ಮಾಂಸಕ್ಕೆ ಹೆಚ್ಚಿದ ಬೇಡಿಕೆ

7
ವರ್ಷತೊಡಕಿನ ಹಿನ್ನೆಲೆ, ಕೋಳಿ ಮಾಂಸದ ದರ ಹೆಚ್ಚಳ

ಮಾಂಸಕ್ಕೆ ಹೆಚ್ಚಿದ ಬೇಡಿಕೆ

Published:
Updated:
ಮಾಂಸಕ್ಕೆ ಹೆಚ್ಚಿದ ಬೇಡಿಕೆ

ಮೈಸೂರು: ಯುಗಾದಿ ಹಬ್ಬದ ನಂತರ ವರ್ಷದ ತೊಡಕಿನ ಆಚರಣೆಗೆ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಇದರಿಂದ ಕೆಲವೆಡೆ ಇದರ ದರದಲ್ಲಿ ಕೊಂಚ ಏರಿಕೆಯಾಗಿದೆ.‌

ಸೋಮವಾರ ಬಹಳಷ್ಟು ಮನೆಗಳಲ್ಲಿ ವರ್ಷದ ತೊಡಕಿನ ಆಚರಣೆ ಮಾಡಿಲ್ಲ. ಮಂಗಳವಾರ ಮಾಂಸಾಹಾರಿಗಳ ಮನೆಗಳಲ್ಲಿ ಮಾಂಸದಡುಗೆಯೇ ವಿಶೇಷ ಎನಿಸಿದೆ. ಇದರಿಂದ ಸೋಮವಾರ ಸಂಜೆ ಮಾಂಸದ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿದ್ದವು.

ಸಾಮಾನ್ಯ ದಿನಗಳಲ್ಲಿ ಕುರಿ ಮಾಂಸ ಕೆ.ಜಿಗೆ ₹ 380ರಿಂದ 430ರ ವರೆಗೆ ಮಾರಾಟವಾಗುತ್ತಿತ್ತು. ಸೋಮವಾರ ಇದು ₹ 450ರ ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ನಿಗದಿಯಾಗಿದೆ. ಇದೇ ಹಾದಿಯಲ್ಲಿ ಮೇಕೆ ಮಾಂಸವೂ ಇದೆ.

ಕರ್ನಾಟಕ ಪೌಲ್ಟ್ರಿ ಫಾರ್ಮಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್‌ನ ದರವೂ ಹೆಚ್ಚಾಗಿದೆ. ಕಳೆದ ವಾರ ಬ್ರಾಯ್ಲರ್ ಕೋಳಿ ಮಾಂಸದ ಬೆಲೆ ಕೆ.ಜಿಗೆ ₹ 56 ಇತ್ತು. ಈಗ ಇದರ ದರ ₹ 73ಕ್ಕೆ ಹೆಚ್ಚಿದೆ. ಮೊಟ್ಟೆ ಕೋಳಿ ಮಾಂಸದ ದರ ಮಾತ್ರ ಕೆ.ಜಿಗೆ ₹ 80ರಲ್ಲೇ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ಇನ್ನೂ ಹೆಚ್ಚಿದೆ. ಇನ್ನುಳಿದಂತೆ ಮೀನು, ಏಡಿ, ಸೀಗಡಿ ಬೆಲೆಗಳೂ ಕೊಂಚ ಮಟ್ಟಿಗೆ ಏರಿಕೆ ಕಂಡಿವೆ.

ಕುಸಿದ ತರಕಾರಿ ದರ: ತರಕಾರಿಗಳಿಗೆ ಕಳೆದ ವಾರ ಬೇಡಿಕೆ ಸೃಷ್ಟಿಯಾಗಿ ದರ ಸುಧಾರಿಸಿತ್ತು. ಆದರೆ, ಈ ವಾರ ಮತ್ತೆ ಬೇಡಿಕೆ ಕುಸಿದಿದೆ. ದರವೂ ಇಳಿಮುಖದ ಹಾದಿಯಲ್ಲಿದೆ.

ಇಲ್ಲಿನ ಎಪಿಎಂಸಿ ಸಗಟು ಮಾರು ಕಟ್ಟೆಯಲ್ಲಿ ಬೀನ್ಸ್ ಕೆ.ಜಿಗೆ ₹ 15– 16 ಇದ್ದದ್ದು, ಇದೀಗ ₹ 7–8ಕ್ಕೆ ಕುಸಿದಿದೆ. ₹ 5–7ರಲ್ಲಿ ಮಾರಾಟವಾಗುತ್ತಿದ್ದ ಬೀಟ್ರೂಟ್ ₹ 4–6ಕ್ಕೆ ಕಡಿಮೆಯಾಗಿದೆ. ಕ್ಯಾರೆಟ್ ಸಹ ₹ 20ರಿಂದ ₹ 18ಕ್ಕೆ ಇಳಿಕೆಯಾಗಿದೆ. ಟೊಮೆಟೊ ದರ ಕೆ.ಜಿಗೆ ₹ 3–4ರಲ್ಲೇ ಮಾರಾಟವಾಗುತ್ತಿದ್ದರೆ, ₹ 2ರಲ್ಲಿ ಮಾರಾಟವಾಗುತ್ತಿದ್ದ ಬದನೆ ₹ 5ಕ್ಕೆ ಹೆಚ್ಚಿದೆ.

ಕೋಳಿ ಮೊಟ್ಟೆ ದರ ಸಮನ್ವಯ ಸಮಿತಿಯ ದರವೂ ಕಳೆದ ವಾರದಿಂದ ಸ್ಥಿರತೆ ಕಾಪಾಡಿಕೊಂಡಿದೆ. ಒಂದು ಮೊಟ್ಟೆಗೆ ₹ 3.68 ನಿಗದಿಯಾಗಿದೆ. ಬೇಸಿಗೆಯಾಗಿರುವುದರಿಂದ ಮೊಟ್ಟೆ ಉಷ್ಣ ಎಂಬ ಕಾರಣಕ್ಕೆ ಹಲವರು ಮೊಟ್ಟೆಯನ್ನು ತಿನ್ನುತ್ತಿಲ್ಲ. ಜತೆಗೆ, ಶಾಲೆಗಳಿಗೆ ಇದು ಪರೀಕ್ಷಾ ಕಾಲವಾಗಿರುವುದರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿಲ್ಲ. ಹೀಗಾಗಿ, ದರ ಚೇತರಿಕೆ ಕಾಣುತ್ತಿಲ್ಲ.

**

ನಾಟಿಕೋಳಿ ಮೊಟ್ಟೆ ದುಬಾರಿ

ನಾಟಿ ಕೋಳಿ ಮೊಟ್ಟೆ ನಗರದಲ್ಲಿ ದುಬಾರಿಯಾಗಿದೆ. ನಂಜುಮಳಿಗೆ ವೃತ್ತದಲ್ಲಿ ಒಂದು ಮೊಟ್ಟೆಗೆ ₹ 20 ದರ ಇದೆ. ಇದರಿಂದ ಕಾಯಿಲೆಗೆ ತುತ್ತಾದವರು, ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ನಾಟಿಕೋಳಿ ಮೊಟ್ಟೆ ಕೈಗೆಟುಕದಂತಾಗಿದೆ. ನಗರದ ಕೆಲವೆಡೆ ಇದರ ದರ ₹ 10ರಿಂದ ₹ 15 ಇದೆ.

**

ಕಮರಿದ ನಿರೀಕ್ಷೆ‌

ಯುಗಾದಿ ನಂತರ ಸಾಲು ಸಾಲು ಮದುವೆಗಳು ಬಂದು ತರಕಾರಿಗಳಿಗೆ ಬೇಡಿಕೆ ಸೃಷ್ಟಿಯಾಗಿ, ಬೆಲೆ ಏರಿಕೆಯಾಗಬಹುದು ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ಹೊಸ ಪಂಚಾಂಗದ ಪ್ರಕಾರ ಕನಿಷ್ಠ ಎರಡು ವಾರದವರೆಗೆ ಮದುವೆ ಮೊದಲಾದ ಶುಭ ಕಾರ್ಯಗಳು ನಡೆಯುವುದು ಕಡಿಮೆ. ಇದರಿಂದ ತರಕಾರಿಗಳಿಗೆ ಬೇಡಿಕೆ ಸೃಷ್ಟಿಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry