₹ 4,549 ಕೋಟಿ ಸಾಲ ವಿತರಣೆ ಗುರಿ

7
ಜಿಲ್ಲಾ ವಾರ್ಷಿಕ ಸಾಲ ಯೋಜನೆ ಪುಸ್ತಕ ಲೋಕಾರ್ಪಣೆಯಲ್ಲಿ ಲೀಡ್‌ ಬ್ಯಾಂಕ್‌ನ ವ್ಯವಸ್ಥಾಪಕ ಎರ್ರಿಸ್ವಾಮಿ

₹ 4,549 ಕೋಟಿ ಸಾಲ ವಿತರಣೆ ಗುರಿ

Published:
Updated:

ದಾವಣಗೆರೆ: ಲೀಡ್‌ ಬ್ಯಾಂಕ್‌ 2018–19ನೇ ಸಾಲಿನಲ್ಲಿ ಒಟ್ಟು ₹ 4,549.34 ಕೋಟಿ ಸಾಲ ವಿತರಣೆಯ ಗುರಿ ಹೊಂದಿದೆ ಎಂದು ಲೀಡ್‌ ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕ ಎನ್‌.ಟಿ. ಎರ್‍ರಿಸ್ವಾಮಿ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ‘ದಾವಣಗೆರೆ ಜಿಲ್ಲಾ ವಾರ್ಷಿಕ ಸಾಲ ಯೋಜನೆ (ಡಿಸಿಪಿ) ಪುಸ್ತಕ ಲೋಕಾರ್ಪಣೆ’ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಸಾಲಿನಲ್ಲಿ ₹ 3,704.28 ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿತ್ತು. ಈ ಬಾರಿ ಹೆಚ್ಚುವರಿಯಾಗಿ ₹ 845.06 ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದೆ. ಇದರಿಂದ ವಾರ್ಷಿಕ ಶೇ 22 ಹೆಚ್ಚುವರಿ ಗುರಿ ನಿರೀಕ್ಷಿಸಲಾಗಿದ್ದು, ಇದರಲ್ಲಿ ₹ 3,866.49 ಕೋಟಿ ಆದ್ಯತಾ ಸಾಲವಾಗಿದೆ. ಉಳಿದಂತೆ ₹ 682.85 ಕೋಟಿ ಆದ್ಯತಾ ರಹಿತ ಸಾಲದ ಗುರಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕೃಷಿ, ಕೈಗಾರಿಕೆ ಹಾಗೂ ಶೈಕ್ಷಣಿಕ ಸಾಲ ವಿತರಣೆಗೆ ಆದ್ಯತೆ ನೀಡ ಲಾಗುವುದು. ಸಾಲ ವಿತರಣೆಯಲ್ಲಿಯೂ ಶೇ 100ರಷ್ಟು ಗುರಿ ಸಾಧಿಸಬೇಕಿದೆ. ಕೆಲ ಯೋಜನೆಗಳ ಅಡಿ ಸಾಲ ವಿತರಣೆಯಲ್ಲಿ ಬ್ಯಾಂಕ್‌ಗಳು ನಿರೀಕ್ಷಿತ ಮಟ್ಟದ ಗುರಿ ಸಾಧಿಸದೇ ಇದ್ದಲ್ಲಿ ಅಂತಹ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತಹ ನಿಯಮಗಳಿವೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ನಿಗದಿ ಪಡಿಸಿರುವ ಒಟ್ಟು ₹ 4,549.34 ಕೋಟಿ ಸಾಲದಲ್ಲಿ ದಾವಣಗೆರೆ ತಾಲ್ಲೂಕಿಗೆ ₹ 2,445.67 ಕೋಟಿ ಸಾಲ ಹಂಚಿಕೆಯಾಗಿದೆ. ಉಳಿದ ₹ 2,103.34 ಕೋಟಿ ಸಾಲವು ಇನ್ನುಳಿದ ತಾಲ್ಲೂಕುಗಳಿಗೆ ಹಂಚಿಕೆಯಾಗಲಿದೆ ಎಂದು ತಿಳಿಸಿದರು.

ಶೈಕ್ಷಣಿಕ ಸಾಲ ವಿತರಣೆಗೆ ಆದ್ಯತೆ ಇರಲಿ: ಕೃಷಿ ಮತ್ತು ಕೈಗಾರಿಕೆ ವಲಯಕ್ಕೆ ಸಾಲ ವಿತರಣೆಯಲ್ಲಿ ಆದ್ಯತೆ ನೀಡಬೇಕು. ಅದರಲ್ಲೂ ವಿದ್ಯಾರ್ಥಿಗಳು ಸಾಲ ಮರುಪಾವತಿ ಮಾಡಲ್ಲ ಎಂಬ ಕಾರಣ ನೀಡಿ, ಶೈಕ್ಷಣಿಕ ಸಾಲ ನೀಡುವುದರಿಂದ ಯಾವ ಬ್ಯಾಂಕ್‌ಗಳೂ ಹಿಂದೆ ಸರಿಯಬಾರದು. ಕಡ್ಡಾಯವಾಗಿ ಅರ್ಹರಿಗೆ ಶೈಕ್ಷಣಿಕ ಸಾಲ ವಿತರಿಸಬೇಕು. ನಿರ್ಲಕ್ಷಿಸಿದರೆ ಅಂತಹ ಬ್ಯಾಂಕ್‌ ಅಧಿಕಾರಿಗಳು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಎಚ್ಚರಿಕೆ ನೀಡಿದರು.

₹ 94 ಕೋಟಿ ಹಣ ಬಾಕಿ: ರಾಜ್ಯ ಸರ್ಕಾರ ಸೂಚಿಸಿದಂತೆ ಜಿಲ್ಲೆಯಲ್ಲಿ ಇದುವರೆಗೆ ₹ 150 ಕೋಟಿ ಅಲ್ಪಾವಧಿ ಕೃಷಿ ಚುಟುವಟಿಕೆಯ ಸಾಲಮನ್ನಾ ಮಾಡಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರವು ₹ 84 ಕೋಟಿ ಹಣವನ್ನು ಬ್ಯಾಂಕ್‌ಗಳಿಗೆ ಮರು ಪಾವತಿ ಮಾಡಿದೆ. ಇನ್ನೂ ₹ 66 ಕೋಟಿ ಬಾಕಿ ಹಣ ಸರ್ಕಾರದಿಂದ ಬರಬೇಕಿದೆ ಎಂದು ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ತಾವರ‍್ಯಾನಾಯ್ಕ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸುಮಾರು 30 ಸಾವಿರ ಸ್ವಸಹಾಯ ಗುಂಪುಗಳಿದ್ದು, ಇವುಗಳಿಂದ ₹ 150 ಕೋಟಿ ಠೇವಣೆ ಸಂಗ್ರಹವಾಗಿದೆ.

ಇದರಲ್ಲಿ 23,637 ಸ್ವಸಹಾಯ ಗುಂಪುಗಳಿಗೆ ಸಾಲ ವಿತರಿಸಲಾಗಿದೆ ಎಂದು ಎರ್‍ರಿಸ್ವಾಮಿ ತಿಳಿಸಿದರು.

ಮಧ್ಯಪ್ರವೇಶಿಸಿದ ಸಂಸದ ಸಿದ್ದೇಶ್ವರ, ‘ಉಳಿದ 6,363 ಸ್ವಸಹಾಯ ಗುಂಪುಗಳ ಮಾಹಿತಿ ನೀಡಿ’ ಎಂದರು. ಇದಕ್ಕೆ ಎರ್‍ರಿಸ್ವಾಮಿ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ.

ಡಿಜಿಟಲ್‌ ಬ್ಯಾಂಕಿಂಗ್ ವ್ಯವಸ್ಥೆ ಯನ್ನು ಜಾರಿಗೊಳಿಸುವ ಉದ್ದೇಶದಿಂದ ಬ್ಯಾಂಕ್‌ ಖಾತೆಗಳಿಗೆ ಆಧಾರ್‌

ಕಾರ್ಡ್‌ ಜೋಡಣೆ ಕಡ್ಡಾಯ ಮಾಡಲಾಗಿದೆ. ಗ್ರಾಹಕರು ಸಹಕರಿಸಬೇಕು ಎಂದು ಆರ್‌ಬಿಐ ಅಧಿಕಾರಿ ವಿದ್ಯಾಸಾಗರ ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಿ.ಎಸ್.ರಮೇಶ್‌, ಜಿಲ್ಲಾ ಪಂಚಾಯ್ತಿ ಸಿಇಒ ಎಸ್‌.ಅಶ್ವತಿ, ನಬಾರ್ಡ್‌ನ ಸಹಾಯಕ ಮಹಾಪ್ರಬಂಧಕ ವಿ.ರವೀಂದ್ರ, ಸಿ.ಆರ್‌.ವರ್ಮಾ ಹಾಗೂ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳೂ ಇದ್ದರು.

**

‘ಸಾಲ ಸೌಲಭ್ಯ ಮಾಹಿತಿ ನೀಡಿ’

ಬ್ಯಾಂಕ್‌ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮೀಣ ಪ್ರದೇಶಗಳಿಗೆ ತೆರಳಿ, ಶಿಬಿರ ಆಯೋಜಿಸುವ ಮೂಲಕ ಜನರಿಗೆ ಬ್ಯಾಂಕ್‌ ಸಾಲ ಸೌಲಭ್ಯ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಬೀದರ್‌ ಜಿಲ್ಲೆಯಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯ ಪ್ರಗತಿಯು ಶೇ 100ರಷ್ಟಿದೆ. ಆದರೆ, ನಮ್ಮಲ್ಲಿ ಇಲ್ಲಿನ ತನಕ 82 ಸಾವಿರ ರೈತರು ಮಾತ್ರ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ನಡೆಯಬೇಕಿದೆ ಎಂದು ಸಿದ್ದೇಶ್ವರ ಸೂಚಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಸಹಮತ ವ್ಯಕ್ತಪಡಿಸಿದರು.

***

ಸಾಲ ನೀಡಿಕೆ ಗುರಿ (ಕೋಟಿಗಳಲ್ಲಿ...)

ತಾಲ್ಲೂಕು ಸಾಲದ ಗುರಿ

ಚನ್ನಗಿರಿ 547

ದಾವಣಗೆರೆ 2,445

ಹರಪನಹಳ್ಳಿ 344

ಹರಿಹರ 527

ಹೊನ್ನಾಳಿ 407

ಜಗಳೂರು 276

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry