ಫ್ಲೆಕ್ಸ್‌, ಹೋರ್ಡಿಂಗ್‌ 12 ಗಂಟೆಯೊಳಗೆ ತೆರವು

7

ಫ್ಲೆಕ್ಸ್‌, ಹೋರ್ಡಿಂಗ್‌ 12 ಗಂಟೆಯೊಳಗೆ ತೆರವು

Published:
Updated:
ಫ್ಲೆಕ್ಸ್‌, ಹೋರ್ಡಿಂಗ್‌ 12 ಗಂಟೆಯೊಳಗೆ ತೆರವು

ಬೆಂಗಳೂರು: ‘ಮತದಾರರ ಗಮನ ಸೆಳೆಯುವ ಉದ್ದೇಶದಿಂದ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌, ಹೋರ್ಡಿಂಗ್‌ ಹಾಗೂ ಪೋಸ್ಟರ್‌ಗಳನ್ನು ತೆರವುಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಅಥವಾ ಖಾಸಗಿ ಪ್ರದೇಶದಲ್ಲಿ ಯಾವುದೇ ಪಕ್ಷ, ವ್ಯಕ್ತಿಗೆ ಸಂಬಂಧಿಸಿದ ಫ್ಲೆಕ್ಸ್‌, ಬಂಟಿಂಗ್‌ಗಳು, ಪೋಸ್ಟರ್‌ಗಳನ್ನು ಹಾಕಿದ್ದರೆ, ಚುನಾವಣೆ ಘೋಷಣೆಯಾದ 24 ಗಂಟೆಯೊಳಗೆ ಅವುಗಳನ್ನು ತೆಗೆಸುವಂತೆ ಚುನಾವಣಾ ಆಯೋಗದ ನಿರ್ದೇಶನವಿದೆ. ಆದರೆ, ನಾವು 12 ಗಂಟೆಯೊಳಗೆ ಇವುಗಳನ್ನು ತೆರವು ಮಾಡುತ್ತೇವೆ’ ಎಂದರು.

‘ಇವುಗಳನ್ನು ತೆರವುಗೊಳಿಸಿದ ಬಳಿಕವೂ ಅಳವಡಿಸಿದರೆ, ಅಂತಹವರ ವಿರುದ್ಧ ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪ ತಡೆ) ಕಾಯ್ದೆ-1981 ಅಡಿ ಕ್ರಿಮಿನಲ್‌ ದೂರು ದಾಖಲಿಸಲಾಗುತ್ತದೆ. 6 ತಿಂಗಳ ಜೈಲು ಶಿಕ್ಷೆ ವಿಧಿಸಲೂ ಈ ಕಾಯ್ದೆಯಲ್ಲಿ ಅವಕಾಶವಿದೆ’ ಎಂದು ತಿಳಿಸಿದರು.

‘ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪಾಲಿಕೆ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳ ಸಮನ್ವಯ ಸಭೆ ನಡೆಸಿದ್ದೇವೆ. ಮತದಾರರು ನಿರ್ಭಯವಾಗಿ ಮತ ಚಲಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ’ ಎಂದರು.

ಮತದಾರರಿಗೆ ಒತ್ತಡ ಹೇರುವುದು, ಆಮಿಷವೊಡ್ಡುವುದನ್ನು ತಪ್ಪಿಸುವ ಉದ್ದೇಶದಿಂದ ಪ್ರತಿ 15 ಮತಗಟ್ಟೆಗಳಿಗೆ ಒಂದರಂತೆ ಸೆಕ್ಟರ್‌ ತಂಡಗಳನ್ನು (ವಲ್ನರಬಿಲಿಟಿ ಮ್ಯಾಪಿಂಗ್‌) ರಚಿಸಲಾಗಿದೆ. ಇಂತಹ 550 ತಂಡಗಳಿವೆ ಎಂದರು.

ಪ್ರತಿ ತಂಡದಲ್ಲಿ ಸೆಕ್ಟರ್‌ ಮ್ಯಾಜಿಸ್ಟ್ರೇಟ್‌, ಪೊಲೀಸ್‌ ಅಧಿಕಾರಿ, ವಿಡಿಯೊಗ್ರಾಫರ್‌ ಹಾಗೂ ಒಬ್ಬ ಸಹಾಯಕ ಇರುತ್ತಾರೆ. ಒತ್ತಡ ಹೇರುತ್ತಿರುವವರು ಹಾಗೂ ಒತ್ತಡಕ್ಕೆ ಒಳಗಾಗಿರುವವರ ಮಾಹಿತಿ ಸಂಗ್ರಹಿಸುತ್ತಾರೆ. ಈ ಬಗ್ಗೆ ಆಯೋಗಕ್ಕೆ ವರದಿ ಸಲ್ಲಿಸಲಾಗುತ್ತದೆ. ಅದರ ಆಧಾರದಲ್ಲಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗುತ್ತದೆ ಎಂದು ತಿಳಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಆರು ಸಂಚಾರ ದಳಗಳು (ಫ್ಲೈಯಿಂಗ್‌ ಸ್ಕ್ವಾಡ್‌) ಹಾಗೂ ಮೂರು ಕಾಯಂ ದಳಗಳನ್ನು (ಸ್ಟ್ಯಾಟಿಕ್‌ ಸ್ಕ್ವಾಡ್‌) ರಚಿಸಲಾಗುತ್ತದೆ. ಇದರಲ್ಲಿ ಪಾಲಿಕೆ ಆಧಿಕಾರಿ, ಪೊಲೀಸ್‌ ಅಧಿಕಾರಿ, ವಿಡಿಯೊಗ್ರಾಫರ್‌ ಇರುತ್ತಾರೆ. ಪ್ರತಿ ಕ್ಷೇತ್ರದಲ್ಲೂ ನಿಯಂತ್ರಣ ಕೊಠಡಿಯನ್ನು ತೆರೆಯಲಿದ್ದು, ಮೂರು ದೂರವಾಣಿ ಸಂಖ್ಯೆಗಳನ್ನು ನೀಡಲಾಗುತ್ತದೆ. ದೂರುಗಳನ್ನು ಆಧರಿಸಿ ಸಂಚಾರ ದಳಗಳು ಕ್ರಮ ಕೈಗೊಳ್ಳುತ್ತವೆ ಎಂದು ಮಾಹಿತಿ ನೀಡಿದರು.

ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್, ‘ಚುನಾವಣೆ ದೃಷ್ಟಿಯಿಂದ ಭದ್ರತಾ ಯೋಜನೆ ಸಿದ್ಧಪಡಿಸಿದ್ದೇವೆ. ನಗರ ಪೊಲೀಸ್‌ ಇಲಾಖೆಯಲ್ಲಿ ಎಷ್ಟು ಮಂದಿ ಇದ್ದಾರೆ, ಚುನಾವಣಾ ಕರ್ತವ್ಯಕ್ಕಾಗಿ ಎಷ್ಟು ಪೊಲೀಸರು ಬೇಕಾಗಿದ್ದಾರೆ, ಕೇಂದ್ರ ಅರೆಸೇನಾ ಪಡೆಯಿಂದ ಎಷ್ಟು ಸಿಬ್ಬಂದಿ ಬರುತ್ತಿದ್ದಾರೆ, ಅವರನ್ನು ಎಲ್ಲಿ ನಿಯೋಜಿಸಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ’ ಎಂದು ಹೇಳಿದರು.

ಬಂದೂಕು ಹಾಗೂ ಪಿಸ್ತೂಲ್‌ ಹೊಂದಲು ಪರವಾನಗಿ ಪಡೆದವರಲ್ಲಿ ಎಷ್ಟು ಮಂದಿ ಅವುಗಳನ್ನು ತಂದೊಪ್ಪಿಸಿದ್ದಾರೆ ಎಂಬ ಬಗ್ಗೆ ಚುನಾವಣಾ ಆಯೋಗ ವರದಿ ಕೇಳಿದೆ. ಜಾಮೀನುರಹಿತ ವಾರಂಟ್‌ ಜಾರಿ, ರೌಡಿಗಳ ಮಾಹಿತಿ, ಆರೋಪಪಟ್ಟಿ ಸಲ್ಲಿಕೆ ಮಾಹಿತಿ ನೀಡುವಂತೆ ಸೂಚನೆ ನೀಡಿದೆ ಎಂದು ಅವರು ವಿವರಿಸಿದರು.

(ಎನ್‌.ಮಂಜುನಾಥ ಪ್ರಸಾದ್‌)

28 ಕ್ಷೇತ್ರಗಳಲ್ಲಿ ಮಸ್ಟರಿಂಗ್‌, ಡಿಮಸ್ಟರಿಂಗ್‌ ಕೇಂದ್ರ

28 ವಿಧಾನಸಭಾ ಕ್ಷೇತ್ರಗಳಿಗೆ ಮಸ್ಟರಿಂಗ್‌ (ಮತದಾನದ ಹಿಂದಿನ ದಿನ ಮತಯಂತ್ರಗಳನ್ನು ಇಡುವ ಕೇಂದ್ರ) ಹಾಗೂ ಡಿಮಸ್ಟರಿಂಗ್‌ (ಮತದಾನದ ಬಳಿಕ ಮತಯಂತ್ರಗಳನ್ನು ಪುನಃ ಆ ಕೇಂದ್ರಕ್ಕೆ ತರಲಾಗುತ್ತದೆ) ಕೇಂದ್ರಗಳನ್ನು ಗುರುತಿಸಿದ್ದೇವೆ. ಪ್ರತಿ ತಂಡದಲ್ಲಿ ನಾಲ್ವರು ಅಧಿಕಾರಿಗಳು ಇರುತ್ತಿದ್ದರು. ಈ ಬಾರಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಜತೆಗೆ ಮತ ಖಾತರಿ ಯಂತ್ರಗಳನ್ನು (ವಿ.ವಿ. ಪ್ಯಾಟ್‌) ಬಳಕೆ ಮಾಡುತ್ತಿರುವುದರಿಂದ ಮತ್ತೊಬ್ಬ ಅಧಿಕಾರಿಯನ್ನು ಸೇರ್ಪಡೆ ಮಾಡಲಾಗುತ್ತದೆ ಎಂದು ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

4 ಕಡೆ ಮತ ಎಣಿಕೆ ಕೇಂದ್ರ

ಪ್ರತಿ 1,400 ಮತದಾರರಿಗೆ ಒಂದು ಮತಗಟ್ಟೆ ತೆರೆಯಲಾಗುತ್ತದೆ. ಇದಕ್ಕಿಂತ ಹೆಚ್ಚಿನ ಮತದಾರರು 807 ಮತಗಟ್ಟೆಗಳಲ್ಲಿ ಇದ್ದಾರೆ. ಇಲ್ಲಿ ಹೆಚ್ಚುವರಿಯಾಗಿ ಕೊಠಡಿಯೊಂದನ್ನು ವ್ಯವಸ್ಥೆಗೊಳಿಸಲಾಗುತ್ತದೆ. ಇಲ್ಲೂ ಮತದಾನ ಮಾಡಬಹುದು ಎಂದು ತಿಳಿಸಿದರು.

ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್‌ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ನಡೆಯಲಿದೆ.

ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಬಡಾವಣೆ, ಜಯನಗರ ಹಾಗೂ ಬೊಮ್ಮನಹಳ್ಳಿ ಕ್ಷೇತ್ರಗಳ ಮತ ಎಣಿಕೆ ಜಯನಗರದ 4ನೇ ‘ಟಿ’ ಬ್ಲಾಕ್‌ನ ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜಿನಲ್ಲಿ ನಡೆಯಲಿದೆ.

ಕೆ.ಆರ್‌.ಪುರ, ಮಹಾಲಕ್ಷ್ಮಿ ಬಡಾವಣೆ, ಮಲ್ಲೇಶ್ವರ, ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞನಗರ ಹಾಗೂ ಸಿ.ವಿ.ರಾಮನಗರ ಕ್ಷೇತ್ರಗಳ ಮತ ಎಣಿಕೆ ಸಂಪಂಗಿರಾಮನಗರದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ (ಮಹಿಳೆಯರು) ನಡೆಯಲಿದೆ.ರಾಜರಾಜೇಶ್ವರಿನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ಕ್ಷೇತ್ರಗಳ ಮತ ಎಣಿಕೆ  ಶೇಷಾದ್ರಿ ರಸ್ತೆಯ ಗೃಹ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ.

ಹೆಸರು ಸೇರ್ಪಡೆಗೆ ಕಾಲಾವಕಾಶ

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಇನ್ನೂ ಕಾಲಾವಕಾಶವಿದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದಿಂದ 10 ದಿನಗಳ ಒಳಗೆ ಹೆಸರು ಸೇರಿಸಲು ಆನ್‌ಲೈನ್‌ ಮೂಲಕ, ವಾರ್ಡ್‌ ಕಚೇರಿ ಹಾಗೂ ಎಆರ್‌ಒ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಅಂತಹವರ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

ವಿ.ವಿ. ಪ್ಯಾಟ್‌ ಬಗ್ಗೆ ಪ್ರಾತ್ಯಕ್ಷಿಕೆ

ಇವಿಎಂಗಳ ಜತೆ ವಿ.ವಿ. ಪ್ಯಾಟ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ಚುನಾವಣೆ ಘೋಷಣೆ ಆದ ಬಳಿಕ ಮಾರುಕಟ್ಟೆ, ಕಾಲೇಜು, ಮಾಲ್‌ಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry