7

ನಾಯಿ ಹಾವಳಿ, ವಾಣಿಜ್ಯ ಚಟುವಟಿಕೆ ತಡೆಗೆ ಆಗ್ರಹ

Published:
Updated:
ನಾಯಿ ಹಾವಳಿ, ವಾಣಿಜ್ಯ ಚಟುವಟಿಕೆ ತಡೆಗೆ ಆಗ್ರಹ

ಬೆಂಗಳೂರು: ‘ಮಲ್ಲೇಶ್ವರದಲ್ಲಿ ಕೋತಿ, ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು, ಹಿರಿಯರು ಹಾಗೂ ಮಹಿಳೆಯರಿಗೆ ತೀವ್ರ ತೊಂದರೆ ಉಂಟಾಗಿದೆ. ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಸಲಾಗುತ್ತಿವೆ. ಬೀದಿಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಕಿರಿದಾದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ’

ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ಜನಸ್ಪಂದನ– ಸಿಟಿಜನ್ಸ್‌ ಫಾರ್‌ ಚೇಂಜ್‌’ ಕಾರ್ಯಕ್ರಮದಲ್ಲಿ ನಾಗರಿಕರು ಪ್ರಸ್ತಾಪಿಸಿದ ಪ್ರಮುಖ ಸಮಸ್ಯೆಗಳಿವು.

ಸಾರ್ವಜನಿಕರ ದೂರುಗಳನ್ನು ಆಲಿಸಿದ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಕ್ಷೇತ್ರದ ಏಳು ವಾರ್ಡ್‌ಗಳ ಬಿಬಿಎಂಪಿ ಸದಸ್ಯರು ಈ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

‘ಮಲ್ಲೇಶ್ವರದ ಹಿಮಾಂಶು ಜ್ಯೋತಿ ಕಲಾಪೀಠವು 76 ವರ್ಷಗಳ ಇತಿಹಾಸ ಹೊಂದಿದೆ. ಎಲ್‌ಕೆಜಿಯಿಂದ ಪಿಯುಸಿವರೆಗೆ 2,600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಇಲ್ಲಿ ಕೋತಿಗಳ ಕಾಟ ವಿಪರೀತವಾಗಿದೆ. ಮಕ್ಕಳು ತಿಂಡಿ ತಿನ್ನಲು ಆಗುವುದಿಲ್ಲ. ಊಟದ ಡಬ್ಬಿಗಳನ್ನೇ ಕಿತ್ತುಕೊಂಡು ಹೋಗುತ್ತವೆ. ಶಾಲೆಯ ಆವರಣದಲ್ಲಿ ಇರುವ ಗಿಡಗಳನ್ನು ಹಾಳು ಮಾಡುತ್ತವೆ. ತೆಂಗಿನ ಕಾಯಿಗಳನ್ನೂ ಬಿಡುವುದಿಲ್ಲ. ಇವುಗಳ ಉಪಟಳದಿಂದ ಮಕ್ಕಳನ್ನು ಕಾಪಾಡುವುದು ದೊಡ್ಡ ಸವಾಲಾಗಿದೆ’ ಎಂದು ಶಾಲೆಯ ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾವ್‌ ಅಳಲು ತೋಡಿಕೊಂಡರು.

‘ಶಾಲೆಯ ಸುತ್ತಲೂ ಬಲೆ ಹಾಕಿದ್ದೇವೆ. ಆದರೆ, ಅದನ್ನೂ ಕಿತ್ತು ಹಾಕಿವೆ. ಪಟಾಕಿ ಹೊಡೆದರೂ ಪ್ರಯೋಜನವಾಗಿಲ್ಲ. ಅವುಗಳ ಹಾವಳಿಯಿಂದ ಮುಕ್ತಿ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಪಾಲಿಕೆಯ ಪಶುಪಾಲನಾ ವಿಭಾಗದ ಅಧಿಕಾರಿ, ‘ಕೋತಿಗಳು ವನ್ಯಜೀವಿಗಳ ವ್ಯಾಪ್ತಿಗೆ ಬರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅವುಗಳ ದಾಳಿ ಹೆಚ್ಚಾಗಿದ್ದರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ದೂರು ನೀಡಬಹುದು. ಅವುಗಳ ನಿಯಂತ್ರಣ

ಕ್ಕಾಗಿ ಅರಣ್ಯ ಇಲಾಖೆಯು ಕೆಲ ನಿಯಮಗಳನ್ನು ರೂಪಿಸಿದೆ. ಅದರ ಪ್ರಕಾರವೇ ನಡೆದುಕೊಳ್ಳಬೇಕು’ ಎಂದರು.

ಇದರಿಂದ ಸಮಾಧಾನಗೊಳ್ಳದ ಚಿತ್ರಾ ರಾವ್‌, ‘ಹಾಗಾದರೆ, ಕೋತಿಗಳು ಯಾರಿಗೆ ಬೇಕಾದರೂ ಕಚ್ಚಬಹುದೇ? ಅವು ಕಚ್ಚುವುದರಿಂದ ರೇಬಿಸ್‌ ಬರುತ್ತದೆ. ಅವುಗಳನ್ನು ನಾವು ಕೊಲ್ಲಬಹುದೇ’ ಎಂದು ಪ್ರಶ್ನಿಸಿದರು.

ಪಶುಪಾಲನೆ ವಿಭಾಗದ ಅಧಿಕಾರಿ, ‘ಕೋತಿಗಳನ್ನು ಕೊಲ್ಲುವಂತಿಲ್ಲ’ ಎಂದು ಉತ್ತರಿಸಿದರು.

ಮಧ್ಯ ಪ್ರವೇಶಿಸಿದ ವ್ಯಕ್ತಿಯೊಬ್ಬರು, ‘ಕೋತಿಗಳ ಹಾವಳಿಯನ್ನು ತಡೆಗಟ್ಟಲು ಉಪಾಯವಿದೆ. ಶಬ್ದ ಮಾಡುವ ದೊಡ್ಡ ಗಾತ್ರದ ಹುಲಿಯ ಬೊಂಬೆಗಳನ್ನು ಇಟ್ಟರೆ, ಕೋತಿಗಳು ಓಡಿ ಹೋಗುತ್ತವೆ’ ಎಂದು ಸಲಹೆ ನೀಡಿದರು.

ಡಾ.ಗಂಗಾಧರ್‌, ‘ಮಲ್ಲೇಶ್ವರದ 6ನೇ ಅಡ್ಡರಸ್ತೆಯಲ್ಲಿ ಆರು ಬೀದಿ ನಾಯಿಗಳಿದ್ದು, ಎಲ್ಲರ ಮೇಲೂ ದಾಳಿ ಮಾಡುತ್ತವೆ’ ಎಂದರು.

ಪಶುಪಾಲನೆ ವಿಭಾಗದ ಅಧಿಕಾರಿ, ‘ಮಲ್ಲೇಶ್ವರದಲ್ಲಿರುವ ನಾಯಿಗಳಿಗೆ ರೇಬಿಸ್‌ ನಿರೋಧಕ ಲಸಿಕೆಯನ್ನು ಕಳೆದ ತಿಂಗಳು ಹಾಕಿದ್ದೇವೆ. ಈಗ ರಾಜಾಜಿ ನಗರದಲ್ಲಿ ಹಾಕುತ್ತಿದ್ದೇವೆ. ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿ, ರೇಬಿಸ್‌ ನಿರೋಧಕ ಲಸಿಕೆ ನೀಡಿದ ಬಳಿಕ ಅದೇ ಸ್ಥಳಕ್ಕೆ ಬಿಡಲಾಗುತ್ತಿದೆ’ ಎಂದು ಹೇಳಿದರು.

ಚಂದ್ರಶೇಖರ ಬೆಳ್ಳೂರು, ‘ವಸತಿ ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳು, ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಕೊರಿಯರ್‌ ಕಚೇರಿಗಳೂ ಇವೆ. ಇದರಿಂದ ವಾಹನ ದಟ್ಟಣೆ, ಶಬ್ದಮಾಲಿನ್ಯ ಹೆಚ್ಚಾಗಿದೆ’ ಎಂದು ಅಳಲು ತೋಡಿಕೊಂಡರು.

ಮಲ್ಲೇಶ್ವರದ ಕಾರ್ಯನಿರ್ವಾಹಕ ಎಂಜಿನಿಯರ್‌ ಜೆ.ನಾರಾಯಣ್‌, ‘ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸಬಾರದು. ಇಂತಹ ವಾಣಿಜ್ಯ ಮಳಿಗೆಗಳನ್ನು ಗುರುತಿಸ

ಲಾಗಿದ್ದು, ಪರವಾನಗಿ ರದ್ದುಪಡಿಸುವಂತೆ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ. ಆದರೆ, ಮಳಿಗೆಗಳ ಮಾಲೀಕರು ಕೋರ್ಟ್‌ನಿಂದ ತಡೆ ತರುತ್ತಾರೆ’ ಎಂದರು.

ಗುಟ್ಟಹಳ್ಳಿಯ ಕಳಸೇಗೌಡ, ‘ವಿನಾಯಕ ವೃತ್ತದಿಂದ ಭಾಷ್ಯಂ ವೃತ್ತದ ಕಡೆಗಿನ ರಸ್ತೆಯಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಲಾಗಿದೆ. 13ನೇ ಅಡ್ಡರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ’ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ಸಂಚಾರ ಪೊಲೀಸರು, ‘ಟೈಗರ್‌ ವಾಹನ ಕಳುಹಿಸಿ ಟೋಯಿಂಗ್‌ ಮಾಡಿಸುತ್ತೇವೆ’ ಎಂದರು.

ನಾರಾಯಣಮೂರ್ತಿ, ‘ವಯ್ಯಾಲಿಕಾವಲ್‌ ಮುಖ್ಯರಸ್ತೆಯ 12ನೇ ಅಡ್ಡರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಲಾಗಿದೆ’ ಎಂದು ಹೇಳಿದರು.

ರಾಜಮಹಲ್‌–ಗುಟ್ಟಹಳ್ಳಿ ವಾರ್ಡ್‌ನ ಸದಸ್ಯೆ ಹೇಮಲತಾ, ‘ಪಾದಚಾರಿ ಮಾರ್ಗದ ಒತ್ತುವರಿ ‌ತೆರವುಗೊಳಿಸಲು ಕೆಲವರು ವಿರೋಧಿಸುತ್ತಾರೆ. ಹೀಗಾಗಿ, ಕಾರ್ಯಾಚರಣೆ ನಿಲ್ಲಿಸುವಂತಹ ಪರಿಸ್ಥಿತಿ ಇದೆ’ ಎಂದು ತಿಳಿಸಿದರು.

ಆರ್‌.ರವಿ, ‘ಸಂಪಿಗೆ ರಸ್ತೆಯಿಂದ ಈಸ್ಟ್‌ ಪಾರ್ಕ್‌ ರಸ್ತೆವರೆಗೆ ವಾಹನ ದಟ್ಟಣೆ ಉಂಟಾಗುತ್ತಿದೆ. ಇದು ಏಕಮುಖ ರಸ್ತೆಯಾಗಿದ್ದರೂ, ಈ ನಿಯಮವನ್ನು ಯಾರೂ ಪಾಲಿಸುತ್ತಿಲ್ಲ. ಬೀದಿಬದಿ ವ್ಯಾಪಾರಿಗಳ ಹಾವಳಿಯೂ ಹೆಚ್ಚಾಗಿದೆ’ ಎಂದು ದೂರಿದರು.

ಎಇಇ ಸುಷ್ಮಾ, ‘ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಶಾಶ್ವತ ಪರಿಹಾರ ಕಂಡು ಹಿಡಿಯಲು ಆಗುತ್ತಿಲ್ಲ’ ಎಂದರು.

‘ಚಿತಾಗಾರದಿಂದ ದುರ್ವಾಸನೆ’

‘ಹರಿಶ್ಚಂದ್ರ ಘಾಟ್‌ನ ಹಿಂಭಾಗದ ರಸ್ತೆಯಲ್ಲಿ 25 ವರ್ಷಗಳಿಂದ ವಾಸ ಮಾಡುತ್ತಿದ್ದೇನೆ. ಇಲ್ಲಿನ ಚಿತಾಗಾರದಲ್ಲಿ ಶವ ಸುಡುವುದರಿಂದ ದುರ್ವಾಸನೆ ಬರುತ್ತಿದೆ. ಇದರಿಂದ ಕಾಯಿಲೆ ಬರುತ್ತಿದೆ. ಊಟ ಮಾಡಲು ಸಾಧ್ಯವಾಗುವುದಿಲ್ಲ. ಮನೆ ಪಕ್ಕ ತೆರೆದ ಚರಂಡಿ ಇದ್ದು, ಎರಡು ತಿಂಗಳ ಹಿಂದೆ ಅದನ್ನು ಸ್ವಚ್ಛಗೊಳಿಸಲಾಗಿದೆ. ಆದರೆ, ಅದನ್ನು ಮುಚ್ಚಿಲ್ಲ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. 8ನೇ ಅಡ್ಡರಸ್ತೆಯ ಅರ್ಧ ಭಾಗದ ಮನೆಗಳಿಗೆ ಮಾತ್ರ ಕೊಳವೆಬಾವಿ ನೀರು ಬರುತ್ತಿದೆ’ ಎಂದು ಗಾಯತ್ರಿನಗರದ ನಿವಾಸಿ ವರದರಾಜ್‌ ಅಳಲು ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಪಾಲಿಕೆ ಸದಸ್ಯೆ ಚಂದ್ರಕಲಾ ಗಿರೀಶ್‌, ‘ಚಿತಾಗಾರದ ಚಿಮಣಿಯನ್ನು ಮತ್ತಷ್ಟು ಎತ್ತರಿಸಿದರೆ ದುರ್ವಾಸನೆಯನ್ನು ತಡೆಗಟ್ಟಬಹುದು. ಇದಕ್ಕಾಗಿ ಅನುದಾನವನ್ನೂ ತಂದಿದ್ದೇವೆ. ಚಿಮಣಿಯನ್ನು ಶೀಘ್ರದಲ್ಲೇ ಎತ್ತರಿಸಲಾಗುತ್ತದೆ. ಕೊಳವೆಬಾವಿ ನೀರು ಪೂರೈಕೆಗೆ ಪ್ರತ್ಯೇಕ ವಾಲ್ವ್‌ ಅಳವಡಿಕೆ ಮಾಡಲಾಗುತ್ತದೆ’ ಎಂದರು.

‘ಬಾರ್‌, ರೂಫ್‌ಟಾಪ್‌ ಬಾರ್‌ಗೆ ಕಡಿವಾಣ ಹಾಕಿ’

‘ನನ್ನ ಮನೆ ಬಳಿ ಮೂರು ಬಾರ್‌ಗಳಿವೆ. ಶುಕ್ರವಾರ, ಶನಿವಾರ, ಭಾನುವಾರದಂದು ಸಂಗೀತದ ಅಬ್ಬರ ಜೋರಾಗಿರುತ್ತದೆ. ಜಗಳ ಸಾಮಾನ್ಯವಾಗಿದೆ. ಮನೆಯಲ್ಲಿ ಹೆಣ್ಣು ಮಕ್ಕಳು ಒಬ್ಬರೇ ಇರಲು ಭಯಪಡುವಂತಾಗಿದೆ. ಈ ಬಾರ್‌ಗಳನ್ನು ಮುಚ್ಚಿಸುವಂತೆ ನಾಲ್ಕು ವರ್ಷಗಳಿಂದ ದೂರು ನೀಡುತ್ತಿದ್ದೇನೆ. ಆದರೆ, ಪಾಲಿಕೆಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ದಯವಿಟ್ಟು ಈ ಸಮಸ್ಯೆಗೆ ಪರಿಹಾರ ನೀಡಿ’ ಎಂದು ಸುಬ್ರಹ್ಮಣ್ಯನಗರ ವಾರ್ಡ್‌ನ ಗಿರಿ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಪಾಲಿಕೆ ಸದಸ್ಯ ಎಚ್‌.ಮಂಜುನಾಥ್‌, ‘ಬಾರ್‌ ಮುಚ್ಚಿಸುವಂತೆ ಒತ್ತಾಯಿಸಿ ನಾನೂ ಬೀದಿಗೆ ಇಳಿದು ಹೋರಾಟ ಮಾಡಿದ್ದೇನೆ. ಈ ಬಗ್ಗೆ ಆರೋಗ್ಯ ಅಧಿಕಾರಿಯ ಗಮನಕ್ಕೂ ತಂದಿದ್ದೇನೆ’ ಎಂದರು.

ಆರೋಗ್ಯಾಧಿಕಾರಿ ಡಾ.ಜಿ.ಕೆ.ಸುರೇಶ್‌, ‘ಈ ಪ್ರಕರಣ ಕೋರ್ಟ್‌ನಲ್ಲಿದೆ. ರೂಫ್‌ಟಾಪ್‌ ಬಾರ್‌ಗಳ ನಕ್ಷೆಯನ್ನು ಪರಿಶೀಲಿಸುತ್ತಿದ್ದೇವೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘450 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಗುರಿ’

ಸುಬ್ರಹ್ಮಣ್ಯನಗರದ ನಿರ್ಮಲಾ ಶಾಲೆ ಬಳಿ ನಿರ್ಮಿಸಿರುವ ಸೇತುವೆ ಅವೈಜ್ಞಾನಿಕವಾಗಿದೆ. ಅದನ್ನು ಪ್ರಯಾಣಿಕಸ್ನೇಹಿಯನ್ನಾಗಿ ಮಾಡಬೇಕು. ಇಲ್ಲಿ ಕಸ ಸುರಿಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಬಡಾವಣೆಯ ನಿವಾಸಿ ಶ್ರೀಧರ್‌ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ‘ಕಸ ಹಾಕುವುದನ್ನು ತಡೆಗಟ್ಟುವ ಉದ್ದೇಶದಿಂದ ಅಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಕ್ಷೇತ್ರದಲ್ಲಿ ಈಗಾಗಲೇ 230 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನೂ 40 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಒಟ್ಟು 450 ಕ್ಯಾಮೆರಾಗಳನ್ನು ಅಳವಡಿಸುವ ಗುರಿ ಇದೆ’ ಎಂದರು.

ಸರ ಹುಡುಕಿಕೊಡಲು ವೃದ್ಧೆಯ ಮನವಿ

‘ನನ್ನ ಸರ ಕಳ್ಳತನವಾಗಿ ಏಳು ವರ್ಷಗಳು ಕಳೆದಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆ. ಕಳ್ಳರು ಸಿಕ್ಕರೆ ಸರ ತಂದು ಕೊಡುತ್ತೇವೆ ಎಂದು ಪೊಲೀಸರು ಹೇಳಿದ್ದರು. ಈವರೆಗೆ ಪೊಲೀಸ್‌ ಠಾಣೆಗೆ 60 ಬಾರಿ ನಡೆದುಕೊಂಡು ಹೋಗಿದ್ದೇನೆ. ನನಗೆ ಗಂಡ, ಮಕ್ಕಳು ಇಲ್ಲ. ಸರ ಸಿಕ್ಕರೆ ಜೀವನಕ್ಕೆ ಆಧಾರವಾಗುತ್ತದೆ’ ಎಂದು ಸುಮಾರು 80 ವರ್ಷದ ಸುಗಂಧ ಮಾಮಿ ಅಳಲು ತೋಡಿಕೊಂಡರು.

‘ಕಾವೇರಿ ನೀರು ಸೋರಿಕೆಗೆ ಕ್ರಮ’

ಮಲ್ಲೇಶ್ವರ ಕ್ಷೇತ್ರದ ಅನೇಕ ಬಡಾವಣೆಗಳಲ್ಲಿ 60 ವರ್ಷಗಳಷ್ಟು ಹಳೆಯ ಪೈಪ್‌ಗಳಿವೆ. ಕಾವೇರಿ ನೀರು ಸೋರಿಕೆ ತಪ್ಪಿಸುವ ಉದ್ದೇಶದಿಂದ 25 ಸಾವಿರ ಮನೆಗಳಿಗೆ ‌ಪೈಪ್‌ಲೈನ್‌ ಬದಲಿಸಲಾಗಿದೆ. ಇನ್ನೂ ಐದು ಸಾವಿರ ಮನೆಗಳಿಗೆ ಬದಲಾಯಿಸಲಾಗುತ್ತದೆ. ಈ ಪೈಪ್‌ಗಳು 50 ವರ್ಷಗಳವರೆಗೂ ಬಾಳಿಕೆ ಬರುತ್ತವೆ. ನೀರು ಸರಬರಾಜು ವೇಳೆ ಆಗುತ್ತಿದ್ದ ಶೇ 55ರಷ್ಟು ನೀರಿನ ಸೋರಿಕೆಯ ಪ್ರಮಾಣವನ್ನು ಶೇ 25ಕ್ಕೆ ಇಳಿಸಲಾಗಿದೆ. ಇದನ್ನು ಶೇ 15ಕ್ಕೆ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಕ್ಷೇತ್ರದಲ್ಲಿ ಕಸ ಸುರಿಯುವ ತಾಣಗಳು 250ಕ್ಕಿಂತ ಹೆಚ್ಚಿದ್ದವು. ಮನೆಗಳಿಂದಲೇ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಈಗ ಶೇ 10ರಷ್ಟು ಕಸ ಸುರಿಯುವ ತಾಣಗಳಿವೆ. ಈ ತಾಣಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು ಸಾರ್ವಜನಿಕರ ಧ್ವನಿಗೆ ಶಕ್ತಿ ನೀಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಟಾಫಟ್‌ ಪ್ರಶ್ನೆ– ಪಟಪಟನೆ ಉತ್ತರ

* ಎಸ್‌.ಕೆ.ಕೌಶಿಕ್‌: ಮಲ್ಲೇಶ್ವರ 8ನೇ ಅಡ್ಡರಸ್ತೆಯ ಸ್ಯಾಂಕಿ ಕೆರೆಯ ಪ್ರವೇಶದ್ವಾರದ ಬಳಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಹೀಗಾಗಿ, ಅಯ್ಯಪ್ಪ ದೇವಸ್ಥಾನದ ಕಡೆಯಿಂದ ಕೆರೆಗೆ ಪಾದಚಾರಿ ಮಾರ್ಗ ನಿರ್ಮಿಸಬೇಕು. ಸಾರ್ವಜನಿಕ ಗ್ರಂಥಾಲಯ ನಿರ್ಮಿಸಬೇಕು.

ಜಿ.ಮಂಜುನಾಥ್‌ ರಾಜು, ಪಾಲಿಕೆ ಸದಸ್ಯ: ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ.

* ಎಂ.ಮಂಜುನಾಥ್‌: ಗಾಯತ್ರಿನಗರ ವಾರ್ಡ್‌ನ 7ನೇ ಅಡ್ಡರಸ್ತೆಗೆ ಡಾಂಬರು ಹಾಕಿಲ್ಲ. ಪಾದಚಾರಿ ಮಾರ್ಗವೂ ಹಾಳಾಗಿದೆ.

ಚಂದ್ರಕಲಾ ಗಿರೀಶ್‌, ಪಾಲಿಕೆ ಸದಸ್ಯೆ: ಕಾಂಕ್ರೀಟ್‌ ರಸ್ತೆ ತೆಗೆದು ಡಾಂಬರು ರಸ್ತೆ ಹಾಕಿಸಲು ಅನುದಾನ ಮಂಜೂರು ಮಾಡಲಾಗಿದೆ. ಆದರೆ, ಇದರ ಕಡತವನ್ನು ಕಾರ್ಯನಿರ್ವಾಹಕ ಎಂಜಿನಿಯರ್‌ ವಾಪಸ್‌ ಕಳುಹಿಸಿದ್ದಾರೆ.

ಜೆ.ನಾರಾಯಣ್‌, ಇಇ: ಈ ಬಗ್ಗೆ ಮುಖ್ಯ ಎಂಜಿನಿಯರ್‌ ಜತೆ ಚರ್ಚಿಸಿದ್ದೇನೆ. 15 ದಿನಗಳಲ್ಲಿ ಡಾಂಬರು ಹಾಕುತ್ತೇವೆ.

* ಎಸ್‌.ಮೀರಾ: ಮಾರ್ಗೋಸಾ ರಸ್ತೆಯ 9ನೇ ಅಡ್ಡರಸ್ತೆಯ ಮನೆಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಬರುತ್ತಿಲ್ಲ.

ಡಾ.ಸಿ.ಎನ್‌.ಅಶ್ವತ್ಥನಾರಾಯಣ: ನೀರು ಪೂರೈಕೆ ಮಾಡಲು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸುತ್ತೇನೆ.

* ವೆಂಕಟಪ್ಪ: ಕಾಡು ಮಲ್ಲೇಶ್ವರ ವಾರ್ಡ್‌ನಲ್ಲಿ ಎರಡು ಕೊಳವೆಬಾವಿಗಳು ಕೆಟ್ಟಿದ್ದು, ನೀರಿಗೆ ಸಮಸ್ಯೆ ಉಂಟಾಗಿದೆ.

ಜಿ.ಮಂಜುನಾಥ್‌ ರಾಜು: ಕೊಳವೆಬಾವಿ ನೀರು ಪೂರೈಸಲು ಹಾಕಿದ್ದ ಪೈಪ್‌ಗಳಿಗೆ ಕೆಲ ಮನೆಯವರು ಮೋಟರ್‌ ಅಳವಡಿಸಿಕೊಂಡಿದ್ದರು. ಇದರಿಂದ ಉಳಿದ ಮನೆಗಳಿಗೆ ನೀರು ಸರಬರಾಜು ಆಗುತ್ತಿರಲಿಲ್ಲ.

* ಪಿ.ಜಿ.ರಾಮಚಂದ್ರ: ಹರಿಶ್ಚಂದ್ರ ಘಾಟ್‌ ಬಳಿ ಇರುವ ಅಪಾರ್ಟ್‌ಮೆಂಟ್‌ನವರು ಜನರೇಟರ್‌ ಅನ್ನು ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದಾರೆ.

ಚಂದ್ರಕಲಾ ಗಿರೀಶ್‌: ಕೆಇಬಿ ಅಧಿಕಾರಿಗಳ ಜತೆಗೂಡಿ ಸ್ಥಳ ಪರಿಶೀಲನೆ ಮಾಡುತ್ತೇನೆ.

* ಫೆಡ್ರಿಕ್‌ ರಾಜ್‌ಕುಮಾರ್‌: ಸುಬ್ರಹ್ಮಣ್ಯನಗರದ 8ನೇ ‘ಬಿ’ ಮುಖ್ಯರಸ್ತೆಯಲ್ಲಿ 15 ಅಡಿ ಅಗಲದ ರಸ್ತೆ ಇದ್ದು, ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಮನೆಯಿಂದ ಕಾರನ್ನು ಹೊರಗೆ ತೆಗೆಯಲು ಆಗುತ್ತಿಲ್ಲ. ಈ ಸಂಬಂಧ ಎಸಿಪಿ ಅವರಿಗೂ ದೂರು ನೀಡಿದ್ದೇನೆ. ಇದನ್ನು ಏಕಮುಖ ರಸ್ತೆಯನ್ನಾಗಿ ಮಾಡಬೇಕು.

ಎಚ್‌.ಮಂಜುನಾಥ್‌, ಪಾಲಿಕೆ ಸದಸ್ಯ: 8 ಹಾಗೂ 9ನೇ ಮುಖ್ಯರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಮಾಡುವಂತೆ ಆ ಭಾಗದ ಜನರು ಮನವಿ ಮಾಡುತ್ತಿದ್ದಾರೆ. ಸಂಚಾರ ಪೊಲೀಸರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ.

* ಪ್ರೊ.ಎನ್‌.ರಾಮಚಂದ್ರಸ್ವಾಮಿ: ಮಲ್ಲೇಶ್ವರದ 8ನೇ ಮುಖ್ಯರಸ್ತೆಯಿಂದ ಯಶವಂತಪುರ ಕಡೆಗಿನ ರಸ್ತೆಯಲ್ಲಿ ಬೀದಿ ದೀಪಗಳು ಸರಿ ಇಲ್ಲ. ಮಹಿಳೆಯರು, ವೃದ್ಧರಿಗೆ ತೊಂದರೆ ಆಗುತ್ತಿದೆ.

ಎನ್‌.ಜಯಪಾಲ್‌, ಪಾಲಿಕೆ ಸದಸ್ಯ: ಈ ರಸ್ತೆಯ ಬೀದಿದೀಪಗಳಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

ಸಿ.ಎನ್‌.ಅಶ್ವತ್ಥನಾರಾಯಣ: ಕೇಬಲ್‌ಗಳ ಮೇಲೆ ಮರದ ಕೊಂಬೆಗಳು ಬಿದ್ದು, ದೀಪಗಳು ಉರಿಯುತ್ತಿರಲಿಲ್ಲ. ಈಗ, ನೆಲದಾಳದಲ್ಲಿ ಕೇಬಲ್‌ ಅಳವಡಿಸಲಾಗುತ್ತಿದೆ.

* ಶಶಿಪ್ರಿಯ: ರಾಜಮಹಲ್‌–ಗುಟ್ಟಹಳ್ಳಿಯ 2ನೇ ಮುಖ್ಯರಸ್ತೆಯಲ್ಲಿ ಬಿಬಿಎಂಪಿಯ ಕಸದ ಲಾರಿಗಳನ್ನು ನಿಲ್ಲಿಸುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.

ಡಾ.ಸಿ.ಎನ್‌.ಅಶ್ವತ್ಥನಾರಾಯಣ: ಇಡೀ ವಾರ್ಡ್‌ನ ಕಸವನ್ನು ತಂದು ಲಾರಿಗೆ ತುಂಬಲು ಇರುವ ಸ್ಥಳ ಅದೊಂದೇ. ಅಲ್ಲಿ ತ್ಯಾಜ್ಯರಸ (ಲಿಚೆಟ್‌) ಸಂಗ್ರಹಿಸಲು ವ್ಯವಸ್ಥೆ ಮಾಡುತ್ತೇನೆ.

* ಜೆ.ಟಿ.ನಾಯಕ್‌: ಎಂಎಸ್‌ಆರ್‌ ನಗರದಲ್ಲಿರುವ ನನ್ನ ಮನೆಗೆ ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ನೀಡಿಲ್ಲ.

ಸಿ.ಎನ್‌.ಅಶ್ವತ್ಥನಾರಾಯಣ: ಕ್ಷೇತ್ರದ ಶೇ 99ರಷ್ಟು ಮನೆಗಳಿಗೆ ಪಿಐಡಿ ಸಂಖ್ಯೆ ನೀಡಲಾಗಿದೆ. ನಿಮ್ಮ ಮನೆಗೂ ನೀಡುತ್ತೇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry