6
ಪ್ರಧಾನಿ, ರಾಷ್ಟ್ರ‍ಪತಿಗೆ ಕೆಎಸ್ಒಯು ವಿದ್ಯಾರ್ಥಿಗಳ ಮನವಿ

ಮಾನ್ಯತೆ ಕೋರಿ ವಿದ್ಯಾರ್ಥಿಗಳ ಪತ್ರ

Published:
Updated:
ಮಾನ್ಯತೆ ಕೋರಿ ವಿದ್ಯಾರ್ಥಿಗಳ ಪತ್ರ

ಮೈಸೂರು: ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಮುನ್ನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ದೊರಕಿಸಿಕೊಡದೇ ಇದ್ದಲ್ಲಿ, ಕೆಎಸ್‌ಒಯುನ 6 ಲಕ್ಷ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬ ವರ್ಗವು ‘ನೋಟಾ’ ಆಯ್ಕೆ ಮಾಡುವುದು ಖಚಿತ ಎಂದು ವಿ.ವಿ.ಯ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರು, ಪ್ರಮುಖ ಮುಖಂಡರು, ಪ್ರಧಾನ ಮಂತ್ರಿ, ರಾಷ್ಟ್ರಪತಿ, ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು, ಯುಜಿಸಿಗೆ ಸಾವಿರಾರು ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ.

2012–13, 2013–14, 2014–15 ಸಾಲಿನ ವಿದ್ಯಾರ್ಥಿಗಳು ಕೆಎಸ್‌ಒಯುನ ವಿವಿಧ ಕೋರ್ಸ್‌ಗಳಲ್ಲಿ  ಪದವಿ ಪಡೆದಿದ್ದಾರೆ. ಆದರೆ, ಈ ಅವಧಿಯಲ್ಲಿ ಕೆಎಸ್‌ಒಯುಗೆ ಯುಜಿಸಿ ಮಾನ್ಯತೆ ಇಲ್ಲದೆ ಇರುವ ಕಾರಣ, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

‘ಕೆಎಸ್‌ಒಯುಗೆ ಮಾನ್ಯತೆ ನೀಡುವಂತೆ ರಾಜ್ಯ ಹೈಕೋರ್ಟ್‌ ತೀರ್ಪು ನೀಡಿದ್ದರೂ ಯುಜಿಸಿ ಇದುವರೆಗೆ ಬೆಲೆ ನೀಡಿಲ್ಲ. ಈ ಕುರಿತು ಕೇರಳ ಹಾಗೂ ಮದ್ರಾಸ್‌ ಹೈಕೋರ್ಟ್‌ಗಳು ಸಹ ವಿದ್ಯಾರ್ಥಿಗಳ ಪರವಾಗಿ ತೀರ್ಪಿತ್ತಿವೆ. ವಿ.ವಿ.ಗೆ ಮಾನ್ಯತೆ ದೊರಕಿಸಿಕೊಡಲು ಅಧಿಕಾರವಿರುವ ಅಥವಾ ಇಲ್ಲದಿರುವ ಎಲ್ಲ ರಾಜಕೀಯ ಪಕ್ಷಗಳ ಪಾತ್ರ ಗುರುತರವಾದುದು. ಮಾನ್ಯತೆಗಾಗಿ ಹೆಜ್ಜೆ ಇಡದೆ ಇದ್ದಲ್ಲಿ ಈ ಚುನಾವಣೆಯಲ್ಲಿ ತಿರಸ್ಕರಿಸುವುದು ಸ್ಪಷ್ಟ’ ಎಂದು ಗುಡುಗಿದ್ದಾರೆ.

‘ಕೆಎಸ್ಒಯುನಲ್ಲಿ ಓದಲೆಂದು ವಿದ್ಯಾರ್ಥಿಗಳು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ, ವಿ.ವಿ ಮಾನ್ಯತೆ ಕಳೆದುಕೊಂಡ ನಂತರ ವಿದ್ಯಾರ್ಥಿಗಳಿಗೆ ಕೆಲಸ ಸಿಕ್ಕಿಲ್ಲ, ಮದುವೆಯಾಗಿಲ್ಲ, ಪದೋನ್ನತಿ ಸಿಕ್ಕಿಲ್ಲ, ಪ್ರತಿವರ್ಷವೂ ವಯಸ್ಸು ಹೆಚ್ಚುತ್ತಿದ್ದು ಅವಕಾಶಗಳು ಮುಚ್ಚಿಹೋಗುತ್ತಿವೆ. ರಾಜಕಾರಣಿಗಳು ರಾಜ್ಯದ ಕೋಟ್ಯಂತರ ವಿದ್ಯಾರ್ಥಿಗಳನ್ನು ಲಘುವಾಗಿ ಪರಿಗಣಿಸಕೂಡದು. ವಿದ್ಯಾರ್ಥಿಗಳು ಒಗ್ಗಟ್ಟಾದರೆ, ನಿಮಗೆ ಉಳಿಗಾಲವಿಲ್ಲ’ ಎಂದು ಕುಟುಕಿದ್ದಾರೆ.

ಮನೆ ಮನೆಗೆ ನೋಟ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿ ಮುಖಂಡ ಕಾರ್ತಿಕ್ ರಾವ್‌, ವಿ.ವಿ ವಿದ್ಯಾರ್ಥಿಗಳು ಈಗಾಗಲೇ ‘ಮನೆ ಮನೆಗೆ ನೋಟ’ ಚಳವಳಿಯನ್ನು ಆರಂಭಿಸಿದ್ದಾರೆ. ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾವು ‘ನೋಟಾ’ ಆಯ್ಕೆ ಮಾಡುವುದಾಗಿ ಅರ್ಜಿಗಳನ್ನು ತುಂಬಿಕೊಟ್ಟಿದ್ದಾರೆ. ಅಲ್ಲದೆ, ತಮ್ಮ ಕುಟುಂಬ ಸದಸ್ಯರು ಯಾರಿಗೂ ಮತ ನೀಡದೆ ಪ್ರತಿಭಟಿಸುವುದಾಗಿ ಹೇಳಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿದ್ಯಾರ್ಥಿಗಳ ಬೆಲೆ ಏನೆಂದು ತಿಳಿಯುತ್ತದೆ ಎಂದರು.

‘ರಾಜ್ಯ ಸರ್ಕಾರವು ಇದೀಗ ವಿ.ವಿ.ಯ ತಾಂತ್ರಿಕೇತರ ಕೋರ್ಸುಗಳಿಗೆ ಮಾನ್ಯತೆ ನೀಡಿದೆ. ಶಿಕ್ಷಣ, ಉದ್ಯೋಗ, ಬಡ್ತಿಗೆ ಪದವಿಗಳನ್ನು ಬಳಸಿಕೊಳ್ಳಬಹುದು ಎಂದು ನಿರ್ಣಯ ತೆಗೆದುಕೊಂಡಿದೆ. ಆದರೆ, ನಮಗೆ, ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಬೇಕು. ಪದವಿಗಳನ್ನು ಆಧರಿಸಿ ವಿದೇಶಗಳಿಗೆ ಹೋಗುವುದಕ್ಕೂ ಸಾಧ್ಯವಾಗಬೇಕು’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry