ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು

7
ಅಥಣಿ ತಾಲ್ಲೂಕಿನ ಕಾಗವಾಡದಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆ

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು

Published:
Updated:

ಚಿಕ್ಕೋಡಿ: ‘ಸಾಂಪ್ರದಾಯಿಕ ಬೆಳೆ ಪದ್ದತಿಯನ್ನು ಅನುಸರಿಸುತ್ತಿರುವ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಒತ್ತು ನೀಡಲು ಕೇಂದ್ರ ಸರ್ಕಾರ ರೂಪಿಸಿರುವ ‘ಸೆಕೆಂಡ್‌ ಜನರೇಷನ್ ಇಥೆನಾಲ್’ ನೀತಿ ರೈತರ ಭವಿಷ್ಯ ಬದಲಿಸಲಿದೆ’ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ ಗಡ್ಕರಿ ಹೇಳಿದರು.

ವಿಜಯಪುರ–ಸಂಕೇಶ್ವರ ಮಾರ್ಗದ 120 ಕಿಲೋಮೀಟರ್ ರಾಜ್ಯ ಹೆದ್ದಾರಿಯನ್ನು ₹ 800 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಸೋಮವಾರ ಕಾಗವಾಡ ಗ್ರಾಮದಲ್ಲಿ ಶಿಲಾನ್ಯಾಸ ನೇರವೇರಿಸಿ ಅವರು ಮಾತನಾಡಿದರು.

‘ಹತ್ತಿ ಅಗ್ಗವಾದರೆ, ಬಟ್ಟೆ ದುಬಾರಿಯಾಗಿದೆ. ಮೋಸಂಬಿ ಅಗ್ಗವಾದರೆ, ಮೊಸಂಬಿ ಜ್ಯೂಸ್‌ ದುಬಾರಿಯಾಗಿದೆ. ಹೀಗೆ ಮಾರುಕಟ್ಟೆಯಲ್ಲಿ ಪ್ರತಿ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕುತ್ತಿಲ್ಲ.

ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ದರ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ಮುಂಬರುವ ಹಂಗಾಮಿನಲ್ಲಿ ಈಗ ನೀಡಿರುವಷ್ಟು ದರವೂ ಕಬ್ಬು ಬೆಳೆಗೆ ಸಿಗುವ ಸಾಧ್ಯತೆಯಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ನಾವಿಂದು ಪೆಟ್ರೋಲ್‌ ಮತ್ತು ಡಿಸೇಲ್‌ ಉತ್ಪಾದಿಸುವ ಅನಿವಾರ್ಯತೆ ಎದುರಾಗಿದೆ.

ಅದಕ್ಕಾಗಿ ಆಹಾರ ಧಾನ್ಯ, ಕಬ್ಬು ಮೊದಲಾದ ತ್ಯಾಜ್ಯಗಳಿಂದ ಬಯೋ ಇಥೆನಾಲ್‌ ಉತ್ಪಾದಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. ಕೇಂದ್ರ ಪೆಟ್ರೊಲಿಯಂ ಸಚಿವಾಲಯ ‘ಸೆಕೆಂಡ್‌ ಜೆನರೇಷನ್ ಇಥೆನಾಲ್’ ನೀತಿ ಜಾರಿಗೊಳಿಸಿ ಬಯೋಗ್ಯಾಸ್‌, ಹತ್ತಿ, ಶೇಂಗಾ, ತೊಗರಿ, ಅಕ್ಕಿ ತೌಡುಗಳಿಂದ ಇಥೆನಾಲ್‌ ತಯಾರಿಸಲು ದೇಶದಲ್ಲಿ ನಾಲ್ಕು ಕಾರ್ಖಾನೆಗಳನ್ನು ಸ್ಥಾಪಿಸಲಿದೆ’ ಎಂದು ತಿಳಿಸಿದರು.

‘ಕೇಂದ್ರ ಸಾರಿಗೆ ಇಲಾಖೆಯು ಪೆಟ್ರೋಲ್‌, ಡಿಸೆಲ್‌ ಬದಲಿಗೆ ಸಿಎನ್‌ಜಿ ಸಿಲಿಂಡರ್‌ ಮೂಲಕ ವಾಹನ ಚಾಲನೆಗೆ ಆದ್ಯತೆ ನೀಡಲಾಗುತ್ತಿದೆ. ಕಬ್ಬಿಗೆ ಪರ್ಯಾಯವಾಗಿ ರೈತರು ಬಿದಿರು ಬೆಳೆಯುವತ್ತ ಆಸಕ್ತಿ ವಹಿಸಬೇಕು. ಬೆಳೆ ಪದ್ದತಿ ಬದಲಾವಣೆಯಿಂದ ರೈತರು ಆರ್ಥಿಕ ಉನ್ನತಿ ಹೊಂದಬಹುದು’ ಎಂದರು.

ಕಾಗವಾಡ ಶಾಸಕ ರಾಜು ಕಾಗೆ, ‘ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ರಾಜ್ಯಕ್ಕೆ 5 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚೆ ನಡೆಸಬೇಕು’ ಎಂದು ಸಚಿವ ಗಡ್ಕರಿ ಅವರಿಗೆ ಮನವಿ ಮಾಡಿದರು.

ಬೆಳಗಾವಿ ಸಂಸದ ಸುರೇಶ ಅಂಗಡಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಅಥಣಿ ಶಾಸಕ ಲಕ್ಷ್ಮಣ ಸವದಿ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಚಿದಾನಂದ ಸವದಿ, ಅಜಿತ ಚೌಗುಲೆ, ಪರಪ್ಪ ಸವದಿ, ಜ್ಯೋತಿಗೌಡ ಪಾಟೀಲ, ಅಣ್ಣಸಾಹೇಬ್ ಪಾಟೀಲ, ಅಭಯಕುಮಾರ ಅಕಿವಾಟೆ, ಡಿ.ಸಿ. ನಾಯಿಕ ಹಾಗೂ ಗಜಾನನ ಯರಂಡೊಳಿ ಹಾಜರಿದ್ದರು.

**

‘ನದಿ ಜೋಡಣೆಗೂ ಚಾಲನೆ’

‘ಕೇಂದ್ರ ಸಾರಿಗೆ ಸಚಿವ ನಿತಿನ ಗಡ್ಕರಿ ಅವರು, ರಾಜ್ಯದ ಕಾರವಾರ ಮತ್ತು ಗೋಕರ್ಣ ಬಳಿ ಬಂದರು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ನದಿ ಜೋಡಣೆ ಕಾಮಗಾರಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದಲೇ ಚಾಲನೆ ನೀಡಿದ್ದಾರೆ. ಯುಪಿಎ ಸರ್ಕಾರದ 10 ವರ್ಷದ ಆಡಳಿತಾವಧಿಯಲ್ಲಿ ₹ 8,600 ಕೋಟಿ ವೆಚ್ಚದಲ್ಲಿ 6706 ಕಿ.ಮಿ ರಸ್ತೆ ನಿರ್ಮಿಸಲಾಗಿತ್ತು. ಬಿಜೆಪಿಯ ನಾಲ್ಕು ವರ್ಷದ ಅವಧಿಯಲ್ಲಿ ₹ 30 ಸಾವಿರ ಕೋಟಿ ವೆಚ್ಚದಲ್ಲಿ 13,700 ಕಿ.ಮಿ ರಸ್ತೆ ನಿರ್ಮಿಸಲಾಗಿದೆ’ ಎಂದು ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry