ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಯಲಿ’

Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾಗಿ ಕೆಲಸ ಮಾಡಿದವರ ಪೈಕಿ ಸಜ್ಜನಿಕೆ, ಸರಳತೆಯನ್ನು ಮೈಗೂಡಿಸಿಕೊಂಡವರಲ್ಲಿ ಕೆ.ಆರ್. ಪೇಟೆ ಕೃಷ್ಣ ಕೂಡ ಒಬ್ಬರು. ಚಾಲ್ತಿಯಲ್ಲಿರುವ ಬಹುಸಂಖ್ಯಾತ ರಾಜಕಾರಣಿಗಳ ಶೈಲಿ–ಥೈಲಿ ಕೃಷ್ಣ ಅವರ ವ್ಯಕ್ತಿತ್ವಕ್ಕೆ ಒಗ್ಗದು. ಹೀಗಾಗಿಯೇ ಅವರಂತಹ ಅನೇಕ ರಾಜಕಾರಣಿಗಳು ನೇಪಥ್ಯಕ್ಕೆ ಸರಿದಿದ್ದಾರೆ. ಸಭಾಧ್ಯಕ್ಷರ ಕಚೇರಿಗೆ ಭ್ರಷ್ಟಾಚಾರದ ಕಳಂಕ, ಹಗರಣಗಳ ನಂಟು ಅಂಟದಂತೆ ನಡೆದುಕೊಂಡ ಹೆಗ್ಗಳಿಕೆ ಕೃಷ್ಣ ಅವರದ್ದು. ವಿಧಾನಸಭಾ ಸಚಿವಾಲಯದಲ್ಲಿ ಈಗ ನಡೆಯುತ್ತಿರುವ ನೇಮಕಾತಿ ಬೆಳವಣಿಗೆಗಳ ಬಗ್ಗೆ ಅವರು ‘ಪ್ರಜಾವಾಣಿ’ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

* ವಿಧಾನಸಭೆ ಅಧ್ಯಕ್ಷರ ನಡವಳಿಕೆ ಹೇಗಿರಬೇಕು ಎಂದು ಬಯಸುತ್ತೀರಿ?
ಈಗ ನಡವಳಿಕೆ ಬಗ್ಗೆ ಕೇಳುವುದರಲ್ಲಿ, ಹೇಳುವುದರಲ್ಲಿ ಅರ್ಥವಿಲ್ಲ. ಯಾವ ಕ್ಷೇತ್ರದಲ್ಲಿ ನೀತಿ ಉಳಿದಿದೆ ಹೇಳಿ? ಇಂಥ ಕ್ಷೇತ್ರ ಎನ್ನುವಂತಿಲ್ಲ. ನ್ಯಾಯಾಂಗವೂ ಒಳಗೊಂಡಂತೆ ಎಲ್ಲಾ ವಲಯಗಳೂ ಹಾಳಾಗಿವೆ. ಎಲ್ಲೆಡೆ ನೈತಿಕವಲ್ಲದ ಚಟುವಟಿಕೆಗಳು ಹೆಚ್ಚಾಗಿವೆ. ವಾಮಮಾರ್ಗವೇ ಹೆದ್ದಾರಿಯಾಗಿದೆ. ಸ್ಪೀಕರ್ ಸ್ಥಾನ ಒಂದು ಸಾಂವಿಧಾನಿಕ ಹುದ್ದೆ. ಅವರ ಎಲ್ಲಾ ಕಾರ್ಯಗಳು, ನಡವಳಿಕೆಗಳು ನೀತಿಯುತವಾಗಿರಬೇಕು,  ಗೌರವಯುತವಾಗಿರಬೇಕು. ಕಾನೂನಿಗೆ ಅನುಗುಣವಾಗಿರಬೇಕು. ಇಂಥ ನಡವಳಿಕೆಯನ್ನು ಸಮಾಜ ಬಯಸುತ್ತದೆ.

* ವಿಧಾನಸಭೆ ಅಧ್ಯಕ್ಷರ ಮೂಲಭೂತ ಕರ್ತವ್ಯಗಳೇನು?
ವಿಧಾನಸಭೆ ಅಧ್ಯಕ್ಷರು ಕೆಳಮನೆ ಕಲಾಪ ಸೇರಿದ ಸಮಯದಲ್ಲಿ ಅಧ್ಯಕ್ಷತೆ ವಹಿಸುತ್ತಾರೆ. ಸದನ ಅತ್ಯಂತ ಶಿಸ್ತು ಹಾಗೂ ಕ್ರಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವುದು ಅವರ ಹೊಣೆ. ಈ ಕೆಲಸದಲ್ಲಿ ಸಚಿವಾಲಯ ಅಧಿಕಾರಿಗಳು ನೆರವಾಗುತ್ತಾರೆ. ಸದನದ ಅಚ್ಚುಕಟ್ಟು ನಿರ್ವಹಣೆ ಪ್ರಮುಖ ಜವಾಬ್ದಾರಿ.

* ಇತ್ತೀಚಿನ ದಿನಗಳಲ್ಲಿ ವಿಧಾನಸಭೆ ಸ್ಪೀಕರ್, ವಿಧಾನ ಪರಿಷತ್ ಸಭಾಪತಿಯ ಕೆಲವೊಂದು ನಿರ್ಣಯಗಳು ಟೀಕೆಗೆ ಒಳಗಾಗುತ್ತಿವೆ?
ಸಾಂವಿಧಾನಿಕ ಹುದ್ದೆ ಟೀಕೆಗೆ ಒಳಗಾಗಬಾರದು. ಆ ಮಹತ್ವದ ಸ್ಥಾನಗಳಲ್ಲಿ ಇರುವವರು ನಿಯಮ ಬಿಟ್ಟು ಹೋಗಬಾರದು. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಟೀಕೆ ಹೇಗೆ ಬರುತ್ತದೆ. ಸ್ಪೀಕರ್ ಅಥವಾ ಸಭಾಪತಿ ಸ್ಥಾನಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು. ಎಲ್ಲವೂ ಅವರು ನಡವಳಿಕೆ ಮೇಲೆ ಅವಲಂಬಿತವಾಗಿರುತ್ತದೆ.

* ಕೊಠಡಿಗಳ ನವೀಕರಣ, ಪ್ರತಿಮೆಗಳ ಸ್ಥಾಪನೆ, ಹೋಟೆಲ್, ಕ್ಯಾಂಟೀನ್ ನಿರ್ಮಾಣ ಮಾಡುವುದು ಸ್ಪೀಕರ್ ಕಚೇರಿ ಕೆಲಸವೇ?
ಶಾಸಕರಿಗೆ ಮೂಲ ಸೌಕರ್ಯಗಳು ಬೇಕಾಗುತ್ತವೆ. ಅವರ ಅಗತ್ಯ ನೋಡಿಕೊಂಡು ಕೆಲಸ ನಿರ್ವಹಿಸಬೇಕಾಗುತ್ತದೆ. ವಿಧಾನಸಭೆ ಅಧ್ಯಕ್ಷರ ನಿರ್ಧಾರಗಳೂ ಇದನ್ನೇ ಆಧರಿಸಿರಬೇಕು. ಸಮಯ, ಸಂದರ್ಭ ನೋಡಿಕೊಂಡು ಕೆಲಸಗಳನ್ನು ಮಾಡಿಸಬೇಕಾಗುತ್ತದೆ. ಈಗಿನ ಸ್ಪೀಕರ್ ಅವಧಿಯಲ್ಲಿ ಏನೆಲ್ಲಾ ಆಗಿದೆ ಎಂಬುದು ಸರಿಯಾಗಿ ಗೊತ್ತಿಲ್ಲ. ತಿಳಿಯದೆ ಮಾತನಾಡುವುದು ಸರಿಯಲ್ಲ. ಕೊಠಡಿಗಳ ನವೀಕರಣದಂತಹ ವಿಚಾರದಲ್ಲಿ ಅನಗತ್ಯವಾಗಿ ಏನೂ ಮಾಡಬಾರದು. ಸ್ಪೀಕರ್ ಕಡೆಗೆ ಮತ್ತೊಬ್ಬರು ಬೊಟ್ಟು ಮಾಡುವ ರೀತಿಯಲ್ಲಿ ನಡವಳಿಕೆ ಇರಬಾರದು. ಪಾರದರ್ಶಕವಾಗಿದ್ದರೆ ಯಾರೂ ದೂರಲು ಆಗುವುದಿಲ್ಲ. ನಿಯಮ ಮೀರಿದಾಗ ಟೀಕೆಗಳು, ಆರೋಪಗಳು ಬರುವುದು ಸಹಜ.

* ಕಟ್ಟಡ ದುರಸ್ತಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಮತ್ತು ಸ್ಪೀಕರ್ ಕಚೇರಿ ನಡುವೆ ನಡೆದ ಸಂಘರ್ಷದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸಂಘರ್ಷ ಏಕೆ ಬೇಕು. ಅದು ಅನಗತ್ಯ. ವಿವಾದ, ಸಂಘರ್ಷ ಸೃಷ್ಟಿ ಮಾಡಿದ ಸ್ಪೀಕರ್ ಅವರೇ ಅದಕ್ಕೆ ಸ್ಪಷ್ಟನೆ ಮತ್ತು ಕಾರಣಗಳನ್ನು ನೀಡಬೇಕು. ಸಂಘರ್ಷಕ್ಕೆ ಇಳಿಯುವ ಬದಲು ನಿಯಮ ಪಾಲಿಸಬೇಕು. ಸಂಘರ್ಷ ಸೃಷ್ಟಿಸುವುದು ದೊಡ್ಡ ವಿಚಾರವಲ್ಲ. ಅದು ಆಗದಂತೆ ನೋಡಿಕೊಳ್ಳುವುದು ಜಾಣ್ಮೆ.

* ಶಾಸಕರಿಗೆ ಟೌನ್‌ಶಿಪ್, ಕ್ಲಬ್, ಈಜುಕೊಳ, ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಮಾಡುವ ಚಿಂತನೆ ಬಗ್ಗೆ ಏನು ಹೇಳುತ್ತೀರಿ?
ಶಾಸಕರಿಗೆ ಮೂಲ ಸೌಕರ್ಯ ಕಲ್ಪಿಸುವುದು ಸ್ಪೀಕರ್ ಕರ್ತವ್ಯ. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಇರಬೇಕು. ಅನಗತ್ಯ ವೆಚ್ಚ ಮಾಡಬಾರದು. ಯಾವುದೇ ಆಗಲಿ ಅನಗತ್ಯವಾದಾಗ ವಿವಾದಕ್ಕೆ ಒಳಗಾಗುತ್ತದೆ. ಅಗತ್ಯ ಇದ್ದಾಗ ಯಾರೂ ಮಾತನಾಡುವುದಿಲ್ಲ.

* ಈಚೆಗೆ ನೇಮಕಾತಿ ವಿವಾದ ಆಗಿದೆ. 90 ಹುದ್ದೆಗಳಿಗೆ ಅರ್ಜಿ ಕರೆದು 155 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ ಸ್ವಜನಪಕ್ಷಪಾತ, ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆಯಲ್ಲ?
ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ. ಯಾರೂ ನಿಯಮಬಿಟ್ಟು ನಡೆದುಕೊಳ್ಳಬಾರದು. ಸದ್ಯಕ್ಕೆ ಹೊಸ ನೇಮಕಾತಿ ಅಗತ್ಯ ಇರಲಿಲ್ಲ ಎಂಬುದು ನನ್ನ ಭಾವನೆ.

ನಾನು ಸ್ಪೀಕರ್ ಆಗಿದ್ದಾಗ ನೇಮಕಾತಿಗೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಿದ್ದೆ. ಆ ಸಮಿತಿಯನ್ನು ಎಲ್ಲಾ ರಾಜ್ಯಗಳಿಗೂ ಕಳುಹಿಸಲಾಗಿತ್ತು. ಆ ರಾಜ್ಯಗಳ ವಿಧಾನಸಭೆಯಲ್ಲಿರುವ ಸೌಲಭ್ಯ, ಅಲ್ಲಿ ಎಷ್ಟು ಸಿಬ್ಬಂದಿ ಇದ್ದಾರೆ. ಏನೆಲ್ಲ ಕೆಲಸ ಕಾರ್ಯಗಳು ನಡೆಯುತ್ತಿವೆ ಮೊದಲಾದ ವಿಚಾರಗಳ ಬಗ್ಗೆ ಅಧ್ಯಯನ ಮಾಡಿ ಬರುವಂತೆ ತಿಳಿಸಿದ್ದೆ. ಸಮಿತಿಯ ಸದಸ್ಯರು ಭೇಟಿಕೊಟ್ಟು, ಅಧ್ಯಯನ ನಡೆಸಿದ ನಂತರ ವರದಿ ಸಲ್ಲಿಸಿದ್ದರು. ಆಗಲೇ ಅಗತ್ಯಕ್ಕಿಂತಲೂ ಹೆಚ್ಚುವರಿಯಾಗಿ 64 ಸಿಬ್ಬಂದಿ ನಮ್ಮಲ್ಲಿ ಇದ್ದರು. ಹೆಚ್ಚುವರಿ ಸಿಬ್ಬಂದಿ ಇದುದ್ದರಿಂದ ಹೊಸದಾಗಿ ನೇಮಕಾತಿ ಮಾಡಲಿಲ್ಲ.

* ನಿಮ್ಮ ಮೇಲೂ ಒತ್ತಡ ಇತ್ತೇ?
ಯಾರ ಮೇಲೆ ಒತ್ತಡ ಇಲ್ಲ ಹೇಳಿ? ನೇಮಕಾತಿ ಮಾಡುವಂತೆ ನನ್ನ ಮೇಲೂ ಒತ್ತಡ ಹೇರಲಾಗಿತ್ತು. ಈ ಒತ್ತಡಕ್ಕೆ ನಾನು ಬಗ್ಗಲಿಲ್ಲ. ಅನಗತ್ಯವಾಗಿ ನೇಮಕಾತಿ ಮಾಡಿ ಬೊಕ್ಕಸಕ್ಕೆ ನಷ್ಟ ಉಂಟುಮಾಡಲಿಲ್ಲ. ಜನರ ತೆರಿಗೆ ಹಣ ಪೋಲು ಮಾಡಲಿಲ್ಲ. ಹೆಚ್ಚುವರಿ ಸಿಬ್ಬಂದಿ ಇರುವ ಬಗ್ಗೆ ನನ್ನ ಮುಂದಿದ್ದ ವರದಿಯಲ್ಲೇ ಪ್ರಸ್ತಾಪಿಸಲಾಗಿತ್ತು. ಕೊನೆಗೆ ಕೆಲವರನ್ನಾದರೂ ನೇಮಕ ಮಾಡುವಂತೆ ನಿರಂತರವಾಗಿ ಒತ್ತಾಯಿಸಲಾಯಿತು. ಒತ್ತಡ ಹೇರಿದವರಿಗೆಲ್ಲಾ ನಾನು ಆ ವರದಿ ತೋರಿಸಿದೆ. ಹೊಸ ನೇಮಕಾತಿ ಸಾಧ್ಯವೇ ಇಲ್ಲ ಎಂದು ಖಚಿತವಾಗಿ ಹೇಳಿದೆ. ಒತ್ತಡ ತಂದವರು ಕೊನೆಗೆ ನನ್ನಿಂದ ಈ ಕೆಲಸ ಆಗುವುದಿಲ್ಲ ಎಂದು ಸುಮ್ಮನಾದರು. ಅಂಥ ಸಂದರ್ಭಗಳಲ್ಲಿ ದೃಢ ನಿರ್ಧಾರ ಮುಖ್ಯವಾಗುತ್ತದೆ.

* ತಮ್ಮ ಅವಧಿಯ ನಂತರ ನೇಮಕಾತಿ ನಡೆಯಿತಲ್ಲಾ?
ಜಗದೀಶ್ ಶೆಟ್ಟರ್ ಸ್ಪೀಕರ್ ಆಗಿದ್ದಾಗ ನೇಮಕಾತಿ ನಡೆಯಿತು. ಸಿಬ್ಬಂದಿ ಅಗತ್ಯ ಇಲ್ಲದಿದ್ದರೂ ನೇಮಿಸಿಕೊಳ್ಳಲಾಯಿತು. ನೇಮಕಾತಿಯ ನಂತರವೂ ಶಾಸಕರ ಭವನದ ಸ್ವಚ್ಛತೆ, ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳನ್ನು ಮುಂದಿಟ್ಟುಕೊಂಡು ‘ಡಿ’ ವರ್ಗದ ಸಿಬ್ಬಂದಿ ಸಿರ್ವಹಿಸುತ್ತಿದ್ದ ಕೆಲಸವನ್ನು ಹೊರಗುತ್ತಿಗೆ ನೀಡಲಾಯಿತು. ಅದಕ್ಕಾಗಿ ಆಗಲೇ ₹ 12 ಲಕ್ಷ ಬಿಲ್ ಪಾವತಿ ಮಾಡಲಾಗುತಿತ್ತು. ಅದು ಈಗ ಇನ್ನೂ ಜಾಸ್ತಿ ಆಗಿರಬಹುದು. ಸಿಬ್ಬಂದಿ ನೇಮಿಸಿಕೊಂಡರೂ ಹೊರಗುತ್ತಿಗೆ ಕೊಡುವುದೆಂದರೆ ಏನರ್ಥ!?

ನನ್ನ ಕಾಲದಲ್ಲಿ ಹೊರಗುತ್ತಿಗೆ ಇಲ್ಲದೆ ಕೆಲಸ ನಡೆಯುತಿತ್ತು. ಇದ್ದ ಸಿಬ್ಬಂದಿಯೇ ಸ್ವಚ್ಛತೆ, ಮತ್ತಿತರ ಕೆಲಸ ಮಾಡುತ್ತಿದ್ದರು. ಸ್ವಲ್ಪ ಓದಿದ್ದ ಕೆಲವರು ಸ್ವಚ್ಛತೆ ಮಾಡುವುದಿಲ್ಲ ಎಂದು ಸಬೂಬು ಹೇಳುತ್ತಿದ್ದರು. ನೇಮಕಗೊಂಡ ಮೇಲೆ ಕೆಲಸ ಮಾಡಿ, ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ತಾಕೀತು ಮಾಡಿದ್ದೆ. ನಾನು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರಿಂದ ಎಲ್ಲರಿಗೂ ಕೆಲಸ ಮಾಡುವುದು ಅನಿವಾರ್ಯವಾಯಿತು.

* ಈಗಿನ ಬೆಳವಣಿಗೆ ಬಗ್ಗೆ ಏನು ಹೇಳುತ್ತೀರಿ?
ಸಿಬ್ಬಂದಿಯ ಅಗತ್ಯ ನೋಡಿಕೊಂಡು ನಿಯಮಾವಳಿಗೆ ಅನುಗುಣವಾಗಿಯೇ ನೇಮಕಾತಿ ನಡೆಯಬೇಕು. ನೇಮಕಾತಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕೆಲವು ನಿಯಮಾವಳಿಗಳಿವೆ. ಅವುಗಳನ್ನು ಅನುಸರಿಸಬೇಕು. ಅದು ನಮ್ಮ ಕರ್ತವ್ಯ ಆಗಬೇಕು. ಇತ್ತೀಚಿನ ಬೆಳವಣಿಗೆ ಗಮನಿಸಿದರೆ ನಿಯಮ ಅನುಸರಿಸಿದಂತೆ ಕಾಣುತ್ತಿಲ್ಲ. ಅಕ್ರಮ ನಡೆದಿದ್ದರೆ ಅದು ತಪ್ಪು. ಯಾರೂ ಸ್ವಜನಪಕ್ಷಪಾತ ಮಾಡಬಾರದು.

ನೇಮಕಾತಿ ಅಗತ್ಯ ಇತ್ತೇ, ಅನಗತ್ಯವಾಗಿ ನೇಮಕಾತಿ ನಡೆದಿದೆಯೇ, ನಿಯಮಾವಳಿ ಪಾಲಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಕಳೆದ ಹತ್ತು ವರ್ಷಗಳಿಂದಲೂ ಅನಗತ್ಯವಾಗಿ ನೇಮಕಾತಿ ನಡೆಯುತ್ತಲೇ ಇದೆ. ಈ ಹತ್ತು ವರ್ಷಗಳಲ್ಲಿ ನಡೆದಿರುವ ನೇಮಕಾತಿಯನ್ನು ತನಿಖೆಗೆ ಒಳಪಡಿಸಬೇಕು. ಅಧಿಕಾರಿ ನೇಮಿಸಿದರೆ ಸತ್ಯ ಹೊರ ಬರುವುದು ಕಷ್ಟ. ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಆಯೋಗ ರಚಿಸಿ ತನಿಖೆ ನಡೆಸಬೇಕು. ತನಿಖೆ ನಡೆದು ಸತ್ಯಾಂಶ ಹೊರ ಬಂದರೆ ಇಂಥ ಆರೋಪಗಳಿಗೆ ಪೂರ್ಣವಿರಾಮ ಹಾಕಬಹುದು. ಇದರಿಂದ ಸತ್ಯ ಏನೆಂಬುದು ಜನರಿಗೆ ಗೊತ್ತಾಗುತ್ತದೆ.

ಯಾರೇ ಅಕ್ರಮ ನಡೆಸಿದರೂ ಸ್ಪೀಕರ್ ಪೂರ್ಣ ಹೊಣೆ ಹೊರಬೇಕಾಗುತ್ತದೆ. ಸ್ಪೀಕರ್, ಮುಖ್ಯಮಂತ್ರಿ ಒಟ್ಟಾಗಿ ತನಿಖಾ ಆಯೋಗ ರಚಿಸುವ ತೀರ್ಮಾನ ಕೈಗೊಳ್ಳಬೇಕು. ಶಾಸನ ಮಾಡುವ ಕಡೆ ಅಕ್ರಮ ನಡೆದಿದ್ದರೆ ನೋಡಿಕೊಂಡು ಸುಮ್ಮನಿರಬಾರದು. ಏನೂ ಮಾಡದಿದ್ದರೆ ಅದು ತಪ್ಪಾಗುತ್ತದೆ.

* ಸ್ಪೀಕರ್‌ಗೆ ಪರಮಾಧಿಕಾರ ಇದೆ ಎಂಬ ಕಾರಣಕ್ಕೆ ಸಚಿವಾಲಯಕ್ಕೆ ಬೇಕಾಬಿಟ್ಟಿ ನೇಮಕಾತಿ ಮಾಡಬಹುದೇ?
ಶಾಸನಸಭೆಗೆ ಗೌರವ ತರುವಂತೆ ನಡೆದುಕೊಳ್ಳಬೇಕು. ಅಧಿಕಾರ ದುರುಪಯೋಗ ಆಗಬಾರದು. ಅನಗತ್ಯ ನೇಮಕಾತಿ ಮಾಡಿ, ಕೋರ್ಟ್‌ಗೆ ಹೋಗಲಿ ಎಂಬ ಮನೋಭಾವ ಸರಿಯಲ್ಲ. ಹೀಗಾದರೆ ಬೇರೆಯದೇ ಸಂದೇಶ ರವಾನೆಯಾಗುತ್ತದೆ.

* ಸ್ಪೀಕರ್‌ ಸ್ವಂತ ನಿರ್ಧಾರ ಕೈಗೊಳ್ಳುತ್ತಾರೊ, ತಮ್ಮ ಸಚಿವಾಲಯದ ಕಾರ್ಯದರ್ಶಿ ಹೇಳಿದಂತೆ ನಡೆದುಕೊಳ್ಳುತ್ತಾರೊ?
ಸ್ವಂತ ನಿರ್ಧಾರ ಕೈಗೊಳ್ಳಬೇಕು. ಅಧಿಕಾರಿ ಜತೆ ಸಮಾಲೋಚನೆ ಮಾಡಬೇಕು. ಆದರೆ ಅವರು ಹೇಳಿದಂತೆ ಕೇಳಬಾರದು. ಸಂವಿಧಾನದ ಚೌಕಟ್ಟಿನಲ್ಲಿ ಯಾವುದು ಸೂಕ್ತ ಎನಿಸುತ್ತದೆ, ಅಂತಹ ನಿರ್ಧಾರ ಇರಬೇಕಾಗುತ್ತದೆ.

* ಸ್ಪೀಕರ್ ಕಚೇರಿ ಕರ್ತವ್ಯದಿಂದ ವಿಮುಖವಾದಾಗ ಸರಿದಾರಿಗೆ ತರುವವರು ಯಾರು?
ಕರ್ತವ್ಯ ಮರೆತರೆ ಸ್ಪೀಕರ್ ವಿರುದ್ಧವೂ ಅವಿಶ್ವಾಸ ತರಬಹುದು. ಅದಕ್ಕೆಲ್ಲ ಸಾಕಷ್ಟು ಕಸರತ್ತು ನಡೆಯುತ್ತದೆ. ಈಗಿನ ಸನ್ನಿವೇಶದಲ್ಲಿ ಅದೆಲ್ಲ ಸಾಧ್ಯವೇ?

ಯಾರೇ ಆಗಲಿ, ದಾರಿ ತಪ್ಪಿದಾಗ ಸರಿಪಡಿಸಬೇಕಾಗುತ್ತದೆ. ವ್ಯವಸ್ಥೆ ಕೆಟ್ಟಿದೆ. ರಾಜಕಾರಣಿಗಳನ್ನು ಕೀಳಾಗಿ ನೋಡಲಾಗುತ್ತಿದೆ. ಹೋರಾಟ, ಧರಣಿಗಳು ದಿಕ್ಕುತಪ್ಪಿವೆ. ರೈತ ಚಳವಳಿ, ದಲಿತರ ಹೋರಾಟಗಳು ಈಗ ಎಲ್ಲಿವೆ? ಹಿಂದೆ ತಪ್ಪುಗಳಾದ ಸಮಯದಲ್ಲಿ ಪ್ರತಿಭಟನೆಗಳ ಮೂಲಕ ಎಚ್ಚರಿಸುವ, ಸರಿಪಡಿಸುವ ಕೆಲಸ ಆಗುತಿತ್ತು. ಇತ್ತೀಚಿನ ದಿನಗಳಲ್ಲಿ ಅಂತಹ ಹೋರಾಟಗಳೇ ಕಾಣದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT