ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕೆ ಆದ್ಯತೆ

ಮಧುಗಿರಿಯಲ್ಲಿ ನಡೆದ ಇಂದಿರಾ ಕ್ಯಾಂಟೀನ್‌ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಕೆ.ಎನ್‌. ರಾಜಣ್ಣ ಅನಿಸಿಕೆ
Last Updated 20 ಮಾರ್ಚ್ 2018, 11:18 IST
ಅಕ್ಷರ ಗಾತ್ರ

ಮಧುಗಿರಿ: ಬಡ ಹಾಗೂ ಕಾರ್ಮಿಕರಿಗೆ ಉಪಾಹಾರದ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಕಲ್ಪಿಸಿರುವುದು ಪುಣ್ಯದ ಕೆಲಸವಾಗಿದೆ. ಇದರಿಂದ ಹಸಿವ ಮುಕ್ತ ರಾಜ್ಯ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಪಕ್ಕದಲ್ಲಿ ಸೋಮವಾರ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು, ರೋಗಿಗಳು, ಪ್ರಯಾಣಿಕರು ಹಾಗೂ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ನಿಂದ ಸಾಕಷ್ಟು ಅನುಕೂಲವಾಗಲಿದೆ ಎಂದರು.

ರಾಜ್ಯ ಸರ್ಕಾರ ಬೆಂಗಳೂರಿನ 192 ವಾರ್ಡ್‌ಗಳು, ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಮೂಲಕ ಬಡವರ್ಗದ ಜನರ ಪರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಜಾರಿಯಿಂದಾಗಿ ಯಾರೊಬ್ಬರೂ ಹಸಿವುನಿಂದ ಬಳಲುತ್ತಿಲ್ಲ. ಮಧುಗಿರಿ ಕ್ಷೇತ್ರದಲ್ಲಿ ಪ್ರತಿ ತಿಂಗಳು 17 ಸಾವಿರ ಕ್ವಿಂಟಲ್ ಅಕ್ಕಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆಯಾಗುತ್ತಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಜನಪರ ಕೆಲಸ ಕಾರ್ಯಗಳನ್ನು ಮಾಡುವ ವ್ಯಕ್ತಿಗೆ ಮತದಾರರು ಆಶೀರ್ವಾದ ಮಾಡಬೇಕು. ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಬಗ್ಗೆ ಜನರಲ್ಲಿ ಮನವರಿಕೆ ಮಾಡಿಕೊಡಲು ಮುಖಂಡರು ಹಾಗೂ ಕಾರ್ಯಕರ್ತರು ಮುಂದಾಗಬೇಕು. ಆಮಿಷ ತೋರಿಸುವವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್‌ ಮಾತನಾಡಿ, ಪಟ್ಟಣದಲ್ಲಿ ರೈಲ್ವೆ ನಿಲ್ದಾಣದ ಸ್ಥಳವನ್ನು ಗುರುತಿಸಿ, ಜಾಗವನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮೂರು ತಿಂಗಳಲ್ಲಿ ರೈಲ್ವೆ ಟ್ರ್ಯಾಕ್ ಸ್ಥಳವನ್ನು ಗುರುತಿಸಿ ಆ ಜಾಗವನ್ನು ಇಲಾಖೆಗೆ ಹಸ್ತಾಂತರಿಸ ಲಾಗುವುದು. ಈಗಾಗಲೇ ತುಮಕೂರು- ರಾಯದುರ್ಗ ರೈಲ್ವೆ ಯೋಜನೆಯ ಕಾಮಗಾರಿ ತುಮಕೂರಿನಲ್ಲಿ ಆರಂಭವಾಗಿದೆ ಎಂದರು.

ಮಧುಗಿರಿ ಏಕಾಶಿಲಾ ಬೆಟ್ಟಕ್ಕೆ ರೋಫ್ ವೇ ಅಳವಡಿಸಲು ಸರ್ಕಾರ ಹಣ ಬಿಡುಗಡೆ ಮಾಡಿದೆ. ರಾಜ್ಯದ ಮೂರು ಭಾಗಗಳಲ್ಲಿ ರೋಪ್ ವೇ ಅಳವಡಿಸಲು ಟೆಂಡರ್ ಕರೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾ ಯಿತಿ ಸದಸ್ಯ ಚೌಡಪ್ಪ, ಪುರಸಭೆ ಅಧ್ಯಕ್ಷೆ ಎಲ್. ರಾಧಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಸದಸ್ಯರಾದ ರಾಮಣ್ಣ, ದೊಡ್ಡಯ್ಯ, ರಂಗನಾಥ್, ಪುರಸಭೆ ಸದಸ್ಯರಾದ ಎಂ.ಕೆ.ನಂಜುಂಡಯ್ಯ, ಎಂ.ಎಸ್.ಚಂದ್ರಶೇಖರ್, ಜುಬೇದಾಬಾನು, ಭಾಗ್ಯಮ್ಮ, ಪುಟ್ಟಮ್ಮ, ಶ್ರೀದೇವಿ, ಭಾರತಮ್ಮ, ಶ್ರೀನಿವಾಸ್, ಎ.ಪಿ.ಎಂ.ಸಿ ಅಧ್ಯಕ್ಷ ಪಿ.ಟಿ.ಗೋವಿಂದಪ್ಪ, ಇಂದಿರಾ ಕ್ಯಾಂಟೀನ್ ಯೋಜನಾ ನಿರ್ದೇಶಕಿ ಅನುಪಮಾ, ಮುಖಂಡರಾದ ಎಚ್.ನಿಂಗಪ್ಪ, ಪಿ.ಸಿ.ಕೃಷ್ಣಾರೆಡ್ಡಿ, ಡಿ.ಜಿ.ಶಂಕರನಾರಾಯಣಶೆಟ್ಟಿ, ಎಂ.ಎಸ್.ಶಂಕರನಾರಾಯಣ್, ಮುಖ್ಯಾಧಿಕಾರಿ ಮಾರುತಿ ಶಂಕರ್ ಇದ್ದರು.

**

ತುಮಕೂರು– ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿ ಆರಂಭವಾಗಿದೆ. ಇದರಿಂದ ಈ ಭಾಗದ ಸಂಪರ್ಕ ವ್ಯವಸ್ಥೆ, ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ
– ಕೆ.ಪಿ. ಮೋಹನರಾಜ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT