ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನೆಚ್ಚರಿಕೆ ವಹಿಸಿ, ಕಾಯಿಲೆ ಬರುವುದನ್ನು ತಡೆಯಿರಿ

Last Updated 19 ಮಾರ್ಚ್ 2018, 9:43 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಜಲಮೂಲಗಳ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯಿತಿಗಳು ಸ್ವಚ್ಛತೆ ಕಾಯ್ದುಕೊಂಡು ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ತಿಳಿಸಿದ್ದಾರೆ.

ಮನೆಗಳ ಪರಿಸರದಲ್ಲಿ ನೈರ್ಮಲ್ಯ ಕಾಪಾಡಬೇಕು. ಜಲಮೂಲಗಳ ಸಮೀಪ ಇರುವ ತಿಪ್ಪೆ ಗುಂಡಿಗಳನ್ನು ಸ್ಥಳಾಂತರಿಸಬೇಕು. ಸಾರ್ವಜನಿಕರು ಮನೆಯ ಹೊರಗಡೆ ಸೇವನೆ ಮಾಡುವ ಆಹಾರ ಮತ್ತು ಪಾನೀಯಗಳ ಗುಣಮಟ್ಟ ಹಾಗೂ ತಯಾರು ಮಾಡುವ ಪರಿಸರದ ಕಡೆ ಗಮನ ಹರಿಸಬೇಕು. ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತೆರೆದಿಟ್ಟ ತಿಂಡಿ ತಿನಿಸು ಹಾಗೂ ಕತ್ತರಿಸಿದ ಹಣ್ಣು ಹಂಪಲು ಸೇವಿಸಬಾರದು ಎಂದು ಹೇಳಿದ್ದಾರೆ.

ನೀರು ಪೂರೈಕೆಯಾಗುವ ಪೈಪ್‌ನಲ್ಲಿ ಸೋರಿಕೆ ಕಂಡು ಬಂದರೆ ತಕ್ಷಣ ದುರಸ್ತಿ ಮಾಡಬೇಕು. ಕೊಳವೆಬಾವಿ, ಸಾರ್ವಜನಿಕ ನಲ್ಲಿ ಹಾಗೂ ಬಾವಿಗಳ ಸುತ್ತಮುತ್ತ ದನ, ಕರು, ಪಾತ್ರೆ, ಬಟ್ಟೆ ತೊಳೆಯದಂತೆ ನೋಡಿಕೊಳ್ಳಬೇಕು. ಕಲುಷಿತ ನೀರು ಬಾವಿಗಳಿಗೆ ಸೇರದಂತೆ ಎಚ್ಚರ ವಹಿಸಬೇಕು. ಬಾವಿ, ಮೇಲ್ಮಟ್ಟದ ಟ್ಯಾಂಕ್, ಕಿರು ನೀರು ಪೂರೈಕೆ ಟ್ಯಾಂಕ್‌ಗಳಿಗೆ ಬ್ಲೀಚಿಂಗ್ ಪೌಡರ್‌ ಹಾಕಿ ನೀರು ಶುದ್ಧೀಕರಿಸಬೇಕು ಎಂದು ತಿಳಿಸಿದ್ದಾರೆ.

ನೀರಿನ ಸಂಗ್ರಹಗಾರದ ಮೇಲ್ಮಟ್ಟದ ತೊಟ್ಟಿ, ಮಿನಿ ವಾಟರ್ ತೊಟ್ಟಿಗಳನ್ನು ಕಡ್ಡಾಯವಾಗಿ ಪ್ರತಿ ವಾರ ಸ್ವಚ್ಛಗೊಳಿಸಬೇಕು. ಬಾವಿ, ಕೊಳವೆಬಾವಿ, ಕೈಪಂಪುಗಳು ಇರುವ ಸ್ಥಳದಿಂದ 100 ಅಡಿ ಸುತ್ತ ಕಸ-ಕಡ್ಡಿ ಎಸೆಯುವುದನ್ನು ನಿಷೇಧಿಸಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಸಂಪರ್ಕದಲ್ಲಿ ಸಮರ್ಪಕ ಮಾಹಿತಿ ವಿನಿಮಯ ಮಾಡಿಕೊಂಡು ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಬೇಸಿಗೆಯಲ್ಲಿ ವಹಿಸ ಬೇಕಾದ ಕ್ರಮಗಳು: ಸಡಿಲವಾದ ತೆಳುವಾದ ಬಟ್ಟೆ ಧರಿಸಬೇಕು. ಹೊರಗಡೆ ಹೋಗುವಾಗ ಕೊಡೆಯನ್ನು ಬಳಸಬೇಕು. ಹೆಚ್ಚಿಗೆ ಶುದ್ಧ ನೀರು, ಸ್ವಲ್ಪಮಟ್ಟಿಗೆ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಬೇಕು. ಹಣ್ಣಿನ ರಸ, ದ್ರವ ಆಹಾರ ಸೇವಿಸಬೇಕು. ಆದಷ್ಟು ಮಟ್ಟಿಗೆ ಕಾಫಿ, ಟೀ ಸೇವನೆ ನಿಲ್ಲಿಸಲು ಪ್ರಯತ್ನಿಸಬೇಕು. ನುಣುಪಾದ ಕಾಟನ್ ಬಟ್ಟೆಗಳಿಂದ ಬೆವರನ್ನು ಒರೆಸಬೇಕು. ನೀರು, ಮಜ್ಜಿಗೆ, ಎಳನೀರು, ಕಲ್ಲಂಗಡಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು.

ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳ ಬಗೆಗೂ ಎಚ್ಚರಿಕೆ ವಹಿಸಬೇಕು. ಮುನ್ನೆಚ್ಚರಿಕೆ ವಹಿಸುವ ಮೂಲಕ ಕಾಯಿಲೆ ಬರದಂತೆ ನೋಡಿಕೊಳ್ಳಬೇಕು. ವಿವರಗಳಿಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಬಿ.ಶಿವಶಂಕರ ಅವರ ಮೊಬೈಲ್‌ ಸಂಖ್ಯೆ 9449843246 ಗೆ ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT