ಸಮಿತಿ ದಾಖಲೆಗಳನ್ನೇ ಪರಿಶೀಲಿಸಿಲ್ಲ

7
ಏಕಪಕ್ಷೀಯವಾಗಿ ವರದಿ ಒಪ್ಪುವ ಪ್ರಶ್ನೆಯೇ ಇಲ್ಲ: ರಂಭಾಪುರಿ ಶ್ರೀ ಅಭಿಮತ

ಸಮಿತಿ ದಾಖಲೆಗಳನ್ನೇ ಪರಿಶೀಲಿಸಿಲ್ಲ

Published:
Updated:

ಹುಬ್ಬಳ್ಳಿ: ‘ನ್ಯಾ.ನಾಗಮೋಹನ ದಾಸ್‌ ಸಮಿತಿಯು ನಾವು ಕೊಟ್ಟ ಯಾವ ದಾಖಲೆಗಳನ್ನೂ ಪರಿಶೀಲಿಸದೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರ ಇಚ್ಛೆಯಂತೆ ವರದಿ ಕೊಟ್ಟಿದೆ. ಏಕಪಕ್ಷೀಯವಾದ ಈ ವರದಿಯನ್ನು ಒಪ್ಪುವುದಾದರೂ ಹೇಗೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಪ್ರಶ್ನಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಧರ್ಮವನ್ನು ಛಿದ್ರಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಿತಿ ರಚಿಸಿದ್ದರು ಎಂದು ಟೀಕಿಸಿದರು.

‘ನಾಲ್ವರು ಸಚಿವರು ಮತ್ತು ಕೆಲವು ಅಧಿಕಾರಿಗಳು ವಿನಾಕಾರಣ ಈ ವಿಷಯದಲ್ಲಿ ಮೂಗು ತೂರಿಸಿದ್ದಾರೆ. ವೀರಶೈವ ಲಿಂಗಾಯತ ಧರ್ಮಕ್ಕೆ ಪ್ರಾಚೀನ ಇತಿಹಾಸವಿದೆ. ಸ್ವತಂತ್ರ ಧರ್ಮಕ್ಕೆ ಹೋರಾಟ ಮಾಡುತ್ತಿರುವವರ ಹಿನ್ನೆಲೆ, ಪರಂಪರೆ ನೋಡಿದರೆ, ಅವರ ಉದ್ದೇಶ ಏನು ಎಂಬುದು ಸ್ಪಷ್ಟವಾಗುತ್ತದೆ’ ಎಂದರು.

‘ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪನವರು ವೀರಶೈವ, ಲಿಂಗಾಯತ ಎರಡೂ ಒಂದೇ. ಅಲ್ಪ ಸಂಖ್ಯಾತರ ಸ್ಥಾನಮಾನ ನೀಡುವುದಾದರೆ ಎರಡಕ್ಕೂ ಕೊಡಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ಬಿಟ್ಟು ಸಮಾಜವನ್ನು ಒಡೆಯಲು ಪ್ರೋತ್ಸಾಹ ಕೊಡುತ್ತಿರುವುದು ಸರಿಯಲ್ಲ’ ಎಂದರು.

‘ತಜ್ಞರ ಸಮಿತಿಯಲ್ಲಿದ್ದವರು, ಒಂದೇ ವಾದದ ಪರವಾಗಿದ್ದರು. ಅದರಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಒಬ್ಬ ಸದಸ್ಯ ಕೂಡ ಇರಲಿಲ್ಲ. ಶಿಫಾರಸು ಮಾಡಿರುವುದು ರಾಜಕೀಯ ಪ್ರೇರಿತ ನಿರ್ಧಾರ. ಓಟಿನ ಆಸೆಗಾಗಿ ಜಾತಿಗಳನ್ನು ಒಡೆದು, ವಿಷ ಬೀಜ ಬಿತ್ತಿದ್ದಾರೆ. ಕೆಲವು ಮಠಾಧೀಶರು ರಾಜಕೀಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ಆದರೆ, ವೀರಶೈವ ಪಂಚಪೀಠಾಧೀಶರು ಯಾರೂ ರಾಜಕೀಯ ಹಸ್ತಕ್ಷೇಪ ಮಾಡಿಲ್ಲ’ ಎಂದರು.

ಸಂವಿಧಾನ ಬದ್ಧವಾಗಿ ಧರ್ಮಕ್ಕೆ ಮಾನ್ಯತೆ ಸಿಕ್ಕರೆ ತಪ್ಪೇನು ಎನ್ನುವ ಪ್ರಶ್ನೆಗೆ ‘ಧರ್ಮದ ಮೂಲ ಸಂವಿಧಾನವನ್ನು ಒಡೆಯುವ ಉದ್ದೇಶಕ್ಕಾಗಿ ಲಿಂಗಾಯತರು, ಬಸವಣ್ಣನವರನ್ನು ಮುಂದೆ ಮಾಡುತ್ತಿದ್ದಾರೆ. ಇದರಲ್ಲಿ ಒಳ್ಳೆಯ ಉದ್ದೇಶವಿಲ್ಲ’ ಎಂದರು.

**

‘ಮತ್ತೆ ದಾಖಲೆ ನೀಡಲು ಸಿದ್ಧ’

‘ವೀರಶೈವ ಲಿಂಗಾಯತ ಒಂದೇ ಎಂಬುದನ್ನು ಸಾಬೀತು ಮಾಡಲು ಸಮಿತಿಗೆ ಎಲ್ಲ ದಾಖಲೆ ನೀಡಿದ್ದೇವೆ. ಆದರೂ, ದಾಖಲೆ ಕೊಟ್ಟಿಲ್ಲ ಎಂದು ಮಾಧ್ಯಮಗಳಲ್ಲಿ ಹೇಳಲಾಗಿದೆ. ಸಾವಿರಾರು ಪುಟಗಳ ದಾಖಲೆಗಳನ್ನು ಕೊಟ್ಟಿದ್ದೇವೆ. ಅವುಗಳನ್ನು ಸಮಿತಿ ನೋಡಿಯೇ ಇಲ್ಲ, ಅಗತ್ಯವಿದ್ದರೆ ಮತ್ತೆ ದಾಖಲೆ ಕೊಡಲು ಸಿದ್ಧ’ ಎಂದು ರಂಭಾಪುರಿ ಶ್ರೀಗಳು ಹೇಳಿದರು.

‘ಬಸವಣ್ಣನವರ ವಿಚಾರದ ಅನ್ವಯ ನಡೆಯುವ ಮಠಾಧೀಶರು, ಬಸವಧರ್ಮ ಹೆಸರಿನಲ್ಲಿ ಹೊಸ ಧರ್ಮ ಹುಟ್ಟು ಹಾಕಿದರೆ ಯಾರ ಅಭ್ಯಂತರವೂ ಇಲ್ಲ. ಶೀಘ್ರದಲ್ಲಿಯೇ ರಾಷ್ಟ್ರೀಯ ವೀರಶೈವ ಪರಿಷತ್ತಿನ ಆಶ್ರಯದಲ್ಲಿ ಎಲ್ಲ ಗುರು ವಿರಕ್ತ ಮಠಾಧೀಶರ ಸಭೆ ಕರೆಯಲಾಗುತ್ತದೆ. ನ್ಯಾಯಾಲಯದ ಮೊರೆ ಹೋಗಲಾಗುವುದು’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry