ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬೆಳಕು ತುಂಬಿದ ಆರ್‌ಸಿಬಿ: ಸರ್ಫರಾಜ್

Last Updated 19 ಮಾರ್ಚ್ 2018, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ಗಾಯದ ಸಮಸ್ಯೆಯಿಂದ ಬಳಲಿ ಕ್ರಿಕೆಟ್ ಜೀವನದ ನಿರ್ಣಾಯಕ ಹಂತದಲ್ಲಿದ್ದ ಸಂದರ್ಭದಲ್ಲಿ ಕೈ ಹಿಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸ್ ನನ್ನ ಬಾಳಿಗೆ ಹೊಸ ಬೆಳಕು ತುಂಬಿದೆ’ ಎಂದು ಯುವ ಕ್ರಿಕೆಟಿಗ ಸರ್ಫರಾಜ್ ಖಾನ್‌ ಹೇಳಿದರು.

ಐಪಿಎಲ್‌ಗೆ ಸಂಬಂಧಿಸಿ ಸ್ಟಾರ್ ಸ್ಪೋರ್ಟ್ಸ್ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಗೇಮ್‌ ಪ್ಲಾನ್‌’ ಎಂಬ ಕಾರ್ಯಕ್ರಮದಲ್ಲಿ ಅವರು ಪತ್ರಕರ್ತರ ಜೊತೆ ಸಂವಾದ ನಡೆಸಿದರು.

‘ಗಾಯಾಳುವಾಗಿ ಅಂಗಣದಿಂದ ದೂರ ಉಳಿದಾಗ ಆಟಗಾರನಿಗೆ ಏಕಾಂಗಿತನ ಕಾಡುವುದು ಸಹಜ. ಆದರೆ ನನಗೆ ಇಂಥ ಸಮಸ್ಯೆ ಕಾಡದಂತೆ ಆರ್‌ಸಿಬಿ ನೋಡಿಕೊಂಡಿತು. ಫ್ರಾಂಚೈಸ್‌ನ ಆಡಳಿತ ನನ್ನ ಬೆಂಬಲಕ್ಕೆ ನಿಂತು ಚಿಕಿತ್ಸೆ ಕೊಡಿಸಿತು. ತಂದೆ ಮತ್ತು ಕುಟುಂಬದವರು ಕೂಡ ವಿಶ್ವಾಸ ತುಂಬಿದ್ದರಿಂದ ಮತ್ತೆ ಆಡಲು ಸಜ್ಜಾಗಿದ್ದೇನೆ’ ಎಂದು ಅವರು ಹೇಳಿದರು.

’ಕೆಲವೊಮ್ಮೆ ಗಾಯದ ಸಮಸ್ಯೆಯೂ ಆಟಗಾರನ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾನು ಗಾಯಾಳುವಾದ ನಂತರ ಫಿಟ್‌ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೇನೆ. ಫೀಲ್ಡಿಂಗ್ ತಂತ್ರಗಳ ಕಡೆಗೂ ಗಮನ ನೀಡುತ್ತಿದ್ದೇನೆ. ಈಗ ತಂಡಕ್ಕಾಗಿ ಆಡಿ ಜಯ ಸಾಧಿಸಲು ಕಾತರನಾಗಿದ್ದೇನೆ’ ಎಂದು ಸರ್ಫರಾಜ್ ಭರವಸೆ ವ್ಯಕ್ತಪಡಿಸಿದರು.

ಮೂರು ವರ್ಷಗಳ ಹಿಂದೆ ಐಪಿಎಲ್‌ನಲ್ಲಿ ಆಡುವುದರೊಂದಿಗೆ ಸರ್ಫರಾಜ್‌ ಖಾನ್ ಗಮನ ಸೆಳೆದಿದ್ದರು. ಆಗ 17 ವರ್ಷದವರಾಗಿದ್ದ ಅವರು ಲೀಗ್‌ನಲ್ಲಿ ಆಡಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು.

2016ರಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಅವರು ಟೂರ್ನಿಯಲ್ಲಿ ಭಾರತದ ಪರ ಅತ್ಯಧಿಕ ರನ್‌ (355) ಗಳಿಸಿದ ಆಟಗಾರ ಎಂದೆನಿಸಿಕೊಂಡಿದ್ದರು. ಆದರೆ ಮುಂದಿನ ವರ್ಷ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿ, ಗಾಯಗೊಂಡು ಅರ್ಧಕ್ಕೇ ನಿರ್ಗಮಿಸಿದ್ದರು. ಕಳೆದ ವರ್ಷ ಐಪಿಎಲ್ ಆರಂಭವಾಗಲು ಎರಡು ದಿನ ಇದ್ದಾಗ ಮೊಣಕಾಲು ನೋವಿನಿಂದ ಬಳಲಿದ ಅವರಿಗೆ ಲೀಗ್‌ನಲ್ಲಿ ಒಂದು ಪಂದ್ಯ ಕೂಡ ಆಡಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT