ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಲೆಗಳಲ್ಲಿ ಸ್ವಚ್ಛತಾ ಬೋಧನೆ’

Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಲೆಗಳಲ್ಲಿ ಪ್ರತಿದಿನ ಬೆಳಗಿನ ಪ್ರಾರ್ಥನೆ ವೇಳೆ 2 ನಿಮಿಷ ಸ್ವಚ್ಛ ಭಾರತದ ಬಗ್ಗೆ ಬೋಧಿಸಲು ನಿರ್ದೇಶನ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದೆ’ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವ ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದರು.

ಸ್ವಚ್ಛ ಭಾರತ್ ಮಿಷನ್‌ ಮತ್ತು ಬಿಬಿಎಂಪಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸ್ವಚ್ಛತಾ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಮೇಲೆ ಸ್ವಚ್ಛ ಭಾರತ್‌ ಆಂದೋಲನದ ಯಶಸ್ಸು ನಿಂತಿದೆ. ಹಾಗಾಗಿ ಚಿಕ್ಕ ವಯಸ್ಸಿನಿಂದಲೇ ಸ್ವಚ್ಛತೆಯ ಮಹತ್ವದ ಕುರಿತು ಬೋಧಿಸಲು ಈ ನಿರ್ಧಾರ ಮಾಡಲಾಗಿದೆ ಎಂದರು.

ಬೇರೆ ಯೋಜನೆಗಳಿಗೆ ಹೋಲಿಸಿದರೆ ಸ್ಮಾರ್ಟ್ ಸಿಟಿ ಯೋಜನೆ ಅತ್ಯಂತ ವೇಗವಾಗಿ ಅನುಷ್ಠಾನವಾಗುತ್ತಿದೆ. ಮೂರು ಹಂತಗಳಲ್ಲಿ ಆ‌ಯ್ಕೆ ಮಾಡಿರುವ 99 ನಗರಗಳ ಪೈಕಿ 86 ನಗರಗಳಲ್ಲಿ ವಿಶೇಷ ವಾಹಕ ವ್ಯವಸ್ಥೆ (ಎಸ್‌ಪಿವಿ) ರಚನೆಯಾಗಿದೆ. ಅಧಿಕಾರಿಗಳು ಹಾಗೂ ತಜ್ಞರನ್ನು ಒಂದುಗೂಡಿಸಿ ಉನ್ನತ ಮಟ್ಟದ ಸಮಿತಿ ರಚಿಸಲಾಗುತ್ತಿದೆ ಎಂದರು.

ಮೈಂಡ್‌ ಟ್ರೀ ಸಂಸ್ಥೆಯ ಸಹಯೋಗದಲ್ಲಿ ರೂಪಿಸಿರುವ ‘ಸ್ವಚ್ಛತಾ ಆ್ಯಪ್' ಬಿಡುಗಡೆ ಮಾಡಿದರು. ಕಸ ಸಂಸ್ಕರಣಾ ಘಟಕ ಸ್ಥಾಪನೆಗೆ ಸಂಬಂಧಿಸಿ ಫ್ರಾನ್ಸ್‌ನ ತ್ರೀವೇಸ್ಟ್, ನೆದರ್‍ಲೆಂಡ್‌ನ ನೆಕಸ್‌ನೋವಾ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಯಿತು.

ಮೇನಲ್ಲಿ ಫಲಿತಾಂಶ ಪ್ರಕಟ

ದೇಶದ ಸ್ವಚ್ಛ ನಗರಗಳ ರ‍್ಯಾಂಕ್‌ ಪಟ್ಟಿಯನ್ನು ಮೇ ಮೊದಲ ವಾರ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.

ದೇಶದ 4,200 ನಗರ ಹಾಗೂ ಪಟ್ಟಣಗಳಲ್ಲಿ ಸಮೀಕ್ಷೆ ನಡೆಯುತ್ತಿದೆ. ನಗರ ಮತ್ತು ಸ್ಥಳೀಯ ಸಂಸ್ಥೆಗಳು ಸ್ವಚ್ಛತೆ ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯವನ್ನು  ಸಂಗ್ರಹಿಸಲಾಗುತ್ತದೆ. ಕಳೆದ ವರ್ಷ ಇಂದೋರ್‌ ಮೊದಲ ಸ್ಥಾನ ಪಡೆದಿತ್ತು. ಅದಕ್ಕೂ ಮೊದಲು ಮೈಸೂರಿಗೆ ಮೊದಲ ಸ್ಥಾನ ಸಿಕ್ಕಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT