ಸಿಡಿಲಿಗೆ ಕೋಣ ಸಾವು: ಇಬ್ಬರಿಗೆ ಗಾಯ

7

ಸಿಡಿಲಿಗೆ ಕೋಣ ಸಾವು: ಇಬ್ಬರಿಗೆ ಗಾಯ

Published:
Updated:
ಸಿಡಿಲಿಗೆ ಕೋಣ ಸಾವು: ಇಬ್ಬರಿಗೆ ಗಾಯ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿ ನಗರ ಹಾಗೂ ಉತ್ತರ ಕನ್ನಡ, ಹಾವೇರಿ, ಬಳ್ಳಾರಿ ಜಿಲ್ಲೆಗಳಲ್ಲಿ ಸೋಮವಾರ ಸಿಡಿಲು, ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿದು ಕೆಲವೆಡೆ ಅನಾಹುತ ಸಂಭವಿಸಿದೆ.

ಹುಬ್ಬಳ್ಳಿಯ ಕಿಮ್ಸ್‌ ವೃತ್ತದ ಎದುರಿಗೆ ವಾರದ ಹಿಂದೆ ಅಳವಡಿಸಲಾಗಿದ್ದ ಜಾಹೀರಾತು ಫಲಕದ ಬೃಹತ್‌ ಕಂಬವೊಂದು ಸೋಮವಾರ ಸಂಜೆ ಉರುಳಿ ಬಿದ್ದು ಪಿ.ಬಿ. ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ವಿದ್ಯುತ್‌ ತಂತಿಗಳು ಹರಿದು ಬಿದ್ದವು. ಕ್ರಿಕೆಟ್‌ ಬ್ಯಾಟ್‌ ಮಾಡುವವರ ನಾಲ್ಕು ಟೆಂಟ್‌ಗಳು ಇದರಡಿ ಸಿಲುಕಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಅವರಗುಪ್ಪದಲ್ಲಿ ಸಿಡಿಲಿಗೆ ಕೋಣವೊಂದು ಮೃತಪಟ್ಟಿದೆ. ಇಬ್ಬರು ಕೆಲಸಗಾರರಿಗೂ ಗಾಯಗಳಾಗಿವೆ. ಶಿರಸಿ ನಗರದ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ನಾಗರಿಕರು ಪರದಾಡಿದರು. ಬನವಾಸಿ ಹೋಬಳಿಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆ– ಗಾಳಿಗೆ ಕುಪ್ಪಳ್ಳಿಯ ಪ್ರದೀಪ ನಾಯ್ಕ ಎಂಬುವರಿಗೆ ಸೇರಿದ 2 ಎಕರೆ ಬಾಳೆ ತೋಟ ನೆಲಕಚ್ಚಿದೆ.

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಕಟಾವಿಗೆ ಬಂದ ದ್ರಾಕ್ಷಿ ಉದುರಲಾರಂಭಿಸಿದೆ. ಮೋರಿಗೇರಿ ಗ್ರಾಮದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಹಾವೇರಿ ಜಿಲ್ಲೆಯ ಅಕ್ಕಿಆಲೂರಿನಲ್ಲಿ ಭಾರಿ ಗಾಳಿಗೆ ವಿರಕ್ತಮಠದ ಓಣಿಯಲ್ಲಿ ಮರವೊಂದು ಮನೆ ಮೇಲೆ ಬಿದ್ದಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲೂ ಕೆಲವೆಡೆ ಮಳೆಯಾಗಿದೆ.

ಮಂಗಳೂರು ವರದಿ:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಬಿರುಸಿನ ಮಳೆ ಸುರಿದಿದ್ದು, ಪೆರಿಯಶಾಂತಿ-ಕೊಕ್ಕಡ ರಸ್ತೆಯಲ್ಲಿ ಮರಬಿದ್ದಿದ್ದರಿಂದ ಧರ್ಮಸ್ಥಳ-ಸುಬ್ರಹ್ಮಣ್ಯ ನಡುವೆ ಸಂಚರಿಸುವ ಬಸ್‌ ಹಾಗೂ ವಾಹನಗಳು ಪುತ್ಯೆ ಮೂಲಕ ಬದಲಿ ರಸ್ತೆಯಲ್ಲಿ ಸಂಚರಿಸಿದವು. ಮೂರು ಗಂಟೆ ಇಲ್ಲಿ ರಸ್ತೆ ಸಂಚಾರ ಬಂದ್‌ ಆಗಿತ್ತು. ವಿಟ್ಲದಲ್ಲಿ ಸಾಮಾನ್ಯ ಮಳೆಯಾಗಿದೆ, ಗಾಳಿಯ ರಭಸ ಹೆಚ್ಚಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಭಾನುವಾರ ಹಾಗೂ ಸೋಮವಾರ ಉತ್ತಮ ಮಳೆಯಾಗಿದೆ. ಕೆಲವೆಡೆ ಗಾಳಿ–ಮಳೆಗೆ ನಷ್ಟ ಉಂಟಾಗಿದೆ.

ಮಳೆಯ ರಭಸಕ್ಕೆ ಬೂತನಕಾಡು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದ್ದರಿಂದ, ಭಾನುವಾರ ಸಂಜೆಯಿಂದ ಸೋಮವಾರ ಮುಂಜಾನೆ ವರೆಗೂ ರಾಷ್ಟ್ರೀಯ ಹೆದ್ದಾರಿ 173ರ ಕಡೂರು– ಮೂಡಿಗೆರೆ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry