4

ಸ್ವರ್ಗದ ತುಣುಕುಗಳು

Published:
Updated:
ಸ್ವರ್ಗದ ತುಣುಕುಗಳು

ಬೆಟ್ಟಗಳಿಂದಲೇ ಸುತ್ತುವರಿದ ಆ ಪುಟ್ಟಹಳ್ಳಿ ಪಾತಾಳಗುಡಿಯತ್ತ ಹೋಗುವಾಗ ಸುತ್ತಲೂ ಅದೆಂತಹ ದಟ್ಟಕಾಡು. ಜೀರುಂಡೆಗಳ ಸಂಗೀತ ಕಛೇರಿಯ ಅಬ್ಬರವನ್ನೂ ದಾಟಿಕೊಂಡು ಕಿವಿಗೆ ಇಂಪು ನೀಡುತ್ತಿದ್ದ ನೀರಿನ ಮಂಜುಳ ನಿನಾದ. ಸಂತೆಗೆ ಹೊರಟ ಜನರಂತೆ ತಲೆಯ ಮೇಲೆ ಮೋಡಗಳ ಮೆರವಣಿಗೆ. ಇಂತಹ ಪ್ರಾಕೃತಿಕ ಸೊಬಗಿನ ಕಣಿವೆ ದಾರಿಯಲ್ಲಿ ಹಾದುಹೋಗುವಾಗ ನಾನೊಂದು ಟಿಪ್ಪಣಿ ಮಾಡಿಕೊಂಡೆ: ‘ನಾವೀಗ ಸ್ವರ್ಗದ ಹೊಸ್ತಿಲಲ್ಲಿದ್ದೇವೆ. ಇನ್ನೇನು ಅಲ್ಲಿನ ಜನರನ್ನೂ ಭೇಟಿ ಮಾಡಲಿದ್ದೇವೆ!’

ಮುಗಿಲಿಗೂ ಏರಿಸುವ, ಪಾತಾಳಕ್ಕೂ ಇಳಿಸುವ ಈ ಊರೆಂದರೆ ನನಗೆ ಅದೇನೋ ವಿಶೇಷ ಮೋಹ. ಎಲ್ಲಿಲ್ಲದ ಆದರ.

ಮೂವತ್ತು ವರ್ಷಗಳ ನನ್ನ ಕಾಡಿನ ಯಾತ್ರೆಯಲ್ಲಿ ಇಲ್ಲಿಗೆ ಅದೆಷ್ಟೊಂದು ಸಲ ಬಂದಿದ್ದೇನೋ ಲೆಕ್ಕವಿಲ್ಲ. ಪಾತಾಳಗುಡಿ ಮಾತ್ರವಲ್ಲ; ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲ್ಲೂಕಿನ ಶೇ 60ರಷ್ಟು ಹಳ್ಳಿಗಳು ಇರುವುದು ಇಂತಹದ್ದೇ ಪರಿಸರದಲ್ಲಿ. ಪಕ್ಕದ ಖಾನಾಪುರ ತಾಲ್ಲೂಕಿನ ಹಲವು ಹಳ್ಳಿಗಳು ಕೂಡ ಸಹ್ಯಾದ್ರಿ ಸುರಿಸುವ ಪ್ರೀತಿಯ ಸೋನೆಯಲ್ಲಿ ಮೀಯುವಂತಹ ಅದೃಷ್ಟ ಪಡೆದಿವೆ.

ಕಣಿವೆಯಲ್ಲಿ ಬಳುಕುತ್ತಾ ಸಾಗುವ ಸುಂದರಿ ಕಾಳಿ ನದಿ ಹಾಗೂ ಅವಳ ತಂಗಿಯರಾದ ಪುಟ್ಟ ಪುಟ್ಟ ತೊರೆಗಳಿಂದ ಇಲ್ಲಿನ ಊರುಗಳಿಗೆ ಸ್ವರ್ಗದ ಸ್ವರೂಪವೇ ದಕ್ಕಿದೆ. ಹೌದು, ಈ ಜನವಸತಿ ಪ್ರದೇಶಗಳೆಲ್ಲ ಪಶ್ಚಿಮಘಟ್ಟದ ಮುದ್ದಿನ ಶಿಶುಗಳಾಗಿವೆ. ಥೇಟ್‌ ಅಮ್ಮನಂತೆ ಈ ಶಿಶುಗಳ ಬೇಕು–ಬೇಡುಗಳನ್ನೆಲ್ಲ ಅಕ್ಕರೆಯಿಂದ ನೋಡಿಕೊಳ್ಳುತ್ತದೆ ಘಟ್ಟ. ಅಷ್ಟೇ ಅಲ್ಲ; ಅಲ್ಲಿನ ಜೀವರಾಶಿಗೆ ಅಮೃತವನ್ನೇ ಹೆಕ್ಕಿ ಉಣಬಡಿಸುತ್ತದೆ. ಅಲ್ಲವೆ ಮತ್ತೆ, ಪಾತಾಳಗುಡಿ (ಊರಿನ ಹೆಸರೇ ಎಷ್ಟೊಂದು ಸುಂದರ), ಡೇರಿಯಾ, ಸಡಾ, ಸುಲಾವಳಿ, ಅಮರಗಾಂವ್‌ ಮೊದಲಾದ ಹಳ್ಳಿಗಳ ಜನ ಅದೆಷ್ಟೊಂದು ಸುದೈವಿಗಳು. ಅಂದಹಾಗೆ ಈ ಪರಿಸರ ಕಾಳಿ ನಾಗರಿಕತೆಯ ತಾಣವೂ ಹೌದು!

ಕಾಡಿನ ಈ ಬದುಕಿನಲ್ಲಿ ಆತುರಕ್ಕೆ ಆಸ್ಪದವಿಲ್ಲ. ಗಡಿಯಾರದ ಮುಳ್ಳು ಸಹ ಇಲ್ಲಿ ಸಾವಧಾನದ ಮಂತ್ರ ಪಠಿಸುತ್ತದೆ. ಗಂಟೆಗೆ ನೂರಾರು ಕಿ.ಮೀ. ವೇಗದಲ್ಲಿ ಓಡುವ ಫೆರಾರಿ ಕಾರನ್ನೇ ನೀವು ತೆಗೆದುಕೊಂಡು ಬಂದರೂ ಈ ಹಳ್ಳಿಗಳ ಕಾಡು ಹಾದಿಗೆ ಅದನ್ನು ಸಾವಧಾನದಿಂದ ಸಾಗುವಂತೆ ಪಳಗಿಸುವ ಕಲೆ ಗೊತ್ತು. ಅಂತಹ ನಿಧಾನ ಜೀವನಶೈಲಿಗೆ ಒಗ್ಗಿಕೊಂಡಿರುವ ಇಲ್ಲಿನ ಬಹುತೇಕ ಅರಣ್ಯವಾಸಿಗಳು ಕುಣಬಿ ಸಮುದಾಯದಕ್ಕೆ ಸೇರಿದವರು. ಅಲ್ಲಲ್ಲಿ ಮರಾಠಾ, ಗವಳಿ, ಹಾಲಕ್ಕಿ ಸಮುದಾಯಗಳ ಜನರೂ ಸಿಗುತ್ತಾರೆ.

ಕಾಡಿನಲ್ಲಿ ಅಲೆಯುತ್ತಲೇ ಕಾಲ ಕಳೆಯುವ ಈ ಜನರಿಗೆ, ಅಲ್ಲಿ ಸಿಗುವ ಉತ್ಪನ್ನಗಳ ಜತೆಗೆ, ಲಭ್ಯವಿರುವ ತುಂಡು ಭೂಮಿಯಲ್ಲಿ ನಡೆಸುವ ಕೃಷಿಯೇ ಜೀವನಾಧಾರ. ಪ್ರಕೃತಿ ಮಾತೆ ಪ್ರೀತಿಯಿಂದ ಮೊಗೆದು ಕೊಟ್ಟಿದ್ದರಲ್ಲೇ ಅವರಿಗೆ ಸಂತೃಪ್ತಿ. ಇನ್ನಷ್ಟು–ಮತ್ತಷ್ಟು ಗಳಿಸಬೇಕೆಂಬ ಹಪಾಹಪಿಯಿಲ್ಲ. ನಿತ್ಯದ ಬಹುಪಾಲು ಬದುಕಿಗೆ ಹಣವನ್ನು ಆಶ್ರಯಿಸಿಲ್ಲ. ಮತ್ತೊಬ್ಬರ ತುತ್ತು ಕಸಿಯುವ ದುರಾಸೆಯಿಲ್ಲ. ಕೊಳ್ಳುಬಾಕತನದ ಗಾಳಿಯಂತೂ ಇತ್ತ ಸುಳಿದೇ ಇಲ್ಲ.

ಬೇರೆಯವರ ಐಷಾರಾಮಿ ಬದುಕಿನ ಸರಕುಗಳು, ಥರಾವರಿ ಬಟ್ಟೆಗಳು, ಸೌಂದರ್ಯ ಸಾಧನಗಳು, ಫ್ಯಾಷನ್‌ ಗಮ್ಮತ್ತುಗಳು ಇವರ ಮೇಲೆ ಯಾವ ಪ್ರಭಾವವನ್ನೂ ಬೀರಿಲ್ಲ. ಪರರನ್ನು ಅನುಕರಣೆ ಮಾಡುವ ಗೋಜಿಗೆ ಇಲ್ಲಿನ ಜನ ಹೋಗುವುದಿಲ್ಲ.

ಅವುಗಳೆಲ್ಲ ನಮಗೇಕೆ ಎನ್ನುವಂತಹ ನಿರ್ಲಿಪ್ತಭಾವ. ಬದುಕನ್ನು ಬಂದಂತೆ ಸ್ವೀಕರಿಸುವುದು, ಕಾಡು ಪ್ರೀತಿಯಿಂದ ಕೊಟ್ಟಿದ್ದನ್ನು, ಹೊಲದಲ್ಲಿ ಬೆಳೆದಿದ್ದನ್ನು ಆನಂದದಿಂದ ತಿನ್ನುವುದು, ಕಾಳಿ ನದಿಯ ನೀರನ್ನು ತೀರ್ಥವೆಂದು ಭಾವಿಸಿ ಆನಂದದಿಂದ ಕುಡಿಯುವುದು, ಹಾಯಾಗಿ ಕಾಲ ಕಳೆಯುವುದು –ಇಷ್ಟೇ ಅವರಿಗೆ ಗೊತ್ತಿರುವುದು. ಸಂತಸ ಎಂಬ ಪದಕ್ಕೆ ಹೊಸ ಪರಿಭಾಷ್ಯೆಯನ್ನೇ ಬರೆದುಬಿಟ್ಟಿದ್ದಾರಲ್ಲ ಇಲ್ಲಿನ ಜನ!

ಎಷ್ಟೋ ಹಳ್ಳಿಗಳಿಗೆ ಇತ್ತೀಚಿನ ವರೆಗೆ ರಸ್ತೆಗಳೇ ಇರಲಿಲ್ಲ. ಏನಿದ್ದರೂ ಕಾಲು ಹಾದಿಯಲ್ಲೇ ಸಾಗಬೇಕಿತ್ತು. ಆದರೆ, ಈಗೀಗ ಈ ಊರುಗಳಿಗೆ ಗಾಡಿಗಳು ಹೋಗಿಬರುವಷ್ಟು ಸಣ್ಣ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಅಷ್ಟರಮಟ್ಟಿಗೆ ಇಲ್ಲಿನ ಜನ ಹೊರಜಗತ್ತಿಗೆ ತೆರೆದುಕೊಂಡಿ ದ್ದಾರೆ. ಊರಿನ ಹತ್ತಿರದಲ್ಲೆಲ್ಲೋ ಹರಿಯುವ ತೊರೆಗಳಿಂದ ಅವರು ನೀರಿನ ಸೌಲಭ್ಯವನ್ನು ಮಾಡಿಕೊಂಡಿದ್ದಾರೆ. ನಗರ ಪ್ರದೇಶದಲ್ಲಿ ಎಷ್ಟು ಬಾರಿ ಸಂಸ್ಕರಣೆ ಮಾಡಿಕೊಟ್ಟರೆ ಇಷ್ಟೊಂದು ಪರಿಶುದ್ಧ ಜಲ ಸಿಕ್ಕೀತು. ನಿತ್ಯಹರಿದ್ವರ್ಣ ವನದ ಈ ಮಾಲಿನ್ಯಮುಕ್ತ ತಂಗಾಳಿಯನ್ನು ಸದಾ ಸೇವಿಸಲು ನಿಜಕ್ಕೂ ಇಲ್ಲಿನ ಜನ ಪುಣ್ಯವನ್ನೇ ಮಾಡಿರಬೇಕು ಬಿಡಿ.

ಜಡಿಮಳೆಗೆ ಜಗ್ಗದಂತಹ ನಾಡಹೆಂಚಿನ ಮನೆಗಳು. ಮೊದಮೊದಲು ವಿದ್ಯುತ್‌ನ ಸುಳಿವೇ ಈ ಊರುಗಳಲ್ಲಿ ಇರಲಿಲ್ಲ. ಕೆಲವು ಸ್ವಯಂಸೇವಾ ಸಂಸ್ಥೆಗಳ ಪರಿಶ್ರಮದಿಂದ ಈಗ ಪ್ರತಿಯೊಂದು ಮನೆಯ ಮೇಲೂ ಸೋಲಾರ್‌ ಪ್ಯಾನಲ್‌ಗಳು ಬಂದು ಕುಳಿತಿವೆ. ಈ ಹಳ್ಳಿಗಳ ಪ್ರತಿಮನೆಯೂ ತನಗೆ ಬೇಕಾದ ವಿದ್ಯುತ್ತನ್ನು ತಾನೇ ಉತ್ಪಾದಿಸಿಕೊಳ್ಳುತ್ತದೆ. ಕುಣಬಿ ಸಮುದಾಯದ ಯುವಕರು ಗೋವಾಕ್ಕೂ ದುಡಿಯಲು ಹೋಗುವುದಿದೆ.

ಕೆಲವರ ಬಳಿ ಮೊಬೈಲ್‌ಗಳು ಇವೆಯಾದರೂ ಅವುಗಳು ಸದ್ದು ಮಾಡುವುದು ತೀರಾ ಅಪರೂಪ. ಏಕೆಂದರೆ, ದಟ್ಟಕಾಡಿನ ಈ ಪ್ರದೇಶದಲ್ಲಿ ಸಿಗ್ನಲ್‌ ಸಿಗುವುದೇ ಕಷ್ಟ. ದೂರದಲ್ಲಿರುವ ಬೇಕಾದವರನ್ನು ಸಂಪರ್ಕಿಸಲು ದಿನಗಟ್ಟಲೆ ಸಾಧ್ಯವಾಗದಿದ್ದರೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ‘ಛೇ ಸಿಗ್ನಲ್‌ ಸರಿಯಾಗಿ ಸಿಗುತ್ತಿಲ್ಲ’ ಎಂದು ಬೇಸರಿಸಿಕೊಳ್ಳುವುದಿಲ್ಲ. ಹತ್ತಾರು ಕಿ.ಮೀ. ದೂರದ ಹತ್ತಿರದ ಹಳ್ಳಿಗೆ ಇಲ್ಲವೆ ತಾಲ್ಲೂಕು ಕೇಂದ್ರ ಜೋಯಿಡಾಕ್ಕೆ ನಡೆದುಕೊಂಡೇ ಹೋಗಿ ಬರುತ್ತಾರೆ.

ಕೆಲವರ ಮನೆಗಳಲ್ಲಿ ಟಿ.ವಿ ಬಂದಿದ್ದರೂ ಸಂಜೆಯ ಹೊತ್ತಿನ ಸಮೂಹ ಗಾನ, ಭಜನೆ, ನೃತ್ಯ –ಇವೇ ಅವರ ಮುಖ್ಯ ಮನರಂಜನೆಯ ಮಾರ್ಗಗಳು. ಪಶ್ಚಿಮಘಟ್ಟದ ಕಾಡಿಗೂ ಇವರ ಬದುಕಿಗೂ ಗಾಢ ಸಂಬಂಧ. ಈ ಕಾಡಿನ ಮಕ್ಕಳಲ್ಲಿ ಶಿಸ್ತಿನ ಜೀವನಕ್ಕಾಗಿ ಹಲವು ಕಟ್ಟುಪಾಡುಗಳಿವೆ. ಪ್ರಕೃತಿ ಮಾತೆಯ ರಕ್ಷಣೆಗಾಗಿ ಅವರು ಸದಾ ಕಟಿಬದ್ಧ. ಕಾಡುಪೂಜೆಗೆ ಇನ್ನಿಲ್ಲದ ಮಹತ್ವ. ಗಿಡ–ಮರ, ಕಲ್ಲು, ಹುತ್ತ ಏನೇ ಕಂಡರೂ ಈ ಜನ ಪೂಜೆ ಮಾಡುತ್ತಾರೆ. ಸಾಂಸ್ಕೃತಿಕ ಸಿರಿವಂತಿಕೆ ಇಲ್ಲಿ ಮಡುವುಗಟ್ಟಿದೆ. ದೇವರುಗಳಿಗೆ ಇರುವಷ್ಟೇ ದೆವ್ವಗಳಿಗೂ ಪ್ರಾಶಸ್ತ್ಯ. ನಂಬಿಕೆಗೂ ಮೂಢನಂಬಿಕೆಗೂ ಕೂದಲೆಳೆಯಷ್ಟೇ ಅಂತರ.

ಕಾಡಿನ ರಕ್ಷಣೆಗೆ ಅನುವು ಮಾಡಿಕೊಡುವುದಾದರೆ ಇಲ್ಲಿನ ದೆವ್ವಗಳಿಗೆ ಏಕೆ ತಕರಾರು ತೆಗೆಯೋದು ಬಿಡಿ. ಊರಿನ ಹಿರಿಯನಿಗೆ ಎಲ್ಲಿಲ್ಲದ ಮರ್ಯಾದೆ. ಸಾಮಾನ್ಯವಾಗಿ ಆತ ಹಾಕಿದ ಗೆರೆಯನ್ನು ಯಾರೂ ದಾಟುವುದಿಲ್ಲ. ಇಲ್ಲಿನ ಹಳ್ಳಿಗಳಲ್ಲಿ ಅಪರಾಧ ಚಟುವಟಿಕೆಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸಣ್ಣ–ಪುಟ್ಟ ವ್ಯಾಜ್ಯಗಳು ಉಂಟಾದರೂ ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳಲಾಗುತ್ತದೆ. ಈ ಹಳ್ಳಿಗಳಲ್ಲಿ ಸಾಲಗಾರರಿಲ್ಲ. ಅಂತೆಯೇ ಜೀವವಿಮೆ ಕುರಿತು ಇಲ್ಲಿನವರಿಗೆ ತಿಳಿದಿಲ್ಲ. ಬ್ಯಾಂಕ್‌ನ ಅಗತ್ಯ ಕಾಡಿಲ್ಲ. ಕೆಲವು ಹಳ್ಳಿಗಳಲ್ಲಿ ಏಕೋಪಾಧ್ಯಾಯ ಶಾಲೆಗಳಿವೆ.

ಆಸ್ಪತ್ರೆಗಳು ಇಲ್ಲದಿದ್ದರೂ ಸ್ವಯಂಸೇವಾ ಸಂಸ್ಥೆಗಳ ನೆರವಿನಿಂದ ಮೊಬೈಲ್‌ ಆಸ್ಪತ್ರೆ ಘಟಕವೊಂದು ಊರೂರು ಸುತ್ತುತ್ತದೆ. ಆದರೆ, ಔಷಧಿಗಳ ಕೊರತೆ ಕಾಡುತ್ತಿದೆ. ಮಳೆಗಾಲದಲ್ಲಿ ‘ಧೋ’ ಎಂದು ಬಿಟ್ಟೂಬಿಡದೆ ಸುರಿಯುವ ಮಳೆಗೆ ಈ ಹಳ್ಳಿಗರು –ನೈಸರ್ಗಿಕವಾಗಿ ಅವರಲ್ಲಿ ರೋಗನಿರೋಧಕ ಶಕ್ತಿ ಬೆಳೆದಿದ್ದರೂ– ಕಾಯಿಲೆ ಬೀಳುವುದಿದೆ. ಅವರ ಸಂತೃಪ್ತ ಜೀವನಕ್ಕೆ ನೆರವಾಗುವ ನಿಟ್ಟಿನಲ್ಲಿ ಔಷಧಿಗಳ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ನೆರವಾಗಲು ಮನಸ್ಸು ಮಾಡಬಾರದೇಕೇ?

ಮಾನವ–ಪ್ರಾಣಿ ಸಂಘರ್ಷದ ಸಮಸ್ಯೆ ಇಲ್ಲಿಯೂ ಇದೆ. ಪ್ರಾಣಿಗಳು ಸಹ ನಮ್ಮಂತೆಯೇ ಕಾಡಿನ ಮಕ್ಕಳು ಎಂದೆನ್ನುವ ಹಳ್ಳಿಗರಲ್ಲಿ, ಬೆಳೆಹಾನಿ ಮಾಡಿದ, ಪ್ರಾಣಕ್ಕೆ ಎರವಾದ ಕಾಡುಜೀವಗಳ ಮೇಲೆ ಸಿಟ್ಟಿಲ್ಲ. ಇಂತಹ ಸಹಿಷ್ಣುಗಳಿಗೆ ಹಾನಿ ಅನುಭವಿಸಿದ ತಕ್ಷಣವೇ ಸೂಕ್ತ ಪರಿಹಾರ ನೀಡುವಂತಹ ವ್ಯವಸ್ಥೆ ಆಗಬೇಕಿದೆ.

ಗೊತ್ತೆ? ಚಿನ್ನದ ಹಾಳೆಯನ್ನು ತಂದು ಮೇಲೆ ಹರಡಿದಂತೆ ಇಲ್ಲಿನ ಕಣಿವೆ ಗ್ರಾಮಗಳು ಬೆಳ್ಳಂಬೆಳಿಗ್ಗೆ ಹೊಂಬಣ್ಣದಿಂದ ಹೊಳೆಯುತ್ತವೆ. ಸೂರ್ಯ ಉದಯಿಸುವಾಗ ಸುತ್ತಲಿನ ಬೆಟ್ಟಗಳ ಮಧ್ಯೆ ಮಂದ ಬೆಳಕು ಹರಡಿರುತ್ತದೆ; ತೆಳುವಾದ ಪರದೆಯ ಹಿಂದೆ ಲಾಂದ್ರ ಹಚ್ಚಿಟ್ಟಂತೆ! ಭೂತಾನ್‌ನ ಹಳ್ಳಿಗಳ ತದ್ರೂಪವೇ ಪಶ್ಚಿಮಘಟ್ಟದ ಈ ಶಿಶುಗಳು. ಹಿಮಾಲಯದ ತಪ್ಪಲಿನ ಆ ದೇಶವನ್ನು ‘ಏಷ್ಯಾದ ಸ್ವಿಟ್ಸರ್ಲೆಂಡ್‌’ ಎಂದು ಕರೆದಂತೆ, ಜೋಯಿಡಾದ ಈ ಊರುಗಳನ್ನು ‘ಕರ್ನಾಟಕದ ಸ್ವಿಟ್ಸರ್ಲೆಂಡ್‌’ ಎಂದು ಹೇಳಲಡ್ಡಿಯಿಲ್ಲ. ಮಳೆಗಾಲದಲ್ಲಿ ನೀವು ಇಲ್ಲಿಗೆ ಬಂದರೆ ಹಾದಿ–ಬೀದಿಗೊಂದು ಜಲಪಾತಗಳು ಕಾಣಸಿಗುತ್ತವೆ. ಅದೆಂತಹ ಆಹ್ಲಾದಕರ ವಾತಾವರಣ.

ಗೋವಾದ ಲೆಕ್ಕವಿಲ್ಲದಷ್ಟು ಜನ ತಮ್ಮಲ್ಲಿನ ಕಣ್ಣಿಗೆ ಕುಕ್ಕುವಂತಹ ಐಷಾರಾಮಿ ಬದುಕನ್ನು ಬದಿಗಿಟ್ಟು, ಈ ಸ್ವರ್ಗದ ತುಣುಕುಗಳನ್ನು ಹುಡುಕಿಕೊಂಡು ಬರುವುದು ವಾಡಿಕೆ. ಬೀಚುಗಳ ತಳುಕು–ಬಳುಕಿನ ಲೋಕವೂ ನೀಡದ ನೆಮ್ಮದಿಯನ್ನು ಇಲ್ಲಿನ ಪ್ರಶಾಂತ ವಾತಾವರಣ ಕೊಡುತ್ತದೆ ಎನ್ನುವುದು ಅವರ ಬಲವಾದ ನಂಬಿಕೆ. ಅಂದಹಾಗೆ, ಕುಣಬಿ ಸಮುದಾಯದ ಕಾಡು ಕೃಷಿಯ ಉತ್ಪನ್ನಗಳೆಂದರೆ ಗೋವನ್ನರು ಪ್ರಾಣಬಿಡುತ್ತಾರೆ. ತಮ್ಮ ರಾಜ್ಯದ ಗಡಿಯಲ್ಲೇ ಇರುವ ಇಲ್ಲಿನ ಊರುಗಳಿಗೆ ಪಣಜಿಯಿಂದ ನೂರಾರು ಮಂದಿ ಹಣ್ಣು–ತರಕಾರಿ ಖರೀದಿಗೆಂದು ಬರುತ್ತಾರೆ.

ಮನಸ್ಸನ್ನು ಪ್ರಫುಲ್ಲಗೊಳಿಸುವ ತಾಣಗಳು ಇವುಗಳು ಎಂಬುದನ್ನು ನೀವೂ ಒಪ್ಪುತ್ತೀರಲ್ಲವೆ? ಪಶ್ಚಿಮ ಘಟ್ಟದ ಈ ಹಳ್ಳಿಗಳು ನಿಜಕ್ಕೂ ಸ್ವರ್ಗದ ತೊಟ್ಟಿಲುಗಳೇ. ಬೇರೆ ಜಗತ್ತಿನ ಅರಿವಿಲ್ಲದೆ ತೊಟ್ಟಿಲುಗಳಲ್ಲಿ ಪವಡಿಸುವ ಕಂದಮ್ಮಗಳಂತೆ ಇಲ್ಲಿನ ಹಳ್ಳಿಗರು. ಅವರೊಡನೆ ಒಡನಾಡಿದಾಗ ನಮ್ಮ ಎಷ್ಟೋ ಬೇಡಿಕೆಗಳು ಮಾಯವಾಗುತ್ತವೆ. ‘ಇರುವ ಭಾಗ್ಯವ ನೆನೆದು, ಬಾರೆನೆಂಬುದನ್ನು ಬಿಡು. ಹರುಷಕ್ಕಿದೆ ದಾರಿ’ ಎಂದು ಮನ ಹೇಳಿಕೊಳ್ಳುವಾಗ ಸಂತೃಪ್ತ ಭಾವದ ಹೊಸ ಹಾದಿಯೊಂದು ತೆರೆದುಕೊಳ್ಳುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry