ಮುಗಿಯದ ಕಾಮಗಾರಿ: ಜನರ ಪರದಾಟ

7
ಕುಂಟತ್ತಾ ಸಾಗಿದ ಸುವರ್ಣಾವತಿ ನದಿ ಸೇತುವೆ ದುರಸ್ತಿ ಕಾರ್ಯ

ಮುಗಿಯದ ಕಾಮಗಾರಿ: ಜನರ ಪರದಾಟ

Published:
Updated:
ಮುಗಿಯದ ಕಾಮಗಾರಿ: ಜನರ ಪರದಾಟ

ಯಳಂದೂರು: ಸುವರ್ಣಾವತಿ ನದಿಗೆ ಪಟ್ಟಣದಲ್ಲಿ ನಿರ್ಮಿಸಿರುವ ಸೇತುವೆಯ ದುರಸ್ತಿ ಕಾಮಗಾರಿ ಕುಂಟುತ್ತಾ ಸಾಗಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವ ಸ್ಥಿತಿ ಉಂಟಾಗಿದೆ.

ಕಾಮಗಾರಿ ಆರಂಭವಾಗಿ ಒಂದು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಭಾರಿ ಅನನುಕೂಲವಾಗಿದೆ.

ತಾಲ್ಲೂಕಿನ ಗುಂಬಳ್ಳಿ, ಯರಗಂಬಳ್ಳಿ, ಗಂಗವಾಡಿ ಮೊದಲಾದ ಕಡೆ ಮರಳು ಮತ್ತು ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದ ಕಾರಣ ಅಧಿಕ ಭಾರ ಹೊತ್ತ ವಾಹನಗಳು ಇಲ್ಲಿ ಸಂಚರಿಸುತ್ತಿದ್ದವು. ಅವುಗಳ ಭಾರ ತಡೆಯಲಾರದೆ ಕುಸಿಯುವ ಹಂತಕ್ಕೆ ತಲುಪಿತ್ತು.

ಅಲ್ಲದೇ, ಮಳೆಗಾಲದಲ್ಲಿ ಸೇತುವೆ ತಳಭಾಗದಲ್ಲಿ ನೀರು ಸೋರಿಕೆಯಾಗುತ್ತಿತ್ತು.

ಆಗ ಸ್ಥಳೀಯರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ಸಲ್ಲಿಸಿದ ನಂತರ ಅಧಿಕ ಭಾರ ಹೊತ್ತ ವಾಹನಗಳನ್ನು ಓಡಾಟವನ್ನು ನಿಷೇಧಿಸಲಾಗಿತ್ತು.

ಸಾರ್ವಜನಿಕರು ಸೇತುವೆ ದುರಸ್ತಿ ಕಾಮಗಾರಿ ನಡೆಸುವಂತೆ ಮೇಲಿಂದ ಮೇಲೆ ಒತ್ತಡ ಹೇರಿದ್ದರಿಂದ ಶಾಸಕರು ದುರಸ್ತಿ ಕಾಮಗಾರಿಗೆ ₹ 96 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದರು. ನಂತರ ಸೇತುವೆ ತಳಭಾಗದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

‘ಚಾಮರಾಜನಗರ, ಬಿಳಿಗಿರಿಬೆಟ್ಟ ಹಾಗೂ ಕೊಳ್ಳೇಗಾಲ ಮುಂತಾದ ಪಟ್ಟಣಗಳಿಗೆ ಹೋಗುವ ಅಪಾರ ಸಂಖ್ಯೆಯ ವಾಹನಗಳೂ ತಾತ್ಕಾಲಿಕ ರಸ್ತೆಯಲ್ಲೇ ಸಂಚರಿಸುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಿದೆ. ಇದರಿಂದಾಗಿ ಪಾದಚಾರಿಗಳು ಮತ್ತು ಸೈಕಲ್‌ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂತೆಯ ದಿನವಾದ ಭಾನುವಾರ ಇಲ್ಲಿ ಓಡಾಡುವುದೇ ದುಸ್ತರವಾಗಿರುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಬಳೇಪೇಟೆಯ ವೆಂಕಟೇಶ್ ಮತ್ತು ಸೋಮಶೇಖರ್.

‘ಬಳೇಪೇಟೆಗೆ ಸೇರುವ ರಸ್ತೆ ಇದಾಗಿದ್ದು ಇಳಿಜಾರಿನಿಂದ ಕೂಡಿದೆ. ತಾತ್ಕಾಲಿಕ ರಸ್ತೆಯ ಡಾಂಬರ್‌ ಕಿತ್ತು ಬಂದಿದ್ದು, ಕಾಂಕ್ರೀಟ್ ಹಾಕಿದರೂ ಉಳಿಯುತ್ತಿಲ್ಲ. ಇಳಿಜಾರಿನಲ್ಲಿ ರಾತ್ರಿ ಸಮಯ ಅನೇಕ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ. ಸಂಬಂಧಪಟ್ಟವರು ಗಮನಹರಿಸಿ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಬೇಕು ಎಂದು ಪಟ್ಟಣದ ನಿಂಗರಾಜು, ರೇವಣ್ಣ, ಬಸವರಾಜು ಒತ್ತಾಯಿಸಿದ್ದಾರೆ.

‘ಗುತ್ತಿಗೆ ಪಡೆದಿರುವ ಕಂಪನಿಗೆ ಮಾಹಿತಿ ನೀಡಲಾಗಿದೆ. ಈಗಾಗಲೇ ಶೇ 80 ರಷ್ಟು ಕೆಲಸ ಮುಗಿದಿದೆ. ಒಂದು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಬಿ. ದೊರೆಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry