‘ಹಾಸ್ಯವಿಲ್ಲದ ಸಿನಿಮಾ ಸಪ್ಪೆ’

7

‘ಹಾಸ್ಯವಿಲ್ಲದ ಸಿನಿಮಾ ಸಪ್ಪೆ’

Published:
Updated:
‘ಹಾಸ್ಯವಿಲ್ಲದ ಸಿನಿಮಾ ಸಪ್ಪೆ’

* ಹೇಗಿದೆ ಬೆಂಗಳೂರು?

ಓ... ಚೆನ್ನಾಗಿದೆ. ಈ ಊರು ನನಗೆ ಹೊಸದೇನಲ್ಲ. 30 ವರ್ಷಗಳಿಂದ ಬರುತ್ತಲೇ ಇದ್ದೇನೆ. ನಾನು ಇಲ್ಲಿಗೆ ಎರಡು– ಮೂರು ವರ್ಷಗಳಿಗೊಮ್ಮೆ ನನ್ನ ಹಾಸ್ಯ ಕಾರ್ಯಕ್ರಮಗಳಿಗಾಗಿ ಬರುತ್ತಿರುತ್ತೇನೆ.

* ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೀರಿ.

ಹೌದು. ಮುರಳಿಕೃಷ್ಣ ನಿರ್ದೇಶನದ ‘ಗರ’ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ದಕ್ಷಿಣ ಭಾರತದ ಭಾಷೆಗಳಲ್ಲಿ ತುಳುವಿನ ‘ರಂಗ್‌’ ಸಿನಿಮಾದಲ್ಲಿ ನಟಿಸಿದ್ದೆ. ‘ಗರ’ದಲ್ಲಿ ನನ್ನ ಹಾಗೂ ಸಾಧುಕೋಕಿಲ ಜೋಡಿ ಹಾಸ್ಯ ಇದೆ. ಸಾಧುಕೋಕಿಲ ಅವರು ಮೊದಲಿಂದಲೂ ಒಬ್ಬ ಒಳ್ಳೆಯ ಸ್ನೇಹಿತ. ಅವರು ಕನ್ನಡ ಚಿತ್ರರಂಗದಲ್ಲಿ, ನಾನು ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದೇನೆ. ಚಿತ್ರದಲ್ಲಿ ನನ್ನದು, ಸಾಧುಕೋಕಿಲ ಅವರದು ಜೂಜುಕೋರರ ಪಾತ್ರ. ನಾವು ಯಾಕೆ ಜೂಜಿನಲ್ಲಿ ಹಣ ಕಳೆದುಕೊಳ್ಳುತ್ತೇವೆ, ಹೇಗೆ ಕಳೆದುಕೊಳ್ಳುತ್ತೇವೆ ಎಂಬ ಕತೆ ಚಿತ್ರದಲ್ಲಿದೆ.

* ಸಿನಿಮಾದಲ್ಲಿ ಹಾಸ್ಯ ‍ಪಾತ್ರ ಎಷ್ಟು ಮುಖ್ಯ?

ಎಷ್ಟೇ ಮಸಾಲಾ, ಪಾಕ ಇದ್ದರೂ ಉಪ್ಪಿಲ್ಲದೇ ಸಾಂಬಾರು ರುಚಿಸುವುದಿಲ್ಲ. ಸಿನಿಮಾದಲ್ಲಿ ಹಾಸ್ಯವೂ ಹಾಗೆಯೇ. ಸಿನಿಮಾಗಳಲ್ಲಿ ಹಾಸ್ಯವೇ ಪ್ರಧಾನವಾಗಿರುವುದಿಲ್ಲ. ಆದರೆ ಚಿತ್ರದಲ್ಲಿನ ಕೆಲ ಹಾಸ್ಯ ದೃಶ್ಯಗಳು ಪ್ರೇಕ್ಷಕನಿಗೆ ಇಡೀ ಸಿನಿಮಾದ ಕತೆಯಷ್ಟೇ ಮನರಂಜನೆ ನೀಡುತ್ತದೆ. ಸಿನಿಮಾದ ಮುಖ್ಯ ಭಾಗವೇ ಹಾಸ್ಯ.

* ಈಗ ಯುವ ಹಾಸ್ಯ ನಟರ ಸಂಖ್ಯೆ ಕಡಿಮೆಯಾಗುತ್ತಿದೆ ಅಲ್ವೇ?

ಹೌದು. ಸಿನಿಮಾದಲ್ಲಿ ಎಲ್ಲರೂ ನಾಯಕ ನಟ, ವಿಲನ್‌ ಪಾತ್ರ ಮಾಡಲು ಬಯಸುತ್ತಾರೆ. ಅವರು ಹಾಸ್ಯ ಪಾತ್ರ ಮಾಡಲು ಮುಂದೆ ಬರುವುದಿಲ್ಲ.

* ಹಾಸ್ಯ ಪಾತ್ರ ಮಾಡುವುದು ಸುಲಭವಾ?

ಹಾಸ್ಯ ಪಾತ್ರ ಮಾಡುವುದು ತುಂಬ ಕಷ್ಟ. ಇದರಲ್ಲಿ ಆಂಗಿಕ ಪ್ರಸ್ತುತಿ ಮುಖ್ಯ. ಸಂದರ್ಭೋಚಿತವಾಗಿ ನಟನೆ ಮಾಡಬೇಕಾಗುತ್ತದೆ. ಹಾಸ್ಯದಲ್ಲಿ ಬರಹಗಾರರ ಪಾತ್ರ ಮುಖ್ಯವಾಗಿರುತ್ತದೆ. ನಾವು ಸಂಭಾಷಣೆ ಓದಿಕೊಂಡು ನಟನೆ ಮಾಡುತ್ತೇವೆ. ಆದರೆ ಈಗ ಬಾಲಿವುಡ್‌ ಸೇರಿದಂತೆ ಎಲ್ಲಾ ಕಡೆ ಉತ್ತಮ ಹಾಸ್ಯ ಬರಹಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ ವರ್ಷಕ್ಕೆ ಕೆಲವೇ ಕೆಲವು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಹೀಗಾಗಿ ಉತ್ತಮ ಬರಹಗಾರರಿದ್ದರು. ಆದರೆ ಈಗ ವಾರಕ್ಕೆ ಹತ್ತಾರು ಸಿನಿಮಾ ಬಿಡುಗಡೆಯಾಗುತ್ತದೆ. ಹಾಸ್ಯದ ಗುಣಮಟ್ಟ ಕಡಿಮೆಯಾಗುತ್ತಿದೆ.

* ಸಿನಿಮಾ ಯಶಸ್ಸಿನಲ್ಲಿ ಹಾಸ್ಯಗಾರರ ಪಾತ್ರ ಇದೆಯಾ?

ನಾವು ಕೊಡುಗೆ ನೀಡದೇ ಇದ್ದಲ್ಲಿ ಒಂದು ಸಿನಿಮಾ ಉತ್ತಮ ಸಿನಿಮಾ ಎನಿಸಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾದಲ್ಲಿ ಎಲ್ಲಾ ಅಂಶಗಳು ಇರಬೇಕು. ಹಾಸ್ಯದೃಶ್ಯಗಳನ್ನು ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ಅಭಿನಯಿಸಲು ನಾವು ಪ್ರಯತ್ನಿಸುತ್ತೇವೆ. ಗೋಲ್‌ಮಾಲ್‌ –3 , ಗೋಲ್‌ಮಾಲ್‌ 4 ಸಿನಿಮಾದಲ್ಲಿ ಹಾಸ್ಯ ಬರಹಗಾರರ ಪರಿಶ್ರಮ ಇದೆ. ನಾವು ಆ ಸ್ಕ್ರಿಪ್ಟ್‌ಗೆ ಚೆನ್ನಾಗಿ ಅಭಿನಯಿಸಿದೆವು. ಸಿನಿಮಾ ಯಶಸ್ಸು ಆಯಿತು.

* ಗಂಭೀರ ಪಾತ್ರವನ್ನು ನೀವು ಯಾಕೆ ಒಪ್ಪಿಕೊಳ್ಳಲ್ಲ?

ನನ್ನ ಮುಖಚಹರೆ ಗಂಭೀರ ಪಾತ್ರಗಳಿಗೆ ಸರಿಹೊಂದುವುದಿಲ್ಲ. ಈಗ ನನ್ನ ವಯಸ್ಸು 63. ಅಂಕಲ್‌ ಪಾತ್ರ, ನಾಯಕಿ, ನಾಯಕನ ತಂದೆ ಪಾತ್ರಗ‌ಳನ್ನು ಮಾಡಬಹುದು. ಜನರು ನನ್ನ ಮುಖ ನೋಡಿದ ತಕ್ಷಣ ನಗಲು ಆರಂಭಿಸುತ್ತಾರೆ. ಪೂರ್ತಿ ಗಂಭೀರ ಪಾತ್ರ ಮಾಡಲು ನನ್ನಿಂದ ಆಗಲ್ಲ. ಜನರು ಅದನ್ನು ಸ್ವೀಕರಿಸುವುದೂ ಇಲ್ಲ.

* ಕಿರುತೆರೆಯಲ್ಲೂ ಸಕ್ರಿಯರಾಗಿದ್ದೀರಿ. ಆ ಬಗ್ಗೆ ಹೇಳಿ

2007ರ ಬಳಿಕ ‘ಜಾನಿ ಆಲಾ ರೆ’ ಕಾಮಿಡಿ ಷೋ ಮುಗಿದ ಬಳಿಕ ಕಿರುತೆರೆಯಿಂದ ದೂರವಾಗಿದ್ದೆ. ಹತ್ತು ವರ್ಷಗಳ ನಂತರ ಈಗ ಕಿರುತೆರೆಗೆ ವಾಪಸಾಗಿದ್ದೇನೆ. ತಿಂಗಳಲ್ಲಿ 15 ದಿನ ಕಿರುತೆರೆಗೆ, ಉಳಿದ ದಿನಗಳಲ್ಲಿ ಸಿನಿಮಾ ಹಾಗೂ ನನ್ನ ಹಾಸ್ಯ ಕಾರ್ಯಕ್ರಮಗಳಿಗೆ ಸಮಯ ಮೀಸಲಿಡುತ್ತೇನೆ. ಜನರು ನನ್ನನ್ನು ಹೀಗೆಯೇ ಸ್ವೀಕರಿಸಿದರೆ ಕಿರುತೆರೆಯಲ್ಲಿ ಹೀಗೆಯೇ ಮುಂದುವರಿಯುತ್ತೇನೆ. ಕಿರುತೆರೆ, ಸಿನಿಮಾ ಎರಡು ವಿಭಿನ್ನ ಮಾಧ್ಯಮಗಳು. ಎರಡರಿಂದಲೂ ನಾನು ದಿನಾ ನಟನೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ.

* ಮುಂದಿನ ಸಿನಿಮಾ?

ಗೋಲ್‌ಮಾಲ್‌ –5, ಹೌಸ್‌ಪೂಲ್‌–4, ಸಂಜಯ್‌ ದತ್‌ ಅವರ ಹೋಮ್‌ ಪ್ರೊಡಕ್ಷನ್‌ನ ಸಿನಿಮಾ, ಇಂದುಕುಮಾರ್‌ ಅವರ ‘ಧಮಾಲ್‌’ನಲ್ಲಿ ನಟಿಸುತ್ತಿದ್ದೇನೆ. 2019ರಲ್ಲಿ 5–6 ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಕೆಲ ಸಿನಿಮಾಗಳ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry