7

ಸಚಿವ ಸಂಪುಟದ ನಿರ್ಣಯ ಐತಿಹಾಸಿಕ: ಸಿದ್ದರಾಮ ಸ್ವಾಮೀಜಿ ಹೇಳಿಕೆ

Published:
Updated:
ಸಚಿವ ಸಂಪುಟದ ನಿರ್ಣಯ ಐತಿಹಾಸಿಕ: ಸಿದ್ದರಾಮ ಸ್ವಾಮೀಜಿ ಹೇಳಿಕೆ

ಬೆಳಗಾವಿ: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವುದು ಐತಿಹಾಸಿಕ ನಿರ್ಣಯ ಎಂದು ಇಲ್ಲಿನ ನಾಗನೂರ ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.

‘ಸ್ವತಂತ್ರ ಧರ್ಮವಾಗುವುದರಿಂದ ರಾಜ್ಯದ ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರಾಗುತ್ತಾರೆ. ಇದರಿಂದ ಸಂವಿಧಾನಬದ್ಧವಾದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಇಂತಹ ಐತಿಹಾಸಿಕ ನಿರ್ಣಯ ಕೈಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಲ್ಲ ಸಚಿವರು ಅಭಿನಂದನಾರ್ಹರು’ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‘ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದ ಎಲ್ಲ ಅನುಯಾಯಿಗಳು ಹಾಗೂ ಬಸವಣ್ಣನವರನ್ನು ಗುರು ಎಂದು ಒಪ್ಪುವ, ಬಸವ ತತ್ತ್ವಗಳನ್ನು ಪರಿಪಾಲಿಸುವ ವೀರಶೈವರು ಕೂಡ ಲಿಂಗಾಯತ ಧರ್ಮದ ಒಂದು ಪಂಗಡವಾಗಿ ಮುಂದುವರಿಯುತ್ತಾರೆ. ಅಲ್ಲದೆ, ಅವರೂ ಧಾರ್ಮಿಕ ಅಲ್ಪಂಸಂಖ್ಯಾತರು ಎನಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.

‘ರಾಜ್ಯ ಸರ್ಕಾರ ಕಾನೂನುಬದ್ಧವಾಗಿ ರಚಿಸಿದ ನ್ಯಾ. ನಾಗಮೋಹನದಾಸ್ ನೇತೃತ್ವದ ಸಮಿತಿ ಕೊಟ್ಟ ವರದಿಯ ಶಿಫಾರಸುಗಳನ್ನು ಯಥಾವತ್ತಾಗಿ ಸ್ವೀಕರಿಸಿರುವುದು, ಲಿಂಗಾಯತ ಮತ್ತು ವೀರಶೈವರನ್ನು ಒಂದುಗೂಡಿಸಿರುವುದು ಎಲ್ಲರೂ ಸಂತಸಪಡುವ ವಿಷಯವಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಸಾಮರಸ್ಯಕ್ಕೆ ನಾಂದಿ ಹಾಡಿರುವ ಈ ಐತಿಹಾಸಿಕ ನಿರ್ಣಯವನ್ನು ಯಾರೂ ವಿರೋಧಿಸಬಾರದು. ಸ್ವಾರ್ಥ, ಸಂಕುಚಿತ ಮನೋಭಾವ ಬದಿಗಿಡಬೇಕು. ಎಲ್ಲರಿಗೂ ಲಾಭದಾಯಕವಾಗಿರುವ ಈ ನಿರ್ಧಾರವನ್ನು ಸರ್ವರೂ ಸ್ವಾಗತಿಸಬೇಕು. ಲಿಂಗಾಯತರ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಲಿರುವ ಮಹತ್ವದ ನಿರ್ಣಯವನ್ನು ವಿರೋಧಿಸುವುದು ಸರಿಯಲ್ಲ. ಯಾವುದೇ ಪಕ್ಷ, ಪಂಗಡಕ್ಕೆ ಸೇರಿದವರೂ ವಿರೋಧಿಸದೆ ಸಾಮರಸ್ಯ ಕಾಯ್ದುಕೊಳ್ಳಬೇಕು’ ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry