ಚೇತರಿಕೆ ಕಾಣದ ವಹಿವಾಟು

7

ಚೇತರಿಕೆ ಕಾಣದ ವಹಿವಾಟು

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಐದನೇ ದಿನವೂ ಇಳಿಮುಖ ವಹಿವಾಟು ನಡೆಯಿತು.

ವಾರದ ವಹಿವಾಟಿನ ಮೊದಲ ದಿನವಾದ ಸೋಮವಾರ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 253 ಅಂಶ ಇಳಿಕೆ ಕಂಡು, 33,923 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಹಿಂದಿನ 4 ದಿನಗಳ ವಹಿವಾಟಿನಲ್ಲಿ ಸೂಚ್ಯಂಕವು 742 ಅಂಶ ಇಳಿಕೆ ಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 100 ಅಂಶ ಇಳಿಕೆಯಾಗಿ 10,094 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಅಮೆರಿಕದ ಫೆಡರಲ್ ರಿಸರ್ವ್‌, ಶೇ 0.25 ರಷ್ಟು ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆಯಿಂದ ಬಾಂಡ್‌ಗಳು ಉತ್ತಮ ಗಳಿಕೆ ಕಂಡುಕೊಂಡವು. ಇದರಿಂದ ದೇಶದ ಷೇರುಪೇಟೆಯಲ್ಲಿ ವಿದೇಶಿ ಬಂಡವಾಳ ಹೊರಹರಿವು ಹೆಚ್ಚಾಗಿ ಸೂಚ್ಯಂಕ ಇಳಿಕೆ ಕಾಣುವಂತಾಯಿತು ಎಂದು ಮಾರಕಟ್ಟೆ ತಜ್ಞರು ಹೇಳಿದ್ದಾರೆ.

ಶುಕ್ರವಾರ ಷೇರುಪೇಟೆ ವಹಿವಾಟಿನ ಬಳಿಕ ಆರ್‌ಬಿಐ ಚಾಲ್ತಿ ಖಾತೆ ಕೊರತೆಯ ಅಂಕಿ–ಅಂಶ ಬಿಡುಗಡೆ ಮಾಡಿತ್ತು. ಡಿಸೆಂಬರ್‌ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆಯು ಶೇ 2ಕ್ಕೆ ಏರಿಕೆ ಕಂಡಿದೆ. ಈ ಅಂಶವೂ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

‘ಜಾಗತಿಕ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಚಂಚಲ ವಹಿವಾಟಿನ ಪ್ರಭಾವಕ್ಕೆ ಸಿಲುಕಿ ದೇಶದ ಷೇರುಪೇಟೆ ವಹಿವಾಟು ಇಳಿಮುಖವಾಗಿದೆ. ಹೂಡಿಕೆದಾರರು ಲಾಭ ಗಳಿಕೆಗೆ ಗಮನ ನೀಡಿದ್ದಾರೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

‘ವಿತ್ತೀಯ ಕೊರತೆ ಮತ್ತು ಇತ್ತೀಚಿನ ರಾಜಕೀಯ ವಿದ್ಯಮಾನಗಳು ಷೇರುಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರುತ್ತಿವೆ. ಇದರಿಂದ ಸೂಚ್ಯಕ ಇಳಿಕೆ ಕಾಣುತ್ತಿದೆ’ ಎಂದು ದೆಹಲಿಯ ಷೇರು ದಲ್ಲಾಳಿ ಮನೋಜ್‌ ಛೊರಾರಿಯಾ ಹೇಳಿದ್ದಾರೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಜಪಾನ್‌ನ ನಿಕೇಯ್‌ ಶೇ 0.90, ಸಿಂಗಪುರ (ಶೇ 0.39) ಇಳಿಕೆ ಕಂಡರೆ, ಹಾಂಕಾಂಗ್‌ನ ಹಾಂಗ್‌ ಸೆಂಗ್‌ ಶೇ 0.04 ಮತ್ತು ಶಾಂಘೈ ಕಂಪೋಸಿಟ್‌ ಸೂಚ್ಯಂಕ ಶೇ 0.29ರಷ್ಟು ಏರಿಕೆ ಕಂಡುಕೊಂಡಿವೆ.

ಯುರೋಪ್‌ ವಲಯದಲ್ಲಿ ಫ್ರಾಂಕ್‌ಫರ್ಟ್‌ ಡಿಎಎಕ್ಸ್‌ ಶೇ 1.05, ಪ್ಯಾರಿಸ್‌ ಸಿಎಸಿ ಶೇ 0.82 ರಷ್ಟು ಇಳಿಕೆ ಕಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry