ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ಗ್ರಾಮಗಳ ಕೆರೆಗಳಿಗೆ ನೀರು

ಕಾಂಗ್ರೆಸ್ ಮುಖಂಡ ಎಸ್.ಎಂ.ನಾಗರಾಜ್ ಹೇಳಿಕೆ
Last Updated 20 ಮಾರ್ಚ್ 2018, 7:41 IST
ಅಕ್ಷರ ಗಾತ್ರ

ಅಜ್ಜಂಪುರ: ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರಿಂದಾಗಿ ಭದ್ರಾ ಮೇಲ್ದಂಡೆ ಸುರಂಗ ಮಾರ್ಗ ಸಂತ್ರಸ್ತ 16 ಗ್ರಾಮಗಳ ಕೆರೆಗಳಿಗೆ ನೀರು ಹರಿಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಸ್.ಎಂ.ನಾಗರಾಜ್ ತಿಳಿಸಿದರು.

ಪಟ್ಟಣ ಸಮೀಪ ಬಾಳಯ್ಯನ ಹೊಸೂರು ಗ್ರಾಮದಲ್ಲಿ ಈಚೆಗೆ ರೈತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದರು. ಭದ್ರಾ ಯೋಜನೆಯ 9 ಕಿ.ಮೀ. ಸುರಂಗ ಮಾರ್ಗದ ಮೇಲ್ಭಾಗದ ಹಳ್ಳಿಗಳಲ್ಲಿ ಬರಿದಾಗಿರುವ ಕೆರೆಗಳು, ಬತ್ತಿರುವ ಕೊಳವೆ ಬಾವಿಗಳು, ಒಣಗಿರುವ ತೋಟಗಳು, ನೀರಿಲ್ಲದೇ ಜನ-ಜಾನುವಾರುಗಳ ಪರದಾಟದ ಬಗ್ಗೆ ನೀರಾವರಿ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಭದ್ರಾದ ವ್ಯವಸ್ಥಾಪಕ ಜಯಪ್ರಕಾಶ್ ಅವರಿಗೆ ನೀಡಿದ ಆದೇಶದ ಅನ್ವಯ ಏಪ್ರಿಲ್ ತಿಂಗಳಲ್ಲಿಯೂ ನಮ್ಮ ಕೆರೆಗಳಿಗೆ ಭದ್ರಾದಿಂದ ನೀರು ಹರಿಯುತ್ತಿದೆ’ ಎಂದು ತಿಳಿಸಿದರು.

‘ವಿರೋಧ ಪಕ್ಷದವರಂತೆ ಕೆರೆಗೆ ನೀರು ಹರಿಸೋ ಸಂಬಂಧ ‘ವಿಧಾನಸಭೆಯಲ್ಲಿ ಚರ್ಚಿಸುವೆ’ ಎಂದಿದ್ದ ಜನಪ್ರತಿನಿಧಿಯಿಂದ ಕೆರೆಗಳಿಗೆ ನೀರು ಹರಿದಿಲ್ಲ. ಇನ್ನು ನೀರು ಹರಿದ ಮೇಲೆ ಪೂಜೆ ಸಲ್ಲಿಸಿ, ವಿಷಯವನ್ನು ಪತ್ರಿಕೆ, ಫೇಸ್‌ಬುಕ್‌ಗಳಲ್ಲಿ ಪ್ರಚಾರ ಮಾಡಿರುವ ಅವರು, ನೀರು ಹರಿಸಿದ ಕ್ರೆಡಿಟ್ ಪಡೆಯಲು ಯತ್ನಿಸಿರುವುದು ಹಾಸ್ಯಾಸ್ಪದ. ಕೆರೆಗೆ ನೀರು ಹರಿಯುತ್ತಿರುವ ಹಿಂದಿನ ಸತ್ಯ 16 ಕೆರೆ ಭಾಗದ ಗ್ರಾಮಸ್ಥರಿಗೆ ತಿಳಿದಿದೆ’ ಎಂದರು.

ನೀರು ಪೂರೈಕೆ ಆಗುತ್ತಿರುವ ವಿಷಯದಲ್ಲಿ ಅಮೃತಾಪುರ ಹೋಬಳಿ ಹಾಗೂ ಹುಣಸಘಟ್ಟದ ತಾಂಡ್ಯದಲ್ಲೂ ಹೆಚ್ಚು ನೀರು ಪಡೆದುಕೊಳ್ಳಲು ರೈತರು ಒತ್ತಡ ಹಾಕುತ್ತಿದ್ದಾರೆ. ಎಲ್ಲ ಭಾಗದಲ್ಲೂ ನೀರಿನ ಸಮಸ್ಯೆ ಇದೆ. ಎಲ್ಲ ರೈತರ ಸಮಸ್ಯೆ ಒಂದೇ ಎಂಬುದನ್ನು ರೈತರು ತಿಳಿಯಬೇಕು. ಪರಸ್ಪರ ಮಾಡಿಕೊಂಡ ಒಪ್ಪಂದದ ಅನ್ವಯ ನೀರು ಹರಿಸಿಕೊಳ್ಳಬೇಕು. ಯಾವುದೇ ಸಮಸ್ಯೆಗೆ ಅವಕಾಶಕೊಡದೇ ಶಾಂತಿಯುತವಾಗಿ ನೀರು ಹಂಚಿಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಅತ್ತಿಮೊಗ್ಗೆ ಭಾಗದ ಹೊಸಕಟ್ಟೆ, ಅಯ್ಯನಕೆರೆ, ಕೆಲ್ಸಿ ಕಟ್ಟೆಗೂ ಪೈಪ್‌ಲೈನ್ ಅಳವಡಿಸಿ, ನೀರು ಹರಿಸಲು ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಇದೇ ವೇಳೆ ರೈತ ನಾಗರಾಜಪ್ಪ ಆಗ್ರಹಿಸಿದರು.

ನಮ್ಮ ಬದುಕಿಗೆ ಆಧಾರಸ್ತಂಭ ಆಗಿರುವ ತೋಟಗಳು ಒಣಗುತ್ತಿರುವ ಇಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ಹರಿಸಲು ಆದೇಶಿಸಿದ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿ ಬರುತ್ತೇವೆ ಎಂದು ರೈತ ಅತ್ತಿಮೊಗ್ಗೆ ಶಿವಣ್ಣ ತಿಳಿಸಿದರು.

ರೈತರಾದ ಬಸವರಾಜು, ನಾಗರಾಜಪ್ಪ, ಕಲ್ಲುಶೆಟ್ಟಿಹಳ್ಳಿ ಶಿವಣ್ಣ ಹಾಗೂ ಅತ್ತಿಮೊಗ್ಗೆ, ಬಾಳಯ್ಯನಹೊಸೂರು, ತಿಪ್ಪಗೊಂಡನಹಳ್ಳಿ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT