ಸರಳಾದೇವಿ ಕಾಲೇಜು ಸ್ವಾಯತ್ತತೆ ಉಳಿಸಿ

7
ವಿಶ್ವವಿದ್ಯಾಲಯದ ಕಾಲೇಜು ಆಗುವುದು ಬೇಡ: ಟಿ.ದುರುಗಪ್ಪ ಒತ್ತಾಯ

ಸರಳಾದೇವಿ ಕಾಲೇಜು ಸ್ವಾಯತ್ತತೆ ಉಳಿಸಿ

Published:
Updated:

ಬಳ್ಳಾರಿ: ‘ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಇಲ್ಲಿನ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ನಿರ್ಧಾರವನ್ನು ಕೈಬಿಡಬೇಕು’ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ಆಗ್ರಹಿಸಿದೆ.

‘ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಎಂಟು ವರ್ಷವಾದರೂ ಯು.ಜಿ.ಸಿಯ 12ಬಿ ಮಾನ್ಯತೆ ಪಡೆಯಲು ಆಗಿಲ್ಲ. ಮಾನ್ಯತೆ ಪಡೆಯಬೇಕಾದರೆ ವಿಶ್ವವಿದ್ಯಾಲಯದ ಒಂದು ಕಾಲೇಜಾದರೂ ಇರಬೇಕು ಎಂಬ ಷರತ್ತು ಪಾಲನೆಗೋಸ್ಕರ ಹೆಮ್ಮರದಂಥ ಸರಳಾದೇವಿ ಕಾಲೇಜು ಅನ್ನು ಆಯ್ಕೆ ಮಾಡಿರುವುದು ಸರಿಯಲ್ಲ’ ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಟಿ.ದುರುಗಪ್ಪ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಅಸಮಾಧಾನ ವ್ಯಕ್ತಪಡಿಸಿದರು.

‘ವಿಶ್ವವಿದ್ಯಾಲಯ ತನ್ನ ಅಗತ್ಯಕ್ಕೆ ಬೇಕಾದ ಕಾಲೇಜನ್ನು ನಿರ್ಮಿಸಿಕೊಳ್ಳಲಿ. ಅದನ್ನು ಬಿಟ್ಟು ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಲಕ್ಷಾಂತರ ಬಡವರಿಗೆ ಶಿಕ್ಷಣ ಸೌಲಭ್ಯ ಕೊಡುತ್ತಿರುವ ಕಾಲೇಜನ್ನು ಅದರ ಪಾಡಿಗೆ ಬಿಡಲಿ’ ಎಂದು ಆಗ್ರಹಿಸಿದರು.

‘ಕಾಲೇಜು ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡರೆ 1985ರಲ್ಲಿ ₹5 ಲಕ್ಷ ದಾನ ನೀಡಿದ ಸರಳಾದೇವಿಯವರ ಹೆಸರಿಗೆ ದಕ್ಕೆ ಬರುತ್ತದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತದೆ. ಪ್ರತಿ ತರಗತಿಗೆ ಕೇವಲ 50 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಸೀಮಿತಗೊಳ್ಳುತ್ತದೆ. ಈ ಭಾಗದ ಪರಿಶಿಷ್ಟ, ಪರಿಶಿಷ್ಟ ವರ್ಗ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಬಡವರು, ಗಡಿನಾಡಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಮಿತಿ ಮೀರಿದ ನಿರ್ಬಂಧಗಳನ್ನು ಪ್ರವೇಶ ಸಂದರ್ಭದಲ್ಲಿ ಹೇರುವುದರಿಂದ ವಿದ್ಯಾರ್ಥಿಗಳು ಉನ್ನತಶಿಕ್ಷಣ ವ್ಯಾಸಂಗವನ್ನು ಮೊಟಕುಗೊಳಿಸುವ ಅಪಾಯವಿದೆ. ಜಿಲ್ಲೆಯ ಉನ್ನತ ಶಿಕ್ಷಣದ ಮಟ್ಟವೂ ಕುಸಿಯಲಿದೆ’ ಎಂದರು.

‘ವಿಶ್ವವಿದ್ಯಾಲಯ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾರ್ಗಸೂಚಿಗಳು ಭಿನ್ನವಾಗಿರುವುದರಿಂದ ಕಾಲೇಜಿನ ಸುಮಾರು 80 ಜನ ಅತಿಥಿ ಉಪನ್ಯಾಸಕರು ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.

ಸಮಿತಿಯ ಪ್ರಮುಖರಾದ ಕೆ.ಬಸಪ್ಪ, ಹನುಮೇಶ್, ರುದ್ರಮುನಿ, ಡಿ.ಸಿದ್ದೇಶ್, ಎಸ್.ಎಂ.ರಮೇಶ್, ರುದ್ರಗೌಡ, ಶಂಕರ್, ರಫೀ, ರಾಜಶೇಖರ ಇದ್ದರು.

**

‘ಪ್ರಮಾಣ ಪತ್ರ ವಿತರಿಸದ ವಿ.ವಿ’

‘2015-16, 2016-17 ಮತ್ತು 2017-18ನೇ ಸಾಲಿನಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಸಂಬಂಧಿಸಿ ವಿಶ್ವವಿದ್ಯಾಲಯದಿಂದ ಕಾಲೇಜು ಅನುಮೋದನೆ ಪಡೆಯಬೇಕಾಗಿತ್ತು. ಆದರೆ ಪಡೆದಿಲ್ಲ ಎಂಬ ಕಾರಣದಿಂದ ಸ್ವಾಯತ್ತ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿಗಳಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ವಿತರಸಿಲ್ಲ’ ಎಂದು ದುರುಗಪ್ಪ ದೂರಿದರು.

‘ಕಾಲೇಜನ್ನು ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿಸಿಕೊಳ್ಳಿ ಎಂದು ಪ್ರಾಂಶುಪಾಲರು ಕೋರಿಕೊಂಡ ಪರಿಣಾಮ ಈ ಸನ್ನಿವೇಶ ನಿರ್ಮಾಣವಾಗಿದೆ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry