ಮೈತ್ರಿ ಒಲವು: ಕಾರ್ಯತಂತ್ರಕ್ಕೆ ಕಸುವು ತುಂಬುವ ಯತ್ನ

7

ಮೈತ್ರಿ ಒಲವು: ಕಾರ್ಯತಂತ್ರಕ್ಕೆ ಕಸುವು ತುಂಬುವ ಯತ್ನ

Published:
Updated:
ಮೈತ್ರಿ ಒಲವು: ಕಾರ್ಯತಂತ್ರಕ್ಕೆ ಕಸುವು ತುಂಬುವ ಯತ್ನ

ಕಾಂಗ್ರೆಸ್ ಪಕ್ಷದ 84ನೆಯ ಮಹಾ ಅಧಿವೇಶನ ಭಾನುವಾರ ದೆಹಲಿಯಲ್ಲಿ ಮುಕ್ತಾಯವಾಯಿತು. ಪಕ್ಷದ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಭಾಷಣಗಳು ಇಂತಹ ಅಧಿವೇಶನಗಳಲ್ಲಿ ಸ್ವಾಭಾವಿಕ. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿರೀಕ್ಷೆಯಂತೆ ಮೋದಿ-ಬಿಜೆಪಿ-ಆರೆಸ್ಸೆಸ್ ವಿರುದ್ಧ ತೀವ್ರ ದಾಳಿ ನಡೆಸಿದ್ದಾರೆ. ಸಂಘಟನೆಗೆ ಚೈತನ್ಯ ತುಂಬುವುದಷ್ಟೇ ಅಲ್ಲದೆ ಆತ್ಮವಿಮರ್ಶೆಯ ಮಾತುಗಳನ್ನೂ ಆಡಿದ್ದಾರೆ. ಕೇವಲ ಮೂರು ರಾಜ್ಯ ಸರ್ಕಾರಗಳು ಮತ್ತು ಐವತ್ತು ಲೋಕಸಭಾ ಸೀಟುಗಳ ಪಾತಾಳಕ್ಕೆ ಕುಸಿದಿರುವ ಸನ್ನಿವೇಶದಲ್ಲಿ ಆತ್ಮವಿಮರ್ಶೆ, ಪರಿಪುಷ್ಟ ರಣತಂತ್ರ ಹಾಗೂ ಬಿಳುಚಿಕೊಂಡು ನಿಸ್ತೇಜವಾಗಿರುವ ಸಂಘಟನೆಯನ್ನು ಬಲಿಷ್ಠಗೊಳಿಸುವುದು ಈ ಪಕ್ಷದ ತುರ್ತು ಅಗತ್ಯ. ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮತಗಳು ಚೆದುರಿ ಹೋಗದಂತೆ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಇರಾದೆ ಈ ಅಧಿವೇಶನದಲ್ಲಿ ಪ್ರಕಟವಾಗಿದೆ. ಗತವೈಭವದ ದಂತಗೋಪುರದಿಂದ ಕೆಳಗಿಳಿದು ನೆಲದ ವಾಸ್ತವಕ್ಕೆ ಸಮೀಪದ ರಾಜಕಾರಣ ಮಾಡದಿದ್ದರೆ ಉಳಿಗಾಲವಿಲ್ಲ ಎಂಬ ಸತ್ಯವನ್ನು ಈ ಪಕ್ಷದ ನಾಯಕತ್ವ ಇನ್ನಾದರೂ ಮನಗಾಣಬೇಕು.

ರಾಹುಲ್ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟು ಹತ್ತು ವರ್ಷಗಳಾದವು. ಅವರ ಬಾಲ್ಯ ಮತ್ತು ಹರೆಯವು ಕೌಟುಂಬಿಕ ದುರಂತಗಳ ಮನೋಕ್ಲೇಶದಿಂದ ತುಂಬಿದ್ದು ಕಠೋರ ವಾಸ್ತವ. ಆದರೆ ಗತದ ಈ ಭೂತವನ್ನು ಅವರು ಅನವರತ ಬೆನ್ನ ಮೇಲೆ ಹೊತ್ತು ತಿರುಗಲು ಬರುವುದಿಲ್ಲ. ಕೆಳಗಿಳಿಸಿ ಸಂಹರಿಸಿ ಮುಂದೆ ನಡೆಯಬೇಕು. ಆಗದೆ ಹೋದರೆ ಬದಿಗೆ ಸರಿದು ಇತರರಿಗೆ ದಾರಿ ಬಿಡಬೇಕು. ಶಕ್ತಿ ರಾಜಕಾರಣ ಅತ್ಯಂತ ನಿರ್ದಯಿ. ಖಾಸಗಿ ಬದುಕಿನ ನೋವು ಸಂಕಟಗಳಿಗೆ ಅದು ರಿಯಾಯಿತಿ ನೀಡುವುದಿಲ್ಲ. ದೇಶದಾದ್ಯಂತ ಸೋಲಿನ ಮೇಲೆ ಸೋಲು ಎದುರಿಸಿರುವ ಕಾಂಗ್ರೆಸ್ ಪಕ್ಷ, ರಾಹುಲ್ ಅವರನ್ನು ಮೋದಿಯವರಿಗೆ ಪ್ರತಿಸ್ಪರ್ಧಿ ಎಂದು ಬಿಂಬಿಸತೊಡಗಿದೆ. ಇಷ್ಟು ಕಾಲ ಅರೆಕಾಲಿಕ ರಾಜಕಾರಣಿಯಂತೆಯೂ, ಒಲ್ಲದ ಮನಸಿನವರಂತೆಯೂ ಕಾಣಬರುತ್ತಿದ್ದರು ರಾಹುಲ್.  ಇತ್ತೀಚೆಗೆ ಅವರ ಪ್ರವೃತ್ತಿಯಲ್ಲಿ ಬದಲಾವಣೆಯನ್ನು ಗುರುತಿಸಲಾಗಿದೆ. ಅರೆಕಾಲಿಕ ಮತ್ತು ಒಲ್ಲದ ಮನಸಿನ ಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಆಗಿರುವುದು ಹೌದು. ಮಂಕು ಕವಿದು ಕತ್ತಲ ಮೂಲೆಗೆ ಸರಿದಿದ್ದ ಕಾಂಗ್ರೆಸ್ ಎದ್ದು ಕುಳಿತಿರುವುದೂ ಹೌದು. ಆದರೆ ಇಷ್ಟೇ ಸಾಲದು. ಎದ್ದು ಓಡುವ ಹೊಸ ಚೈತನ್ಯ ಇನ್ನೂ ದೂರವೇ ಇದೆ. ಜನಸಮುದಾ

ಯಗಳೊಂದಿಗೆ ಬಿಟ್ಟು ಹೋಗಿರುವ ಆಶೋತ್ತರಗಳ ಬೆಸುಗೆಯನ್ನು ಹೊಸ ರಾಜಕೀಯ-ಸಾಮಾಜಿಕ- ಆರ್ಥಿಕ ಪರಿಭಾಷೆಯ ಮೂಲಕ ಕಾಂಗ್ರೆಸ್ ಮತ್ತೆ ಜೋಡಿಸಿಕೊಳ್ಳಬೇಕಿದೆ. ಪ್ರಧಾನಿಯವರ ಪ್ರಭಾವಳಿಗೆ ನಾಲ್ಕು ವರ್ಷಗಳ ಹಿಂದಿನ ಹೊಳಪು ಇಲ್ಲ. ಆಡಳಿತ ವಿರೋಧಿ ಅಲೆಯ ನೀರು ಅವರ ಪಾದಗಳನ್ನು ನೆಕ್ಕತೊಡಗಿದೆ. ನೀಡಿರುವ ಭರವಸೆ ಮತ್ತು ಹುಟ್ಟಿಸಿರುವ ನಿರೀಕ್ಷೆಯ ಬೆಟ್ಟದ ಭಾರ ಪ್ರಧಾನಿಯವರನ್ನು ಕೆಳಕ್ಕೆ ಜಗ್ಗತೊಡಗಿದೆ. ಆದರೆ ಕಳೆಗುಂದಿದ ಇಂದಿನ ಮೋದಿಯವರ ಸಮ ನಿಲ್ಲಲೂ ರಾಹುಲ್ ಮತ್ತು ಅವರ ಪಕ್ಷ ಸಾಕಷ್ಟು ಸಾಮು ಮಾಡಬೇಕಿದೆ. ಪಕ್ಷದ ತಲೆಯಾಳುಗಳು ಮತ್ತು ಕಾಲಾಳುಗಳ ನಡುವಣ ಗೋಡೆಯನ್ನು ಒಡೆಯುವ ಮತ್ತು ಕಂದಕವನ್ನು ತುಂಬುವ ಮಾತುಗಳನ್ನು ಪಕ್ಷದ ಎಲ್ಲ ಅಧ್ಯಕ್ಷರು ಕಾಲ ಕಾಲಕ್ಕೆ ಆಡುತ್ತಲೇ ಬಂದಿದ್ದಾರೆ. ಆದರೆ ಪ್ರತಿ ಸಲವೂ ಅವು ತುಟಿ ಮೇಲೆಯೇ ಉಳಿದು ಒಣಗಿ ಹೋಗುತ್ತಿವೆ. ತಾವು ಆಡಿರುವ ಮಾತುಗಳನ್ನು ನಡೆಸಿಕೊಡಬೇಕು ರಾಹುಲ್ ಗಾಂಧಿ.

ಕಾಂಗ್ರೆಸ್ ಪಕ್ಷವನ್ನು ಒಳಿತಿನ ಶಕ್ತಿಯಾದ ಪಾಂಡವರಿಗೂ, ನರೇಂದ್ರ ಮೋದಿ- ಅಮಿತ್ ಶಾ ಅವರ ಬಿಜೆಪಿಯನ್ನು ಕೇಡು, ದರ್ಪ, ದುರಹಂಕಾರದ ಕೌರವರಿಗೂ ಹೋಲಿಸಿದ್ದಾರೆ ರಾಹುಲ್. ಈ ಉಪಮೆ ಭಾರತದ ರಾಜಕಾರಣದಲ್ಲಿ ಹಳಸಲು ಸರಕು. ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಳ್ಳುವ ಎಲ್ಲ ಪಕ್ಷಗಳೂ ತಮ್ಮನ್ನು ಪಾಂಡವರಿಗೂ, ಆಳುವ ಪಕ್ಷವನ್ನು ಕೌರವರಿಗೂ ಹೋಲಿಸಿಕೊಳ್ಳುತ್ತ ಬಂದಿವೆ. ಕಳೆದುಕೊಂಡ ಅಧಿಕಾರ ಕೈಗೆ ಮರಳಿದ ಮರುಕ್ಷಣವೇ ವಿನಮ್ರತೆ ಮರೆಯಾಗುತ್ತದೆ. ‘ಕೌರವರು- ಪಾಂಡವರ’ ಪಾತ್ರಗಳು ಅದಲಿ ಬದಲಿಯಾಗುತ್ತವೆ ಮತ್ತು ದುರದೃಷ್ಟವಶಾತ್ ಕಾಲಕಾಲಕ್ಕೆ ಅದಲಿ ಬದಲಿಯಾಗುತ್ತಲೇ ಇರುವುದು ಜನತಂತ್ರದ ದುರಂತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry