ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹10 ಕೋಟಿ ಠೇವಣಿಗೆ ಸೂಚನೆ

Last Updated 19 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ₹249 ಕೋಟಿ ತೆರಿಗೆ ವಂಚನೆ ಆರೋಪದ ‍ಪ್ರಕರಣಕ್ಕೆ ಸಂಬಂಧಿಸಿ ₹10 ಕೋಟಿ ಠೇವಣಿ ಇರಿಸುವಂತೆ ಯಂಗ್ ಇಂಡಿಯಾ ಪ್ರೈ.ಲಿ.ಗೆ ದೆಹಲಿ ಹೈಕೋರ್ಟ್‌ ಸೂಚಿಸಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಯಂಗ್‌ ಇಂಡಿಯಾ ಪ್ರೈಲಿ. ಸಂಸ್ಥೆಯ ಪ್ರಮುಖ ಪಾಲುದಾರರು.

₹5 ಕೋಟಿಯನ್ನು ಮಾರ್ಚ್‌ 31ಕ್ಕೆ ಮೊದಲು ಮತ್ತು ಬಾಕಿ ಮೊತ್ತವನ್ನು ಏಪ್ರಿಲ್‌ 15ಕ್ಕೆ ಮೊದಲು ಆದಾಯ ತೆರಿಗೆ ಇಲಾಖೆಯಲ್ಲಿ ಠೇವಣಿ ಇರಿಸುವಂತೆ ನ್ಯಾಯಮೂರ್ತಿಗಳಾದ ಎಸ್‌. ರವೀಂದ್ರ ಭಟ್‌ ಮತ್ತು ಎ.ಕೆ. ಚಾವ್ಲಾ ಅವರ ಪೀಠ ನಿರ್ದೇಶಿಸಿದೆ.

ಯಂಗ್‌ ಇಂಡಿಯಾ ಸಂಸ್ಥೆಯು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ಈಗ ನಡೆಸುತ್ತಿದೆ. ನ್ಯಾಷನಲ್‌ ಹೆರಾಲ್ಡ್‌ ಆಸ್ತಿ ದುರ್ಬಳಕೆ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್‌ ಅವರನ್ನು ಆರೋಪಿಗಳಾಗಿ ಹೆಸರಿಸಿದ್ದ ವಿಚಾರಣಾ ನ್ಯಾಯಾಲಯ, ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್‌ ನೀಡಿತ್ತು.

₹50 ಲಕ್ಷ ಬಂಡವಾಳದೊಂದಿಗೆ 2010ರ ನವೆಂಬರ್‌ನಲ್ಲಿ ಆರಂಭಗೊಂಡ ಯಂಗ್‌ ಇಂಡಿಯಾ ಪ್ರೈ.ಲಿ.,ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ
ಮಾಲೀಕತ್ವ ಹೊಂದಿದ್ದ ಅಸೋಸಿಯೇಟೆಡ್‌ ಜರ್ನಲ್‌ ಲಿ. (ಎಜೆಎಲ್‌) ಹೆಸರಿನಲ್ಲಿದ್ದ ಎಲ್ಲ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿತ್ತು.

ಠೇವಣಿ ಇರಿಸಲು ಸೂಚಿಸಿದ ಮೊತ್ತ ಬಹಳ ದೊಡ್ಡದಾಯಿತು. ಈ ಮೊತ್ತವನ್ನು ದೇಣಿಗೆ ಮೂಲಕವೇ ಸಂಗ್ರಹಿಸಬೇಕಿದೆ. ಹಾಗಾಗಿ ಮೊತ್ತವನ್ನು ₹7.5 ಕೋಟಿಗೆ ಇಳಿಸಬೇಕು ಎಂದು ಯಂಗ್‌ ಇಂಡಿಯಾ ಪರವಾಗಿ ವಾದಿಸಿದ ಹಿರಿಯ ವಕೀಲ ಅರವಿಂದ ದಾತಾರ್‌ ಕೇಳಿಕೊಂಡರು.  ಆದಾಯ ತೆರಿಗೆ ಇಲಾಖೆಯಲ್ಲಿ ಇರಿಸಿದ ಠೇವಣಿಯನ್ನು ಮರಳಿ ಪಡೆಯುವುದು ಬಹಳ ಕಷ್ಟ. ಹಾಗಾಗಿ ನ್ಯಾಯಾಲಯದಲ್ಲಿ ಠೇವಣಿ ಇರಿಸಲು ಅವಕಾಶ ಕೊಡಬೇಕು ಎಂದೂ ಅವರು ಕೋರಿದರು. ಆದರೆ ಈ ವಿನಂತಿಯನ್ನು ಪೀಠವು ಒಪ್ಪಿಕೊಳ್ಳಲಿಲ್ಲ.

ಪ್ರಕರಣದ ವಿವರ

* ಸೋನಿಯಾ, ರಾಹುಲ್‌, ಎಐಸಿಸಿ ಖಜಾಂಚಿ ಮೋತಿಲಾಲ್‌ ವೋರಾ, ಪ್ರಧಾನ ಕಾರ್ಯದರ್ಶಿ ಆಸ್ಕರ್‌ ಫರ್ನಾಂಡಿಸ್‌, ಸ್ಯಾಮ್‌ ಪಿತ್ರೊಡಾ ಮತ್ತು ಸುಮನ್‌ ದುಬೆ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಆರೋಪಿಗಳು

*ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ದೂರಿನಿಂದಾಗಿ ಪ್ರಕರಣ ದಾಖಲು

* ಯಂಗ್‌ ಇಂಡಿಯಾದ ಶೇ 83.3ರಷ್ಟು ಷೇರು ಸೋನಿಯಾ, ರಾಹುಲ್‌ ಹೆಸರಿನಲ್ಲಿ

* ಮೋತಿಲಾಲ್‌ ವೋರಾ ಪಾಲು ಶೇ 15.5, ಆಸ್ಕರ್‌ ಪಾಲು ಶೇ 1.2 ಏಪ್ರಿಲ್‌ 24ರಂದು ಮುಂದಿನ ವಿಚಾರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT