ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲ ಯುವಕನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ಪದವೀಧರೆ

ಮನ ಬಯಸಿದ ವರನ ಕೈಹಿಡಿಯಲು ಆಸರೆಯಾದ ಕೇಂದ್ರ
Last Updated 20 ಮಾರ್ಚ್ 2018, 11:08 IST
ಅಕ್ಷರ ಗಾತ್ರ

ಕುಂದಾಪುರ: ಕಾರ್ಯಕ್ರಮವೊಂದರಲ್ಲಿ ಆದ ಪರಿಚಯ ಸ್ನೇಹಕ್ಕೆ ಮುನ್ನುಡಿ ಬರೆಯಿತು. ಮುಂದೆ ಪ್ರೇಮ ಪಲ್ಲವಿಸಲು ಸ್ನೇಹವೇ ಕಾರಣವಾಯಿತು. ಕೊನೆಯಲ್ಲಿ ಎಲ್ಲ ಪ್ರೇಮಿಗಳಿಗೂ ಎದುರಾಗುವಂತೆ ಮನೆಯವರಿಂದ ವಿರೋಧವೂ ವ್ಯಕ್ತವಾಯಿತು.

ಇಲ್ಲಿ ಪ್ರೇಮಿಗಳಿಬ್ಬರೂ ಒಂದೇ ಸಮುದಾಯದಕ್ಕೆ ಸೇರಿದವರಾದರೂ ಕೂಡ ಹುಡುಗಿ ಮನೆಯವರು ಹುಡುಗನನ್ನು ಒಪ್ಪದೇ ಇರಲು ಕಾರಣ ಆತ ಅಂಗವಿಕಲ ಎಂಬ ವಿಚಾರ. ಆದರೆ, ಕೊನೆಗೂ ಪ್ರೀತಿಗೆ ಸೋಲಾಗಲಿಲ್ಲ. ಅಂಗವಿಕಲ ಎನ್ನುವ ಕಾರಣಕ್ಕಾಗಿ ವಧುವಿನ ಪೋಷಕರಿಂದ ನಿರಾಕರಣೆಯಾದ ಪ್ರೇಮಕ್ಕೆ ಸೋಮವಾರ ಕುಂದಾಪುರದ ಮಹಿಳಾ ಸಾಂತ್ತ್ವನ ಕೇಂದ್ರದವರು ಮುಹೂರ್ತ ನಿಶ್ಚಯಿಸುವ ಮೂಲಕ ಮದುಮಕ್ಕಳ ಸಪ್ತಪದಿಗೆ ಸಾಕ್ಷಿಯಾದರು.

ಒಂದೂವರೆ ವರ್ಷದ ಹಿಂದೆ ಹಾಲಾಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪರಿಚಿತರಾಗಿದ್ದ ಸಾಲಿಗ್ರಾಮದ ಭೋಜರಾಜ್ ಮೊಗವೀರ ಹಾಗೂ ವಿಮಲಾ ದಂಪತಿಯ ಪುತ್ರ ಶೋಭನ್ ಬಿ. (30) ಹಾಗೂ ಅದೇ ಊರಿನ ಮಹಾಬಲ ಮೊಗವೀರ ಹಾಗೂ ವಿಮಲಾ ದಂಪತಿಯ ಪುತ್ರಿ ಸಂಗೀತಾ (24) ಪರಸ್ಪರ ಪ್ರೀತಿಸುತ್ತಿದ್ದರು. ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದ ಶೋಭನ್‌ ಕಾಲಿನ ವಿಕಲತೆ ಹೊಂದಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ, ಬಿಕಾಂ ಪದವೀಧರೆ ಸಂಗೀತಾ ಅವರೊಂದಿಗೆ ದಾಂಪತ್ಯಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದರು. ಸಂಗೀತಾ ಅವರನ್ನು ಮದುವೆ ಮಾಡಿಕೊಡುವಂತೆ ಪೋಷಕರಲ್ಲಿ ಕೋರಿಕೊಂಡಾಗ ಯುವಕ ಅಂಗವಿಕಲ ಎಂಬ ಕಾರಣದಿಂದಾಗಿ ಮದುವೆಗೆ ನಿರಾಕರಿಸಲಾಗಿತ್ತು. ಈ ಕಾರಣಕ್ಕಾಗಿ ಅವರಿಬ್ಬರು ಕುಂದಾಪುರದ ಮಹಿಳಾ ಸಾಂತ್ವನ ಕೇಂದ್ರವನ್ನು ಸಂಪರ್ಕಿಸಿದ್ದರು.

ಸೋಮವಾರ ಕೇಂದ್ರದಲ್ಲಿ ಸರಳವಾಗಿ ಮದುವೆ ನಡೆಯಿತು. ಕೇಂದ್ರದ ಅಧ್ಯಕ್ಷೆ ರಾಧಾ ದಾಸ್‌, ವರನ ತಂದೆ, ತಾಯಿ ಹಾಗೂ ಬಂಧುಗಳು ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT