ನಿಂಬೆಹಣ್ಣು ದುಬಾರಿ, ತರಕಾರಿ ಬೆಲೆ ಸ್ಥಿರ

7
ನಿಯಂತ್ರಣದಲ್ಲಿ ಹೂವು, ಹಣ್ಣು, ಈರುಳ್ಳಿ ದರ

ನಿಂಬೆಹಣ್ಣು ದುಬಾರಿ, ತರಕಾರಿ ಬೆಲೆ ಸ್ಥಿರ

Published:
Updated:
ನಿಂಬೆಹಣ್ಣು ದುಬಾರಿ, ತರಕಾರಿ ಬೆಲೆ ಸ್ಥಿರ

ಮಂಡ್ಯ: ಬೇಸಿಗೆ ಆರಂಭವಾಗುತ್ತಿದ್ದಂತೆ ಬಿಸಿಲಿನ ಬೇಗೆ ತಣಿಸಿಕೊಳ್ಳಲು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ತಂಪು ಪಾನೀಯ ಇಷ್ಟಪಡದ ಜನರು ನೈಸರ್ಗಿಕ ನಿಂಬೆಹಣ್ಣಿನ ಜ್ಯೂಸ್‌ ಕುಡಿದು ದೇಹವನ್ನು ತಂಪಾಗಿಸಿಕೊಳ್ಳುತ್ತಾರೆ. ಆದರೆ ನಿಂಬೆಹಣ್ಣಿನ ಬೆಲೆ ದುಬಾರಿಯಾಗಿದ್ದು ಸಾಮಾನ್ಯರ ಕೈಗೆಟುಕದಂತಾಗಿದೆ.

ತಿಂಗಳ ಹಿಂದೆಯಷ್ಟೇ ₹ 10ಕ್ಕೆ ಆರರಿಂದ ಎಂಟು ನಿಂಬೆಹಣ್ಣು ದೊರೆಯುತ್ತಿದ್ದವು. ಆದರೆ ಈಗ ₹ 10ಕ್ಕೆ  2 ನಿಂಬೆಹಣ್ಣು ಸಿಗುತ್ತಿದ್ದು ಒಂದಕ್ಕೆ ₹ 6 ತೆರಬೇಕಾಗಿದೆ. ಕಡಿಮೆ ಗುಣಮಟ್ಟದ 3 ನಿಂಬೆಹಣ್ಣು ದೊರೆಯುತ್ತಿವೆ. ನಿಂಬೆಹಣ್ಣಿನ ಜ್ಯೂಸ್‌ ಕುಡಿದು ದೇಹ ತಂಪಾಗಿಸಿಕೊಳ್ಳಲು ಯೋಚಿಸುತ್ತಿರುವುವವರ ಜೇಬಿಗೆ ಕತ್ತರಿ ಬೀಳುವುದು ಖಚಿತ. ಈಗ ಎಲ್ಲೆಲ್ಲೂ ಮದುವೆಗಳು, ಬೀಗರೂಟಗಳು ನಡೆಯುತ್ತಿರುವ ಕಾರಣ ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು ಬೆಲೆಯೂ ದುಬಾರಿಯಾಗಿದೆ.

‘ಸ್ಥಳೀಯ ನಿಂಬೆಹಣ್ಣು ಮಾರುಕಟ್ಟೆಗೆ ಬರುತ್ತಿಲ್ಲ. ವಿಜಯಪುರದಲ್ಲಿ ಬೆಳೆಯುವ ದೊಡ್ಡ ಗಾತ್ರದ ಹಣ್ಣು ಮಾರುಕಟ್ಟೆಗೆ ಬಂದಿದೆ. ದೊಡ್ಡ ಗಾತ್ರದ ಹಣ್ಣನ್ನು ₹ 6ಕ್ಕೆ ಮಾರಾಟ ಮಾಡದಿದ್ದರೆ ನಷ್ಟವಾಗುತ್ತದೆ’ ಎಂದು ನಿಂಬೆಹಣ್ಣಿನ ವ್ಯಾಪಾರಿ ಪ್ರಕಾಶ್‌ ಹೇಳಿದರು.

‘ಬೇಸಿಗೆ ಕಾಲದಲ್ಲಿ ನಿಂಬೆಹಣ್ಣು ದುಬಾರಿಯಾಗುವುದು ಸಾಮಾನ್ಯ. ಕಳೆದ ವರ್ಷವೂ ಬೇಸಿಗೆ ಬಂದಾಗ ಇದೇ ರೀತಿ ಬೆಲೆ ಹೆಚ್ಚಳವಾಗಿತ್ತು. ಹಬ್ಬ, ಬೀಟ್‌ರೂಟಗಳು ನಡೆಯುವಾಗ ನಿಂಬೆಹಣ್ಣು, ಸೌತೆಕಾಯಿ ಬೆಲೆ ಹೆಚ್ಚಳವಾಗುತ್ತದೆ. ಆದರೆ ಈಗ ಕೆಆರ್‌ಎಸ್‌ ನೀರು ಹರಿಯುತ್ತಿರುವ ಕಾರಣ ಸೌತೆಕಾಯಿ ಪೂರೈಕೆಯಲ್ಲಿ ವ್ಯತ್ಯಾಸವಾಗಿಲ್ಲ, ಬೆಲೆಯೂ ಹೆಚ್ಚಿಲ್ಲ. ಆದರೆ ನಿಂಬೆಹಣ್ಣಿನ ಬೆಲೆ ಹೆಚ್ಚಳವಾಗಿದೆ’ ಎಂದು ಸೊಪ್ಪಿನ ವ್ಯಾಪಾರಿ ಶಾರದಮ್ಮ ಹೇಳಿದರು.

ತರಕಾರಿ ಬೆಲೆ ಸ್ಥಿರ: ಕಳೆದ ಹಲವು ತಿಂಗಳುಗಳಿಂದ ತರಕಾರಿ ಬೆಲೆ ಸ್ಥಿರವಾಗಿದೆ. ₹ 10ಕ್ಕೆ ಉತ್ತಮ ಗುಣಮಟ್ಟದ ಒಂದು ಕೆ.ಜಿ ಟೊಮೆಟೊ ಸಿಗುತ್ತಿದೆ. ಎಲೆಕೋಸು ಒಂದಕ್ಕೆ ₹10, ಬದನೆಕಾಯಿ, ಕ್ಯಾರೆಟ್, ಬೀಟ್‌ರೂಟ್, ಆಲೂಗಡ್ಡೆ, ತೊಂಡೆಕಾಯಿ, ಹೂಕೋಸು, ಪಡವಲಕಾಯಿ, ಬೆಂಡೆಕಾಯಿ, ಗೆಡ್ಡೆಕೋಸು, ಸಾಂಬಾರ ಸೌತೆ, ಸೀಮೆ ಬದನೆ, ಮೂಲಂಗಿ ₹ 20ಕ್ಕೆ ಒಂದು ಕೆ.ಜಿ ಸಿಗುತ್ತಿದೆ. ಬೀನ್ಸ್‌ ಹಾಗೂ ಬೆಂಡೆಕಾಯಿ ಬೆಲೆ ಕೊಂಚ ಹೆಚ್ಚಳವಾಗಿದ್ದು ₹ 30ಕ್ಕೆ ಮಾರಾಟವಾಗುತ್ತಿವೆ. ಮೆಣಸಿನಕಾಯಿ, ದಪ್ಪಮೆಣಸಿನಕಾಯಿ, ಈರೇಕಾಯಿ, ಅವರೆಕಾಯಿ, ಹಾಗಲಕಾಯಿ ₹ 30ಕ್ಕೆ ಸಿಗುತ್ತಿವೆ. ಸುವರ್ಣ ಗೆಡ್ಡೆ, ಬಟಾಣಿ, ಶುಂಠಿ ₹ 40ಕ್ಕೆ ಒಂದು ಕೆ.ಜಿ ಮಾರಾಟವಾಗುತ್ತಿವೆ. ಒಂದು ಕಟ್ಟು ಕಿಲ್‌ಕೀರೆ ಸೊಪ್ಪು ₹ 5, ಸಬ್ಬಸಿಗೆ, ಮೆಂತೆ, ಕರಿಬೇವು, ಪಾಲಕ್, ಪುದೀನಾ, ಪಾಲಕ್‌ ₹ 5ಕ್ಕೆ ಸಿಗುತ್ತಿವೆ. ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬಂದಿದ್ದು ₹ 50ಕ್ಕೆ ಎರಡೂವರೆ ಕೆ.ಜಿ ಸಿಗುತ್ತಿದೆ. ವಿ.ವಿ ರಸ್ತೆ, ಆರ್‌ಪಿ ರಸ್ತೆ, ನೂರು ಅಡಿ ರಸ್ತೆಯಲ್ಲಿ ವ್ಯಾಪಾರಿಗಳು ಆಟೊಗಳಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.

ಯುಗಾದಿ ಹಬ್ಬದ ಅಂಗವಾಗಿ ಒಂದು ಮೊಳ ಮಲ್ಲಿಗೆ, ಕಾಕಡಾ ₹ 30ಕ್ಕೆ ಏರಿತ್ತು. ಯುಗಾದಿ ಹಬ್ಬದ ನಂತರವೂ ಸೇವಂತಿಗೆ ಬೆಲೆ ದುಬಾರಿಯಾಗಿಯೇ ಉಳಿದಿದೆ. ಮಾರು ಸೇವಂತಿಗೆ ₹ 80, ಮಲ್ಲಿಗೆ ₹ 50, ಕನಕಾಂಬರ ₹ 60, ಕಾಕಡ ₹ 40 ಬೆಲೆ ಇದೆ. ಸುಗಂಧ ಹೂವಿನ ಹಾರ ₹ 50– 200ರವರೆಗೆ ಮಾರಾಟವಾಗುತ್ತಿವೆ. ಗುಲಾಬಿ ಹಾರ ₹ 250ಕ್ಕೆ ಸಿಗುತ್ತದೆ.

ಕೆ.ಜಿ ದಾಳಿಂಬೆ ಹಣ್ಣು ₹80– 150, ಕರಬೂಜ, ಕಲ್ಲಂಗಡಿ ₹ 20, ಅನಾನಸ್, ಪಚ್ಚ ಬಾಳೆ, ಕಿತ್ತಳೆ ಹಣ್ಣುಗಳು ₹ 40, ಸಪೋಟ, ಏಲಕ್ಕಿ ಬಾಳೆ ಹಣ್ಣು ₹ 50ಕ್ಕೆ ಕೆ.ಜಿ, ಕಿತ್ತಳೆ, ಮೋಸಂಬಿ, ದ್ರಾಕ್ಷಿ ₹ 60ಕ್ಕೆ ಕೆ.ಜಿ, ಸೇಬು ₹100– 140ಕ್ಕೆ ಮಾರಾಟವಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry