‘ಜೀವನಾಧಾರ’ ಯೋಜನೆಗೆ ಚಾಲನೆ

7

‘ಜೀವನಾಧಾರ’ ಯೋಜನೆಗೆ ಚಾಲನೆ

Published:
Updated:
‘ಜೀವನಾಧಾರ’ ಯೋಜನೆಗೆ ಚಾಲನೆ

ಬೆಂಗಳೂರು: ಬಾಲ ಮಂದಿರಗಳಿಂದ ಬಿಡುಗಡೆಯಾಗುವ 18 ವರ್ಷ ಪೂರೈಸಿದ ಅನಾಥ ಹಾಗೂ ನಿರ್ಗತಿಕರಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವ ‘ಜೀವನಾಧಾರ’ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಾರಿಗೆ ತಂದಿದೆ.

ಇಲಾಖೆಯು ಹೊಸೂರು ರಸ್ತೆಯ ಬಾಲಮಂದಿರದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರಿ ಯೋಜನೆಗೆ ಚಾಲನೆ ನೀಡಿದರು.

‘2014–15ರಲ್ಲೇ ಈ ಜೀವನಾಧಾರ ಯೋಜನೆ ಆರಂಭವಾಗಬೇಕಿತ್ತು. ಆದರೆ ಕೆಲವು ಅಡೆತಡೆಗಳಿಂದಾಗಿ ವಿಳಂಬವಾಗಿದೆ. ಅಧಿಕಾರಿಗಳಿಂದ ಸಲಹೆ ಪಡೆದು ಉತ್ತಮ ರೀತಿಯಲ್ಲಿ ಜಾರಿಗೆ ತರಲಾಗಿದೆ. ಶೀಘ್ರದಲ್ಲೇ ರಾಜ್ಯದಾದ್ಯಂತ ಎಲ್ಲಾ ಅರ್ಹ ಫಲಾನುಭವಿಗಳಿಗೂ ಇದರ ಲಾಭ ತಲುಪಲಿದೆ’ ಎಂದು ಉಮಾಶ್ರೀ ಹೇಳಿದರು.

ಏನಿದು ಜೀವನಾಧಾರ?:  ಬಾಲಮಂದಿರಗಳು, ವೀಕ್ಷಣಾಲಯಗಳು, ಅನುಪಾಲನ ಹಾಗೂ ವಿಶೇಷ ಗೃಹಗಳಿಂದ ಬಿಡುಗಡೆ ಹೊಂದಿದ ಮಕ್ಕಳಿಗೆ ನೆರವಾಗಲು ಯಾರೂ ಇರುವುದಿಲ್ಲ. ಅವರೂ ಒಂದು ಉತ್ತಮ ಬದುಕು ಕಟ್ಟಿಕೊಳ್ಳಲು ಶಿಕ್ಷಣ, ಕೌಶಲಾಭಿವೃದ್ಧಿ, ವೃತ್ತಿ ತರಬೇತಿ ಪಡೆಯಲು ಅನುಕೂಲ ಆಗುವಂತೆ ಧನ ಸಹಾಯ ಮಾಡುವ ಯೋಜನೆಯೇ ಜೀವನಾಧಾರ.

ಈ ಮಕ್ಕಳು 25 ವರ್ಷ ತುಂಬುವವರೆಗೆ ಮಾಸಿಕ ₹5 ಸಾವಿರ ಸಹಾಯಧನ ನೀಡಲಾಗುವುದು. ಜೀವನೋಪಾಯ ಮಾರ್ಗ ಕಂಡುಕೊಳ್ಳಲು ಹಾಗೂ ಸ್ವಂತ ಉದ್ಯೋಗ ಪ್ರಾರಂಭಿಸಲು ಬ್ಯಾಂಕ್ ಸಾಲದ ಭದ್ರತೆಗಾಗಿ ₹25 ಸಾವಿರ ನೀಡಲಾಗುತ್ತದೆ. ಇದಲ್ಲದೆ 45 ವರ್ಷದ ನಂತರ ಜೀವನಪೂರ್ತಿ ₹5 ಸಾವಿರ ಖಚಿತ ಆದಾಯ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಸಚಿವರಿಗಾಗಿ ಎರಡೂವರೆ ಗಂಟೆ ಕಾದ ಮಕ್ಕಳು

ಮಧ್ಯಾಹ್ನ 3ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸಚಿವೆ ಉಮಾಶ್ರೀ ಎರಡೂವರೆ ಗಂಟೆ ತಡವಾಗಿ ಬಂದರು. ಸಚಿವೆಗಾಗಿ ಮಕ್ಕಳು 3 ಗಂಟೆಯಿಂದಲೇ ರಸ್ತೆಯಲ್ಲಿ ಕಾದು ಕುಳಿತಿದ್ದರು. ತಡವಾಗಿ ಬಂದರೂ ಸಚಿವೆ ಕಾರ್ಯಕ್ರಮದಲ್ಲಿ ಇದ್ದದ್ದು 30 ನಿಮಿಷ ಮಾತ್ರ.

ಕೆಲ ಮಕ್ಕಳು ಕುಳಿತಲ್ಲಿಯೇ ನಿದ್ರೆಗೆ ಜಾರಿದ್ದರು. ಕಾರ್ಯಕ್ರಮದ ಮಧ್ಯೆ ಡೊಳ್ಳುಕುಣಿತ, ತಮಟೆ ಕುಣಿತ ನಡೆಯಿತು. ಬುದ್ಧಮಾಂದ್ಯ ಮಕ್ಕಳು ಕುಣಿದು ಸಂಭ್ರಮಿಸಿದರು. 200ಕ್ಕೂ ಹೆಚ್ಚು ಮಕ್ಕಳಿಗೆ ಕೈಗಡಿಯಾರ ಹಾಗೂ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry