ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯರ್ಥ ಕಸರತ್ತು: ಕುಮಾರಸ್ವಾಮಿ

7

ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯರ್ಥ ಕಸರತ್ತು: ಕುಮಾರಸ್ವಾಮಿ

Published:
Updated:
ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯರ್ಥ ಕಸರತ್ತು: ಕುಮಾರಸ್ವಾಮಿ

ಚಿಕ್ಕಮಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ರಹಸ್ಯ ಕಾರ್ಯಸೂಚಿ (ಹಿಡನ್‌ ಅಜೆಂಡಾ) ಮೂಲಕ ಸಮಸ್ಯೆಗಳನ್ನು ಹುಟ್ಟು ಹಾಕಿದ್ದಾರೆ. ಚುನಾವಣೆಯಲ್ಲಿ ಸಾಧನೆ ಮಾಡುತ್ತೇನೆಂಬ ಅವರ ಭ್ರಮೆ ವ್ಯರ್ಥ ಕಸರತ್ತು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರದ ಜವಾಬ್ದಾರಿ ಸಮಾಜವನ್ನು ಒಂದುಗೂಡಿಸುವುದು, ಒಡೆಯುವುದಲ್ಲ. ಧರ್ಮದ ವಿಷಯಗಳ ತೀರ್ಮಾನವನ್ನು ಧರ್ಮಾಧಿಕಾರಿಗಳಿಗೆ ಬಿಡಬೇಕು. ಸರ್ಕಾರ ತಜ್ಞರ ಸಮಿತಿ ರಚಿಸಿ, ಸಮಿತಿಯಿಂದ ವರದಿ ಪಡೆದು ತೀರ್ಮಾನ ಕೈಗೊಂಡಿದೆ. ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ವಿಚಾರಕ್ಕೆ ಸಂಬಂಧಿಸಿದಂತೆ ಪರ–ವಿರೋಧದ ಘರ್ಷಣೆ ಈಗ ಆರಂಭವಾಗಿದೆ. ಅದರ ಫಲಾಫಲವನ್ನು ಮುಖ್ಯಮಂತ್ರಿಯವರೇ ಅನುಭವಿಸಬೇಕು’ ಎಂದು ಹೇಳಿದರು.

‘ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಸಂಭಾಷಣೆ ವೈರಲ್‌ ಆಗಿದೆ. ‘ರಾಜೀನಾಮೆ ಅಂಗೀಕರಿಸಲು ಸೂಚನೆ ನೀಡಿದ್ದೇನೆ, ತಕ್ಷಣ ರಾಜೀನಾಮೆ ನೀಡಿ ಹೊಳೆನರಸೀಪುರ ಕ್ಷೇತ್ರದಲ್ಲಿ ಕಣಕ್ಕಿಳಿ’ ಎಂದು ಮುಖ್ಯಮಂತ್ರಿ ಹೇಳಿರುವುದು ಅದರಲ್ಲಿದೆ. ಭ್ರಷ್ಟ ಅಧಿಕಾರಿ ಮಂಜೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ಹಲವಾರು ಕೇಸುಗಳೂ ಇವೆ. ಕಾನೂನುಬಾಹಿರ ಚಟುವಟಿಕೆ ಮಾಡುವವರಿಗೆ ರಕ್ಷಣೆ ನೀಡುವುದಕ್ಕೆ ಸಿದ್ದರಾಮಯ್ಯ ಇರುವುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ’ ಎಂದು ಕುಟುಕಿದರು.

‘ಸಿದ್ದರಾಮಯ್ಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ದೇವೇಗೌಡರ ಮಕ್ಕಳನ್ನು ಸೋಲಿಸಲೇಬೇಕು ಎಂದು ಪದ ಬಳಕೆ ಮಾಡಿದ್ದಾರೆ. ಕಾಂಗ್ರೆಸ್‌ ನಾಶಕ್ಕೆ ಇಷ್ಟು ಸಾಕು’ ಎಂದರು.

‘ಎಚ್‌.ಡಿ.ಕುಮಾರಸ್ವಾಮಿ ಅವರು ‘ಕಿಂಗ್‌’ ಆಗಬೇಕು ಎಂಬ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ. ಈವರೆಗೆ 90 ಕ್ಷೇತ್ರಗಳಲ್ಲಿ ಸುತ್ತಿದ್ದೇನೆ. ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಗತವಾಗಿದ್ದೇನೆ. 113 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ. ರಾಜ್ಯದ ಎಲ್ಲ ಭಾಗದಲ್ಲೂ ಜೆಡಿಎಸ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 126 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಈ ಪೈಕಿ 90 ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇದೆ’ ಎಂದು ಉತ್ತರಿಸಿದರು.

‘ಮೈಸೂರು, ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದಲ್ಲಿ ಬೃಹತ್‌ ಸಮಾವೇಶಗಳನ್ನು ಆಯೋಜಿಸುವ ಉದ್ದೇಶ ಇದೆ. ಈ ಸಮಾವೇಶಕ್ಕೆ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ಆಹ್ವಾನಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಿಪಿಐ ಜೊತೆ ಹೊಂದಾಣಿಕೆ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಸಿಂಧ್ಯ ಅವರು ಈ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

‘ಪಕ್ಷದ ವಿಪ್‌ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದ ಜೆಡಿಎಸ್‌ನ ಏಳು ಬಂಡಾಯ ಶಾಸಕರನ್ನು ಸ್ಪೀಕರ್‌ ಅವರು ಸೋಮವಾರ ವಿಚಾರಣೆ ಮಾಡಿದ್ದಾರೆ. ತೀರ್ಮಾನ ಪ್ರಕಟಿಸಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ. ಇದೇ 23ಕ್ಕೆ ನಿಗದಿಯಾಗಿರುವ ರಾಜ್ಯಸಭೆ ಚುನಾವಣೆಗಿಂತ ಮುಂಚೆ ತೀರ್ಮಾನ ಕೈಗೊಳ್ಳುವುದು ಸ್ಪೀಕರ್‌ ಕರ್ತವ್ಯ’ ಎಂದು ಹೇಳಿದರು.

‘ರಾಜ್ಯ ಸರ್ಕಾರವು ಯಾವುದೇ ವಿಷಯವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿಲ್ಲ. ಅದೇ ರೀತಿ, ಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ವಿವಾದ ವಿಷಯದಲ್ಲೂ ನಿಖರವಾದ ತೀರ್ಮಾನ ಕೈಗೊಳ್ಳಲಾಗದ ಡೋಲಾಯಮಾನ ಸ್ಥಿತಿಯಲ್ಲಿ ಇದೆ’ ಎಂದು ಪ್ರತಿಕ್ರಿಯಿಸಿದರು. 

ಜೆಡಿಎಸ್‌ ಮುಖಂಡರಾದ ಎಸ್‌.ಎಲ್‌.ಭೋಜೆಗೌಡ, ಎಸ್‌.ಎಲ್‌.ಧರ್ಮೇಗೌಡ, ಬಿ.ಎಚ್‌.ಹರೀಶ್‌, ಹೊಲದಗದ್ದೆ ಗಿರೀಶ್‌, ರಂಜನ್‌ಅಜಿತ್‌ಕುಮಾರ್‌, ಎಚ್‌.ಎಚ್.ದೇವರಾಜ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry