4

ಬುದ್ಧನ ಕಥೆಗೆ ಬಗ್ಗಿದ ವೈದ್ಯ!

Published:
Updated:
ಬುದ್ಧನ ಕಥೆಗೆ ಬಗ್ಗಿದ ವೈದ್ಯ!

ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಮಧ್ಯಸ್ಥಿಕೆದಾರರ ಪಾತ್ರ ಮಹತ್ವದ್ದಾಗಿರುತ್ತದೆ. ಆದರೆ, ಒಂದು ಬುದ್ಧನ ಕಥೆ ನ್ಯಾಯಾಧೀಶರ ಸ್ಥಾನವನ್ನೂ ಮೀರಿ ಪರಿಣಾಮ ಬೀರಿ ಮಧ್ಯಸ್ಥಿಕೆ ವಹಿಸಿ, ಕಕ್ಷಿದಾರನೊಬ್ಬ ಪರಿಹಾರ ಪಡೆದ ನಿದರ್ಶನವಿದು.

ಕಳೆದ ವರ್ಷದ ಮಾರ್ಚ್‌ ತಿಂಗಳ ಬೇಸಿಗೆಯ ದಿನಗಳವು. ಅದೊಂದು ಸಂಜೆ ಪ್ರಕಾಶ ಎಂಬ ಯುವಕ ನನ್ನ ಕಚೇರಿಗೆ ಬಂದ. ‘ಬಂಜೆತನಕ್ಕೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ನನಗೆ ಮೋಸ ಮಾಡಿದ್ದಾರೆ’ ಎಂದು ಅಳುತ್ತಾ ತನ್ನ ಕಥೆಯನ್ನು ಬಿಚ್ಚಿಟ್ಟ. ಪ್ರಕಾಶನಿಗೆ ಅದಾಗ 32ರ ಹರೆಯ. 15 ವರ್ಷಗಳಿಂದ ಆಟೊ ರಿಕ್ಷಾ ಚಾಲಕನಾಗಿ ಜೀವನ ನಿರ್ವಹಣೆ ಮಾಡುತ್ತಿದ್ದ. ಮದುವೆ ಆಗಿ ದಶಕವೇ ಉರುಳಿದ್ದರೂ ಮಕ್ಕಳ ಭಾಗ್ಯ ಒದಗಿರಲಿಲ್ಲ. ಬಂಜೆತನದಿಂದಾಗಿ ಅವನು ಮತ್ತು ಅವನ ಹೆಂಡತಿ ಅತ್ಯಂತ ನೋವು, ನಿರಾಶೆ ಅನುಭವಿಸುತ್ತಿದ್ದರು. ಹತ್ತಿರದ ಸಂಬಂಧಿಕರೂ ಇವರ ಬಗ್ಗೆ ಬಹಳಷ್ಟು ಚಿಂತಿತರಾಗಿದ್ದರು. ಮಕ್ಕಳನ್ನು ಪಡೆಯುವಲ್ಲಿ ತಮಗೆ ಸರಿ ಎನಿಸಿದ ಸಲಹೆಗಳನ್ನು ನೀಡುತ್ತಿದ್ದರು.

ಆಪ್ತರೊಬ್ಬರು ನೀಡಿದ ಸಲಹೆ ಅನುಸಾರ ಪ್ರಕಾಶ ಬೆಂಗಳೂರಿನ ಪ್ರತಿಷ್ಠಿತ ಐವಿಎಫ್ ಗರ್ಭಧಾರಣೆ ಆಸ್ಪತ್ರೆಯೊಂದನ್ನು ಸಂಪರ್ಕಿಸಿದ್ದ. ದಂಪತಿಯನ್ನು ಪರೀಕ್ಷಿಸಿದ್ದ ವೈದ್ಯರು, ‘ಖಂಡಿತಾ ನಿಮಗೆ ಮಕ್ಕಳಾಗುತ್ತವೆ’ ಎಂಬ ಭರವಸೆ ನೀಡಿ, ಚಿಕಿತ್ಸೆ ಪಡೆಯುವಂತೆ ಸಲಹೆ ಮಾಡಿದ್ದರು.

‘ಇನ್ ವಿಟ್ರೊ ಫರ್ಟಿಲೈಜೇಶನ್’ (ಐವಿಎಫ್‌) ಎಂಬುದು ಒಂದು ವೈದ್ಯಕೀಯ ವಿಧಾನ. ಇದು ಗಂಡಸಿನ ವೀರ್ಯದ ಜೊತೆಗೆ ಹೆಣ್ಣಿನ ಅಂಡಾಣುವನ್ನು ಪ್ರಯೋಗಾಲಯದಲ್ಲಿ ಫಲವಂತಿಕೆ ಮಾಡುವ ಪ್ರಕ್ರಿಯೆ. ಫಲವಂತಿಕೆಯಾದ ಅಂಡಾಣುಗಳನ್ನು ಹೆಣ್ಣಿನ ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ. ಆಮೇಲೆ ಅವುಗಳನ್ನು ಗರ್ಭಾಶಯದ ಗೋಡೆಗಳಿಗೆ ಅಂಟಿಕೊಳ್ಳುವಂತೆ ಮಾಡಿ ಒಂದು ಯಶಸ್ವಿ ಭ್ರೂಣವಾಗಿ ಬೆಳೆಸಲು ಸಹಕರಿಸಲಾಗುತ್ತದೆ. ಮಕ್ಕಳಿಲ್ಲದ ದಂಪತಿಗಳಿಗೆ ಇದೊಂದು ವರ ಎಂದೇ ಪರಿಗಣಿಸಲಾಗಿದೆ.

ಪ್ರಕಾಶನ ಪತ್ನಿಗೆ ಹಲವು ತಿಂಗಳ ಕಾಲ ಚಿಕಿತ್ಸೆ ಮುಂದುವರೆಸಲಾಗಿತ್ತು. ಮೊದಲನೇ ಬಾರಿಯ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಆಗ ವೈದ್ಯರು ಮತ್ತೊಂದು ಬಾರಿ ಚಿಕಿತ್ಸೆಗೆ ಸೂಚಿಸಿದ್ದರು. ಹೇಗೋ ಧೈರ್ಯ ಮಾಡಿ ಸ್ನೇಹಿತರಿಂದ ಸಾಲ ಪಡೆದು ಎರಡನೇ ಬಾರಿಯೂ ಚಿಕಿತ್ಸೆ ಕೊಡಿಸಿದ್ದ. ಆದರೆ, ಅದೂ ಫಲಕಾರಿಯಾಗಿರಲಿಲ್ಲ. ‘ಇನ್ನೊಂದು ಬಾರಿ ಚಿಕಿತ್ಸೆ ಪಡೆಯಿರಿ ಖಂಡಿತಾ ಯಶಸ್ವಿ ಆಗುತ್ತೀರಿ’ ಎಂದು ವೈದ್ಯರು ಹುರಿದುಂಬಿಸಿದ್ದರು. ಅದಾಗಲೇ ಬಹಳಷ್ಟು ನೊಂದು ಹೋಗಿದ್ದ ಪ್ರಕಾಶ, ಹೇಗಾದರೂ ಸರಿ ಒಂದು ಕೈ ನೋಡೇ ಬಿಡುವ ಎಂದು ತನ್ನ ಬಳಿ ಇದ್ದ ರಿಕ್ಷಾವನ್ನೂ ಮಾರಿ ಹಣ ಹೊಂದಿಸಿ ಚಿಕಿತ್ಸೆ ಕೊಡಿಸಿದ್ದ. ಈ ಬಾರಿಯಾದರೂ ಚಿಕಿತ್ಸೆ ಫಲಕಾರಿಯಾಗಲಿ ಎಂದು ಮನೆದೇವರಿಗೆ ಹರಕೆಯನ್ನೂ ಹೊತ್ತಿದ್ದ.

ಅದೇನು ದುರದೃಷ್ಟವೊ ಏನೋ ಮೂರನೇ ಬಾರಿಯ ಚಿಕಿತ್ಸೆಯೂ ಫಲ ಕೊಡಲಿಲ್ಲ. ಪ್ರತಿ ಬಾರಿ ಚಿಕಿತ್ಸೆ ಪಡೆದಾಗಲೂ ಹತ್ತಿರತ್ತಿರ ₹ 1 ಲಕ್ಷ ಖರ್ಚು ಮಾಡಿದ್ದ ಪ್ರಕಾಶನಿಗೆ ಒಂದೆಡೆ ಮಕ್ಕಳನ್ನೂ ಪಡೆಯಲಾಗದೆ ಮತ್ತೊಂದೆಡೆ ಸಾಲದ ಹೊರೆಯೂ ಹೆಚ್ಚಾಗಿ ಹತಾಶನಾದ. ಈ ಸ್ಥಿತಿಯಲ್ಲಿ ಮುಂದಿನ ದಾರಿ ಕಾಣದೆ ನನ್ನ ಬಳಿ ಬಂದಿದ್ದ.

‘ನಾನು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗಿದ್ದೇನೆ. ಚಿಕಿತ್ಸೆ ಏಕೆ ಫಲಕಾರಿಯಾಗಿಲ್ಲ ಎಂದು ವೈದ್ಯರ ಹತ್ತಿರ ಹೋಗಿ ಜಗಳ ಕೂಡ ಮಾಡಿದ್ದೇನೆ. ಹಣ ಮರಳಿಸುವಂತೆ ಕೇಳಿದರೆ ಪ್ರಯೋಜನವಾಗಿಲ್ಲ. ನಾನು ಕಳೆದುಕೊಂಡಿರುವ ಹಣವನ್ನು ಕೊಡಿಸಿ’ ಎಂದು ಕೇಳಿದ.

ಚಿಕಿತ್ಸೆ ಪಡೆದಿದ್ದ ಎಲ್ಲ ಕಾಗದಪತ್ರ ಮತ್ತು ಆಸ್ಪತ್ರೆ ಬಿಲ್‌ಗಳನ್ನು ತೆಗೆದುಕೊಂಡು ಬರುವಂತೆ ಪ್ರಕಾಶನಿಗೆ ಸೂಚಿಸಿದೆ. ದಾಖಲೆಗಳನ್ನು ಗಮನಿಸಿದಾಗ ಆಸ್ಪತ್ರೆಯ ಮುಖ್ಯಸ್ಥರು ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಿ ಬಂದವರಾಗಿದ್ದರು.

ಸರಿ, ಪೊಲೀಸರಿಗೆ ದೂರು ಕೊಡೋಣ ಎಂದು ತೀರ್ಮಾನಿಸಿ, ಠಾಣೆಗೆ ಹೋದೆವು. ‘ದಂಪತಿಗೆ ಸುಳ್ಳು ಹೇಳಿ ಹಣ ಸುಲಿಗೆ ಮಾಡಲಾಗಿದೆ. ಅವರ ನಂಬಿಕೆಗೆ ದ್ರೋಹ ಎಸಗಲಾಗಿದೆ’ ಎಂದು ದೂರು ಕೊಡಿಸಿದೆ. ಎರಡು ದಿನಗಳಲ್ಲೇ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ, ಮುಖ್ಯ ವೈದ್ಯ ಹಾಗೂ ಅವರ ಪರ ಒಬ್ಬ ವಕೀಲರು ಠಾಣೆಗೆ ಬಂದರು. ನಮ್ಮನ್ನೂ ಅಲ್ಲಿಗೆ ಕರೆಯಿಸಿಕೊಂಡ ಇನ್‌ಸ್ಪೆಕ್ಟರ್‌, ‘ಚರ್ಚಿಸಿ ಪರಸ್ಪರ ತೀರ್ಮಾನಕ್ಕೆ ಬನ್ನಿ’ ಎಂದರು. ಆದರೆ, ಆಡಳಿತ ಮಂಡಳಿಯವರು, ‘ಮೋಸ ಮಾಡಲಾಗಿದೆ’ ಎಂಬ ನಮ್ಮ ಆರೋಪವನ್ನು ಒಪ್ಪಲು ಸುತಾರಾಂ ತಯಾರಿರಲಿಲ್ಲ. ಹಣ ನೀಡಲೂ ಮುಂದಾಗಲಿಲ್ಲ. ಇನ್‌ಸ್ಪೆಕ್ಟರ್‌ ಕೂಡಾ, ‘ದೂರನ್ನು ಹಿಂದಕ್ಕೆ ಪಡೆಯಿರಿ’ ಎಂದೇ ನಮ್ಮನ್ನು ಒತ್ತಾಯಿಸಿದರು. ನಾನು, ‘ನೋಡಿ, ನೀವು ಈ ದೂರನ್ನು ಮುಕ್ತಾಯಗೊಳಿಸಿದರೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ನಿಮ್ಮ ನಡತೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ’ ಎಂದು ಎಚ್ಚರಿಸಿದೆ. ‘ಸ್ವಲ್ಪ ಸಮಯ ಕಾದು ನೋಡಿ. ನಂತರ ಒಂದು ತೀರ್ಮಾನಕ್ಕೆ ಬನ್ನಿ’ ಎಂದು ಎರಡೂ ಪಕ್ಷಗಾರರಿಗೆ ತಿಳಿಸಿದ ಇನ್‌ಸ್ಪೆಕ್ಟರ್‌ ನಮ್ಮನ್ನು ಅಲ್ಲಿಂದ ಸಾಗಹಾಕಿದರು.

ಕಡೆಗೆ ನಾನು ವೈದ್ಯರಿಗೆ ಲೀಗಲ್‌ ನೋಟಿಸ್‌ ಕಳುಹಿಸಿದೆ. ‘ಈ ನೋಟಿಸ್‌ ನಿಮ್ಮ ಕೈ ಸೇರಿದ 15 ದಿನಗಳ ಒಳಗೆ ನಮ್ಮ ಕಕ್ಷಿದಾರನ ಪೂರ್ತಿ ಹಣ ಹಿಂದಿರುಗಿಸಬೇಕು. ಇಲ್ಲದಿದ್ದರೆ ಮುಂದಿನ ಕಾನೂನು ಕ್ರಮ ಎದುರಿಸಿ’ ಎಂದು ಎಚ್ಚರಿಸಿದ್ದೆ. ಒಂದು ವಾರದಲ್ಲೇ ಆಸ್ಪತ್ರೆಯ ಮುಖ್ಯ ವ್ಯೆದ್ಯರು ಪ್ರತ್ಯುತ್ತರ ನೀಡಿ, ‘ಐವಿಎಫ್‌ ಚಿಕಿತ್ಸೆ ಶೇ 20ರಷ್ಟು ಮಾತ್ರವೇ ಯಶಸ್ವಿ ಆಗುತ್ತದೆ. ನಮ್ಮ ಪ್ರಯತ್ನ ನಾವು ಮಾಡಿರುತ್ತೇವೆ. ನೀವು ಕೇಳಿದಂತೆ ನಿಮ್ಮ ಹಣವನ್ನು ಹಿಂದಿರುಗಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದರು.

ಇನ್ನು ಅನ್ಯ ಮಾರ್ಗವಿಲ್ಲ ಎಂದು ನಾನು, ‘ಗ್ರಾಹಕರ ಕಾಯ್ದೆ–1986ರ ಕಲಂ 11 ಮತ್ತು 17ರ ಅನುಸಾರ ಸೇವೆಯಲ್ಲಿ ಲೋಪ ಎಸಗಿದ್ದೀರಿ, ವ್ಯಾಪಾರ ಧರ್ಮಕ್ಕೆ ಅನುಗುಣವಾಗಿ ನಡೆದುಕೊಂಡಿಲ್ಲ’ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಒಂದು ದಾವೆ ಸಿದ್ಧಪಡಿಸಿದೆ. ಅಂತೆಯೇ, ‘ವೈದ್ಯರು ರೋಗಿಗೆ ಮೋಸ ಮಾಡಿದ್ದಾರೆ’ ಎಂದು ಭಾರತೀಯ ದಂಡಸಂಹಿತೆ ಕಲಂ 420ರ ಅನುಸಾರ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಮತ್ತೊಂದು ಅಪರಾಧಿಕ ದೂರು ಹಾಗೂ ‘ಸೇವೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ವೃತ್ತಿಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ, ವೈದ್ಯಕೀಯ ಪ್ರಮಾಣ ವಚನದ ಉಲ್ಲಂಘನೆ ಮಾಡಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ವೈದ್ಯಕೀಯ ಮಂಡಳಿಯೂ ಸೇರಿದಂತೆ ಮೂವರಿಗೂ ಪ್ರತ್ಯೇಕ ದಾವೆಗಳನ್ನು ಸಿದ್ಧಪಡಿಸಿದೆ.

ಕೊನೆಯದಾಗಿ ಆಸ್ಪತ್ರೆಯ ಮುಖ್ಯ ವೈದ್ಯರನ್ನು ಕಂಡು ಒಂದು ಬಾರಿ ಮಾತನಾಡೋಣ ಎಂದು ತೀರ್ಮಾನಿಸಿ ಫೋನ್‌ ಮಾಡಿ ಭೇಟಿಗೆ ಸಮಯಾವಕಾಶ ಪಡೆದೆ. ‘ನೀವೊಬ್ಬರೇ ಬನ್ನಿ. ನಿಮ್ಮ ಕಕ್ಷಿದಾರರು ಬರುವುದು ಬೇಡ’ ಎಂಬ ಆ ವೈದ್ಯರ ಮಾತನ್ನು ನಾನು ಮೀರಲಿಲ್ಲ.

ಅದೊಂದು ಐಷಾರಾಮಿ ಚೇಂಬರ್‌. ಮಾತಿಗಾರಂಭಿಸಿದ ವೈದ್ಯರು, ‘ನನಗೆ ರಾಜ್ಯದ ಅನೇಕ ಪ್ರಮುಖ ಮಂತ್ರಿಗಳು, ಉನ್ನತ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಪರಿಚಯ ಇದೆ. ನೀವು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ಈ ಕೇಸಿನ ಉಸಾಬರಿ ಬಿಟ್ಟು ನಿಮ್ಮ ಕೆಲಸ ನೀವು ಮಾಡಿಕೊಳ್ಳಿ’ ಎಂದರು. ಯಾಕೊ ಇವರ ಧಾಟಿ ಸರಿ ಕಾಣುತ್ತಿಲ್ಲವಲ್ಲಾ ಎಂದುಕೊಂಡು, ‘ನೀವು ನನ್ನನು ಬೆದರಿಸುತ್ತಿದ್ದೀರಾ’ ಎಂದು ಕೇಳಿದೆ. ‘ಇಲ್ಲ ಸುಮ್ಮನೇ ಎಚ್ಚರಿಸುತ್ತಿದ್ದೇನೆ’ ಎಂದರು!

ಒಂದು ಬಾರಿ ಅವರ ಇಡೀ ಚೇಂಬರ್‌ ಅನ್ನು ಸೂಕ್ಷ್ಮವಾಗಿ ಗಮನಿಸಿದೆ. ಅಲ್ಲೆಲ್ಲಾ ಅನೇಕ ದೇವರ ಫೋಟೋಗಳು ಇದ್ದವು. ಒಂದು ಮೂಲೆಯಲ್ಲಿ ಬುದ್ಧನ ಆಕರ್ಷಕ ಪ್ರತಿಮೆಯನ್ನು ಕೂಡಾ ಇರಿಸಲಾಗಿತ್ತು. ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಏನೊ ಹೊಳಹು ಮಿಂಚಿದಂತಾಯಿತು. ಈ ಮನುಷ್ಯನನ್ನು ಒಂದು ದೃಷ್ಟಾಂತ ದರ್ಶನದ ಮೂಲಕವೇ ಪರಿವರ್ತನೆ ಮಾಡಬಹುದೇನೊ ಎಂದೂ ಅನ್ನಿಸಿತು!

ಕೇಸಿನ ದಾಖಲೆಗಳನ್ನು ಅವರ ಮುಂದಿಟ್ಟೆ. ‘ನೋಡಿ ಡಾಕ್ಟ್ರೇ, ನಿಮ್ಮ ಮೇಲೆ ಮೂರು ದಾವೆ ಹೂಡಲು ನಾನು ಪೂರ್ತಿ ತಯಾರಿ ನಡೆಸಿದ್ದೇನೆ. ಕೊನೆಯದಾಗಿ ನಿಮ್ಮೊಡನೆ ಒಮ್ಮೆ ಮಾತನಾಡಿ ಆನಂತರ ಕೋರ್ಟ್‌ ಮೆಟ್ಟಿಲು ತುಳಿಯಬೇಕು ಎಂದುಕೊಂಡಿದ್ದೇನೆ. ನೀವು ಎಷ್ಟೇ ಬೆದರಿಸಿದರೂ, ನನ್ನ ಕಕ್ಷಿದಾರ ತುಂಬಾ ಬಡವ. ಅವನ ಪರವಾಗಿ ನಿಂತು ನ್ಯಾಯ ಕೊಡಿಸುತ್ತೇನೆ. ಆದರೂ, ನಿಮ್ಮೊಡನೆ ಮಾತನಾಡುವಾಗ ಗೌತಮ ಬುದ್ಧನ ಒಂದು ಪ್ರಸಂಗ ನೆನಪಾಗುತ್ತಿದೆ. ಅನ್ಯಥಾ ಭಾವಿಸಬೇಡಿ’ ಎಂದು ಕಥೆಯನ್ನು ವಿವರಿಸಿದೆ.

ಒಬ್ಬ ರಾಜ ಅಹಂಕಾರದಿಂದ ಮೆರೆಯುತ್ತಿದ್ದ. ಆಡಳಿತ ಹದಗೆಟ್ಟು ಹೋಗಿತ್ತು. ಪ್ರಜೆಗಳನ್ನು ಮರೆತೇ ಬಿಟ್ಟಿದ್ದ. ಇದರಿಂದ ರೋಸಿ ಹೋಗಿದ್ದ ಪ್ರಜೆಗಳು ಗೌತಮ ಬುದ್ಧನ ಬಳಿ ಹೋಗಿ ರಾಜನ ದುರ್ವರ್ತನೆ ತೊಲಗಿಸುವ ಪರಿಹಾರ ಏನೆಂದು ಕೇಳಿದರು. ಅದಕ್ಕೆ ಬುದ್ಧ ಆ ರಾಜನನ್ನು ಕರೆಯಿಸಿ ಅವನಿಗೊಂದು ಕಥೆ ಹೇಳಿದ.

ಒಂದು ಹಳ್ಳಿಯಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿ ಇದ್ದ. ಅವನಿಗೆ ನಾಲ್ಕು ಜನ ಹೆಂಡತಿಯರು. ವ್ಯಾಪಾರಿಗೆ ವಯಸ್ಸಾಗಿ ಸಾಯುವ ಹಂತ ತಲುಪಿದ. ಜ್ಯೋತಿಷಿಯೊಬ್ಬರು ಅವನಿಗೆ ಒಂದು ಸಲಹೆ ನೀಡಿ, ‘ನಿನ್ನ ಹೆಂಡತಿಯರೂ ನಿನ್ನೊಟ್ಟಿಗೇ ಸತ್ತರೆ ನೀನು ಸ್ವರ್ಗಕ್ಕೆ ಹೋಗುತ್ತೀಯ’ ಎಂದರು.

ಇದನ್ನು ನಂಬಿದ ವ್ಯಾಪಾರಿ ಮೊದಲನೆಯ ಹೆಂಡತಿಯನ್ನು ಕರೆದು, ‘ನಾವಿಬ್ಬರೂ ಒಟ್ಟಿಗೆ ಸಾಯೋಣ. ಸ್ವರ್ಗಕ್ಕೆ ಹೋಗಬಹುದು’ ಎಂದ. ಅದಕ್ಕೆ ಆಕೆ, ‘ಇಲ್ಲ ನಾನು ನಿನ್ನೊಡನೆ ಸಾಯುವುದಿಲ್ಲ. ಆಸ್ತಿ, ಪಾಸ್ತಿ ನೋಡಿಕೊಳ್ಳಬೇಕು’ ಎಂದಳು. ವ್ಯಾಪಾರಿ ಅವಳನ್ನು ಕಠಿಣ ಶಬ್ದಗಳಿಂದ ನಿಂದಿಸಿ ಆಚೆ ಕಳುಹಿಸಿದ.

ಎರಡನೆಯವಳು, ‘ನಾನೂ ಬರಲು ಆಗುವುದಿಲ್ಲ. ಮಕ್ಕಳ ಪಾಲನೆ, ಪೋಷಣೆ ಮಾಡಬೇಕು’ ಎಂದಳು. ಮೂರನೆಯವಳು, ‘ನಿಮ್ಮ ಮೇಲೆ ನನಗೆ ಅತಿಯಾದ ಪ್ರೀತಿಯೇನೋ ಇದೆ ನಿಜ. ಆದರೆ, ಕೇವಲ ಸ್ಮಶಾನದತನಕ ಮಾತ್ರ ಬರಬಲ್ಲೆ’ ಎಂದಳು.

ಕೊನೆಗೆ ತನ್ನ ನಾಲ್ಕನೆ ಹೆಂಡತಿಯನ್ನು ಕರೆಯಿಸಿದ ವ್ಯಾಪಾರಿ, ‘ನೀನಾದರೂ ನನ್ನೊಟ್ಟಿಗೆ ಸಾಯುವೆಯಾ, ಇಬ್ಬರೂ ಸ್ವರ್ಗಕ್ಕೆ ಹೋಗಬಹುದು’ ಎಂದ. ಅದಕ್ಕವಳು ಸಂತೋಷದಿಂದ ಒಪ್ಪಿ, ‘ಓಹೋ, ನಾನು ನಿಮ್ಮೊಂದಿಗೆ ಸಾಯಲು ಸದಾ ಸಿದ್ಧ. ಎಲ್ಲಿದ್ದರೂ ನಿಮ್ಮ ಜೊತೆಯಲ್ಲೇ ಇರುತ್ತೇನೆ’ ಎಂದಳು.

ಕಥೆಯನ್ನು ಪೂರ್ಣಗೊಳಿಸಿ ಬುದ್ಧ ನಕ್ಕ. ‘ನೋಡು, ಮೊದಲ ಹೆಂಡತಿ ಯಾರು ಗೊತ್ತಾ? ಆಕೆ ನಮ್ಮ ಐಶ್ವರ್ಯ, ಅಂತಸ್ತು. ಅವೆಂದೂ ನಮ್ಮೊಂದಿಗೆ ಬರುವುದಿಲ್ಲ. ಎರಡನೆಯ ಹೆಂಡತಿ ನಮ್ಮ ಅಹಂಕಾರ, ಸಾರ್ವಭೌಮತ್ವ. ಅವೂ ನಮ್ಮೊಂದಿಗೆ ಬರುವುದಿಲ್ಲ. ಮೂರನೆಯ ಹೆಂಡತಿ ನಮ್ಮ ಬಂಧು, ಬಾಂಧವರು. ಅವರು ಸ್ಮಶಾನದವರೆಗೆ ಮಾತ್ರ ಬರುತ್ತಾರೆ. ನಾಲ್ಕನೆಯ ಹೆಂಡತಿಯೇ ನಮ್ಮ ಕರ್ಮ. ಅದು ಸದಾ ನಮ್ಮೊಂದಿಗೆ ಇರುತ್ತದೆ!. ಇದನ್ನರಿತು ರಾಜ್ಯಭಾರ ನಡೆಸು ಎಂದು ತಿಳಿಹೇಳಿದ.

‘ನಿಮ್ಮ ಚೇಂಬರ್‌ನಲ್ಲಿರುವ ಬುದ್ಧನ ಪ್ರತಿಮೆ ಕಂಡು ನನಗೆ ಇಷ್ಟೆಲ್ಲಾ ನೆನಪಾಯಿತು. ತಡೆಯಲಾಗಲಿಲ್ಲ. ಅದಕ್ಕೇ ಹೇಳಿದೆ’ ಎಂದು ಹೊರಡಲು ಅನುವಾದೆ. ಆಗ ವೈದ್ಯರು ಒಲ್ಲದ ಮನಸ್ಸಿನಿಂದಲೇ ನನ್ನನ್ನು ದಿಟ್ಟಿಸುತ್ತಾ, ‘ವಕೀಲರೇ ನನಗೆ ಒಂದು ದಿನ ಸಮಯ ಕೊಡಿ’ ಎಂದರು.

ಮರುದಿನ ನನ್ನ ಕಚೇರಿಗೆ ಬಂದ ಅವರು, ತಮ್ಮ ಜೇಬಿನಿಂದ ಚೆಕ್ ಬುಕ್ ತೆಗೆದು ‘ನಿಮ್ಮ ಕಕ್ಷಿದಾರನ ಹಣ ಹಿಂದಿರುಗಿಸುತ್ತಿದ್ದೇನೆ. ಎಷ್ಟು ಬರೆಯಲಿ’ ಎಂದು ಕೇಳಿದರು. ನನಗೆ ಆಶ್ಚರ್ಯ. ‘ನೀವೆಷ್ಟು ತೆಗೆದುಕೊಂಡಿದ್ದೀರಿ’ ಎಂದು ಕೇಳಿದೆ. ‘₹ 3 ಲಕ್ಷ ಪಡೆದಿದ್ದೇನೆ. ಅದರಲ್ಲಿ ಔಷಧಗಳ ಖರ್ಚು ₹ 75 ಸಾವಿರ’ ಎಂದರು. ಹಾಗಾದರೆ, ‘₹ 2.25 ಲಕ್ಷ ಬರೆಯಿರಿ ಸಾಕು’ ಎಂದೆ.

ಚೆಕ್‌ ನನ್ನ ಕೈಗಿತ್ತ ಅವರು, ‘ನೋಡಿ ವಕೀಲರೇ, ನನ್ನ ಹೆಂಡತಿ ವೈದ್ಯೆ. ಮಗನೂ ವೈದ್ಯ. ಇಬ್ಬರೂ ಅಮೆರಿಕದಲ್ಲೇ ಇದ್ದಾರೆ. ನಾನಿಲ್ಲಿ ಒಂಟಿ ಜೀವನ ನಡೆಸುತ್ತಿದ್ದೇನೆ. ನಿನ್ನೆ ನೀವು ಹೇಳಿದ ಕಥೆ ಕೇಳಿ ನನಗೆ ರಾತ್ರಿ ಬಹು ಹೊತ್ತಿನವರೆಗೆ ನಿದ್ದೆಯೇ ಬರಲಿಲ್ಲ. ಜೀವನದ ಕಟುಸತ್ಯ ಅರ್ಥವಾಯಿತು’ ಎಂದರು!!

ನನ್ನಲ್ಲಿ ಮರು ಮಾತಿರಲಿಲ್ಲ.

ಲೇಖಕ ಹೈಕೋರ್ಟ್‌ ವಕೀಲ

ಹೆಸರುಗಳನ್ನು ಬದಲಾಯಿಸಲಾಗಿದೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry