ರನ್‌ವೇ ದೀಪಗಳಿಗೆ ವಿಮಾನ ಡಿಕ್ಕಿ

7

ರನ್‌ವೇ ದೀಪಗಳಿಗೆ ವಿಮಾನ ಡಿಕ್ಕಿ

Published:
Updated:

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ  ಸ್ಪೈಸ್‌ಜೆಟ್‌ ವಿಮಾನವೊಂದು ರನ್‌ವೇ ದೀಪಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸುಮಾರು 40 ನಿಮಿಷ ರನ್‌ವೇ ಸ್ಥಗಿತಗೊಳಿಸಿದ್ದರಿಂದ 10 ವಿಮಾನಗಳ ಹಾರಾಟ ವ್ಯತ್ಯಯವಾಗಿದೆ.

ಹೈದರಾಬಾದ್‌ನಿಂದ ಬಂದ ಎಸ್‌ಜಿ 1238 ವಿಮಾನವು ರಾತ್ರಿ 10.30ಕ್ಕೆ ನಿಲ್ದಾಣದಲ್ಲಿ ಇಳಿದಿತ್ತು. ಅಲ್ಲಿಂದ ಟರ್ಮಿನಲ್‌ ಕಡೆಗೆ ಬರುತ್ತಿದ್ದಾಗ ಅದು ಮೂರು ರನ್‌ವೇ ದೀಪಗಳನ್ನು ಉಜ್ಜಿಕೊಂಡು ಸಾಗಿತ್ತು. ಹಾಗಾಗಿ ರಾತ್ರಿ 10.47ರಿಂದ 11.28ರವರೆಗೆ ರನ್‌ವೇಯಲ್ಲಿ ವಿಮಾನ ಸಂಚಾರ ತಡೆಹಿಡಿಯಲಾಯಿತು ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ನಿಯಮಿತ (ಬಿಐಎಎಲ್‌) ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿ ಇಳಿಯಬೇಕಾಗಿದ್ದ ಎಂಟು ವಿಮಾನಗಳನ್ನು ಚೆನ್ನೈಗೆ, ತಿರುಚನಾಪಳ್ಳಿ ಹಾಗೂ ಕೊಯಮತ್ತೂರಿಗೆ ತಲಾ ಒಂದು ವಿಮಾನವನ್ನು ಕಳುಹಿಸಿಕೊಡಲಾಯಿತು. ಇಳಿಯುತ್ತಿದ್ದಂತೆಯೇ ವಿಮಾನ ಎಡಕ್ಕೆ ವಾಲಿತು. ಅದನ್ನು ರನ್‌ವೇಯ ಮಧ್ಯಕ್ಕೆ ತರುವಲ್ಲಿ ಪೈಲಟ್‌ ಯಶಸ್ವಿಯಾದರು. ಅಷ್ಟರಲ್ಲಿ ದೀಪಗಳಿಗೆ ಹಾನಿಯಾಯಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು ಎಂದು ಸ್ಪೈಸ್‌ಜೆಟ್‌ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ವಿಮಾನವು ವಾಲುವುದಕ್ಕೆ ನಿಖರ ಕಾರಣವೇನು ಎಂದು ತಿಳಿದುಬಂದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry