ಕ್ಯಾಂಪ್ಕೊ ಚಾಕಲೇಟ್‌ ಪರಿಮಳ

7

ಕ್ಯಾಂಪ್ಕೊ ಚಾಕಲೇಟ್‌ ಪರಿಮಳ

Published:
Updated:
ಕ್ಯಾಂಪ್ಕೊ ಚಾಕಲೇಟ್‌ ಪರಿಮಳ

ಚಾಕಲೇಟ್‌ ಕಾರ್ಖಾನೆ ಹೊಂದಿರುವ ದಕ್ಷಿಣ ಭಾರತದ ಪ್ರಥಮ ಹಾಗೂ ಭಾರತದ ಎರಡನೇ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆಯೂ ಕ್ಯಾಂಪ್ಕೊಗೆ ಸಂದಿದೆ. ಸಂಸ್ಥೆಯ ಯಶೋಗಾಥೆಯನ್ನು ಚಿದಂಬರ ಪ್ರಸಾದ ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಿಢೀರ್‌ ಆಗಿ ಕೊಕ್ಕೊ ಬೆಲೆ ಕುಸಿತಗೊಂಡಿತ್ತು. ಬಹುರಾಷ್ಟ್ರೀಯ ಕಂಪನಿಗಳು ಕೊಕ್ಕೊ ಖರೀದಿಗೆ ಹಿಂದೇಟು ಹಾಕಿದ್ದವು. ಸಾವಿರಾರು ರೈತರು ದಿಕ್ಕು ತೋಚದಂತಾಗಿದ್ದರು. ಕಂಪನಿಗಳ ‘ನಕಾರ’ವೇ ಒಂದು ಸಂಸ್ಥೆಯ ಅಭ್ಯುದಯಕ್ಕೆ ಕಾರಣವಾಯಿತು. ಅದುವೇ ಕ್ಯಾಂಪ್ಕೊ.

1984 ರಲ್ಲಿ ಕೊಕ್ಕೊ ಬೆಲೆ ಕುಸಿತವಾದಾಗ, ರೈತರ ಆಸರೆಗೆ ನಿಂತಿದ್ದು ಕ್ಯಾಂಪ್ಕೊ. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ವಾರಣಾಸಿ ಸುಬ್ರಾಯ ಭಟ್ಟರು. ಅವರೊಂದು ದೃಢ ನಿರ್ಧಾರ ಕೈಗೊಂಡಿದ್ದರು. ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚಾಕಲೇಟ್‌ ಕಾರ್ಖಾನೆ ಸ್ಥಾಪಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಸದಸ್ಯರಿಗೆ ಮನವರಿಕೆ ಮಾಡಿಕೊಡುವ ಮೂಲಕ ಕಾರ್ಖಾನೆ ಆರಂಭಕ್ಕೆ ಒಪ್ಪಿಗೆ ಪಡೆದರು. ಅದರ ಫಲವಾಗಿ 1986 ರ ಸೆಪ್ಟೆಂಬರ್‌ 1 ರಂದು ಆಗಿನ ರಾಷ್ಟ್ರಪತಿ ಗ್ಯಾನಿ ಜೈಲ್‌ ಸಿಂಗ್‌ ಅವರಿಂದ ಪುತ್ತೂರಿನಲ್ಲಿ ಕ್ಯಾಂಪ್ಕೊದ ಚಾಕಲೇಟ್‌ ಕಾರ್ಖಾನೆ ಉದ್ಘಾಟನೆ ಆಯಿತು.

ಆರಂಭದಲ್ಲಿ 10 ಬಗೆಯ ಚಾಕಲೇಟ್‌ಗಳನ್ನು ಉತ್ಪಾದಿಸುತ್ತಿದ್ದ ಕ್ಯಾಂಪ್ಕೊ, ಇದೀಗ 23 ವಿವಿಧ ಬಗೆಯ ಚಾಕಲೇಟ್‌ಗಳನ್ನು ತಯಾರಿಸುತ್ತಿದೆ. 1997 ರ ವರೆಗೆ ನೆಸ್ಲೆ ಬ್ರ್ಯಾಂಡ್‌ನ ಅಡಿಯಲ್ಲಿಯೇ ಕ್ಯಾಂಪ್ಕೊದ ಚಾಕಲೇಟ್‌ ಗಳು ಮಾರಾಟವಾಗುತ್ತಿದ್ದವು. 1997 ರಲ್ಲಿ ನೆಸ್ಲೆ ಕಂಪನಿಯು ಗೋವಾದಲ್ಲಿ ಕಾರ್ಖಾನೆ ಆರಂಭಿಸಿತು. ಆದಾಗ್ಯೂ ಕ್ಯಾಂಪ್ಕೊ, ಪ್ರತಿ ವರ್ಷ 5 ಸಾವಿರ ಟನ್‌ನಷ್ಟು ಚಾಕಲೇಟ್‌ ಗಳನ್ನು ನೆಸ್ಲೆ ಕಂಪನಿಗೆ ಈಗಲೂ ಪೂರೈಸುತ್ತಿದೆ.

ಇದೀಗ ಕ್ಯಾಂಪ್ಕೊ ಮತ್ತೆ 6 ಹೊಸ ಸ್ವಾದದ ಚಾಕಲೇಟ್‌ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಉತ್ಪನ್ನಗಳು ಕರ್ನಾಟಕ. ಕೇರಳ, ಆಂಧ್ರಪ್ರದೇಶದ ಹೈದರಾಬಾದ್, ಗಾಜಿಯಾಬಾದ್‌, ಜೈಪುರ, ಪಂಜಾಬ, ಕೊಲ್ಕೊತ್ತ ಸೇರಿದಂತೆ ದೇಶದ ಹಲವೆಡೆ ಮಾರಾಟವಾಗುತ್ತಿವೆ. ಹಸಿ ಶುಂಠಿಯ ಸ್ವಾದವನ್ನು ಹೊಂದಿದ ಮೊಮೆಂಟ್ಸ್‌, ಸಕ್ಕರೆರಹಿತ ಡಯಟರ್‌, ಮಿಲ್ಕ್‌ ಮಾರ್ವೆಲ್‌, ಮಿಲ್ಕ್‌ ಆ್ಯಂಡ್‌ ಮಿಲ್ಕ್‌, ಪುದೀನಾ ರುಚಿಯ ಫನ್‌ ಟನ್‌ ಹಾಗೂ ಸ್ವಲ್ಪ ಹುಳಿಯಾಗಿರುವ ಫನ್‌ಟನ್‌ ಚಾಕಲೇಟ್‌ ಗಳು ಇದೀಗ ಕ್ಯಾಂಪ್ಕೊದ ಹಿರಿಮೆ ಹೆಚ್ಚಿಸಿವೆ.

6 ರುಚಿಯ ಚಾಕಲೇಟ್‌ಗಳನ್ನು ಒಳಗೊಂಡ ಪ್ರೀಮಿಯಂ ಪ್ಯಾಕ್‌ ಅನ್ನು ಕ್ಯಾಂಪ್ಕೊ ಮಾರುಕಟ್ಟೆ ಬಿಡುಗಡೆ ಮಾಡಿದೆ. ಪ್ರತಿ ಚಾಕಲೇಟ್‌ ಬಾರ್‌ಗೆ ₹100 ಬೆಲೆ ಇದ್ದು, ಪ್ರೀಮಿಯಂ ಪ್ಯಾಕ್‌ನ ಬೆಲೆಯನ್ನು ₹500 ನಿಗದಿಪಡಿಸಲಾಗಿದೆ. ಈ ಪ್ಯಾಕ್‌ಗಳು ಈಗ ದೊಡ್ಡ ಮಾಲ್‌ಗಳು, ವಿಮಾನ ನಿಲ್ದಾಣಗಳಲ್ಲೂ ಲಭ್ಯವಾಗಿವೆ.

ಯೋಧರಿಗೆ ಪೌಷ್ಟಿಕ ಚಾಕಲೇಟ್‌

ದೇಶದ ಗಡಿ ಕಾಯುವ ಯೋಧರಿಗೆ ಆರೋಗ್ಯವಂತ ಚಾಕಲೇಟ್‌ ತಯಾರಿಸಿ ಪೂರೈಕೆ ಮಾಡುವ ಮಹಾತ್ವಾಕಾಂಕ್ಷಿ ಯೋಜನೆಗೆ ಕ್ಯಾಂಪ್ಕೊ ಮತ್ತು ಮೈಸೂರಿನ ಕೇಂದ್ರ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆ ಮುಂದಾಗಿವೆ.

ನಾಲ್ಕು ತಿಂಗಳಲ್ಲಿ ಮುಂಬೈ ಮತ್ತು ವಿಶಾಖಪಟ್ಟಣದ ನೌಕಾಪಡೆಯ ಯೋಧರಿಗೆ ಸುಮಾರು 23 ಟನ್‌ನಷ್ಟು ಪೌಷ್ಟಿಕ ಚಾಕಲೇಟ್‌ಗಳನ್ನು ಪೂರೈಸಿದೆ.

ಭೂಸೇನೆ ಮತ್ತು ವಾಯುಪಡೆಯ ಯೋಧರಿಗೂ ಚಾಕಲೇಟ್‌ ಪೂರೈಸಲು ಸಿದ್ಧತೆ ನಡೆಸಿದೆ. ಸದ್ಯಕ್ಕೆ ಪ್ರಾಯೋಗಿಕವಾಗಿ ಚಾಕಲೇಟ್‌ ತಯಾರಿಸಲಾಗಿದ್ದು, ಅತ್ಯುತ್ತಮ ಫಲಿತಾಂಶ ನೀಡಿದೆ. ಈ ವಿಶಿಷ್ಟ ಚಾಕಲೇಟ್‌ ‌ ಅನ್ನು ಚಿಯಾ ಮತ್ತು ಕಿನ್ವ ಎನ್ನುವ ಪೌಷ್ಟಿಕ ಆಹಾರ ಧಾನ್ಯದಿಂದ ತಯಾರಿಸಲು ನಿರ್ಧರಿಸಲಾಗಿದೆ. ಈ ಬೆಳೆ ಮೆಕ್ಸಿಕೊ ಹಾಗೂ ದಕ್ಷಿಣ ಅಮೆರಿಕ ಮೂಲದ ಪೌಷ್ಟಿಕ ಆಹಾರ ಧಾನ್ಯವಾಗಿದ್ದು, ಇದನ್ನು ‘ಸಿಎಫ್‌ಟಿಆರ್‌ಐ’ ಸಂಸ್ಥೆ ಭಾರತದಲ್ಲಿ ಪ್ರಥಮ ಬಾರಿಗೆ ರೈತರಿಗೆ ಪರಿಚಯಿಸಿದೆ.

ಈ ಧಾನ್ಯವು ಉತ್ತಮ ಪೌಷ್ಟಿಕ ಅಂಶಗಳನ್ನು ಹೊಂದಿದ್ದು, ‘ಸೂಪರ್‌ ಫುಡ್‌’ ಎನ್ನುವ ಖ್ಯಾತಿ ಗಳಿಸಿದೆ. ಮಕ್ಕಳ ಹಾಗೂ ವಯಸ್ಕರ ಅಪೌಷ್ಟಿಕತೆ ನಿವಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ರಾಜ್ಯದ ಹಲವು ಭಾಗಗಳಲ್ಲೂ ಈ ಬೆಳೆ ಬೆಳೆಯಲಾಗುತ್ತಿದೆ.

‘ಈ ಆಹಾರ ಧಾನ್ಯ ಹೃದಯದ ಆರೋಗ್ಯಕ್ಕೆ ಅತಿ ಉಪಯುಕ್ತ ಎನ್ನುವುದು ಹಲವು ಪ್ರಯೋಗಗಳಿಂದ ಸಾಬೀತಾಗಿದೆ. ಶೇ 20 ರಿಂದ 22ರಷ್ಟು ಪ್ರೊಟೀನ್‌, ಸುಮಾರು ಶೇ 40ರಷ್ಟು ನಾರಿನಾಂಶ, ವಿವಿಧ ವಿಟಮಿನ್‌ ಹಾಗೂ ಮಿನರಲ್‌ ಹೊಂದಿದೆ’ ಎಂದು ಕ್ಯಾಂಪ್ಕೊದ ವ್ಯವಸ್ಥಾಪಕ ನಿರ್ದೇಶಕ ಸುರೇಶ್‌ ಭಂಡಾರಿ ಹೇಳುತ್ತಾರೆ.

ಚಾಕಲೇಟ್‌ ಕಾರ್ಖಾನೆಯ ಮೂಲಕ ಗರಿಷ್ಠ ಪ್ರಮಾಣದಲ್ಲಿ ಕೊಕ್ಕೊ ಬಳಕೆ ಮಾಡಲಾಗಿದೆ. ಹೀಗಾಗಿ ರೈತಾಪಿ ವರ್ಗಕ್ಕೆ ಕ್ಯಾಂಪ್ಕೊ ಚಾಕಲೇಟ್‌ ಮೂಲಕ ಕೊಕ್ಕೊಗೆ ಮೌಲ್ಯವರ್ಧನೆ ಸಿಕ್ಕಂತಾಗಿದೆ.

2016–17 ರಲ್ಲಿ ₹183.31 ಕೋಟಿ ಮೌಲ್ಯದ ಚಾಕಲೇಟ್‌ ಮಾರಾಟವಾಗಿದ್ದು, ಇದರಲ್ಲಿ ₹29.55 ಕೋಟಿ ಮೌಲ್ಯದ 1,323.99 ಟನ್ ರಫ್ತು ಮಾಡಲಾಗಿದೆ. ಸಂಸ್ಥೆಯು ₹10.67 ಕೋಟಿ ಮೌಲ್ಯದ 1,893.79 ಟನ್ ಕೊಕ್ಕೊ ಹಸಿಬೀಜವನ್ನು ಮತ್ತು ₹57.98 ಕೋಟಿ ಮೌಲ್ಯದ 2,606.74 ಟನ್ ಒಣಬೀಜವನ್ನು ಖರೀದಿಸಿದೆ. ಈ ಒಣಬೀಜ ಖರೀದಿಯಲ್ಲಿ, ಕಾರ್ಖಾನೆಯಲ್ಲಿ ನೇರವಾಗಿ ಖರೀದಿಸಿದ ₹47.51 ಕೋಟಿ ಮೌಲ್ಯದ 2,098.15 ಟನ್ ಒಣಬೀಜವೂ ಸೇರಿದೆ. ಒಟ್ಟು 3,400.20 ಟನ್ ಒಣಬೀಜವನ್ನು ಕಾರ್ಖಾನೆಯಲ್ಲಿ ಬಳಸಲಾಗಿದೆ.

ಕ್ಯಾಂಪ್ಕೊದ ವೈವಿಧ್ಯಮಯ ಚಾಕಲೇಟ್‌ ಉತ್ಪನ್ನಗಳು ಮತ್ತು ಕೊಕ್ಕೊ ಉತ್ಪನ್ನಗಳು ಸುಲಭ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು ಪುತ್ತೂರಿನಲ್ಲಿ ‘ಕ್ಯಾಂಪ್ಕೊ ಚಾಕಲೇಟ್‌ ಕಿಯೋಸ್ಕ್’ ಮಳಿಗೆಯನ್ನು ಆರಂಭಿಸಲಾಗಿದೆ.

ಅಡಿಕೆಯ ಬೆಂಬಲಕ್ಕೆ ಕ್ಯಾಂಪ್ಕೊ

ಅಡಿಕೆ ಬೆಳೆಗಾರರಿಗೆ ಬೆಂಬಲ ನೀಡುತ್ತಲೇ ಬಂದಿರುವ ಕ್ಯಾಂಪ್ಕೊ, ಇದೀಗ ಅಡಿಕೆ ಮೌಲ್ಯವರ್ಧನೆಯ ಮೂಲಕ ಅಡಿಕೆಗೆ ಮತ್ತಷ್ಟು ಬೆಲೆ ಬರುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಕ್ಯಾಂಪ್ಕೊ ಸಂಸ್ಥೆಯು 2016–17 ರಲ್ಲಿ ₹1,308.27 ಕೋಟಿ ಮೌಲ್ಯದ 53,720.72 ಟನ್ ಅಡಿಕೆಯನ್ನು ಖರೀದಿಸಿದೆ. ಇವುಗಳಲ್ಲಿ ₹624.06 ಕೋಟಿ ಮೌಲ್ಯದ 23,946.06 ಟನ್ ಕೆಂಪಡಿಕೆ ಮತ್ತು ₹684.21 ಕೋಟಿ ಮೌಲ್ಯದ 29,774.66 ಟನ್ ಬಿಳಿ ಅಡಿಕೆ ಖರೀದಿ ಮಾಡಲಾಗಿದೆ. ₹1,362.12 ಕೋಟಿ ಮೌಲ್ಯದ 53,806.58 ಟನ್ ಅಡಿಕೆಯನ್ನು ಮಾರಾಟ ಮಾಡಿದ್ದು, ಇವುಗಳಲ್ಲಿ ₹656.49 ಕೋಟಿ ಮೌಲ್ಯದ 24,890.81 ಟನ್ ಕೆಂಪಡಿಕೆ ಮತ್ತು ₹705.63 ಕೋಟಿ ಮೌಲ್ಯದ 28,915.77 ಟನ್ ಬಿಳಿ ಅಡಿಕೆ ಒಳಗೊಂಡಿದೆ.

ಅಡಿಕೆ ಮಾರುಕಟ್ಟೆಯ ವಿಸ್ತರಣೆಗಾಗಿ ಕ್ಯಾಂಪ್ಕೊದಿಂದ ಅಡಿಕೆಯನ್ನು ಚೀನಾಕ್ಕೆ ಪ್ರಾಯೋಗಿಕವಾಗಿ ರಫ್ತು ಮಾಡಲಾಗಿದ್ದು, ಅದು ಅಲ್ಲಿನ ಗುಣಮಟ್ಟ ಮಾಪನದಲ್ಲಿ ಅಂಗೀಕೃತವಾಗಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಸ್ಥಿತಿಗನುಗುಣವಾಗಿ ಚೀನಾಕ್ಕೆ ಅಡಿಕೆ ರಫ್ತು ಮಾಡುವ ಯೋಜನೆಯನ್ನೂ ರೂಪಿಸಲಾಗುತ್ತಿದೆ.

ಸದ್ಯಕ್ಕೆ ಅಡಿಕೆಯ ಮೌಲ್ಯ ಹೆಚ್ಚಾಗಿರುವುದರಿಂದ ಮಲೇಷ್ಯಾದ ಅಡಿಕೆಯನ್ನು ಚೀನಾ ಖರೀದಿಸುತ್ತಿದೆ. ಹೀಗಾಗಿ ಹೊರಗಿನಿಂದ ಬರುತ್ತಿದ್ದ ಅಗ್ಗದ ಬೆಲೆಯ ಅಡಿಕೆಯ ಹಾವಳಿ ತಪ್ಪಿದಂತಾಗಿದೆ. ಇದರಿಂದ ದೇಶೀಯ ಮಾರುಕಟ್ಟೆಯ ಇಲ್ಲಿನ ಅಡಿಕೆಗೆ ಉತ್ತಮ ಬೆಲೆ ಬಂದಿದೆ.

ಅಡಿಕೆ ಚಹಾ

ಇಲ್ಲಿರುವ ಅಡಿಕೆಯನ್ನೇ ಬಳಕೆ ಮಾಡಿಕೊಂಡು, ಮೌಲ್ಯವರ್ಧಿತ ಉತ್ಪನ್ನಗಳನ್ನು ಸ್ವದೇಶದಲ್ಲೇ ಸಿದ್ಧಗೊಳಿಸುವ ನಿಟ್ಟಿನಲ್ಲಿ ಕ್ಯಾಂಪ್ಕೊ ಚಿಂತನೆ ನಡೆಸಿದೆ.

ಇದರ ಜತೆಗೆ ಶಿವಮೊಗ್ಗದ ತೀರ್ಥಹಳ್ಳಿಯ ಯುವಕ ನಿವೇದನ್ ನೆಂಪೆ ಸಿದ್ಧಪಡಿಸಿರುವ ಅಡಿಕೆ ಚಹಾಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಇಂಡಿಯನ್ ಕೌನ್ಸಿಲ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್‌ನಿಂದ ಅಡಿಕೆ ಚಹಾಕ್ಕೆ ಈ ವರ್ಷದ ಉತ್ತಮ ಕೃಷಿ ನವೋದ್ಯಮದ ಉತ್ಪನ್ನ ಎಂಬ ಗೌರವ ಲಭಿಸಿದೆ.

‘ಅಡಿಕೆ ಚಹಾದ ಕುರಿತು ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಮಧ್ಯಂತರ ವರದಿ ಬಂದಿದೆ. ಕೆಲವೇ ದಿನಗಳಲ್ಲಿ ಪೂರ್ಣ ವರದಿ ಬರಲಿದ್ದು, ಬಹಳಷ್ಟು ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆ ಇದೆ’ ಎಂದು ಅಡಿಕೆ ಚಹಾ ಸಂಶೋಧಕ ನಿವೇದನ್‌ ನೆಂಪೆ ಹೇಳುತ್ತಾರೆ.

‘ಅಡಿಕೆಯ ಔಷಧೀಯ ಗುಣಗಳ ಬಗ್ಗೆ ಸಾಕಷ್ಟು ವೈಜ್ಞಾನಿಕ ಸಂಶೋಧನೆಗಳು ನಡೆದಿದ್ದರೂ, ಅವು ಬೆಳಕಿಗೆ ಬಾರದೆ ಅಪಪ್ರಚಾರಕ್ಕೆ ಇಂಬು ದೊರೆತಂತಾಗಿದೆ. ಅಡಿಕೆ ಚಹಾವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದ್ದು, ವೆಸ್ಟ್ ಇಂಡೀಜ್‌ನಿಂದ ಬಹಳಷ್ಟು ಬೇಡಿಕೆ ಬಂದಿದೆ. ಅಮೆರಿಕ ಮತ್ತು ನೆದರಲ್ಯಾಂಡ್‌ಗೆ ರಫ್ತು ಮಾಡುವ ಯೋಜನೆ ಇದೆ’ ಎಂದು ತಿಳಿಸುತ್ತಾರೆ.

‘ಬೆಲೆ ಕುಸಿತದ ಆತಂಕದಲ್ಲಿರುವ ಅಡಿಕೆ ಬೆಳೆಗಾರರಿಗೆ ಅಡಿಕೆ ಚಹಾ ಹೆಚ್ಚಿನ ಮಾರುಕಟ್ಟೆ ಒದಗಿಸಲಿದೆ. ಅಡಿಕೆ ಚಹಾದ ಕುರಿತು ಅಂತಿಮ ಸಂಶೋಧನಾ ವರದಿ ಬಂದ ನಂತರ ಅಡಿಕೆಯ ಹಿರಿಮೆ ಮತ್ತಷ್ಟು ಹೆಚ್ಚಲಿದೆ’ ಎನ್ನುವುದು ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಅವರ ಅಭಿಪ್ರಾಯ.

23 ಸಾವಿರ ಟನ್‌ ಉತ್ಪಾದನೆ

1986 ರಲ್ಲಿ ಆರಂಭವಾದ ಕ್ಯಾಂಪ್ಕೊ ಚಾಕಲೇಟ್‌ ‌ ಕಾರ್ಖಾನೆ ಮೂರು ದಶಕಗಳಲ್ಲಿ ಬೃಹದಾಕಾರವಾಗಿ ಬೆಳೆದಿದ್ದು, ಈಗ ವಾರ್ಷಿಕ 23 ಸಾವಿರ ಟನ್‌ ತಯಾರಿಕಾ ಸಾಮರ್ಥ್ಯವನ್ನು ಹೊಂದಿದೆ ಎಂದು ಎಸ್‌.ಆರ್‌. ಸತೀಶ್ಚಂದ್ರ ತಿಳಿಸಿದರು.

ಈ ಕಾರ್ಖಾನೆಯು ತನ್ನ ವೈವಿಧ್ಯಮಯ ಸ್ವಾದಿಷ್ಟ ಉತ್ಪನ್ನಗಳಿಂದ ಜನಮನ್ನಣೆ ಗಳಿಸಿದ್ದು, ಚಾಕಲೇಟ್‌ ‌ ಉತ್ಪನ್ನಗಳ ರಫ್ತು ಉದ್ಯಮದಲ್ಲಿ ಭಾರತ ಸರ್ಕಾರದ ‘ದಕ್ಷಿಣ ಪ್ರಾದೇಶಿಕ ರಫ್ತು ಪ್ರಶಸ್ತಿ’ಯನ್ನು ಪಡೆದಿದೆ.

ಸದಸ್ಯರೇ ಬೆನ್ನೆಲುಬು

ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವ ಸಂಸ್ಥೆಗೆ ಸದಸ್ಯರೇ ಬೆನ್ನೆಲುಬು. ಪರಸ್ಪರ ಸಹಕಾರ, ಸಾಮರಸ್ಯದೊಂದಿಗೆ ಆಧುನಿಕ ವೈಜ್ಞಾನಿಕ ದೃಷ್ಟಿಕೋನವನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಯಾಂತ್ರೀಕರಣ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುವುದು ಅತ್ಯವಶ್ಯವಾಗಿದೆ. ಗುಣಮಟ್ಟವನ್ನು ಕಾಯ್ದುಕೊಂಡು ವ್ಯವಹಾರದಲ್ಲಿ ಪಾರದರ್ಶಕತೆ ಪಾಲಿಸಬೇಕಾಗಿದೆ. ಬೆಳೆಗಾರರ ಹಿತರಕ್ಷಣೆಯ ಸಂಕಲ್ಪ ಸಿದ್ಧಿಗಾಗಿ ಸಂಸ್ಥೆ ಕಟಿಬದ್ಧವಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಹೇಳುತ್ತಾರೆ.

ಕಾರ್ಖಾನೆಯಲ್ಲಿ ಸೌಲಭ್ಯ ಸೌಧ

ಪುತ್ತೂರಿನ ಕ್ಯಾಂಪ್ಕೊ ಚಾಕಲೇಟ್‌ ಕಾರ್ಖಾನೆಯ ಆವರಣದಲ್ಲಿ ₹13 ಕೋಟಿ ವೆಚ್ಚದಲ್ಲಿ ಸೌಲಭ್ಯ ಸೌಧ ನಿರ್ಮಿಸಲಾಗಿದೆ.

4 ಮಹಡಿಯ ಕಟ್ಟಡವು 42 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ನೆಲ ಅಂತಸ್ತಿನಲ್ಲಿ ಆಡಳಿತಾತ್ಮಕ ಕಚೇರಿಗಳು, ಪ್ರಥಮ ಅಂತಸ್ತಿನಲ್ಲಿ ಕೈಗಾರಿಕಾ ಉಪಾಹಾರ ಗೃಹ, ಪುರುಷ ಹಾಗೂ ಮಹಿಳಾ ಕಾರ್ಮಿಕರಿಗೆ 1,050 ಲಾಕರ್‌ಗಳ ವ್ಯವಸ್ಥೆ, ಪ್ರೊಜೆಕ್ಟ್ ಹಾಲ್‌ ಹಾಗೂ ಕಾರ್ಖಾನೆಯ ಸುಸಜ್ಜಿತ ಪರಿಷ್ಕರಣಾ ಪ್ರಯೋಗಾಲಯ ಇರಲಿದೆ.

ಸಂಪೂರ್ಣ ಹವಾನಿಯಂತ್ರಿತವಾಗಿರುವ ಎರಡನೇ ಮಹಡಿಯಲ್ಲಿ ಚಾಕೊಲೇಟ್‌ ಉತ್ಪನ್ನಗಳ ಪ್ಯಾಕಿಂಗ್ ಕೆಲಸಗಳು ನಡೆಯಲಿದ್ದು, ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಹ ಪ್ಯಾಕರ್‌ಗಳಿಗೆ ಪ್ರತ್ಯೇಕವಾಗಿ ಕ್ಯಾಬಿನ್‌ಗಳ ವ್ಯವಸ್ಥೆ ಮಾಡಲಾಗಿದೆ. ಮೂರನೇ ಮಹಡಿಯಲ್ಲಿ 60 ಆಸನಗಳನ್ನು ಹೊಂದಿರುವ ಮೀಟಿಂಗ್‌ ಹಾಲ್‌, ಚಾಕೊಲೇಟ್‌ ಉತ್ಪನ್ನಗಳ ಪ್ಯಾಕಿಂಗ್‌ಗೆ ಸಂಬಂಧಿಸಿದ ಎಲ್ಲ ಪರಿಕರಗಳನ್ನು ಇರಲಿಸಲಾಗಿದೆ.

ವಿದ್ಯುತ್‌ ಉತ್ಪಾದನೆ

2008-09 ರಲ್ಲಿ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ 1 ಮತ್ತು 2011-12 ರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ 2 ಪವನಯಂತ್ರಗಳನ್ನು ಸ್ಥಾಪಿಸಲಾಗಿದ್ದು, ಇವು 2016-17 ನೇ ಸಾಲಿನಲ್ಲಿ ಒಟ್ಟು 44.10 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಿದೆ. ಕ್ಯಾಂಪ್ಕೊ ಕಾರ್ಖಾನೆಯ ಅವಶ್ಯಕತೆಯ ಶೇ 80 ರಷ್ಟು ವಿದ್ಯುತ್‌ ಅನ್ನು ಇವು ನೀಗಿಸಿವೆ.

ಮೈಸೂರಿನ ಕೇಂದ್ರಿಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಜತೆಗಿನ ಒಪ್ಪಂದದಿಂದಾಗಿ  ಕೊಕ್ಕೊ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನಾ ಕಾರ್ಯ ಸುಗಮವಾಗಿದೆ. ಇದರ ಜತೆಗೆ ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನಾ ಕಾರ್ಯ ಕೈಗೊಳ್ಳಲಾಗಿದೆ.

ಕಾಳು ಮೆಣಸಿಗೆ ಲಗ್ಗೆ

ಅಡಿಕೆಯ ಬೆಲೆ ಕುಸಿದಾಗಲೂ, ರೈತರಿಂದ ಅಡಿಕೆ ಖರೀದಿ ಮಾಡಿದ ಕ್ಯಾಂಪ್ಕೊ, ಇದೀಗ ಕಾಳು ಮೆಣಸು ಬೆಳೆದಿರುವ ರೈತರ ಕೈಹಿಡಿಯಲು ಮುಂದಾಗಿದೆ. ಕೃಷಿ ಉತ್ಪನ್ನಗಳಾದ ಅಡಿಕೆ, ಕೊಕ್ಕೊ, ರಬ್ಬರ್ ಬಳಿಕ ಕಾಳು ಮೆಣಸು ಖರೀದಿಯಲ್ಲಿ ಕ್ಯಾಂಪ್ಕೊ ತೊಡಗಿದ್ದು, ಈ ಸಾಲಿನಲ್ಲಿ ₹2.20 ಕೋಟಿ ಮೌಲ್ಯದ 38.04 ಟನ್ ಕಾಳು ಮೆಣಸು ಖರೀದಿ ಮಾಡಲಾಗಿದೆ.

ಕಾಳು ಮೆಣಸಿನ ಸಂಸ್ಕರಣೆ ಮತ್ತು ಪ್ಯಾಕಿಂಗ್ ಸಂಬಂಧವಾಗಿ ಕೇರಳದ ಕೋಝಿಕ್ಕೊಡ್‌ನಲ್ಲಿರುವ ಭಾರತೀಯ ಸಂಬಾರ ಪದಾರ್ಥಗಳ ಸಂಶೋಧನಾ ಸಂಸ್ಥೆ (ಐಐಎಸ್‌ಆರ್‌)ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಇದೀಗ ಕ್ಯಾಂಪ್ಕೊ ಬ್ರ್ಯಾಂಡ್‌ನಲ್ಲಿ ಚಿಕ್ಕ ಮತ್ತು ಮಧ್ಯಮ ಪ್ಯಾಕ್‌ಗಳಲ್ಲಿ ಶ್ರೇಷ್ಠ ಗುಣಮಟ್ಟದ ಪ್ರಮಾಣೀಕೃತ ಕರಿಮೆಣಸು ಗ್ರಾಹಕ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತಿದ್ದು, ಈ ಮೂಲಕ ಸಂಸ್ಥೆಯ ಉದ್ದೇಶಿತ ಯೋಜನೆಗಳ ಸಾಕಾರಗೊಳಿಸುತ್ತಿದೆ.

2016–17 ರಲ್ಲಿ ವಹಿವಾಟು

ಉತ್ಪನ್ನ             -     ಮೌಲ್ಯ(ಕೋಟಿ ₹ಗಳಲ್ಲಿ)

ಅಡಿಕೆ ಖರೀದಿ       -     1308.27

ಅಡಿಕೆ ಮಾರಾಟ    -     1362.12

ಕೊಕ್ಕೊ ಖರೀದಿ      -    68.65

ರಬ್ಬರ್ ಖರೀದಿ       -    30.82

ರಬ್ಬರ್ ಮಾರಾಟ     -   31.23

ಚಾಕಲೇಟ್‌ ಮಾರಾಟ  -183.31

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry