ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಗೇಟು ನೀಡಲು ಭಾರತ ಕಾತರ

ಮಹಿಳಾ ಕ್ರಿಕೆಟ್‌: ಇಂದು ಆಸ್ಟ್ರೇಲಿಯಾ ಎದುರು ಅಂತಿಮ ಏಕದಿನ ಪಂದ್ಯ
Last Updated 17 ಮಾರ್ಚ್ 2018, 19:51 IST
ಅಕ್ಷರ ಗಾತ್ರ

ವಡೋದರ : ಸತತ ಎರಡು ಪಂದ್ಯಗಳಲ್ಲಿ ಸೋತು ಸರಣಿ ಕೈಚೆಲ್ಲಿರುವ ಭಾರತ ತಂಡ ಈಗ ಅಂತಿಮ ಹಣಾಹಣಿಯಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವ ಛಲದಲ್ಲಿದೆ.

ಭಾನುವಾರ ನಡೆಯುವ ಹೋರಾಟ ದಲ್ಲಿ ಮಿಥಾಲಿ ರಾಜ್‌ ಬಳಗ ಮೆಗ್‌ ಲ್ಯಾನಿಂಗ್‌ ಸಾರಥ್ಯದ ಆಸ್ಟ್ರೇಲಿಯಾ ಸವಾಲು ಎದುರಿಸಲಿದೆ.

2017ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿ ಸಿದ್ದ ಭಾರತ, ಅನಂತರ ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಮತ್ತು ಟ್ವೆಂಟಿ–20 ಸರಣಿ ಗೆದ್ದು ದಾಖಲೆ ಬರೆದಿತ್ತು.

ತವರಿನಲ್ಲಿ ನಡೆಯುತ್ತಿರುವ ಈ ಸರಣಿಯಲ್ಲಿ ಮಿಥಾಲಿ ‍ಪಡೆಗೆ ಗೆಲುವು ಕೈಗೆಟುಕುತ್ತಿಲ್ಲ. ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋತಿದ್ದ ತಂಡ ಎರಡನೇ ಪಂದ್ಯದಲ್ಲಿ 60ರನ್‌ಗಳಿಂದ ನಿರಾಸೆ ಕಂಡಿತ್ತು. ಹೀಗಾಗಿ ಭಾನುವಾರ ದ ಹೋರಾಟದಲ್ಲಿ ತಂಡ ಆಟದ ಎಲ್ಲಾ ವಿಭಾಗಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಬೇಕಿದೆ.

ಪೂನಮ್‌ ರಾವುತ್‌ ಮತ್ತು ಸ್ಮೃತಿ ಮಂದಾನ ಹಿಂದಿನ ಪಂದ್ಯದಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಪೂನಮ್‌ 27ರನ್‌ ಗಳಿಸಿದ್ದರೆ, ಸ್ಮೃತಿ ಅರ್ಧಶತಕದ ಸಂಭ್ರಮ ಆಚರಿಸಿದ್ದರು. ಇವರು ರಿಲಯನ್ಸ್‌ ಮೈದಾನದಲ್ಲಿ ಮತ್ತೊಮ್ಮೆ ರನ್‌ ಮಳೆ ಸುರಿಸುವ ವಿಶ್ವಾಸದಲ್ಲಿದ್ದಾರೆ.

ದೀ‍ಪ್ತಿ ಶರ್ಮಾ, ಮೂರನೇ ಕ್ರಮಾಂಕದಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ. ಅನುಭವಿ ಆಟಗಾರ್ತಿಯರಾದ ಮಿಥಾಲಿ, ಹರ್ಮನ್‌ಪ್ರೀತ್‌ ಕೌರ್‌, ವೇದಾ ಕೃಷ್ಣಮೂರ್ತಿ ಮತ್ತು ಸುಷ್ಮಾ ವರ್ಮಾ ಪರಿಣಾಮಕಾರಿಯಾಗಿ ಆಡುತ್ತಿಲ್ಲ. ಹೀಗಾಗಿ ತಂಡಕ್ಕೆ ಹಿನ್ನಡೆ ಉಂಟಾಗುತ್ತಿದೆ. ಇವರು ಅಂತಿಮ ಹಣಾಹಣಿಯಲ್ಲಿ ಲಯ ಕಂಡುಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ.

ಬೌಲಿಂಗ್‌ನಲ್ಲಿ ಶಿಖಾ ಪಾಂಡೆ ತಂಡದ ಶಕ್ತಿಯಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಅವರು ಮೂರು ವಿಕೆಟ್‌ ಪಡೆದು ಗಮನ ಸೆಳೆದಿದ್ದರು. ಪೂಜಾ ವಸ್ತ್ರಕರ್‌ ಮತ್ತು ದೀಪ್ತಿ ಶರ್ಮಾ, ಹೆಚ್ಚು ರನ್‌ ಕೊಡುತ್ತಿರುವುದು ನಾಯಕಿ ಮಿಥಾಲಿ ಚಿಂತೆಗೆ ಕಾರಣವಾಗಿದೆ.

ಏಕ್ತಾ ಬಿಷ್ಠ್‌ ಮತ್ತು ಪೂನಮ್‌ ಯಾದವ್‌ ಮತ್ತೊಮ್ಮೆ ಮಿಂಚುವ ಭರವಸೆ ಹೊಂದಿದ್ದಾರೆ.

ಕ್ಲೀನ್‌ ಸ್ವೀಪ್‌ ಗುರಿ: ಮೊದಲ ಎರಡು ಪಂದ್ಯಗಳಲ್ಲಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಅಂತಿಮ ಹೋರಾಟದಲ್ಲೂ ಆತಿಥೇಯರ ಸವಾಲು ಮೀರಿ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡುವ ಗುರಿ  ಹೊಂದಿದೆ.

ಮೆಗ್‌ ಲ್ಯಾನಿಂಗ್‌ ಪಡೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ಗುಣಮಟ್ಟದ ಆಟ ಆಡಿದ್ದು ಮೂರನೇ ಪಂದ್ಯದಲ್ಲೂ ಇದನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.

ಆರಂಭ: ಬೆಳಿಗ್ಗೆ 9.
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT