ಕರಾವಳಿ, ಮಲೆನಾಡಲ್ಲಿ ನಾಳೆಯಿಂದ ಕಾಂಗ್ರೆಸ್ ‘ಜನಾಶೀರ್ವಾದ ಯಾತ್ರೆ’

7

ಕರಾವಳಿ, ಮಲೆನಾಡಲ್ಲಿ ನಾಳೆಯಿಂದ ಕಾಂಗ್ರೆಸ್ ‘ಜನಾಶೀರ್ವಾದ ಯಾತ್ರೆ’

Published:
Updated:
ಕರಾವಳಿ, ಮಲೆನಾಡಲ್ಲಿ ನಾಳೆಯಿಂದ ಕಾಂಗ್ರೆಸ್ ‘ಜನಾಶೀರ್ವಾದ ಯಾತ್ರೆ’

ಮಂಗಳೂರು: ದಕ್ಷಿಣ ಕನ್ನಡ, ಅಷ್ಟ ಮಠಗಳ ಊರು ಉಡುಪಿ, ಅಜ್ಜಿ ಇಂದಿರಾ ಗಾಂಧಿಗೆ ರಾಜಕೀಯ ಮರುಜನ್ಮ ನೀಡಿದ ಚಿಕ್ಕಮಗಳೂರು, ಜೆಡಿಎಸ್ ಗಟ್ಟಿ ನೆಲೆ ಎನ್ನಲಾಗಿರುವ ಹಾಸನ ಜಿಲ್ಲೆಯಲ್ಲಿ ಮಂಗಳವಾರದಿಂದ ಎರಡು ದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಸಂಚರಿಸಲಿದೆ.

ಅಧಿಕಾರದ ಚುಕ್ಕಾಣಿ ಹಿಡಿಯಲು ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ನಿರ್ಣಾಯಕವಾಗಿದೆ. ಕಳೆದ ಬಾರಿ ಕಳೆದುಕೊಂಡಿದ್ದನ್ನು  ಈ ಬಾರಿ ಮರಳಿ ಗಳಿಸುವ ಹುಮ್ಮಸ್ಸಿನಲ್ಲಿ ಬಿಜೆಪಿ, ಗಳಿಸಿದ್ದನ್ನು ಉಳಿಸಿಕೊಳ್ಳುವ ಉತ್ಸಾಹ ಕಾಂಗ್ರೆಸ್ ನಾಯಕರಲ್ಲಿದೆ. ಈ ಭಾಗದ ಕೈ ಮುಖಂಡರು ರಾಹುಲ್ ಚಮತ್ಕಾರದ ನಿರೀಕ್ಷೆಯಲ್ಲಿದ್ದಾರೆ.

ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಈಗಾಗಲೇ ರಾಹುಲ್ ಯಾತ್ರೆಗೆ ಸಿಕ್ಕ ಅಭೂತಪೂರ್ವ ಜನಸ್ಪಂದನೆ ಕಾಂಗ್ರೆಸ್‌ ನಾಯಕರಲ್ಲಿ ಉತ್ಸಾಹ ಹೆಚ್ಚಿಸಿದೆ.

ಎಲ್ಲೆಲ್ಲಿ ಪ್ರವಾಸ?

ಮಂಗಳವಾರ ಬೆಳಿಗ್ಗೆ 11.30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ರಾಹುಲ್ ಗಾಂಧಿ,  ಉಡುಪಿ ಜಿಲ್ಲೆಯ ತೆಂಕ ಎರ್ಮಾಳ್‌ನಲ್ಲಿ ಕಾಂಗ್ರೆಸ್ ಸೇವಾದಳ ತರಬೇತಿ ಕೇಂದ್ರ ಉದ್ಘಾಟಿಸುವರು. ಬಳಿಕ ಪಡುಬಿದ್ರೆ, ಮೂಲ್ಕಿ, ಸುರತ್ಕಲ್‌ನಲ್ಲಿ ಸ್ವಾಗತ ಸ್ವೀಕರಿಸಿ, ಸಂಜೆ 5.20ಕ್ಕೆ ಮಂಗಳೂರಿನ ಜ್ಯೋತಿ ವೃತ್ತದಿಂದ ಮೆರವಣಿಗೆಯಲ್ಲಿ ಸಾಗುವರು. ನಂತರ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ರೊಜಾರಿಯೋ ಚರ್ಚ್ ಮತ್ತು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ.

ಬುಧವಾರ ಬೆಳಿಗ್ಗೆ ಬ್ಲಾಕ್ ಕಾಂಗ್ರೆಸ್ ಸಭೆ, ಹಿರಿಯ ನಾಯಕರ ಸಭೆ ನಡೆಸಿ, ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಜಗದ್ಗುರು ಭಾರತಿ ತೀರ್ಥ ಸ್ವಾಮೀಜಿ ಜತೆ ಚರ್ಚೆ ನಡೆಸಲಿರುವ ರಾಹುಲ್, ರಾಜೀವ್ ಗಾಂಧಿ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವರು. ಬ್ಲಾಕ್ ಕಾಂಗ್ರೆಸ್ ಕಟ್ಟಡ ಉದ್ಘಾಟಿಸಿ, ಚಿಕ್ಕಮಗಳೂರಿಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ನಂತರ ಬೇಲೂರಿಗೆ ತೆರಳಲಿದ್ದಾರೆ. ಸಂಜೆ 6 ಗಂಟೆಗೆ ಹಾಸನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮೈಸೂರು ವಿಮಾನ ನಿಲ್ದಾಣ ಮೂಲಕ ದೆಹಲಿಗೆ ಮರಳಲಿದ್ದಾರೆ.

ಅಜ್ಜಿ, ಅಪ್ಪ ನಂಬಿಕೆಯ ತಾಣಕ್ಕೆ ರಾಹುಲ್!

‘40 ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಗೆಲುವು ಸಾಧಿಸುವುದರೊಂದಿಗೆ ಕಾಂಗ್ರೆಸ್ ಪಕ್ಷ ಪ್ರಬಲ ಪಕ್ಷವಾಗಿ ಹೊರಹೊಮ್ಮಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆಯೊಂದಿಗೆ ಪಕ್ಷ ಮತ್ತೆ ಇದೇ ರೀತಿ ಮೇಲೆದ್ದು ಬರುವ ನಂಬಿಕೆ ನನಗಿದೆ’ ಎಂದು ಸೋನಿಯಾ ಗಾಂಧಿ ಎಐಸಿಸಿ ಅಧಿವೇಶನದಲ್ಲಿ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದರು. ಕಾಕತಾಳೀಯವೆಂದರೆ, ತಮ್ಮ ಅಜ್ಜಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರದಲ್ಲೇ ರಾಹುಲ್ ಚುನಾವಣಾ ಕಹಳೆ ಊದಲಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೂ ಶೃಂಗೇರಿ ಪೀಠದೊಂದಿಗೆ ಇದ್ದ ನಂಟು ಅರಿತಿರುವ ರಾಹುಲ್, ಸುಮಾರು ಎರಡು ತಾಸು ಮಠದಲ್ಲಿ ಕಳೆಯಲಿದ್ದಾರೆ. ರಾಜೀವ್ ಗಾಂಧಿ ಕೂಡ ಹಲವು ಬಾರಿ ಶೃಂಗೇರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದರು.

ಉಡುಪಿ  ಕೃಷ್ಣ ಮಠಕ್ಕೆ ರಾಹುಲ್  ಭೇಟಿ ನೀಡುವ ವಿಷಯ ಪ್ರವಾಸ ಪಟ್ಟಿಯಲ್ಲಿ ಇಲ್ಲ. ಆದರೆ, ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ 12.45ರ ಅವಧಿಯನ್ನು ಮೀಸಲಿಡಲಾಗಿದ್ದು, ಈ ವೇಳೆ ಭೇಟಿ ಕೊಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry