ಆಮೆಗತಿಯಲ್ಲಿ ಸಾಗುತ್ತಿದೆ ಕಡಲೆ ಖರೀದಿ

7
ಖರೀದಿ ಕೇಂದ್ರಗಳ ಮುಂದೆ ಟ್ರ್ಯಾಕ್ಟರ್‌ಗಳ ಸಾಲು, ಸಂಕಷ್ಟಕ್ಕೆ ಸಿಲುಕಿದ ರೈತರು

ಆಮೆಗತಿಯಲ್ಲಿ ಸಾಗುತ್ತಿದೆ ಕಡಲೆ ಖರೀದಿ

Published:
Updated:
ಆಮೆಗತಿಯಲ್ಲಿ ಸಾಗುತ್ತಿದೆ ಕಡಲೆ ಖರೀದಿ

ಹುಬ್ಬಳ್ಳಿ: ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಯನ್ನು ಆಮೆಗತಿಯಲ್ಲಿ ಮಾಡುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ 19,960 ಮಂದಿ ರೈತರು ಹೆಸರು ನೋಂದಾಯಿಸಿದ್ದು, ಕೇವಲ 910 ಮಂದಿ ರೈತರಿಂದ ಕಡಲೆ ಖರೀದಿಸಲಾಗಿದೆ.

ಮಾರುಕಟ್ಟೆಯಲ್ಲಿ ಅದರ ಬೆಲೆ ಕುಸಿದಿರುವುದರಿಂದ ರೈತರು ಖರೀದಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ಹಾಗಾಗಿ, ನೋಂದಣಿ ಮಾಡಿದವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತೆ ಖರೀದಿ ಕೇಂದ್ರಗಳಲ್ಲಿ ಸೌಲಭ್ಯಗಳಿಲ್ಲದ್ದರಿಂದ ಖರೀದಿ ಮಂದಗತಿಯಲ್ಲಿ ಸಾಗಿದೆ ಎಂಬುದು ರೈತರ ಆರೋಪ.

ಫೆ. 23 ರಿಂದ ಖರೀದಿ ಆರಂಭಿಸಲಾಗಿದೆ. ಖರೀದಿ ನಿಧಾನಗತಿಯಲ್ಲಿ ನಡೆದಿದೆ. ಈಗಾಗಲೇ ಹೆಸರು ನೋಂದಾಯಿಸಿರುವ ರೈತರ ಸಂಖ್ಯೆ ದೊಡ್ಡದಿದೆ. ಅವರು, ತಮ್ಮ ಪಾಳಿಗಾಗಿ ನಿತ್ಯ ಕಾಯುವುದೇ ಕೆಲಸವಾಗಿದೆ.

‘ರೈತರ ಮೊಬೈಲ್‌ಗೆ ಕರೆ ಮಾಡಿ, ಕಡಲೆಯನ್ನು ಕೇಂದ್ರಕ್ಕೆ ತರಲು ಸೂಚಿಸಲಾಗುತ್ತಿದೆ. ಸೂಚಿಸಿದವರು, ಮಾತ್ರ ತರಬೇಕು. ಅದೇ ದಿನದಂದು ಖರೀದಿ ಮಾಡಲಾಗುವುದು’ ಎನ್ನುತ್ತಾರೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮ್ಯಾನೇಜರ್‌ ಮಲ್ಲಿಕಾರ್ಜುನ.

‘ನಿತ್ಯ 400 ರೈತರ ಕಡಲೆಯನ್ನು ಖರೀದಿಸಲಾಗುತ್ತಿದೆ. ಏಪ್ರಿಲ್‌ 22ರ ವರೆಗೆ ಖರೀದಿ ಮಾಡಲು ಅವಕಾಶವಿದೆ. ಹೀಗಾಗಿ, ರೈತರು ಆತಂಕ ಪಡುವ ಅಗತ್ಯವಿಲ್ಲ’ ಎನ್ನುತ್ತಾರೆ ಅವರು.

‘ಬೆಳಿಗ್ಗೆಯೇ ತಂದಿದ್ದೇವೆ. ಮಧ್ಯಾಹ್ನವಾದರೂ ಖರೀದಿಯಾಗಿಲ್ಲ. ಎರಡು ಯಂತ್ರಗಳಲ್ಲಿ ಮಾತ್ರ ತೂಕ ಮಾಡಿ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ, ವಿಳಂಬವಾಗುತ್ತಿದೆ’ ಎಂದು ಬ್ಯಾಹಟ್ಟಿಯ ರೈತ ಮಹದೇವಪ್ಪ ದೂರಿದರು.

‘ಖರೀದಿ ಮಾಡುತ್ತಿರುವ ರೀತಿ ನೋಡಿದರೆ, ಇನ್ನೂ ಹದಿನೈದು ದಿನಗಳಾದರೂ ನನ್ನ ಪಾಳಿ ಬರುವುದಿಲ್ಲ. ಸಣ್ಣದಾಗಿರುವ ಮನೆಯಲ್ಲಿ ಅಲ್ಲಿಯವರೆಗೆ ಸಂಗ್ರಹಿಸಿಡುವುದು ಕಷ್ಟ. ಆದಷ್ಟು ಬೇಗನೆ ಖರೀದಿ ಮಾಡುವಂತೆ ಕೋರಿದರೂ ಕೇಳುತ್ತಿಲ್ಲ’ ಎಂದು ಕುಸುಗಲ್ ರೈತ ಡಿ. ದ್ಯಾವಪ್ಪ ಅಳಲು ತೋಡಿಕೊಂಡರು.

ಅಂಕಿ–ಅಂಶ

19,960

ಹೆಸರು ನೋಂದಾಯಿಸಿರುವ ರೈತರು

2.97 ಲಕ್ಷ ಕ್ವಿಂಟಲ್‌

ಮಾರಾಟಕ್ಕೆ ನೋಂದಣಿಯಾಗಿರುವ ಕಡಲೆಯ ಪ್ರಮಾಣ

13,106 ಕ್ವಿಂಟಲ್‌

ಖರೀದಿಯಾಗಿರುವ ಕಡಲೆ ಪ್ರಮಾಣ

₹ 4,400

ಕಡಲೆಗೆ ಬೆಂಬಲ ಬೆಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry