭದಲ್ಲಿ, ರೂಢಿಯ ಬಲದಿಂದ ಒಪ್ಪಿಕೊಂಡಿರುತ್ತೇವೆಯೋ ಅದನ್ನು ಪ್ರಶ್ನಿಸುವುದು’ ಎಂದು ವ್ಯಾಖ್ಯಾನಿಸಿದ್ದಾರೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಮ್ಮ ಬದುಕಿನಲ್ಲಿನ ರೂಢಿಗತ ಅಥವಾ ಸಿದ್ಧಮಾದರಿಗಳನ್ನು ಪ್ರಜ್ಞಾಪೂರ್ವಕವಾಗಿ ಬಿಡಿಸಿ ಅದರ ಹಿಂದಿನ ತರ್ಕವನ್ನು ಅರಿಯುವ ಪ್ರಯತ್ನ ಎನ್ನಬಹುದು. ‘ನುಡಿಯೊಡಲು’ ಪುಸ್ತಕದ ಹದಿನಾರು ಪ್ರಬಂಧಗಳಲ್ಲಿ ಲೇಖಕರು ಮಾಡಹೊರಟಿರುವುದೂ ಇದನ್ನೇ.

ಕವಿತೆಯೊಂದು ಮೈದಳೆಯಲು ಭಾಷೆ ಬೇಕೇ ಬೇಕು. ಕವಿತೆ ಎನ್ನುವುದನ್ನು ಬದುಕಿನ ಸತ್ಯಗಳ ಶೋಧನೆಯ ದಾರಿ ಎಂದು ಪರಿಗಣಿಸುವುದಾದರೆ ಆ ದಾರಿಯಲ್ಲಿ ಭಾಷೆಯ ಪಾತ್ರ ಎಂಥದ್ದು? ಸಹಸ್ರ ವರ್ಷಗಳಷ್ಟು ಹಳೆಯದೂ ಇದೇ ಈ ಕ್ಷಣದಷ್ಟು ಹೊಸದೂ ಆದ ಬದುಕಿನ ವಿನ್ಯಾಸಕ್ಕೂ ಭಾಷೆಗೂ ಇರುವ ಸಂಬಂಧ ಎಂಥದ್ದು? ಇಂಥ ಹಲವು ಪ್ರಶ್ನೆಗಳನ್ನು ಈ ಪ್ರಬಂಧಗಳು ಕನ್ನಡದ ಹಲವು ಪ್ರಮುಖ ಕವಿಗಳ ಪದ್ಯಗಳ ನೆಪದಲ್ಲಿ ಎತ್ತುತ್ತವೆ.

ಲೇಖಕರು ತತ್ವಶಾಸ್ತ್ರದ ವಿದ್ಯಾರ್ಥಿ. ಪದ್ಯಗಳ ಓದು ಅವರಿಗೆ ನೆಚ್ಚಿನ ಹವ್ಯಾಸ. ಈ ಎರಡರ ಮುಖಾಮುಖಿ ಅವರ ಚಿಂತನಕ್ರಮವನ್ನು ಬೆಳೆಸಿದೆ. ತನಗೆ ಗೊತ್ತಿರುವ ಸತ್ಯಗಳನ್ನು ಹೇಳುತ್ತ ಹೋಗುವ ಕ್ರಮವನ್ನು ಬಿಟ್ಟು, ಹೇಳುತ್ತ ಹೇಳುತ್ತಲೇ ಹುಡುಕುತ್ತಲೂ ಇರುವ, ಬರೆಯುತ್ತಲೇ ಚಿಂತಿಸುವ ಕ್ರಮದ ಬರಹಗಳಿವು. ಹಾಗಾಗಿಯೇ ಇಲ್ಲಿನ ಬರಹಗಳಲ್ಲಿ ಉತ್ತರಿಸುವ ಅಹಂಕಾರಕ್ಕಿಂತ ಪ್ರಶ್ನಿಸುವ ಕುತೂಹಲವೇ ಎದ್ದು ಕಾಣುತ್ತದೆ.

ತತ್ವಶಾಸ್ತ್ರದ ಸಾಗರದಲ್ಲಿ ಭಾಷೆಯ ದೋಣಿಯ ಮೇಲೆ ಪದ್ಯಗಳ ಹುಟ್ಟು ಹಾಕುತ್ತ ವಿಹರಿಸುವ ಇಲ್ಲಿನ ಬರಹಗಳು ಭಾರತೀಯ ದರ್ಶನಶಾಸ್ತ್ರದ ಹಲವು ಶಾಖೆಗಳನ್ನು ಎಡತಾಕಿ ಮುಂದೆ ಸಾಗುತ್ತದೆ. ಈ ವಿಹಾರದ ಗುಣದಿಂದಲೇ ಇಲ್ಲಿನ ಬರಹಗಳು ಬದುಕಿನಿಂದ ದೂರ ನಿಂತು ಕಟ್ಟಿದ ಅತಿಸಂಕೀರ್ಣತೆಯ ಭಾರದಿಂದ ಓದುಗರನ್ನು ಬಳಲಿಸುವುದಿಲ್ಲ. ಬದಲಿಗೆ ನಮ್ಮ ದೈನಂದಿನಲ್ಲಿ ಬಳಸುವ ವಿವರಗಳ ಮೂಲಕವೇ ಅನುಸಂಧಾನ ಮಾಡುತ್ತ ನಮ್ಮನ್ನು ನಾವೇ ನೋಡಿಕೊಳ್ಳುವಂತೆ ಮಾಡಿ ಮನಸ್ಸನ್ನು ಅರಳಿಸುತ್ತವೆ.

ವೈದೇಹಿ ಅವರ ‘ಆಕೆ ಆತ ಭಾಷೆ’ ಪದ್ಯದ ಒಂದು ಭಾಗ ಹೀಗಿದೆ. ‘ಆಕೆ ಮಾಡಿದ್ದು ಅವನಿಗಿಷ್ಟ/ವಾದ ಕಾಯಿರಸ/ ಅವನು ಉಂಡಿದ್ದು ಮಜ್ಜಿಗೆ/ಹುಳಿ ಅಂತ!’. ಇದರಲ್ಲಿ ವ್ಯಕ್ತವಾಗಿರುವ ಭಾಷೆ ಮತ್ತು ತಾತ್ಪರ್ಯಜ್ಞಾನದ ಕುರಿತು ಹೇಳುತ್ತ ಲೇಖಕರು ಬರೆಯುವುದನ್ನು ಗಮನಿಸಿ: ‘ನಾವು ವಾಸ್ತವವನ್ನು ಗ್ರಹಿಸುವುದು ಭಾಷೆ ಭಾವಗಳ ಸಮ್ಮಿಲನದಲ್ಲಿಯೇ. ನಾವು ಯಾವ ಜಗತ್ತನ್ನು ಅರ್ಥೈಸಲು ಹೊರಡುತ್ತೇವೆಯೋ ಅದನ್ನು ನಾವು ಭಾವಿಸುತ್ತೇವೆ. ನಾವು ಹೇಗೆ ಭಾವಿಸುತ್ತೇವೆಯೋ ಅದು ಹಾಗೆ ಕಾಣುವ ಸಂಭವವೇ ಹೆಚ್ಚು. ಆದ್ದರಿಂದಲೇ ನಾವು ಇರುವ ಎಷ್ಟೋ ಸಂಗತಿಗಳಿಗೆ ಕುರುಡಾಗುವುದು ಮತ್ತು ಇಲ್ಲದ ಹಲವು ಸಂಗತಿಗಳನ್ನು ಕಾಣುವುದು. ನಮಗೆ ಇಷ್ಟವಾದವರಲ್ಲಿ ಒಳ್ಳೆಯ ಗುಣಗಳನ್ನೂ ಇಷ್ಟವಾಗದವರಲ್ಲಿ ಅಷ್ಟಾಗಿ ಒಳ್ಳೆಯದಲ್ಲದ ಗುಣಗಳನ್ನೂ ನಾವು ಕಾಣುವುದು ಇದಕ್ಕೇ ಇರಬಹುದೇ? ಅವಳು ಮಾಡಿದ ಕಾಯಿರಸವನ್ನು ಅವನು ಮಜ್ಜಿಗೆ ಹುಳಿ ಎಂದು ಉಂಡ ಹಾಗೆ ನಾವು ನಮ್ಮ ನಮ್ಮಂತೆಯೇ ಬದುಕುತ್ತಿರುವವರಿಗೆ ‘ಇವನು ಒಳ್ಳೆಯವನು’, ‘ಇವನು ದೇಶದ್ರೋಹಿ’, ‘ಇವಳು ಸ್ತ್ರೀವಾದಿ’, ‘ಇವಳು ಬರೀ ಅಡುಗೆ ಮಾಡಲು ಲಾಯಕ್ಕು’ ಮುಂತಾಗಿ ಹಲವು ಹಣೆಪಟ್ಟೆಗಳನ್ನು ಹಚ್ಚಿಬಿಡುವುದಿಲ್ಲವೇ?’

ಇಂದು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಕೆಸರೆರಚಾಟದ ಹಿಂದೆ ಢಾಳಾಗಿ ಕಾಣುತ್ತಿರುವ ‘ಸೆಲೆಕ್ಟೀವ್‌ ಕ್ರಿಟಿಸಿಸಂ’ ಹಿಂದಿನ ಮನಸ್ಥಿತಿಯನ್ನು ಈ ಚರ್ಚೆಯ ಮೂಲಕ ಅರ್ಥಮಾಡಿಕೊಳ್ಳಬಹುದಲ್ಲವೇ?

ಭಾಷೆ, ತತ್ವಶಾಸ್ತ್ರದ ಅರಿವಷ್ಟೇ ಅಲ್ಲ, ಪದ್ಯಗಳನ್ನು ನಾವು ಇದುವರೆಗೆ ಓದಿದ, ಓದುವ ಕ್ರಮವನ್ನೂ ಮುರಿದು ಹೊರ ರೀತಿಯ ಓದಿಗೆ ಇಲ್ಲಿನ ಪ್ರಬಂಧಗಳು ಒತ್ತಾಯಿಸುತ್ತವೆ. ಈ ಹೊಸ ರೀತಿಯ ಓದಿನಲ್ಲಿ ಪದ್ಯದ ಅಜ್ಞಾತ ಅರ್ಥವಲಯಗಳು ತೆರೆದುಕೊಳ್ಳುವ ಬಗೆಯನ್ನೂ ಅವು ತೋರಿಸುತ್ತವೆ. ಆದ್ದರಿಂದಲೇ ಏಕಕಾಲಕ್ಕೆ ತತ್ವಶಾಸ್ತ್ರ ಮತ್ತು ಪದ್ಯ ಎರಡರ ರುಚಿಯನ್ನೂ ಆಸ್ವಾದಿಸುವಂತೆ ಮಾಡುವ ಗುಣ ಈ ಪುಸ್ತಕಕ್ಕೆ ದಕ್ಕಿದೆ. ಈ ಕೃತಿಯ ಮಹತ್ವ ಇರುವುದೂ ಎರಡೂ ಸೇರಿದ ಹೊಸ ಹದದಲ್ಲಿಯೇ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry