ಮೂಲಭೂತವಾದಿಗಳಿಂದ ಸಂವಿಧಾನ ರಕ್ಷಿಸಬೇಕಿದೆ

7
ಕುಲಸಚಿವೆ ಡಿ.ಭಾರತಿ ಅವರಿಗೆ ಪದ್ಮಾ ಜಿ.ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿ ಪ್ರದಾನ

ಮೂಲಭೂತವಾದಿಗಳಿಂದ ಸಂವಿಧಾನ ರಕ್ಷಿಸಬೇಕಿದೆ

Published:
Updated:

ಭಾರತೀನಗರ: ಮೂಲಭೂತವಾದಿಗಳಿಂದ ಸಂವಿಧಾನವನ್ನು ರಕ್ಷಣೆ ಮಾಡಬೇಕಿದೆ ಎಂದು ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜು ಸಹ ಪ್ರಾಧ್ಯಾಪಕಿ ಡಾ.ಕೆ.ಎ. ಲತಾ ಮೈಸೂರು ಹೇಳಿದರು.

ಇಲ್ಲಿನ ಬಿಇಟಿ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಪದ್ಮಾ ಜಿ.ಮಾದೇಗೌಡ ಪ್ರತಿಷ್ಠಾನ ಸೋಮವಾರ ಆಯೋಜಿಸಿದ್ದ ಪದ್ಮಾ ಜಿ.ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿ ಪ್ರದಾನ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂವಿಧಾನದಿಂದ ಮಾತ್ರವೇ ಮಹಿಳೆಯರ ರಕ್ಷಣೆಯಾಗುತ್ತಿದೆ. ಸಂವಿಧಾನ ಮಹಿಳೆಯರಿಗೆ ಆತ್ಮಗೌರವ, ಸ್ವಾಭಿಮಾನ ತಂದುಕೊಟ್ಟಿದೆ. ಆದ್ದರಿಂದ ಸಂವಿಧಾನವೇ ನಮ್ಮ ಧರ್ಮ, ಸಂವಿಧಾನವೇ ನಮ್ಮ ರಕ್ಷಕ. ಸಂವಿಧಾನವೇ ನಮ್ಮ ದೇವರು ಎಂದರು.

ಕೆಲವು ಮೂಲಭೂತವಾದಿಗಳು ಸಂವಿಧಾನವನ್ನು ಬದಲಿಸಬೇಕಾಗಿದೆ ಎಂದು ಹೇಳುತ್ತಿದ್ದಾರೆ. ಸಂವಿಧಾನ ಮೂಲಭೂತವಾದಿಗಳ ಕೈಗೆ ಹೋದಲ್ಲಿ, ಮೊದಲು ಮಹಿಳೆಯರ ಬಲಿದಾನವಾಗುತ್ತದೆ. ಆದ್ದರಿಂದ ಸಂವಿಧಾನವನ್ನು ನಾವೆಲ್ಲರೂ ರಕ್ಷಿಸಬೇಕಿದೆ ಎಂದರು.

ಮಹಿಳೆಯರು ಸಂಸಾರದ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು. ಆಗ ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿಬಾಯಿಸಬಹುದು. ಇಂದು ಮಹಿಳೆಯರಲ್ಲಿ ವೈಜ್ಞಾನಿಕತೆ, ಬೌದ್ಧಿಕತೆ, ವೈಚಾರಿಕತೆ ಕಡಿಮೆಯಾಗುತ್ತಿದೆ. ಹೆಣ್ಣಿನ ಸೌಂದರ್ಯಕ್ಕೆ ಮಣೆ ಹಾಕುವ ಪ್ರವೃತ್ತಿ ಹೆಚ್ಚಾಗಿದೆ ಎಂದರು.

ಹೆಣ್ಣು ಮಕ್ಕಳು ಮೊದಲು ಶಿಕ್ಷಣದ ಮಹತ್ವವನ್ನು ಅರಿಯಬೇಕು. ಮೊಬೈಲ್‌ಗಳಲ್ಲಿ ಕಳೆದು ಹೋಗದೇ, ಅದನ್ನು ಜ್ಞಾನಕ್ಕಷ್ಟೇ ಬಳಸಿಕೊಳ್ಳುವುದು ಜಾಣತನ. ಕೆಟ್ಟ ನಿರ್ಧಾರಗಳು ಬದುಕನ್ನು ಅಂತ್ಯದ ಕಡೆಗೆ ತಳ್ಳುತ್ತವೆ. ಆದ್ದರಿಂದ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು ಎಂದು ಸಲಹೆ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ನೀಡಲಾಯಿತು. ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಹಾಗೂ ಅಮ್ಮನ ಕುರಿತು ಪತ್ರ ಬರೆಯುವ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ನೀಡಲಾಯಿತು.

ಭಾರತಿತೀ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಜಿ.ಮಾದೇಗೌಡ, ಪದ್ಮಾ ಜಿ.ಮಾದೇಗೌಡ, ಕಾರ್ಯನಿರ್ವಾಹಕ ಟ್ರಸ್ಟಿ ಮಧು ಜಿ.ಮಾದೇಗೌಡ, ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ನಂಜೇಗೌಡ, ಕಾರ್ಯಾಧ್ಯಕ್ಷ ಬಿ.ಬಸವರಾಜು, ಕಾರ್ಯದರ್ಶಿ ಸಿದ್ದೇಗೌಡ, ಕೆ.ಎಲ್. ಗೌಡ, ಲಿಂಗೇಗೌಡ ಪಾಪಣ್ಣ, ಜಯರಾಮು, ಮುದ್ದಯ್ಯ, ಜೋಗೀಗೌಡ ಪಾಲ್ಗೊಂಡಿದ್ದರು.

**

ಪ್ರಶಸ್ತಿ ಹಣ ಸಂಸ್ಥೆಗೆ ಹಿಂದಿರುಗಿಸಿದ ಕುಲಸಚಿವೆ

ಭಾರತೀನಗರ: ಇತಿಹಾಸ ಸೃಷ್ಟಿಸುವ ಕೆಲಸ ಮಾಡಬೇಕು ಎಂದು ಮೈಸೂರು ವಿವಿ ಕುಲಸಚಿವೆ ಡಿ. ಭಾರತಿ ಹೇಳಿದರು.

ಇಲ್ಲಿನ ಪದ್ಮಾ ಜಿ.ಮಾದೇಗೌಡ ಪ್ರತಿಷ್ಠಾನ ಸೋಮವಾರ ನೀಡಿದ ಪದ್ಮಾ ಜಿ. ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಹಣದ ಹಿಂದೆ, ಖ್ಯಾತಿಯ ಹಿಂದೆ ಹೋಗಬಾರದು. ಹಾಗೆ ಹೋದವರನ್ನು ಇತಿಹಾಸ ನೆನಪಿಸಿಕೊಳ್ಳುವುದಿಲ್ಲ. ನಾವು ಮಾಡುವ ಕೆಲಸದಲ್ಲಿ ತೃಪ್ತಿಗಿಂತ ಹೆಚ್ಚಾಗಿ ಆತ್ಮತೃಪ್ತಿಯಾಗಬೇಕು. ಆಗ ಎಲ್ಲವೂ ತನ್ನಂತಾನೇ ದಕ್ಕುತ್ತವೆ. ಜಾತಿ, ಭಾಷೆ, ಪ್ರಾಂತ್ಯ ಎಲ್ಲವನ್ನು ಮೀರಿ ಬೆಳೆಯಬೇಕು. ಆಗ ಎಲ್ಲರೂ ಗೌರವಿಸುತ್ತಾರೆ ಎಂದರು.

ಮೈಸೂರು ವಿವಿ ಕುಲಸಚಿವೆ ಡಿ.ಭಾರತಿ ಅವರು ಪದ್ಮಾ ಜಿ.ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿಯ ₹ 25 ಸಾವಿರ ಹಣವನ್ನು ಸಂಸ್ಥೆಯ ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿ, ಹಣವನ್ನು ಅಧ್ಯಕ್ಷ ಜಿ. ಮಾದೇಗೌಡರಿಗೆ ಹಿಂದಿರುಗಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry