ಗುರುವಾರ , ಜೂನ್ 24, 2021
23 °C

‘ನೀನೇನು ಎಲೆಕ್ಷನ್‌ಗೆ ನಿಲ್ತಿಯೇನಪ್ಪಾ..!’

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ವಿಜಯಪುರ: ‘ನಾ ಸೂಕ್ಷ್ಮವಾಗಿ ಗಮನಿಸಾಕತ್ತೀನಿ, ನನ್ನ ಗಮನಕ್ಕ ಬಾರದೇ ನಮ್‌ ವಾರ್ಡ್‌ನಾಗ ಅಭಿವೃದ್ಧಿ ಕೆಲಸಗಳು ನಡೀತಾವು. ಯಾಕೋ ನಂಗ ಈಚೆಗೆ ಬಲವಾದ ಅನುಮಾನ ಕಾಡಕತ್ತೈತಿ, ನಮ್‌ ಕಮಿಷನರ್‌ ನನ್‌ ವಾರ್ಡ್‌ನಿಂದಲೇ ಎಲೆಕ್ಷನ್‌ಗೆ ನಿಲ್ಲೋ ತಯಾರಿ ನಡೆಸ್ಯಾರೇನು?... ನೋಡಪ್ಪಾ ನೀ ಎಲೆಕ್ಷನ್‌ಗೆ ನಿಲ್ಲೋದಿದ್ರೇ ಹೇಳು. ಸುಮ್ನೇ ಯಾಕ ಕಾರ್ಪೊರೇಟರ್ ಆಗಾಕ ಬಡಿದಾಡ್ತಿ. ನಮ್‌ ಸದಸ್ಯರನ್ನೆಲ್ಲಾ ಒಪ್ಸಿ, ನಿನ್ನೇ ಸಿಟಿಗೆ ಎಂಎಲ್‌ಎ ಎಲೆಕ್ಷನ್‌ಗೆ ನಿಲ್ಲಸ್ತೀನಿ...’

ಈಚೆಗೆ ನಡೆದ ಪಾಲಿಕೆಯ ಬಜೆಟ್‌ ಸಭೆಯಲ್ಲಿ, ವಿಜಯಪುರ ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ವಿಜಯಕುಮಾರ ಮಂಗಳವೇಡೆ ಅವರು ಆಯುಕ್ತ ಶ್ರೀಹರ್ಷ ಶೆಟ್ಟಿ ಅವರ ಕಾರ್ಯವೈಖರಿಯನ್ನು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡ ಪರಿಯಿದು.

‘ಛೇ ಛೇ... ಎಲ್ಲಾದ್ರೂ ಉಂಟಾ. ನೀವು ನಮ್‌ ಬೀಗ್ರು. ನಾ ನಿಮ್‌ ವಾರ್ಡ್‌ನಿಂದ ಎಲೆಕ್ಷನ್‌ಗೆ ನಿಲ್ಲೋದಾ? ನೀವ್‌ ಸದಸ್ಯರಾದ್ರೇ ನಾನೇ ಆದಂತೆ’ ಎಂದು ತಮ್ಮನ್ನು ಕಿಚಾಯಿಸಿದ ಮಂಗಳವೇಡೆ ಅವರಿಗೆ ಹರ್ಷಶೆಟ್ಟಿ ತಿರುಗೇಟು ನೀಡಿದರು.

ಕೆಲ ಹೊತ್ತು ಇಬ್ಬರ ನಡುವೆ ‘ಬೀಗ್ರು... ಬೀಗ್ರು...’ ಎನ್ನುತ್ತಾ ಚರ್ಚೆ ನಡೆಯುತ್ತಿದ್ದುದನ್ನು ನೋಡಿ, ಮಧ್ಯ ಪ್ರವೇಶಿಸಿದ ಮತ್ತೊಬ್ಬ ಕಾಂಗ್ರೆಸ್‌ ಸದಸ್ಯ ಮೈನುದ್ದೀನ್‌ ಬೀಳಗಿ, ‘ಪಾಲಿಕೆ ಆಡಳಿತ ಈಗ್ಲೇ ಹಳ್ಳ ಹಿಡಿದೈತಿ. ನೀವ್‌ ‘ಬೀಗ್ರು ಬೀಗ್ರು’ ಅಂದ್ಕೊಂಡ್‌ ಕೂತ್ಕೊಳ್ರೀ. ಹೆಂಗಿದ್ರೂ ಆರ್‌ ತಿಂಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಇಂತಹ, ಕೆಲಸಕ್ಕೆ ಬಾರದ ವಿಷಯಗಳ ಚರ್ಚೆಗಿಂತ ಸೂಪರ್‌ಸೀಡ್‌ ಮಾಡೋದೇ ಒಳ್ಳೇದು...’ ಎನ್ನುತ್ತಿದ್ದಂತೆ ಚರ್ಚೆಗೆ ತೆರೆಬಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.