ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ, ಈರುಳ್ಳಿ ಬೆಲೆ ಕುಸಿತ

ತರಕಾರಿ ವ್ಯಾಪಾರ ಭರಾಟೆ ಜೋರು; ಹೂವು, ಹಣ್ಣುಗಳ ಬೆಲೆ ಏರಿಕೆ
Last Updated 20 ಮಾರ್ಚ್ 2018, 7:02 IST
ಅಕ್ಷರ ಗಾತ್ರ

ಚಾಮರಾಜನಗರ: ಮೂರು ನಾಲ್ಕು ತಿಂಗಳಿನಿಂದ ಏರಿಕೆಯಾಗಿದ್ದ ಈರುಳ್ಳಿ ಬೆಲೆಯು ಈಗ ಇಳಿಕೆಯಾಗಿದೆ. ಆದರೆ, ಟೊಮೆಟೊ ಬೆಲೆ ತೀರಾ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ.

ಎರಡು ವಾರಗಳ ಹಿಂದೆ ಕೆ.ಜಿ.ಗೆ ₹ 45ರಿಂದ 55ಕ್ಕೆ ಮಾರಾಟವಾಗುತ್ತಿದ್ದ ಸಣ್ಣ ಈರುಳ್ಳಿ ₹ 20ರಿಂದ 25ಕ್ಕೆ ಕುಸಿತವಾಗಿದೆ. ದಪ್ಪ ಈರುಳ್ಳಿ ಕೆ.ಜಿ.ಗೆ ₹ 20ರಂತೆ ಮಾರಾಟವಾಗುತ್ತಿದೆ.

‘ಮಾರುಕಟ್ಟೆಗೆ ಟೊಮೆಟೊ ಗರಿಷ್ಠ ಆವಕವಾಗುತ್ತಿದ್ದು, ಬೆಲೆ ತೀವ್ರ ಕುಸಿತ ಕಂಡಿದೆ. ಕೆ.ಜಿ.ಗೆ ಕೇವಲ ₹ 4ರಿಂದ 5ಕ್ಕೆ ಮಾರಾಟವಾಗುತ್ತಿದೆ. ಹೀಗಾಗಿ, ಟೊಮೆಟೊ ಬೆಳೆದ ರೈತರು ಕಣ್ಣೀರು ಹಾಕುವ ಸ್ಥಿತಿಗೆ ಬಂದಿದ್ದಾರೆ’ ಎಂದು ರೈತ ರವಿ ‘ಪ್ರಜಾವಾಣಿ’ಯೊಂದಿಗೆ ನೋವು ತೋಡಿಕೊಂಡರು.

‘ಜಿಲ್ಲೆಯಲ್ಲಿ ಬೆಳೆದ ಈರುಳ್ಳಿ ಹಾಗೂ ಟೊಮೆಟೊ ಮಾರುಕಟ್ಟೆಗೆ ಹೆಚ್ಚಾಗಿ ಪೂರೈಕೆಯಾಗುತ್ತಿದ್ದು, ದರ ಕುಸಿದಿದೆ. ಆದರೆ, ಬೇರೆ ಜಿಲ್ಲೆಗಳಿಂದ ಆಮದಾಗುವ ತರಕಾರಿಗಳ ಬೆಲೆ ಕಳೆದ ವಾರದಷ್ಟೇ ಇದ್ದು, ಸ್ಥಿರತೆ ಕಾಯ್ದುಕೊಂಡಿದೆ’ ಎಂದು ತರಕಾರಿ ವ್ಯಾಪಾರಿ ರಘು ತಿಳಿಸಿದರು.

ನಗರದ ಮಾರುಕಟ್ಟೆಯಲ್ಲಿ ಟೊಮೆಟೊ, ಈರುಳ್ಳಿ ಜೊತೆ ಇತರೆ ತರಕಾರಿಗಳ ಬೆಲೆಯೂ ಕಡಿಮೆಯಾಗಿದೆ. ಕೆ.ಜಿ.ಗೆ ₹40ರಿಂದ 50ರವರೆಗೆ ಮಾರಾಟವಾಗುತ್ತಿದ್ದ ಹಸಿಮೆಣಸಿನಕಾಯಿ ಈ ವಾರ ₹25ರಿಂದ 30ಕ್ಕೆ ಇಳಿಕೆಯಾಗಿದೆ.

ಕ್ಯಾರೆಟ್‌, ಬೀಟ್‌ರೂಟ್‌, ಎಲೆ ಕೋಸು ಹಾಗೂ ಹೂ ಕೋಸು ಸೇರಿದಂತೆ ಇತರೆ ತರಕಾರಿ ಬೆಲೆ ಕೆ.ಜಿ.ಗೆ ₹ 20ಕ್ಕೆ ಇಳಿದಿದೆ. ದಪ್ಪ ಮೆಣಸಿಕಾಯಿ, ಆಲೂಗಡ್ಡೆ, ಹೂಕೋಸು ಕೊಂಚ ತುಟ್ಟಿಯಾಗಿದ್ದು, ಉಳಿದಂತೆ ಬೀನ್ಸ್‌, ಸೌತೆಕಾಯಿ, ಹೀರೇಕಾಯಿ ಬೆಲೆ ಸ್ಥಿರವಾಗಿದೆ.

‘ನಗರಕ್ಕೆ ಹಾಸನ, ಮೈಸೂರು ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಮಾರುಕಟ್ಟೆಗೆ ತರಕಾರಿ ಪೂರೈಕೆಯಾಗು ತ್ತಿದ್ದು, ಕಳೆದ ಎರಡು ವಾರಗಳಿಂದ ಕೆಲವು ತರಕಾರಿ ಪೂರೈಕೆ ಹೆಚ್ಚಾಗಿದೆ. ಜತೆಗೆ, ವ್ಯಾಪಾರ ಉತ್ತಮ ವಾಗಿ ನಡೆಯುತ್ತಿದೆ’ ಎಂದು ವ್ಯಾಪಾರಿಯೊ ಬ್ಬರು ತಿಳಿಸಿದರು.

ಹಣ್ಣು, ಹೂವು ಬೆಲೆ ಏರಿಕೆ: ಯುಗಾದಿ ಹಬ್ಬದ ಅಂಗವಾಗಿ ನಗರದ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ಹೂವಿನ ಬೆಲೆ ಏರಿಕೆಯಾಗಿದ್ದು, ಅದರ ಬಿಸಿ ಇನ್ನೂ ಇದೆ.

‘ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಹಾಗೂ ಸುತ್ತಲ ಗ್ರಾಮಗಳಲ್ಲಿ ನಡೆಯುವ ಯುಗಾದಿ ವಿಶೇಷ ಕಾರ್ಯಕ್ರಮದಿಂದ ಹೂ ಮತ್ತು ಬಾಳೆ ಹಣ್ಣುಗಳ ಬೇಡಿಕೆ ಹೆಚ್ಚಾಳವಾಗಿ, ಬೆಲೆ ಏರಿಕೆಯಾಗಿದೆ’ ಎನ್ನುತ್ತಾರೆ ವ್ಯಾಪಾರಿಗಳು. ‘ಕಳೆದ 2 ವಾರಗಳಿಂದ ಏಲಕ್ಕಿ ಬಾಳೆಹಣ್ಣಿನ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಆವಕ ಕುಸಿತವಾಗಿರುವುದರಿಂದ ಬೆಲೆ ಹೆಚ್ಚಳವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಹಣ್ಣು ಕೆ.ಜಿ.ಗೆ ₹ 80 ಹಾಗೂ ಪಚ್ಚಬಾಳೆ ಹಣ್ಣು ₹ 40 ಧಾರಣೆ ಇದೆ’ ಎಂದು ಬಾಳೆ ಹಣ್ಣಿನ ವ್ಯಾಪಾರಿ ರಾಜೇಂದ್ರ ತಿಳಿಸಿದರು.

ಹೂವಿನ ಬೆಲೆಯು ಕಳೆದ ವಾರಕ್ಕಿಂತ ಗಣನೀಯವಾಗಿ ಏರಿಕೆಯಾಗಿದೆ. ಚೆಂಡು ಹೂವು ₹ 20, ಕಾಕಡ ₹ 40, ಕನಕಾಂಬರ ₹ 50ರಿಂದ 60, ಸೂಜಿ ಮಲ್ಲಿಗೆ ₹ 40, ಗುಲಾಬಿ (ಒಂದಕ್ಕೆ) ₹ 10 ಹಾಗೂ ಹೂವಿನ ಹಾರ ₹ 60ರಿಂದ 300ರವರೆಗೂ ಮಾರಾಟವಾಗುತ್ತಿದೆ.
**
ತರಕಾರಿ ಬೆಲೆ (ಕೆಜಿಗೆ ₹)

ದಪ್ಪಮೆಣಸಿಕಾಯಿ 40
ಶುಂಠಿ  40
ಹೀರೇಕಾಯಿ  20
ಕೋಸು  15
ಬೂದುಗುಂಬಳ 10
ಸಿಹಿಕುಂಬಳ ಕಾಯಿ 15
ಬಿಳಿ ಬದನೆಕಾಯಿ 15
ಮೂಲಂಗಿ  20
ನುಗ್ಗೆಕಾಯಿ  50
ತೆಂಗಿನಕಾಯಿ 40–50

ಹಣ್ಣು ಧಾರಣೆ (ಕೆಜಿಗೆ ₹)
ಸೇಬು  100-120
ಕಿತ್ತಳೆ  80
ಮೊಸಂಬಿ  80
ದ್ರಾಕ್ಷಿ  100
ದಾಳಿಂಬೆ  80
ಸಪೋಟ  60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT