ಮತ್ತೆ ₹175 ಕೋಟಿ ಸಾಲ ಮಾಡಿದ ಬಿಡಿಎ

7

ಮತ್ತೆ ₹175 ಕೋಟಿ ಸಾಲ ಮಾಡಿದ ಬಿಡಿಎ

Published:
Updated:
ಮತ್ತೆ ₹175 ಕೋಟಿ ಸಾಲ ಮಾಡಿದ ಬಿಡಿಎ

ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಐದು ವಸತಿ ಯೋಜನೆಗಳ ಕಾಮಗಾರಿಗಾಗಿ ಮತ್ತೆ ₹175 ಕೋಟಿ ಸಾಲ ಮಾಡಿದೆ.

ವಿವಿಧ ಕಾಮಗಾರಿಗಳ ಅನುಷ್ಠಾನಕ್ಕಾಗಿ ಪ್ರಾಧಿಕಾರವು ನಾಲ್ಕು ಸಂಸ್ಥೆಗಳಿಂದ ಸಾಲ ಪಡೆದಿದೆ. ಒಟ್ಟು ₹ 570.35 ಕೋಟಿ ಸಾಲವನ್ನು ಹೊಂದಿದೆ. ಮಾಹಿತಿ ಹಕ್ಕಿನಡಿ ಸಾಯಿದತ್ತ ಪಡೆದ ಮಾಹಿತಿಯಲ್ಲಿ ಈ ಕುರಿತ ವಿವರಗಳಿವೆ.

ಸಿಂಡಿಕೇಟ್‌ ಬ್ಯಾಂಕ್‌ನ ಗಾಂಧಿನಗರ ಶಾಖೆಯಲ್ಲಿ ಈ ವರ್ಷ ಪಡೆದಿರುವ ₹ 175 ಕೋಟಿ ಸಾಲಕ್ಕೆ ಕಣಮಿಣಿಕೆ ವಸತಿ ಯೋಜನೆಯ 5ನೇ ಹಂತ, ವಲಗೇರಹಳ್ಳಿಯ 6ನೇ ಹಂತ ಹಾಗೂ ಕೊಮ್ಮಘಟ್ಟದ 1ನೇ ಹಂತ, 2ನೇ ಹಂತ ಹಾಗೂ 3ನೇ ಹಂತದ ವಸತಿ ಸಮುಚ್ಚಯಗಳನ್ನು ಅಡಮಾನವಾಗಿ ಇಡಲಾಗಿದೆ ಎಂದು ಮುಖ್ಯ ಲೆಕ್ಕಾಧಿಕಾರಿ ತಿಳಿಸಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರವು ಪ್ರಾಧಿಕಾರಕ್ಕೆ ಅನುದಾನ ನೀಡುತ್ತಿಲ್ಲ. ಈ ವರ್ಷದ ಬಜೆಟ್‌ನಲ್ಲಿ ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ ₹ 50 ಕೋಟಿ ಕಾಯ್ದಿರಿಸಿದ್ದನ್ನು ಹೊರತುಪಡಿಸಿದರೆ, ಬೇರೆ ಯಾವುದೇ ಅನುದಾನ ಪ್ರಕಟಿಸಿಲ್ಲ. ಮೂಲಸೌಕರ್ಯ ಯೋಜನೆಗಳ ವೆಚ್ಚವನ್ನು ಭರಿಸಲು ಬಿಡಿಎ ಒಂದೋ ಸಾಲ ಮಾಡಬೇಕು ಅಥವಾ ಈ ಹಿಂದೆ ಅಭಿವೃದ್ಧಿಪಡಿಸಿರುವ ಬಡಾವಣೆಗಳ ಮೂಲೆ ನಿವೇಶನಗಳನ್ನು ಹರಾಜು ಹಾಕಬೇಕು. ಇದು ವೈಜ್ಞಾನಿಕ ಕ್ರಮ ಅಲ್ಲ ಎಂದು ಸಾಯಿದತ್ತ ಅಭಿಪ್ರಾಯಪಟ್ಟರು.

ಮೂಲಸೌಕರ್ಯ ಅಭಿವೃದ್ಧಿಗಾಗಿ ಬಿಡಿಎ ಇದುವರೆಗೆ ₹ 2817.70 ಕೋಟಿ ವೆಚ್ಚಮಾಡಿದೆ. ಇವುಗಳ ಸಲುವಾಗಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಪ್ರಾಧಿಕಾರಕ್ಕೆ ಬಿಡುಗಡೆಯಾದ ಅನುದಾನ ಕೇವಲ ₹ 91.48 ಕೋಟಿ. ಫ್ಲ್ಯಾಟ್‌ಗಳು ಹಾಗೂ ನಿವೇಶನ ಹಂಚಿಕೆಯಿಂದ ಬರುವ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದರಿಂದ ಪ್ರಾಧಿಕಾರದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಈ ಪರಿಪಾಠಕ್ಕೆ ಅಂತ್ಯ ಹಾಡಬೇಕಿದೆ ಎಂದು ಅವರು ತಿಳಿಸಿದರು.

ಮೂಲಸೌಕರ್ಯ ಕಾಮಗಾರಿಗಳನ್ನು ಪ್ರಾಧಿಕಾರದಿಂದ ಮಾಡಿಸುವುದಾದರೆ ಅದಕ್ಕೆ ತಗಲುವ ವೆಚ್ಚವನ್ನೂ ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.

‘ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಮಾಮೂಲಿ. ವಸತಿ ಸಮುಚ್ಚಯಗಳಲ್ಲಿನ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿ ಸಾಲವನ್ನು ತೀರಿಸುತ್ತೇವೆ. ಈ ಹಿಂದೆ, ಫ್ಲ್ಯಾಟ್‌ಗಳ ಹಂಚಿಕೆಗೆ ಬೇರೆಯೇ ವಿಧಾನ ಅನುಸರಿಸಲಾಗುತ್ತಿತ್ತು. ಅಧಿಸೂಚನೆ ಹೊರಡಿಸಿ, ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿ, ನಂತರ ಹಂಚಿಕೆ ಮಾಡಲಾಗುತ್ತಿತ್ತು. ಈಗ ಅರ್ಜಿ ಸಲ್ಲಿಸಿದವರಿಗೆ ನೇರವಾಗಿ ಹಂಚಿಕೆ ಮಾಡುತ್ತೇವೆ. ಹಾಗಾಗಿ ಫ್ಲ್ಯಾಟ್‌ಗಳಿಗೆ ಬೇಡಿಕೆಯೂ ಹೆಚ್ಚಿದೆ’ ಎಂದು ಹೆಸರು ಹೇಳಲಿಚ್ಛಿಸದ ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

**

ಬಿಡಿಎ ಸಾಲದ ವಿವರ

ಸಂಸ್ಥೆ, ಮೊತ್ತ (₹ ಕೋಟಿಗಳಲ್ಲಿ)

ಕೆಯುಐಡಿಎಫ್‌ಸಿ, 35.35

ಕೆನರಾ ಬ್ಯಾಂಕ್‌, 235

ಹುಡ್ಕೊ, 125

ಸಿಂಡಿಕೇಟ್‌ ಬ್ಯಾಂಕ್‌, 175

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry