ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಸರ್ಕಾರಿ ಶಾಲೆಯಲ್ಲಿಯೂ ಶೌಚಾಲಯವಿರಲಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನೂತನ ಅಧ್ಯಕ್ಷ ಎಚ್.ವಿ.ಮಂಜುನಾಥ್ ತಾಕೀತು
Last Updated 19 ಮಾರ್ಚ್ 2018, 10:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯನ್ನು ಬಯಲು ಬರ್ಹಿದೆಸೆ ಮುಕ್ತಗೊಳಿಸಿದ ರೀತಿಯಲ್ಲಿಯೇ ಪ್ರತಿಯೊಂದು ಸರ್ಕಾರಿ ಶಾಲೆಗಳನ್ನು ಒಂದು ವರ್ಷದೊಳಗೆ ಬಯಲು ಬರ್ಹಿದೆಸೆ ಮುಕ್ತಗೊಳ್ಳಬೇಕು. ಈ ಕೆಲಸವನ್ನು ನಾವೆಲ್ಲರೂ ಜತೆಗೂಡಿ ಸಮರೋಪಾದಿಯಲ್ಲಿ ಮಾಡಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷ ಎಚ್.ವಿ.ಮಂಜುನಾಥ್ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಣ್ಣ ರೆಡ್ಡಿ ಅವರಿಂದ ಶಾಲೆಗಳ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದ ಅಧ್ಯಕ್ಷರು ಶೌಚಾಲಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದರು.

ಶಾಲೆಗಳಲ್ಲಿ ಶೌಚಾಲಯಗಳ ಕೊರತೆಯಿಂದ ಹೆಣ್ಣು ಮಕ್ಕಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಕೊನೆ ಹಾಡಬೇಕಿದೆ. ಮುಂದಿನ ಒಂದು ವರ್ಷ ಕಳೆಯುವುದರೊಳಗೆ ಜಿಲ್ಲೆಯ ಪ್ರತಿ ಸರ್ಕಾರಿ ಶಾಲೆಯಲ್ಲಿ ಕಡ್ಡಾಯವಾಗಿ ಶೌಚಾಲಯ ಇರಲೇ ಬೇಕು. ಅದಕ್ಕಾಗಿ ನನಗೆ ಕೂಡಲೇ ಶೌಚಾಲಯಗಳು ಇಲ್ಲದ ಶಾಲೆಗಳ ಪಟ್ಟಿ ಕೊಡಿ ಎಂದು ತಿಳಿಸಿದರು.

ನಾವು ವಿವಿಧ ಕಂಪೆನಿಗಳು, ಸಂಸ್ಥೆಗಳನ್ನು ಸಂಪರ್ಕಿಸಿ ‘ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ’ (ಸಿಎಸ್‌ಆರ್) ನಿಧಿಯಲ್ಲಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಮನವೊಲಿಸುವ ಕೆಲಸ ಮಾಡುತ್ತೇವೆ. ಈ ಕಾರ್ಯವನ್ನು ಪೂರ್ಣಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಇವತ್ತು ರಾಜಕಾರಣಿಗಳ ರಾಜಕೀಯಕ್ಕಿಂತಲೂ ಶಿಕ್ಷಕರ ವಲಯದಲ್ಲಿ ಹೆಚ್ಚಿನ ರಾಜಕೀಯ ತಲೆದೋರಿದೆ. ಶಾಲೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಅನೇಕ ಸಂಸ್ಥೆಗಳು ಮುಂದೆ ಬಂದರೂ ಅನೇಕ ಶಿಕ್ಷಕರು ಅವರಿಗೆ ಸಹಕಾರ ನೀಡುವ ಇಚ್ಛಾಶಕ್ತಿ ತೋರುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲೇ ಅತ್ಯುತ್ತಮ ಶಿಕ್ಷಕರು ನೇಮಕಗೊಳ್ಳುತ್ತಾರೆ. ಸರ್ಕಾರಿ ಉದ್ಯೋಗ ಸಿಗದ ಶಿಕ್ಷಕರು ಖಾಸಗಿ ಶಾಲೆಗಳಿಗೆ ಸೇರಿಕೊಳ್ಳುತ್ತಾರೆ. ಇಷ್ಟಾದರೂ ನಮ್ಮ ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟ ಕಳಪೆಯಾಗುತ್ತಿದೆ ಏಕೆ’ ಎಂದು ಖಾರವಾಗಿ
ಪ್ರಶ್ನಿಸಿದರು.

ಶಾಲೆಗಳಲ್ಲಿರುವ ಅಡುಗೆ ಮನೆಗಳಲ್ಲಿ ಅನಾರೋಗ್ಯಕರ ವಾತಾವರಣ ಕಂಡುಬರುತ್ತದೆ. ಅನೇಕ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಪೇಪರ್‌ನಲ್ಲಿ ಅನ್ನ ಬಡಿಸಿದ ದೃಶ್ಯಗಳನ್ನು ಕಂಡಿರುವೆ. ಇದು ತುಂಬಾ ಗಂಭೀರ ಮತ್ತು ಭಯಾನಕ ವಿಚಾರ. ಇದನ್ನು ಬದಲಾಯಿಸಲೇ ಬೇಕು. ಪ್ರತಿ ಅಡುಗೆ ಕೊಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಏನೆಲ್ಲ ಕಾರ್ಯಗಳು ಬಾಕಿ ಇವೆಯೋ ಅವುಗಳನ್ನೆಲ್ಲ ಆದ್ಯತೆ ಮೇಲೆ ಬಗೆಹರಿಸೋಣ’ ಎಂದು
ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಅವರು ಸಭೆಗೆ ಮಾಹಿತಿ ನೀಡುತ್ತಿದ್ದ ವೇಳೆ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ವರಲಕ್ಷ್ಮೀ ಮತ್ತು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ನಿರ್ಮಲಾ ಅವರು ಫಲಾನುಭವಿಗಳ ಆಯ್ಕೆ ಮತ್ತು ಸವಲತ್ತುಗಳನ್ನು ತಮ್ಮ ಗಮನಕ್ಕೆ ತರದೆ ಅಧಿಕಾರಿಗಳು ತಮಗೆ ತಿಳಿದಂತೆ ಮಾಡುತ್ತಿದ್ದಾರೆ ಎಂದು ಅಸಮಾಧಾನ
ವ್ಯಕ್ತಪಡಿಸಿದರು.

ವರಲಕ್ಷ್ಮೀ, ‘ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಸವಲತ್ತುಗಳನ್ನು ಯಾವ ಫಲಾನುಭವಿಗಳಿಗೆ ನೀಡುತ್ತಾರೆ ಎನ್ನುವುದು ನನ್ನ ಗಮನಕ್ಕೆ ಬಂದಿಲ್ಲ. ಹಿಂದೆ ಕೂಡ ಸಭೆಯಲ್ಲಿ ಈ ವಿಚಾರವಾಗಿ ಮಾತನಾಡಿರುವೆ. ಆದರೂ ಅಧಿಕಾರಿಗಳು ನಮ್ಮ ಗಮನಕ್ಕೆ ತರುತ್ತಿಲ್ಲ. ಟಾರ್ಪಾಲ್‌ಗಳ ಬಗ್ಗೆ ವಿಚಾರಿಸಿದರೆ ಶಾಸಕರ ಹೆಸರು ಹೇಳುತ್ತಾರೆ. ಶಾಸಕರನ್ನು ಕೇಳಿದರೆ ನನ್ನ ಗಮನಕ್ಕೆ ತಂದಿಲ್ಲ ಎನ್ನುತ್ತಾರೆ. ಅಧಿಕಾರಿಗಳು ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಿದ್ದಾರೆ ನಾವು ಏಕೆ ಇರಬೇಕು’ ಎಂದು ಆಕ್ರೋಶಗೊಂಡು ಪ್ರಶ್ನಿಸಿದರು.

ಈ ವೇಳೆ ಅಧ್ಯಕ್ಷರು, ‘ಇನ್ನು ಮುಂದೆ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು ಮತ್ತು ಸಂಸದರು ಸೂಚಿಸುವ ಫಲಾನುಭವಿಗಳ ಆಯ್ಕೆ ಮಾಡಬೇಕು ಮತ್ತು ಸಲವತ್ತುಗಳ ವಿತರಣೆ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲಿಸಬೇಕು’ ಎಂದು ಮಲ್ಲಿಕಾರ್ಜುನ ಅವರಿಗೆ ತಾಕೀತು
ಮಾಡಿದರು.

‘ಎಲೆ ಸುರುಳಿ ಹುಳು ಬಾಧೆಯ ಪರಿಹಾರ ಕ್ರಮಗಳ ಕುರಿತು ರೈತರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ತಕ್ಷಣವೇ ಒಂದು ತಿಳವಳಿಕೆ ಕಾರ್ಯಕ್ರಮ ಆಯೋಜಿಸಿ’ ಮಂಜುನಾಥ್ ಅವರು ರೇಷ್ಮೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ಬೆಸ್ಕಾಂ ಅಧಿಕಾರಿಗಳನ್ನು ಕುರಿತು, ‘ಸದ್ಯ ಪರೀಕ್ಷೆಗಳು ನಡೆಯುತ್ತಿವೆ. ಈ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸಿದರೆ ಪರಿಕ್ಷೆ ಎದುರಿಸುವ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸಬೇಡಿ’ ಎಂದು ಹೇಳಿದರು.

ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ: ಅನುದಾನಗಳು ಸರ್ಕಾರದಿಂದ ಬರುವುದು ಸ್ವಲ್ಪ ವಿಳಂಬವಾಗುತ್ತವೆ. ಬಂದ ತಕ್ಷಣ ತ್ವರಿತಗತಿಯಲ್ಲಿ ಕೆಲಸ ಮಾಡದಿದ್ದರೆ ಮಾರ್ಚ್ ಅಂತ್ಯಕ್ಕೆ ಏನೇನು ‘ಹೊಂದಾಣಿಕೆ’ ನಡೆಯುತ್ತವೆ. ಅವ್ಯವಸ್ಥೆ ಆಗುತ್ತದೆ ಎಂದು ನನಗೆ ಸಂಪೂರ್ಣವಾಗಿ ಗೊತ್ತು.

ಗ್ರಾಮ ಪಂಚಾಯಿತಿಗಳಿಂದ ಬರುವ 14ನೇ ಹಣಕಾಸು ಆಯೋಗದ ಕಾರ್ಯ ಯೋಜನೆ ವರದಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ (ಇಒ) ಕಚೇರಿಯಲ್ಲಿ ತಿಂಗಳುಗಟ್ಟಲೇ ಧೂಳು ತಿನ್ನುತ್ತವೆ. ಅಲ್ಲಿಂದ ಜಿಲ್ಲಾ ಪಂಚಾಯಿತಿಗೆ ಬಂದ ಇಲ್ಲಿ ಕೆಲ ದಿನ ಉಳಿದುಕೊಳ್ಳುತ್ತವೆ. ಇದು ಆಗಬಾರದು. ಇಒಗಳು ಈವರೆಗೆ ಶೇ50 ರಷ್ಟು ಪ್ರಗತಿ
ತೋರಿಸಿದ್ದಾರೆ.

ಉಳಿದ 15 ದಿನಗಳಲ್ಲಿ ಶೇ 50ರಷ್ಟು ಪ್ರಗತಿ ಹೇಗೆ ಮಾಡುತ್ತೀರಿ ನನಗೆ ಗೊತ್ತಿಲ್ಲ. ಅನುದಾನ ವಿಳಂಬ ಎನ್ನುವುದು ಒಂದೇ ಕಾರಣವಲ್ಲ. ಕೆಲ ಪಟ್ಟಭದ್ರ ಹಿತಾಸಕ್ತರು ಇದರ ಹಿಂದೆ ಇರುತ್ತಾರೆ. ತಿಂಗಳಾಂತ್ಯಕ್ಕೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ. ಚುನಾವಣೆ ಮುಗಿದ ಬಳಿಕ ಈವರೆಗೆ ಮಾಡಿರುವ ಬಿಲ್, ಕೆಲಸಗಳ ಬಗ್ಗೆ ಸಂಪೂರ್ಣವಾಗಿ ತಪಾಸಣೆ ಮಾಡುವುದು ಖಚಿತ. ನಮ್ಮ ವೇಗಕ್ಕೆ ಕೆಲಸ ಮಾಡಲು ಆಗದವರು ಮುಂಬರುವ ವರ್ಗಾವಣೆ ಅವಧಿಯಲ್ಲಿ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳಲು ಸ್ವತಂತ್ರರು ಎಂದು ಹೇಳಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕಾರ್ಯ ನಡೆಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗ್ಡೆ, ಉಪ ಕಾರ್ಯದರ್ಶಿ ಸಿ.ಸಿದ್ದರಾಮಯ್ಯ ಉಪಸ್ಥಿತರಿದ್ದರು.
**
ತಜ್ಞರ ಸಮಿತಿ, ಬ್ಯಾಗ್‌ ರಹಿತ ದಿನ
ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 13 ರಿಂದ 28 ಸ್ಥಾನಕ್ಕೆ ಕುಸಿದಿರುವುದು ಗಂಭೀರ ವಿಚಾರ. ಏಕಾಏಕಿ ಇಂತಹ ಫಲಿತಾಂಶ ಬರಲು ಏನು ಕಾರಣ? ಶಿಕ್ಷಕರು ಏನು ಮಾಡುತ್ತಿದ್ದಾರೆ? ಈ ಚಿತ್ರಣ ಬದಲಾಗಬೇಕು.

ಆ ದಿಸೆಯಲ್ಲಿ ದೀರ್ಘಾವಧಿ ಯೋಜನೆ ರೂಪಿಸಬೇಕಾಗಿದೆ. ಅದಕ್ಕಾಗಿ ಮುಂಬರುವ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನವೇ ಶಿಕ್ಷಣ ತಜ್ಞರು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚನೆ ಮಾಡಿ. ಆ ಸಮಿತಿ ನೀಡುವ ವರದಿ ಆಧರಿಸಿ ಮೂರು ವರ್ಷಗಳ ಯೋಜನೆ ರೂಪಿಸಿ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆಯ ಸ್ಥಾನ ಮೊದಲ ಐದು ಸ್ಥಾನದೊಳಗೆ ಇರಬೇಕು.

ವಾರದಲ್ಲಿ ಒಂದು ದಿನ ಮಕ್ಕಳು ಬ್ಯಾಗ್ ರಹಿತವಾಗಿ ಶಾಲೆಗೆ ಮುಕ್ತ ಮನಸ್ಸಿನಿಂದ ಬರುವಂತಾಗಬೇಕು. ಆ ದಿನ ಮಕ್ಕಳು ಗ್ರಂಥಾಲಯದಲ್ಲಿ ಓದುವುದು, ಪಠ್ಯಕ್ಕೆ ಸಂಬಂಧಿತ ವಿಡಿಯೊ ವೀಕ್ಷಿಸುವುದು, ತೋಟಗಾರಿಕೆ, ಕೃಷಿ ಸೇರಿದಂತೆ ಪಠೇತ್ಯರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಮಂಜುನಾಥ್ ಹೇಳಿದರು.
**
ಮೊದಲ ದಿನ 38.8 ಮಿ.ಮೀ ಮಳೆ
‘ಜಿಲ್ಲೆಯಲ್ಲಿ ಶುಕ್ರವಾರ 38.8 ಮಿ.ಮೀ ಸರಾಸರಿ ಮಳೆಯಾಗಿದೆ. ಬಾಗೇಪಲ್ಲಿ 41.2 ಮಿ.ಮೀ, ಚಿಕ್ಕಬಳ್ಳಾಪುರ 30.1 ಚಿಂತಾಣಿ 38.1 ಗೌರಿಬಿದನೂರು 38.5 ಗುಡಿಬಂಡೆ 50.5 ಮತ್ತು ಶಿಡ್ಲಘಟ್ಟ 40.3 ಮಿ. ಮೀ ಮಳೆಯಾಗಿದೆ. ನಗರಗೆರೆ ಹೋಬಳಿಯಲ್ಲಿ 110 ಮಿ.ಮೀ ಮಳೆ ಸುರಿದಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT