ಮಕ್ಕಳ ಭವಿಷ್ಯಕ್ಕೆ ಶಿಕ್ಷಕರ ಅವಿರತ ಶ್ರಮ

7
ಗಣೇಶನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ

ಮಕ್ಕಳ ಭವಿಷ್ಯಕ್ಕೆ ಶಿಕ್ಷಕರ ಅವಿರತ ಶ್ರಮ

Published:
Updated:
ಮಕ್ಕಳ ಭವಿಷ್ಯಕ್ಕೆ ಶಿಕ್ಷಕರ ಅವಿರತ ಶ್ರಮ

ಶಿರಸಿ: ಈ ಸರ್ಕಾರಿ ಶಾಲೆಯ ಮಕ್ಕಳು ದಿನದ ಹೆಚ್ಚಿನ ವೇಳೆಯನ್ನು ಶಾಲೆಯಲ್ಲಿ ಕಳೆಯುತ್ತಾರೆ. ಓದು– ಬರಹವನ್ನು ಶಾಲೆಯಲ್ಲಿಯೇ ಪೂರೈಸಿಕೊಂಡು, ಪಠ್ಯದೊಳಗಿನ ಅನುಮಾನಗಳನ್ನು ಶಿಕ್ಷಕರೊಂದಿಗೆ ಚರ್ಚಿಸಿ, ಬಗೆಹರಿಸಿಕೊಳ್ಳುತ್ತಾರೆ. ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಕರು ರೂಪಿಸಿರುವ ಈ ಯೋಜನೆ ಪಾಲಕರಲ್ಲಿ ಧನ್ಯತಾ ಭಾವ ಮೂಡಿಸಿದೆ.

ಗ್ರಾಮೀಣ ಪ್ರದೇಶಕ್ಕೆ ಹೊಂದಿಕೊಂಡಿರುವ ಗಣೇಶನಗರವು ಕೂಲಿಕಾರರು, ಕಡುಬಡವರಿಗೆ ಆಶ್ರಯ ನೀಡಿರುವ ಬಡಾವಣೆ. ಇಲ್ಲಿನ ಬಹುತೇಕ ನಿವಾಸಿಗಳು ಚಿಕ್ಕಗುಡಿಸಲಿನಂತಹ ಮನೆಗಳಲ್ಲಿದ್ದರೆ, ಕೆಲವರು ಒಂದೇ ಒಂದು ಕೋಣೆಯಿರುವ ಮನೆಯಲ್ಲಿ ಕುಟುಂಬದ ಆರೆಂಟು ಸದಸ್ಯರು ವಾಸಿಸುತ್ತಾರೆ. ಇದರಿಂದ ಮಕ್ಕಳಿಗೆ ಮನೆಯಲ್ಲಿ ಪರೀಕ್ಷೆ ಸಿದ್ಧತೆ ನಡೆಸುವುದು ಕಷ್ಟವಾಗುತ್ತದೆ ಎಂದು ಕಾರಣಕ್ಕೆ ಗಣೇಶನಗರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ಶಾಲೆಯಲ್ಲಿಯೇ ಮಕ್ಕಳನ್ನು ಓದಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಣಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.

‘ಎರಡನೇ ಸೆಮಿಸ್ಟರ್ ಆರಂಭದಿಂದ ಪ್ರತಿದಿನ ಬೆಳಿಗ್ಗೆ 4.45 ಗಂಟೆಗೆ ಶಾಲೆಗೆ ಬರುತ್ತೇವೆ. ದೈಹಿಕ ಶಿಕ್ಷಣ ಶಿಕ್ಷಕರು ಕಲಿಸುವ ಯೋಗ, ಪ್ರಾಣಾಯಾಮ ಕಲಿತು, 5ರಿಂದ 8 ಗಂಟೆಯವರೆಗೆ ತರಗತಿಯಲ್ಲಿ ಕುಳಿತು ಓದುತ್ತೇವೆ. ಮನೆಗೆ ಹೋಗಿ, ತಿಂಡಿ ತಿಂದು ಮತ್ತೆ ಶಾಲೆಯ ಸಮಯಕ್ಕೆ ಹಾಜರಾಗುತ್ತೇವೆ. ಸಂಜೆ ಶಾಲೆ ಬಿಡುವುದು 4.30ಕ್ಕೆ ಆದರೆ, ನಾವು ಮನೆಗೆ ಹೋಗುವುದು 8.30ಕ್ಕೆ. ಅಲ್ಲಿಯವರೆಗೆ ಮತ್ತೆ ನಮಗೆ ಶಿಕ್ಷಕರು, ಪರೀಕ್ಷೆ ತಯಾರಿಯ ಮಾರ್ಗದರ್ಶನ ಮಾಡುತ್ತಾರೆ’ ಎನ್ನುತ್ತಾರೆ ವಿದ್ಯಾರ್ಥಿನಿಯರಾದ ಮಂಗಳಾ ಬೋವಿ, ಶ್ವೇತಾ ಪಟಗಾರ.

‘ಮನೆಯಲ್ಲಿದ್ದರೆ ಓದಲು ಮನಸ್ಸಾಗುವುದಿಲ್ಲ. ಟಿ.ವಿ ನೋಡಬೇಕು ಎನ್ನಿಸುತ್ತದೆ. ಶಾಲೆಯಲ್ಲಿ ಶಿಕ್ಷಕರು ಮುತುವರ್ಜಿವಹಿಸಿ, ಓದಿಸುವುದರಿಂದ ಉತ್ತಮವಾಗಿ ಪರೀಕ್ಷೆ ಬರೆಯುವ ಆತ್ಮವಿಶ್ವಾಸ ಮೂಡಿದೆ. ಎಲ್ಲ ಸ್ನೇಹಿತರು ಕ್ಲಾಸಿನಲ್ಲಿ ಒಟ್ಟಿಗೆ ಕುಳಿತಾಗ ಓದುವ ಹುಮ್ಮಸ್ಸು ಬರುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಸೂರ್ಯ ನಾಯ್ಕ, ವಿಶ್ವನಾಥ ಮುಕ್ರಿ.

ಬಾಗಿಲು ಹಾಕುವುದೇ ರಾತ್ರಿ 8.30ಕ್ಕೆ: ’ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ಪ್ರದೇಶದಲ್ಲಿರುವ ನಮ್ಮ ಪ್ರೌಢಶಾಲೆಯ ಮಕ್ಕಳನ್ನು, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧಪಡಿಸುವುದೇ ದೊಡ್ಡ ಸವಾಲು. ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವ ಮೊದಲ ಜನಾಂಗದವರು ಇಲ್ಲಿರುವ ಈಗಿನ ಮಕ್ಕಳು. ಹೆಚ್ಚಿನ ಪಾಲಕರು ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಬಹುತೇಕ ಮಕ್ಕಳಿಗೆ ಮನೆಯಲ್ಲಿ ಓದುವ ವಾತಾವರಣ ಇರುವುದಿಲ್ಲ, ಓದಲು ಕುಳಿತುಕೊಳ್ಳುವ ವ್ಯವಸ್ಥೆ, ಕೊಠಡಿ, ವಿದ್ಯುತ್ ಕೊರತೆ ಇರುತ್ತದೆ. ಹೆಣ್ಣು ಮಕ್ಕಳಿಗೆ ಕೂಲಿಗೆ ಹೋಗುವ ಅಪ್ಪ–ಅಮ್ಮ ಬರುವಷ್ಟರಲ್ಲಿ ಅಡುಗೆ ಸಿದ್ಧಪಡಿಸಿ, ಮನೆಗೆಲಸ ಮುಗಿಸಿರುವ ಹೊಣೆಗಾರಿಕೆ ಇರುತ್ತದೆ. ಈ ಎಲ್ಲ ಒತ್ತಡಗಳಲ್ಲಿ ಮಕ್ಕಳಿಗೆ ಮುಕ್ತ ಮನಸ್ಸಿನ ಓದು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ, ಶಾಲೆಯಲ್ಲಿಯೇ ಮಕ್ಕಳನ್ನು ಉಳಿಸಿಕೊಂಡು, ಅಭ್ಯಾಸಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುತ್ತೇವೆ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್.ನಾಯ್ಕ.

‘ಅತಿ ಹೆಚ್ಚು ಶಾಲೆ ಬಿಟ್ಟ ಮಕ್ಕಳು ಸಿಗುವ ಪ್ರದೇಶ ಇದಾಗಿತ್ತು. ಈಗ ಚಿತ್ರಣ ಬದಲಾಗುತ್ತಿದೆ. ಮಕ್ಕಳು ಶಾಲೆಗೆ ಬರುತ್ತಿದ್ದಾರೆ. 2011ರಿಂದ 10ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿಯೇ ಓದಿಸುವ ಕಾರ್ಯಕ್ರಮ ರೂಪಿಸಿದ ಮೇಲೆ, ಉತ್ತಮ ಫಲಿತಾಂಶ ಬರುತ್ತಿದೆ. ಬೆಳಗಿನ ಅವಧಿಯ ತರಗತಿಗಳನ್ನು ಸದ್ಯಕ್ಕೆ ನಿಲ್ಲಿಸಿ, ಸಂಜೆ ಮಾತ್ರ ಮಕ್ಕಳಿಗೆ ಓದಿಸುತ್ತಿದ್ದೇವೆ. ಪ್ರತಿದಿನ ಶಾಲೆಯ ಬಾಗಿಲು ಹಾಕಲು ರಾತ್ರಿ 8.30 ಗಂಟೆಯಾಗುತ್ತದೆ. ಶಾಲೆಯಲ್ಲಿರುವ ಎಲ್ಲ ಶಿಕ್ಷಕರು ಮಕ್ಕಳ ಬಗೆಗಿನ ಕಾಳಜಿಯಿಂದ, ಹೆಚ್ಚುವರಿ ಕಾರ್ಯ ಮಾಡುತ್ತಿರುವುದರಿಂದ ಈ ಕಾರ್ಯಕ್ರಮಕ್ಕೆ ಯಶಸ್ಸು ದೊರೆತಿದೆ. ಶಿಕ್ಷಕಿಯರೂ ಸೇರಿದಂತೆ ಪ್ರತಿದಿನ ಒಬ್ಬೊಬ್ಬರು ಹೆಚ್ಚುವರಿ ಅವಧಿಯ ನಿರ್ವಹಣೆ ಮಾಡುತ್ತಾರೆ’ ಎಂದು ಅವರು ‘ಪ್ರಜಾವಾಣಿ’ ಜೊತೆ ಮಾತನಾಡುತ್ತ, ಸಹಶಿಕ್ಷಕರ ಸಹಕಾರ ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry