ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಬಯಲು ಶೌಚವೇ ಗತಿ!

7
ಎಸ್‌ಸಿ, ಎಸ್‌ಟಿ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯದ ದುಸ್ಥಿತಿ

ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಬಯಲು ಶೌಚವೇ ಗತಿ!

Published:
Updated:
ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಬಯಲು ಶೌಚವೇ ಗತಿ!

ಹೊಸದುರ್ಗ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಬಯಲು ಶೌಚವೇ ಗತಿ ಎಂಬಂತಾಗಿದೆ.

ಹಾಸ್ಟೆಲ್‌ ಕಟ್ಟಡದ ಒಳಗೆ ನಾಲ್ಕು ಶೌಚದ ಕೊಠಡಿಗಳಿದ್ದು, ಒಂದಕ್ಕೆ ಮಾತ್ರ ಬಾಗಿಲು ಇದೆ. ಬಕೆಟ್‌ ಹಾಗೂ ಚೊಂಬು(ಚರಿಗೆ) ಇಲ್ಲ. ಸ್ವಚ್ಛತೆ ಕಾಪಾಡುವವರಿಲ್ಲ. ಹಾಸ್ಟೆಲ್‌ನಲ್ಲಿ 80ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು ಒಂದು ಶೌಚಾಲಯ ಸಾಕಾಗುತ್ತಿಲ್ಲ. ಕಾಲೇಜುಗಳಿಗೆ ಬೇಗನೆ ಹೋಗಬೇಕಾಗಿರುವುದರಿಂದ ಬಯಲು ಶೌಚಕ್ಕೆ ಹೋಗುತ್ತಿದ್ದೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಶೌಚಾಲಯದ ಗುಂಡಿ ಸರಿಯಾಗಿ ಮುಚ್ಚಿಲ್ಲ. ಅಡುಗೆ ಕೋಣೆಯಲ್ಲಿ ಪಾತ್ರೆಗಳನ್ನು ತೊಳೆದ ನೀರು ಗುಂಡಿಗೆ ಹೋಗುತ್ತಿಲ್ಲ.

ಕಟ್ಟಡದ ಸಮೀಪದಲ್ಲಿಯೇ ಕಲ್ಮಶ ನೀರು ನಿಲ್ಲುತ್ತಿದೆ. ಇದರಿಂದ ಗಬ್ಬು ವಾಸನೆ ಬರುತ್ತಿದ್ದು ಇರಲು ಆಗುತ್ತಿಲ್ಲ. ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಎಲ್ಲಾ ಕೊಠಡಿಗಳಲ್ಲಿ ಫ್ಯಾನ್‌ ವ್ಯವಸ್ಥೆಯೂ ಇಲ್ಲ. ಸೊಳ್ಳೆ ಬತ್ತಿ  ಕೊಡುತ್ತಿಲ್ಲ. ಇದರಿಂದ ರೋಗ–ರುಜಿನಗಳಿಗೆ ತುತ್ತಾಗುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ‘ಪ್ರಜಾವಾಣಿ’ ಜತೆಗೆ ತಮ್ಮ ಅಳಲು ತೋಡಿಕೊಂಡರು.

ಎರಡು ತಿಂಗಳಿನಿಂದ ನಿಲಯ ಪಾಲಕರು ಬರುತ್ತಿಲ್ಲ. ಅಡುಗೆಯವರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ‌ ಎಂದು ವಿದ್ಯಾರ್ಥಿಗಳಾದ ಕಾರ್ತಿಕ್‌, ಸುದೀಪ್‌ ಬೇಸರ ವ್ಯಕ್ತಪಡಿಸಿದರು.

‘ತಾಜಾ ತರಕಾರಿಯನ್ನು ತರುತ್ತಿಲ್ಲ. ತಿಂಡಿ ಹಾಗೂ ಊಟ ಕೊಡುವ ಒಂದು ತಾಸು ಮೊದಲು ಬಂದು ಅಡುಗೆ ತಯಾರಿಸಿ ಪಾತ್ರೆಗೆ ಹಾಕಿ ಹೋಗುತ್ತಾರೆ. ನಾವೇ ಬಡಿಸಿಕೊಂಡು ತಿನ್ನಬೇಕು. ಊಟದಲ್ಲಿ ರುಚಿ, ಶುಚಿತ್ವ ಇರುವುದಿಲ್ಲ. ಕಾವಲುಗಾರರು ಇಲ್ಲ. ಕಾಯಿಲೆ ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವವರಿಲ್ಲ. ಕಿಟಕಿಗಳಿಗೆ ಗ್ಲಾಸ್‌ ಹಾಕಿಸಿಲ್ಲ. ಇದರಿಂದ ಹೆಗ್ಗಣಗಳು ನುಗ್ಗುತ್ತಿವೆ. ಮುಖ್ಯಗೇಟ್‌ ರಾತ್ರಿ ಹೊತ್ತು ತೆರೆದಿರುವುದರಿಂದ ಸಮೀಪದ ಗುಡ್ಡವಿದಲ್ಲಿರುವ ಚಿರತೆ, ಕರಡಿಗಳು ಬರುತ್ತಿದ್ದು ಭಯಭೀತರಾಗಿ ಜೀವನ ಸಾಗಿಸುತ್ತಿದ್ದೇವೆ’ ಎಂದು ವಿದ್ಯಾರ್ಥಿಗಳಾದ ಆಕಾಶ್‌, ಕಿರಣ್‌, ಹರೀಶ್‌, ಹಾಲೇಶ್‌, ಹುಲಿಗೇಶ್‌ ಸಮಸ್ಯೆಗಳ ಪಟ್ಟಿಯನ್ನೇ ಮುಂದಿಟ್ಟರು.

ಗ್ರಂಥಾಲಯ ವ್ಯವಸ್ಥೆಯಿಲ್ಲ. ಪತ್ರಿಕೆಗಳು ಸರಿಯಾಗಿ ಬರುತ್ತಿಲ್ಲ. ಶುದ್ಧ ಕುಡಿಯುವ ನೀರು ಸಮರ್ಪಕವಾಗಿಲ್ಲ. ಟೂತ್‌ಪೇಸ್ಟ್‌, ಬ್ರೆಶ್‌, ಸೋಪು, ಎಣ್ಣೆ, ಒಳಗೊಂಡಿರುವ ಕಿಟ್‌ ಕೊಡುತ್ತಿಲ್ಲ. ಹಾಸ್ಟೆಲ್‌ನಲ್ಲಿದ್ದ ಟಿ.ವಿ, ಜಿಮ್‌ ಸಾಮಗ್ರಿ, ಸುಮಾರು 100 ಹಾಸಿಗೆ ಕಣ್ಮರೆಯಾಗಿವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಸರ್ಕಾರದಿಂದ ನಮಗೆ ಸಿಗುವ ಸೌಲಭ್ಯವನ್ನು ಕೊಡಿ ಎಂದು ಸಂಬಂಧಪಟ್ಟವರನ್ನು ಕೇಳಿದರೂ ಸ್ಪಂದಿಸುತ್ತಿಲ್ಲ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರ ತವರು ಜಿಲ್ಲೆಯಲ್ಲಿಯೇ ಪರಿಸ್ಥಿತಿ ಹೀಗಾದರೆ ಹೇಗೆ ಎಂಬುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.

ಇನ್ನಾದರೂ ವಿದ್ಯಾರ್ಥಿಗಳ ಹಿತ ಕಾಪಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಪರಿಸ್ಥಿತಿ ಮುಂದುವರಿಯಬಾರದು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

**

‘ವಿದ್ಯಾರ್ಥಿಗಳ ದೌರ್ಜನ್ಯ’

‘ಮೂಲಸೌಕರ್ಯ ಕಲ್ಪಿಸಲು, ಸರ್ಕಾರದ ಸೌಲಭ್ಯ ವಿತರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಆದರೆ ವಿದ್ಯಾರ್ಥಿಗಳು ಉದ್ಧಟತನ ಮತ್ತು ಅಸಭ್ಯತೆಯಿಂದ ನಡೆದುಕೊಂಡು ವಾರ್ಡನ್‌, ಅಡುಗೆಯವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅಲ್ಲಿಗೆ ಬರುವ ವಾರ್ಡನ್‌ 6 ತಿಂಗಳು ಕೆಲಸ ಮಾಡದೇ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ವ್ಯವಸ್ಥೆ ಸರಿ ಮಾಡಲು ಹೋದ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ’ ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ವಿ.ಕೆ.ಬಡಿಗೇರ್‌ ಅಳಲು ತೋಡಿಕೊಂಡರು.

‘ತಾಲ್ಲೂಕಿನಲ್ಲಿ ಎಸ್‌ಸಿ, ಎಸ್‌ಟಿ 7 ಹಾಸ್ಟೆಲ್‌ ಇದ್ದು, 3 ಮಂದಿ ಮಾತ್ರ ವಾರ್ಡನ್‌ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉದ್ಧಟತನ ಪ್ರದರ್ಶಿಸುವ ವಿದ್ಯಾರ್ಥಿಗಳ ಹಾಸ್ಟೆಲ್‌ ನಡೆಸುವುದು ಕಷ್ಟಸಾಧ್ಯವಾಗುತ್ತಿದೆ’ ಎಂದರು.

**

ಹಾಸ್ಟೆಲ್‌ಗೆ ಭೇಟಿ ನೀಡಿ ಮಕ್ಕಳ ಸಮಸ್ಯೆ ಆಲಿಸಿದ್ದೇನೆ. ಮೂಲಸೌಕರ್ಯ ಹಾಗೂ ಸ್ವಚ್ಛತೆ ಕೊರತೆ ಇದ್ದು, ಕ್ರಮ ಕೈಗೊಳ್ಳಲಾಗುವುದು.

- ಪ್ರೇಮಾ ರವೀಂದ್ರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ

-ಎಸ್‌.ಸುರೇಶ್‌ ನೀರಗುಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry