ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರವನ್ನೇ ಮಣಿಸಿದ ಕೃಷಿಕ!

Last Updated 19 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಊರಿನವರೆಗೂ ಬರ ಬಂದಿದೆ... ಆದರೆ, ನಮ್ ತೋಟಕ್ಕೆ ಬಂದಿಲ್ಲ.’ ಎನ್ನುತ್ತಾ ಮುಗುಳ್ನಕ್ಕರು 68ರ ಹರೆಯದ ರೈತ ಶಂಕರ್ !

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಗುಳ್ಳಳ್ಳಿಪುರದ ಶಂಕರ್ ಅವರ ತೋಟ ಎಂಥ ಬರಗಾಲದಲ್ಲೂ ಹಸಿರಾಗಿರುತ್ತದೆ. ಕಳೆದ ವರ್ಷದ ಭೀಕರ ಬರಕ್ಕೂ ಅವರ ತೋಟ ಜಗ್ಗಿಲ್ಲ. ಮೊನ್ನೆ ಮತ್ತೆ ಹೋದಾಗ ಎಂದಿನಂತೆ ಹಸಿರು ಮುಕ್ಕಳಿಸುತ್ತಿತ್ತು. ಶಂಕರ್ ಅವರೊಂದಿಗೆ ತೋಟ ಸುತ್ತುತ್ತಿದ್ದಾಗ, ತೇವವಾದ ಪರಿಸರದಿಂದ ಹೊಮ್ಮುತ್ತಿದ್ದ ತಂಪುಗಾಳಿ ಹಿತಾನುಭವ ನೀಡುತ್ತಿತ್ತು. ಅಕ್ಕಪಕ್ಕದಲ್ಲಿ ತೊನೆದಾಡುತ್ತಿದ್ದ ಅಡಿಕೆ, ಬಾಳೆ ಗೊನೆಗಳು, ಬೇಲಿಯಲ್ಲಿದ್ದ ಕಾಡು ಮರಗಳು, ನಡುನಡುವೆ ಹಲಸು, ನೇರಳೆ, ಮಾವು... ಸೂರ್ಯರಶ್ಮಿ ಭೂಮಿಗೆ ಬೀಳದಂತೆ ತಡೆಯುವ ಮಟ್ಟಿಗೆ ಅಲ್ಲಿನ ವಾತಾವರಣ ಸಹ್ಯಾದ್ರಿಯಂತೆ ಕಂಗೊಳಿಸುತ್ತಿತ್ತು. ಇಂತಹ ತಂಪಾದ ಪರಿಸರದಲ್ಲೇ ಶಂಕರ್‌ ಅವರಿಂದ ನಡೆದಿತ್ತು ತೋಟದಲ್ಲಿ ಅನುಷ್ಠಾನಕ್ಕೆ ಬಂದಿರುವ ಬರ ನಿರ್ವಹಣೆಯ ಕೌಶಲಗಳ ವಿವರಣೆ.

ಎರಡು ದಶಕಗಳಿಂದ ಸಹಜ ಕೃಷಿ ಪದ್ಧತಿಯಲ್ಲಿ ತೋಟ ಮಾಡುತ್ತಿದ್ದಾರೆ ಶಂಕರ್. ‘ಕಡಿಮೆ ಒಳಸುರಿ, ಸುಸ್ಥಿರ ಇಳುವರಿ’ಗಾಗಿ ತೋಟದಲ್ಲಿ ತ್ಯಾಜ್ಯಗಳ ಮುಚ್ಚಿಗೆ, ಮುಚ್ಚಿಗೆ ಬೆಳೆ, ಬೆಳೆ ವೈವಿಧ್ಯ ನಿರ್ವಹಣೆ, ರೋಗ–ಕೀಟಬಾಧೆ ನಿವಾರಣೆಗೆ ಜೀವಾಮೃತ ಬಳಕೆಯಂಥ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಇಂಥ ಪರಿಸರಪ್ರಿಯ ಕೃಷಿ ವಿಧಾನಗಳಿಂದಲೇ ತೋಟದಲ್ಲಿ ತೇವಾಂಶ ನಿರಂತರವಾಗಿರುತ್ತದೆ ಎನ್ನುವುದು ಅವರ ಅನುಭವದ ನುಡಿ.

ಎರಡು ದಶಕ- ಒಂದೇ ಕೊಳವೆಬಾವಿ: ನಾಲ್ಕು ಎಕರೆಯ ಈ ತೋಟ ನಿರ್ವಹಣೆಗೆ ಅವರಿಗೆ ಶಾಶ್ವತ ಜಲ ಸಂಪನ್ಮೂಲವಿಲ್ಲ. 20 ವರ್ಷಗಳಿಂದ ಒಂದೇ ಒಂದು ಕೊಳವೆ ಬಾವಿಯಿಂದ ತೋಟ ನಿರ್ವಹಿಸುತ್ತಿದ್ದಾರೆ. ‘70ರ ದಶಕದಲ್ಲಿ ತೆರೆದ ಬಾವಿಯ ನೀರಲ್ಲಿ ತೋಟ ಮಾಡುತ್ತಿದ್ದೆವು. 1988ರಲ್ಲಿ ಸುತ್ತಲಿನ ತೋಟಗಳಲ್ಲಿ ನೀರಿನ ಬಳಕೆ ಹೆಚ್ಚಾಯಿತು, ಕೊಳವೆಬಾವಿ ಪರ್ವ ಆರಂಭವಾಯಿತು. ನಮ್ಮ ತೋಟಕ್ಕೂ ಕೊಳವೆ ಬಾವಿ ಬಂತು. ಮೊದಲು 200 ಅಡಿ ಕೊರೆಸಿದ್ದ ಕೊಳವೆ ಬಾವಿ, ಹತ್ತು ವರ್ಷಗಳ ನಂತರ 400 ಅಡಿಗೆ ಇಳಿಸಬೇಕಾಯಿತು. ಆದರೂ ಈ ಕೊಳವೆಬಾವಿ ನಿರಂತರ ನಾಲ್ಕು ಇಂಚು ನೀರು ನೀಡುತ್ತಿದೆ’ ಎನ್ನುತ್ತಾರೆ ಶಂಕರ್.

‘ಒಂದೇ ಕೊಳವೆಬಾವಿಯಿಂದ ತೋಟ ಹೇಗೆ ನಿಭಾಯಿಸು ತ್ತೀರಿ?’ ಎಂದು ಕೇಳಿದರೆ ‘ಬೆಳೆಗಳಿಗೆ ಅಗತ್ಯಕ್ಕೆ ತಕ್ಕಷ್ಟು ನೀರು ಪೂರೈಸುತ್ತೇನೆ. 15 ದಿನಕ್ಕೆ ಒಂದು ಸುತ್ತು ಸ್ಪಿಂಕ್ಲರ್, ಡ್ರಿಪ್ ಮೂಲಕ ನೀರು ಹಾಯಿಸುತ್ತೇನೆ. ಕರೆಂಟ್ ಪೂರ್ಣ ಕೊಟ್ಟರೆ ಒಂದು ದಿನಕ್ಕೆ ಎರಡು ಎಕರೆ, ಇನ್ನೊಂದು ದಿನ ಎರಡು ಎಕರೆಗೆ ನೀರು ಕೊಡುತ್ತೇನೆ’ ಎನ್ನುತ್ತಾ ಹನಿ ನೀರಿನ ಲೆಕ್ಕಾಚಾರ ತೆರೆದಿಡುತ್ತಾರೆ.

ಹನಿ ಲೆಕ್ಕದಲ್ಲಿ ನೀರನ್ನು ಬಳಕೆ ಮಾಡಿದರೆ, ಲೀಟರ್ ಲೆಕ್ಕ ದಲ್ಲಿ ತೋಟದಲ್ಲಿ ಬೀಳುವ ಮಳೆ ನೀರನ್ನು ಇಂಗಿಸುತ್ತಾರೆ. ತೆರೆದ ಬಾವಿಯನ್ನೇ ಮಳೆನೀರು ಸಂಗ್ರಹಕ್ಕೆ ಬಳಸುತ್ತಿದ್ದಾರೆ. ಪ್ರತಿ ವರ್ಷ ಕನಿಷ್ಠ ಮೂರ್ನಾಲ್ಕು ತಿಂಗಳು ಬಾವಿಯಲ್ಲಿ ಮಳೆ ನೀರು ಇಂಗುತ್ತದೆ. ತೋಟದಿಂದ ಹನಿ ನೀರೂ ಹೊರಹೋಗದಂತೆ, ಮಣ್ಣನ್ನು ಅಣಿಗೊಳಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಜೀವರಾಶಿ ಉತ್ಪತ್ತಿ ಮಾಡುವ ಕಾಡುಗಿಡಗಳನ್ನು ಬೆಳೆಸಿದ್ದಾರೆ. ಮಣ್ಣಿಗೆ ಸಾವಯವ ಅಂಶ ತುಂಬುವುದು, ಕೃಷಿ ತ್ಯಾಜ್ಯಗಳನ್ನು ಮಣ್ಣಿನಲ್ಲಿ ಕರಗಿಸುವುದು, ತೇವಾಂಶಕ್ಕಾಗಿ ಹೊದಿಕೆ ಬೆಳೆ ಬೆಳೆಸುವುದು–ಇವೆಲ್ಲ ನೀರಿನ ರಕ್ಷಣೆಗೆ ಅನುಸರಿಸಿರುವ ಮಾರ್ಗಗಳು.

ಬರಕ್ಕೆ ಜಗ್ಗದ ಸಹಜ ಕೃಷಿ ತೋಟ: ನಾಲ್ಕು ದಶಕಗಳಲ್ಲಿ ಮೂರು ಕಠಿಣ ಬರಗಾಲಗಳನ್ನು ಕಂಡಿರುವ ಶಂಕರ್‌ಗೆ ಕಳೆದ ವರ್ಷದ ಬರ ತೀವ್ರ ಕಾಡಿದೆ. ಆ ಬರಗಾಲದ ಹೊಡೆತಕ್ಕೆ ಸುತ್ತಲಿನ ತೋಟಗಳಲ್ಲಿ ಬೆಳೆ ಒಣಗಿವೆ. ಆದರೆ, ಶಂಕರ್ ತೋಟದಲ್ಲಿ ಮಾತ್ರ ಅಂಥ ದೊಡ್ಡ ವ್ಯತ್ಯಾಸ ಕಂಡಿಲ್ಲ. ‘ಸ್ವಲ್ಪ ಇಳುವರಿ ಕಡಿಮೆ ಯಾಯಿತು. ಆದರೆ, ಸಮರ್ಪಕ ನೀರಿನ ನಿರ್ವಹಣೆ, ವೈಜ್ಞಾನಿಕ ಬೆಳೆ ಪದ್ಧತಿ ಹಾಗೂ ತೇವಾಂಶ ಕಾಪಾಡುವ ತಂತ್ರಜ್ಞಾನದಿಂದ ಬರ ಗಾಲ ಎದುರಿಸಲು ಸಾಧ್ಯ ವಾಯಿತು’ ಎಂದು ನೆನಪಿಸಿ ಕೊಳ್ಳುತ್ತಾರೆ ಶಂಕರ್.

‘ಮುಚ್ಚಿಗೆ ಪದ್ಧತಿ ಯಿಂದ, ನೀರು ಹಿಡಿ ದಿಡುವ ಶಕ್ತಿ ಹೆಚ್ಚಾಗಿದೆ. ತೋಟದಲ್ಲಿ ತೇವಾಂಶ ನಿರಂತರವಾಗಿರುವುದರಿಂದ,\ಹೊಸ ಕೊಳವೆಬಾವಿ ಕೊರೆ ಸಿಲ್ಲ. ಹೀಗಾಗಿ ಹಣ ಉಳಿತಾಯ ವಾಗಿದೆ’ ಎಂದು ನೀರು ಉಳಿತಾಯದ ಲಾಭವನ್ನು ವಿವರಿಸುತ್ತಾರೆ.

ಉಳುಮೆ ನಿಲ್ಲಿಸಿ 15 ವರ್ಷ ವಾಯ್ತು: ‘ತೋಟದಲ್ಲಿ ತೇವಾಂಶ ನಿರಂತರವಾಗಿ ಇರಬೇಕೆಂದರೆ, ಉಳುಮೆ ನಿಲ್ಲಿಸಬೇಕು’ ಎಂದು ಹೇಳುವ ಅವರು, 15 ವರ್ಷಗಳಿಂದ ತೋಟದಲ್ಲಿ ಉಳುಮೆ ನಿಲ್ಲಿಸಿದ್ದಾರೆ. ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಮರಗಳ ಎಲೆ, ಗರಿ, ಕಡ್ಡಿ, ಕಸ ಬಿದ್ದಲ್ಲೇ ಕರಗುತ್ತವೆ. ಕಳೆಗಳನ್ನು ಮಣ್ಣಿಗೆ ಸೇರಿಸುತ್ತಾರೆ. ದ್ವಿದಳ ಧಾನ್ಯಗಳನ್ನು ಬೆಳೆಸುತ್ತಾರೆ. ‘ಮಣ್ಣಿಗೆ ಸಾರಜನಕ ತುಂಬುವ ಈ ಧಾನ್ಯಗಳ ಫಸಲನ್ನು ಮನೆಗೂ ಬಳಕೆ ಮಾಡುತ್ತೇವೆ. ಇಂಥ ಸಹಜ ಕೃಷಿ ಪದ್ಧತಿಯಿಂದಾಗಿ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಪ್ರಮಾಣ ಹೆಚ್ಚಾಗಿದೆ. ಮಣ್ಣು ಮೃದುವಾಗಿದೆ. ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಾಗಿ ಎರೆಹುಳುಗಳು ಉಳುಮೆ ಮಾಡುತ್ತಿವೆ’ ಎಂದು ವಿವರಿಸುತ್ತಾರೆ.

ಮಣ್ಣು – ನೀರು ರಕ್ಷಣೆಯ ಜತೆಗೆ, ಬೆಳೆ ಪದ್ಧತಿಗೂ ಶಂಕರ್ ಆದ್ಯತೆ ನೀಡಿದ್ದಾರೆ. ತೋಟದ ತುಂಬಾ ವೈವಿಧ್ಯ ಬೆಳೆಗಳಿವೆ. ತೆಂಗನ್ನು ‘ಜಿಗ್ ಜಾಗ್’ ವಿಧಾನದಲ್ಲಿ ನಾಟಿ ಮಾಡಿದ್ದಾರೆ. ಒಟ್ಟು ನಾಲ್ಕು ಎರೆಕಯಲ್ಲಿ 180 ತೆಂಗು, ಮೂರೂವರೆ ಎಕರೆಯಲ್ಲಿ ಅಂತರ ಬೆಳೆಯಾಗಿ 750 ಅಡಿಕೆ, ಬೇಲಿ, ಬದುಗಳಲ್ಲಿ ಹುಣಸೆ, ಹಲಸು, ಮಾವು, ನೇರಳೆ, ನಿಂಬೆ, ರಾಮಫಲದಂತಹ ಹಣ್ಣಿನ ಮರಗಳಿವೆ. ಎರಡು ಎಕರೆ ತೋಟದಿಂದ ಈ ವರ್ಷ ಕನಿಷ್ಠ ₹2 ಲಕ್ಷದವರೆಗೂ ಆದಾಯ ಬಂದಿದೆ ಎಂದು ಶಂಕರ್ ಲೆಕ್ಕ ಕೊಡುತ್ತಾರೆ. ಇವೆಲ್ಲ ಬಹುವಾರ್ಷಿಕ ಬೆಳೆಗಳು. ಒಮ್ಮೆ ನಾಟಿ ಮಾಡಿದರೆ, ದೀರ್ಘಾವಧಿ ಬೆಳೆ ನೀಡುತ್ತವೆ. ಈ ಬೆಳೆಗೆ ಎರಡು 3 ವರ್ಷಕ್ಕೊಮ್ಮೆ ಗೊಬ್ಬರ, ಮಣ್ಣು ಕೊಟ್ಟರೆ ಸಾಕು. ಪುನಃ ಬಂಡವಾಳದ ಅಗತ್ಯವಿಲ್ಲ ಎನ್ನುವುದು ಅವರ ಲೆಕ್ಕಾಚಾರ.

‘ಸಹಜ ಕೃಷಿ ಎಂದರೆ ಪ್ರಕೃತಿಯಲ್ಲಾಗುವ ಬದಲಾವಣೆ ಗಳನ್ನು ಗಮನಿಸುತ್ತಾ ಕೃಷಿ ಮಾಡುವುದು’ ಎನ್ನುವ ಅವರು, ತಮ್ಮ ತೋಟದಲ್ಲಿ ಅನುಸರಿಸಿರುವ ಹಲವು ಚಟುವಟಿಕೆಗಳನ್ನು ಈ ಮಾತಿಗೆ ಸಾಕ್ಷಿಯಾಗಿಸುತ್ತಾರೆ. ಸಂಪರ್ಕಕ್ಕೆ :9741783424, 9901619236.

‘ಎಂಟು ಗುಂಟೆ ಕೃಷಿ’ ಪ್ರಯೋಗ
ಶಂಕರ್ ತಮ್ಮ ಜಮೀನಿನಲ್ಲಿ ಮಹಾರಾಷ್ಟ್ರದ ದಾಬೋಳ್ಕರ್ ಅವರ ‘ಎಂಟು ಗುಂಟೆಯ ಕೃಷಿ’ ಪದ್ಧತಿಯ ಪ್ರಯೋಗಕ್ಕೂ ಮುಂದಾಗಿದ್ದಾರೆ. ಜಮೀನಿನ ಎಂಟು ಗುಂಟೆಯ ಭಾಗದಲ್ಲಿ ಪ್ರಯೋಗ ಮುಂದುವರಿಸಿದ್ದಾರೆ. ಪ್ರಯೋಗಕ್ಕೀಗ ಮೂರು ವರ್ಷ. ಎಂಟು ಗುಂಟೆಯಲ್ಲಿ ಒಂದು ಕುಟುಂಬ ಜೀವನ ನಡೆಸುವಷ್ಟು ಆಹಾರ, ಆದಾಯ ಪಡೆಯಬಹುದು ಎಂಬುದು ಪ್ರಯೋಗದ ಉದ್ದೇಶ. ಮೊದಲೇ ಹುಣಸೆಮರಗಳಿದ್ದಂತಹ ಎಂಟು ಗುಂಟೆ ಜಾಗವನ್ನು ಆಯ್ದುಕೊಂಡ ಶಂಕರ್, ಒಳಭಾಗದಲ್ಲಿ ತೆಂಗು, ಬಾಳೆ, ನುಗ್ಗೆ, ನಿಂಬೆ, ಬೆಂಡೆ ಬೆಳೆಸಿ, ಕುಂಬಳದಂತಹ ಬಳ್ಳಿ ತರಕಾರಿಗಳನ್ನು ಹಾಕಿದರು. ‘ಆರಂಭದ ಎರಡು ವರ್ಷ ಹಣ್ಣು, ತರಕಾರಿ, ದ್ವಿದಳಧಾನ್ಯಗಳನ್ನು ಮನೆಗೆ ಬಳಸಿಕೊಂಡೆವು. ಈ ವರ್ಷದಿಂದ ಹುಣಸೆ ಹಣ್ಣು ಲಭ್ಯವಾಗಿದೆ. ಅಲ್ಲೇ ಉತ್ಪತ್ತಿಯಾಗುವ ತ್ಯಾಜ್ಯವೇ ಗೊಬ್ಬರ. ಕೀಟ–ರೋಗ ಬಾಧೆ ಕಂಡಿಲ್ಲ’ ಎಂದು ವಿವರಿಸುತ್ತಾರೆ.

‘ಮೇದಿನಿಯೊಂದಿಗೆ ತಾದಾತ್ಯ್ಮ’ದ ಬದುಕು:
ಕೃಷಿ ಬದುಕನ್ನು ಪ್ರೀತಿಸುವಷ್ಟೇ, ಗೌರವಿಸುತ್ತಾರೆ ಈ ರೈತ. ಕೃಷಿಯಲ್ಲಿ ಸಂಕಷ್ಟಗಳು ಎದುರಾದಾಗಲೂ, ಒಕ್ಕಲು ಬದುಕಿಗೆ ಬೆನ್ನು ತೋರಿಲ್ಲ. ‘ನನ್ನ ಜೀವನ ಸಹಜವಾಗಿದೆ. ಹಾಗಾಗಿಯೇ ಸಹಜ ಕೃಷಿ ಅನುಸರಿಸಲು ಸಾಧ್ಯವಾಗಿದೆ’ ಎನ್ನುವ ಶಂಕರ್, ಮೂರ್ನಾಲ್ಕು ಆಕಳುಗಳನ್ನು ಸಾಕಿದ್ದಾರೆ. ಅಡುಗೆ ಮನೆಗೆ ಬೇಕಾದ್ದ ಆಹಾರವೆಲ್ಲ ತೋಟದಿಂದಲೇ ಸಂಪಾದಿಸುತ್ತಾರೆ. ತನ್ನಂತೆ ಸಹಜ ಕೃಷಿ ಅನುಸರಿಸುವ ರೈತರೊಂದಿಗೆ ಉತ್ಪನ್ನಗಳ ವಿನಿಮಯ ಮಾಡಿಕೊಳ್ಳುತ್ತಾರೆ.

ಸರ್ಕಾರದ ಸಬ್ಸಿಡಿಗಳಿಗೆ ಆಸೆಪಡದೇ, ಸ್ವಾವಲಂಬಿಯಾಗಿ ಕೃಷಿ ಬದುಕು ರೂಪಿಸಿಕೊಂಡಿದ್ದಾರೆ. ಕೃಷಿಯಲ್ಲಿ ಲಾಭವಿಲ್ಲ ಎಂದು ಹೇಳುತ್ತಿರುವಾಗಲೇ, ಇದೇ ಕೃಷಿ ಬದುಕಿನ ಆದಾಯದಲ್ಲೇ ಇಬ್ಬರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಮಕ್ಕಳನ್ನೂ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸಿದ್ದಾರೆ !

ತಕ್ಕಮಟ್ಟಿನ ವಿದ್ಯಾಭ್ಯಾಸದ ಜತೆಗೆ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿರುವ ಶಂಕರ್, ಪರಿಸರ ಹೋರಾಟಗಳಲ್ಲೂ ಭಾಗಿಯಾಗಿದ್ದನ್ನು ನೆನಪಿಸಿಕೊಳ್ಳುತ್ತಾರೆ. ನಾಲ್ಕು ದಶಕಗಳ ಕೃಷಿಯ ಏರಿಳಿತಗಳನ್ನು ತಲೆಯಲ್ಲೇ ದಾಖಲಿಸಿಕೊಂಡಿದ್ದಾರೆ. ‘ಪುಕುವೊಕ, ಪೂರ್ಣಚಂದ್ರ ತೇಜಸ್ವಿ ಮೈಸೂರಿನ ಎ.ಪಿ. ಚಂದ್ರಶೇಖರ್ ಅವರಂಥ ರೈತರ ಬದುಕು’ ನನಗೆ ಮಾದರಿ ಎನ್ನುತ್ತಾರೆ. ಹೀಗಾಗಿ ಶಂಕರ್ ಅವರ ಕೃಷಿ ಮತ್ತು ಬದುಕು ‘ಮೇದಿನಿಯೊಂದಿಗೆ ತದಾತ್ಯ’ದಂತೆ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT