ಅತಂತ್ರ ಸ್ಥಿತಿಯಲ್ಲಿ ಸಂಪರ್ಕ ರಸ್ತೆಗಳು

7
ಬಿಆರ್‌ಟಿಎಸ್‌: ಕಾಮಗಾರಿ ಮುಗಿಯುತ್ತಾ ಬಂದರೂ ಸಮತಟ್ಟಾಗದ ರಸ್ತೆಗಳು

ಅತಂತ್ರ ಸ್ಥಿತಿಯಲ್ಲಿ ಸಂಪರ್ಕ ರಸ್ತೆಗಳು

Published:
Updated:
ಅತಂತ್ರ ಸ್ಥಿತಿಯಲ್ಲಿ ಸಂಪರ್ಕ ರಸ್ತೆಗಳು

ಹುಬ್ಬಳ್ಳಿ: ಕಳೆದ ಆರು ವರ್ಷಗಳಿಂದ ಅನುಷ್ಠಾನ ಹಂತದಲ್ಲೇ ಉಳಿದಿರುವ ಬಿಆರ್‌ಟಿಎಸ್‌ ಕಾಮಗಾರಿಯು ಮುಖ್ಯ ರಸ್ತೆಯಿಂದ ಒಳರಸ್ತೆಗೆ ತೆರಳುವ ವಾಹನ ಸವಾರರಿಗೆ ದುಃಸ್ವಪ್ನವಾಗಿಯೇ ಉಳಿದಿದೆ.

ಅವಳಿ ನಗರ ಸಂಪರ್ಕಿಸುವ ಮುಖ್ಯ ರಸ್ತೆ (ಹಳೇ ಪಿ.ಬಿ. ರಸ್ತೆ)ಯನ್ನು ಬಿಆರ್‌ಟಿಎಸ್‌ ಮೇಲ್ವಿಚಾರಣೆಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್‌ಡಿಸಿಎಲ್‌) ಡಾಂಬರೀಕರಣ ಮಾಡುತ್ತಿದೆ. ವಿದ್ಯಾನಗರ, ಹೊಸೂರು, ಉಣಕಲ್ ಮುಂತಾದ ಬಡಾವಣೆಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಕಾಮಗಾರಿ ಸಂದರ್ಭದಲ್ಲಿ ಅಗೆಯಲಾಗಿದೆ. ಅವುಗಳನ್ನು ಸರಿಪಡಿಸದ್ದರಿಂದ ಜನರು ಪರದಾಡುವಂತಾಗಿದೆ.

ಮುಖ್ಯ ರಸ್ತೆಯ ಹಳೇ ಡಾಂಬರ್‌ ಕಿತ್ತು ಹಾಕಿ, ಹೊಸದಾಗಿ ನಿರ್ಮಿಸಲಾಗಿದೆ. ಜೊತೆಗೆ ರಸ್ತೆ ಎರಡೂ ಬದಿಗಳಲ್ಲಿ ಚರಂಡಿ ಮೂರ್ನಾಲ್ಕು ಅಡಿಗಳಷ್ಟು ಅಗೆಯಲಾಗಿದೆ. ಹೊಸೂರಿನ ಕೆನರಾ ಹೋಟೆಲ್‌ ಎದುರಿನ ರಸ್ತೆ, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಪಕ್ಕದ ರಸ್ತೆ ಹಾಗೂ ವಿದ್ಯಾನಗರದ ಕಾಡಸಿದ್ಧೇಶ್ವರ ಕಲಾ ಕಾಲೇಜು ಪಕ್ಕದ ಲಕ್ಷ್ಮಿ ಗುಡಿ ರಸ್ತೆಗಳು ಮುಖ್ಯ ರಸ್ತೆಗಿಂತ ಮೇಲ್ಮಟ್ಟದಲ್ಲೇ ಇರುವುದರಿಂದ ಪಾದಚಾರಿಗಳು ಹಾಗೂ ಮೋಟರ್ ಬೈಕ್‌ ಸವಾರರು ಬಿಆರ್‌ಟಿಎಸ್‌ ಅಧಿಕಾರಿಗಳನ್ನು ಶಪಿಸುತ್ತಲೇ ಹತ್ತಿ ಇಳಿಯುತ್ತಿದ್ದಾರೆ.

ಮುಖ್ಯ ರಸ್ತೆ ಡಾಂಬರು ಕಂಡ ಮೇಲೆ ದೂಳು ಸ್ವಲ್ಪ ಕಡಿಮೆಯಾಗಿದೆ. ಆದರೆ, ಸಂಪರ್ಕ ರಸ್ತೆಗಳನ್ನು ಸರಿ ಪಡಿಸದ್ದರಿಂದ ದೂಳು ಏಳುತ್ತಲೇ ಇದೆ. ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ದೂರುತ್ತಿದ್ದಾರೆ ಜನರು.

’ಹೊಸೂರು ಸರ್ಕಾರಿ ಶಾಲೆ ಪಕ್ಕದ ರಸ್ತೆ ಬಳಿ ಚರಂಡಿ ನಿರ್ಮಿಸಲಾಗಿದೆ. ಚರಂಡಿ ಹಾಗೂ ರಸ್ತೆಯ ಮಧ್ಯೆ ಖಾಲಿ ಜಾಗವನ್ನು ಹಾಗೆಯೇ ಬಿಡಲಾಗಿದೆ. ತೆಗ್ಗು ಉಂಟಾಗಿದ್ದು, ವಾಹನ ಸವಾರರು ಹಲವಾರು ಬಾರಿ ಬಿದ್ದ ಉದಾಹರಣೆಗಳಿವೆ’ ಎನ್ನುತ್ತಾರೆ ಆಟೊ ಚಾಲಕ ವೈ.ಕೆ. ಬಸರಕೋಡ.

‘ಮುಖ್ಯ ಹಾಗೂ ಸಂಪರ್ಕ ರಸ್ತೆ ನಡುವೆ ರಸ್ತೆ ಹಾಳಾಗಿವೆ. ಕಾರುಗಳ ಕೆಳಭಾಗ ದಿನ್ನೆಗಳಿಗೆ ಮುಟ್ಟುತ್ತದೆ. ಇದರಿಂದ ವಾಹನಗಳಿಗೆ ಹಾನಿಯಾಗುತ್ತಿದೆ. ಇದರ ಖರ್ಚು ಕೊಡುವವರು ಯಾರು? ಕೂಡಲೇ ದುರಸ್ತಿ ಮಾಡಲು ಏನಡ್ಡಿ' ಎಂದು ಹೊಸೂರು ನಿವಾಸಿ, ಆಟೊ ಚಾಲಕ ಕಾಂತೇಶ ಚಲವಾದಿ ಪ್ರಶ್ನಿಸಿದರು.

ಬಿಆರ್‌ಟಿಎಸ್‌ ಕಾಮಗಾರಿ ಸಂದರ್ಭದಲ್ಲಿ ಮನಬಂದಂತೆ ರಸ್ತೆಗಳನ್ನು ಅಗೆದಿದ್ದಾರೆ. ಇದರಿಂದಾಗಿ ಒಳರಸ್ತೆಗಳು ಹಾಗೂ ಮುಖ್ಯ ರಸ್ತೆಯ ಮಧ್ಯೆ ಅಂತರ ಏರ್ಪಟ್ಟಿದ್ದು, ಕೂಡಲೇ ಸಮತಟ್ಟು ಮಾಡಬೇಕು

– ವೈ.ಡಿ. ಬಸರಕೋಡ, ಆಟೊ ಚಾಲಕ, ಹುಬ್ಬಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry