ಮತಯಂತ್ರ ಮತ್ತೆ ಆಕ್ಷೇಪ

7

ಮತಯಂತ್ರ ಮತ್ತೆ ಆಕ್ಷೇಪ

Published:
Updated:
ಮತಯಂತ್ರ ಮತ್ತೆ ಆಕ್ಷೇಪ

ನವದೆಹಲಿ: ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ವ್ಯವಸ್ಥೆಯನ್ನು ಕಾಪಾಡಲು ಚುನಾವಣಾ ಆಯೋಗವು ಎಲೆಕ್ಟ್ರಾನಿಕ್‌ ಮತಯಂತ್ರಗಳ (ಇವಿಎಂ) ಬಳಕೆಯನ್ನು ಕೈಬಿಡಬೇಕು ಎಂದು ಎಐಸಿಸಿ ಮಹಾ ಅಧಿವೇಶನ ಮಹತ್ವದ ರಾಜಕೀಯ ನಿರ್ಣಯ ಕೈಗೊಂಡಿದೆ.

ಪ್ರಜಾತಂತ್ರ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಜನರ ವಿಶ್ವಾಸ ಉಳಿಯಬೇಕು ಎಂದರೆ, ಎಲ್ಲರ ಸಂದೇಹಕ್ಕೆ ಒಳಗಾಗಿರುವ ಮತಯಂತ್ರಗಳನ್ನು ಬದಿಗಿರಿಸಿ, ಮತಪತ್ರಗಳ ಬಳಕೆಯನ್ನು ಮರಳಿ ಆರಂಭಿಸಬೇಕು ಎಂದು ಅಧಿವೇಶನದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ನಾಯಕರು ಚುನಾವಣಾ ಆಯೋಗವನ್ನು ಒಕ್ಕೊರಲಿನಿಂದ ಒತ್ತಾಯಿಸಿದೆ.

ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ನಿರ್ಧಾರಕ್ಕೂ ಶನಿವಾರ ಆರಂಭವಾದ ಎಐಸಿಸಿ 84ನೇ ಮಹಾ ಅಧಿವೇಶನದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

ಚುನಾವಣಾ ವ್ಯವಸ್ಥೆ ಯಶಸ್ವಿಯಾಗಬೇಕು ಎಂದರೆ ಮತದಾನ ಮತ್ತು ಮತಎಣಿಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ದೇಶದಲ್ಲಿ ಇತ್ತೀಚೆಗೆ ಜನಾದೇಶಕ್ಕೆ ವ್ಯತಿರಿಕ್ತವಾದ ಫಲಿತಾಂಶ ಹೊರ ಬರುತ್ತಿವೆ. ಇದರಿಂದಾಗಿ ರಾಜಕೀಯ ಪಕ್ಷಗಳು ಮತ್ತು ಮತದಾರರಲ್ಲಿ ಮತಯಂತ್ರಗಳ ದುರ್ಬಳಕೆಯ ಬಗ್ಗೆ ಬಲವಾದ ಸಂದೇಹ ವ್ಯಕ್ತವಾಗುತ್ತಿದೆ ಎಂದು ನಿರ್ಣಯ ಮಂಡಿಸಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದರು.

‘ಪ್ರಜಾಪ್ರಭುತ್ವದಲ್ಲಿ ನಂಬುಗೆ ಇರುವ ಯಾವ ರಾಷ್ಟ್ರಗಳೂ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಬಳಸುತ್ತಿಲ್ಲ’ ಎಂದು ಅಧಿವೇಶನದಲ್ಲಿ ಭಾಗವಹಿಸಿದ್ದ ಹಲವು ಕಾಂಗ್ರೆಸ್‌ ನಾಯಕರು ಈ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿದರು.

ನಮ್ಮಿಂದ ಮಾತ್ರ ಸಮರ್ಪಕ ಆಡಳಿತ: ‘ಬಿಜೆಪಿಯ ದುರಾಡಳಿತದಿಂದ ದೇಶದ ಜನರು ಬೇಸತ್ತಿದ್ದು, ಸಮರ್ಪಕ ಆಡಳಿತ ನೀಡುವ ಮೂಲಕ ಭಾರತವನ್ನು ಮುನ್ನಡೆಸುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.

‘ಬಿಜೆಪಿ ದ್ವೇಷವನ್ನು ಸಾಧಿಸುತ್ತಿದೆ. ನಾವು ಪ್ರೀತಿಯಿಂದ ಜನರ ಮನ ಗೆಲ್ಲುತ್ತೇವೆ. ಇದೇ ನಮ್ಮ ಮತ್ತು ಬಿಜೆಪಿ ನಡುವಿನ ವ್ಯತ್ಯಾಸ’ ಎಂದರು.

ಮೋದಿಗೆ ಅಧಿಕಾರದ ಮದ: ಸೋನಿಯಾ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಸಚಿವರಿಗೆ ಅಧಿಕಾರಿದ ಮದ ನೆತ್ತಿಗೇರಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಟೀಕಿಸಿದರು.

ನಾಲ್ಕು ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವವರು ಶತಮಾನದಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಲು ಯತ್ನಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಎಂದು ಪ್ರಪಾತಕ್ಕೆ ಹೋಗುವುದಿಲ್ಲ. ಬದಲಿಗೆ, ಮತ್ತಷ್ಟು ಬಲಿಷ್ಠವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಕಷ್ಟದ ದಿನಗಳಲ್ಲಿ ರಾಹುಲ್ ಗಾಂಧಿ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ ಎಂದು ಸೋನಿಯಾ ಶ್ಲಾಘಿಸಿದರು.

ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟುವೆ

‘ಪಕ್ಷವು ಸಿದ್ಧಾಂತಗಳ ರಕ್ಷಣೆಗೆ ಶ್ರಮಿಸಿದೆ. ಯುವ ಜನಾಂಗದ ಸಲಹೆಯ ಜೊತೆಜೊತೆಗೆ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷವನ್ನು ಕಟ್ಟುವೆ ಎಂಬ ಆತ್ಮವಿಶ್ವಾಸ ಇದೆ’ ಎಂದು ರಾಹುಲ್‌ ಹೇಳಿದರು.

ಜಾತಿ, ಧರ್ಮದ ಆಧಾರದಲ್ಲಿ ರಾಷ್ಟ್ರವನ್ನು ವಿಭಜಿಸಲಾಗುತ್ತಿದೆ. ಒಬ್ಬರನ್ನೊಬ್ಬರು ಎತ್ತಿಕಟ್ಟುವ ಮೂಲಕ ನಮ್ಮ ದೇಶವನ್ನು ವಿಭಜಿಸಲಾಗುತ್ತಿದೆ. ಜನರನ್ನು ಒಗ್ಗೂಡಿಸುವುದು ಕಾಂಗ್ರೆಸ್‌ನ ಕೆಲಸ ಎಂದು ಅವರು ಹೇಳಿದರು.

**

ಹಿಂದುತ್ವವನ್ನೇ ಪ್ರತಿಪಾದಿಸುತ್ತ ರಾಷ್ಟ್ರದಾದ್ಯಂತ ‘ಹುಸಿ -ರಾಷ್ಟ್ರೀಯ ಪರಿಕಲ್ಪನೆ’ ಹುಟ್ಟುಹಾಕುತ್ತಿರುವ ಶಕ್ತಿಗಳನ್ನು ಕಾಂಗ್ರೆಸ್‌ ಮೆಟ್ಟಿ ನಿಲ್ಲಲಿದೆ.

– ಸಿದ್ದರಾಮಯ್ಯ, ಮುಖ್ಯಮಂತ್ರಿ

**

‘ನಾನು ತಿನ್ನುವುದಿಲ್ಲ, ಇತರರಿಗೆ ತಿನ್ನಲೂ ಬಿಡುವುದಿಲ್ಲ’ ಎಂದು ಸಾರುವ ನರೇಂದ್ರ ಮೋದಿ, ತಮ್ಮ ಗೆಳೆಯರಿಗೆ ತಿನ್ನಲು ಬಿಟ್ಟಿದ್ದಾರೆ. ನೀರವ್‌ ಮೋದಿ ಅಂಥವರು ಸಾವಿರಾರು ಕೋಟಿ ಲೂಟಿ ಹೊಡೆದು ವಿದೇಶಕ್ಕೆ ಪರಾರಿಯಾಗಿದ್ದಾರೆ.

– ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry